Friday, 27th May 2022

ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಗುರಿಯಾಗಿಸಿ ಮೊಟ್ಟೆ ದಾಳಿ

ಭುವನೇಶ್ವರ: ಪುರಿಯಲ್ಲಿ ಓಡಿಶಾ ಸಿಎಂ ನವೀನ್ ಪಟ್ನಾಯಕ್​ ಬೆಂಗಾವಲು ವಾಹನದ ಮೇಲೆ ಬಿಜೆಪಿ ಬೆಂಬಲಿಗರು ಮೊಟ್ಟೆ ಎಸೆದ ಬೆನ್ನಲ್ಲೇ ಕಾಂಗ್ರೆಸ್​ ಕಾರ್ಯಕರ್ತರು ಭುವನೇಶ್ವರದಲ್ಲಿ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರನ್ನು ಗುರಿಯಾಗಿಸಿ ಮೊಟ್ಟೆ ದಾಳಿ ನಡೆಸಿದ್ದಾರೆ.

ನಿರುದ್ಯೋಗ ಹಾಗೂ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ಕಾರ್ಯಕರ್ತರು ಬನಮಾಲಿಪುರದಲ್ಲಿ ಅಪರಾಜಿತಾ ಸಾರಂಗಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಹಾಗೂ ಅವರ ಬೆಂಗಾವಲು ವಾಹನದ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ.

ಭುವನೇಶ್ವರ ಸಂಸದೆ ನೀಡಿದ ದೂರು ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿ ಸಿದ್ದಾರೆ. ಕೇವಲ ಮೊಟ್ಟೆ ದಾಳಿ ಮಾತ್ರವಲ್ಲದೇ ವಾಹನದ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಅಲ್ಲದೇ ಕಾಂಗ್ರೆಸ್​ ಬೆಂಬಲಿಗರು ಎಂದು ಹೇಳಿಕೊಂಡಿರುವ ಪ್ರತಿಭಟನಾಕಾರರು ಚಾಕು ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ತಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಡಳಿತಾರೂಡ ಬಿಜೆಡಿ ಹಾಗೂ ಬಿಜೆಪಿ ನಡುವಿನ ಮೊಟ್ಟೆ ದಾಳಿಯ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಬೆಂಬಲಿಗರೂ ಸಹ ಈ ಮೊಟ್ಟೆ ದಾಳಿಯಲ್ಲಿ ಕೈ ಜೋಡಿಸಿದ್ದಾರೆ.

ಭಾನುವಾರ ಓಡಿಶಾದಲ್ಲಿ ಆಡಳಿತಾರೂಢ ಬಿಜೆಡಿ ವಿದ್ಯಾರ್ಥಿ ಘಟಕವಾದ ಬಿಜು ವಿದ್ಯಾರ್ಥಿ ಜನತಾ ದಳದ ಕಾರ್ಯಕರ್ತರು ಇಂಧನ ಬೆಲೆ ಏರಿಕೆ ವಿರೋಧಿಸಿ ಕೇಂದ್ರಪಾಡಾದಲ್ಲಿ ಕೇಂದ್ರ ಸಚಿವ ಬಿಶ್ವೇಶ್ವರ ತುಡು ಬೆಂಗಾವಲು ವಾಹನದ ಮೇಲೆ ಮೊಟ್ಟೆ ಗಳನ್ನು ಎಸೆದಿದ್ದರು.

ಈ ನಡುವೆ ಬಾಲಸೋರ್​ನಲ್ಲಿ ಹೊಸ ರೈಲು ನಿಲ್ದಾಣದ ಕಟ್ಟಡಕ್ಕೆ ಶಂಕು ಸ್ಥಾಪನೆ ಸಮಾರಂಭದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಬಿಜೆಪಿ ಬೆಂಬಲಿಗರು ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ.