Sunday, 23rd January 2022

ಮನೆಗಳಿಗೆ ಮಳೆ ನೀರು ನುಗ್ಗದಿರುವಂತಹ ಕಾಮಗಾರಿಯ ವಿವರ ಸಲ್ಲಿಸಿ: ಮುಖ್ಯಮಂತ್ರಿ ಬೊಮ್ಮಾಯಿ

Basavaraj Bommai

ಬೆಂಗಳೂರು: ನಗರದಲ್ಲಿ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಲು ಯಾವ ಬಗೆಯ ತುರ್ತು ಕಾಮಗಾರಿ ಕೈಗೊಳ್ಳಬೇಕು ಎಂಬುದರ ಬಗ್ಗೆ ವಿವರ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ತತ್ತರಿಸಿದೆ. ತುರ್ತು ಪರಿಹಾರ ಕಾಮಗಾರಿಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರ ಸ್ಥಳೀಯ ಸಂಸ್ಥೆ ಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಮಾತನಾಡಿದರು.

ನಗರದಲ್ಲಿ ಪದೇ ಪದೇ ಮಳೆಯಾದಾಗ ತಗ್ಗು ಪ್ರದೇಶದ ಮನೆಗಳಿಗೆ ನೀರು ತುಂಬಿಕೊಳ್ಳುತ್ತದೆ. ಮನೆಯಲ್ಲಿ ರುವ ವಸ್ತುಗಳೆಲ್ಲವೂ ನೀರಿನಲ್ಲಿ ಕೊಚ್ಚಿಹೋಗಿ ಜನಸಾಮಾನ್ಯರಿಗೆ ಅಪಾರ ನಷ್ಟವಾಗುತ್ತದೆ. ಆದ್ದರಿಂದ ಯಾವ ಕಾಮಗಾರಿಗಳ ಅಗತ್ಯವಿದೆ ಎಂಬುದರ ಬಗ್ಗೆ ಅಧಿಕಾರಿಗಳಿಗೆ ವಿವರ ಕೇಳಿದ್ದೇನೆ. ವರದಿ ಸಲ್ಲಿಕೆ ಬಳಿಕ ಹಣಕಾಸಿನ ನೆರವು ನೀಡಿ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಅಕ್ಟೋಬರ್, ನವೆಂಬರ್‌ನಲ್ಲೂ ಸಾಕಷ್ಟು ಮಳೆಯಾಗುತ್ತಿದೆ. ನಗರದಲ್ಲಿ ಮಳೆ ಬಂದರೆ ಯಾವ ಪ್ರದೇಶಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಯಿತು. ಮುಖ್ಯವಾಗಿ ನಗರದ ಪಶ್ಚಿಮ ಮತ್ತು ದಕ್ಷಿಣ ಭಾಗದ ಪ್ರದೇಶಗಳು ಮಳೆಗೆ ಹೆಚ್ಚಿನ ಹಾನಿಯಾಗುತ್ತವೆ.

ಮಳೆ ಬಂದ ಸಂದರ್ಭದಲ್ಲಿ ಸಾರ್ವಜನಿಕ ರಕ್ಷಣೆಗಾಗಿ 64 ತುರ್ತು ರಕ್ಷಣಾ ಪಡೆಗಳು ನಗರದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿವೆ. ಪ್ರತಿ ತಂಡದಲ್ಲಿ 20 ಸದಸ್ಯರು ಇರುತ್ತಾರೆ. ಇದನ್ನು 30 ಸದಸ್ಯರಿಗೆ ಹೆಚ್ಚಿಸಲು ಸೂಚಿಸಲಾಗಿದೆ. ಅಲ್ಲದೆ, ಗೃಹರಕ್ಷಕ ದಳವನ್ನೂ ಹೆಚ್ಚಾಗಿ ಬಳಸಲು ಸೂಚಿಸಲಾಗಿದೆ.

ನಗರದಲ್ಲಿ ಸ್ವಲ್ಪ ಹೆಚ್ಚಿಗೆ ಮಳೆ ಬಂದರೂ ನೀರು ರಸ್ತೆಗೆ ಹರಿದು ಬರುತ್ತವೆ, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗುತ್ತವೆ. ಇದಕ್ಕೆ ಕಾರಣ ಏನೆಂದು ನೋಡಿದಾಗ, ಮಳೆ ನೀರು ಕಾಲುವೆಗಳ ಅಸಮರ್ಪಕ ನಿರ್ವಹಣೆ ಎದ್ದು ಕಾಣುತ್ತದೆ. ನೀರು ಹೋಗುವಂತಹ ತೂಬುಗಳು ಕಿರಿದಾಗಿವೆ, ಕೆಲವೆಡೆ ತಡೆಗೋಡೆಗಳು ಕುಸಿದು ಬಿದ್ದಿವೆ. ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೂಡಲೇ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಇದಕ್ಕೆ ಬೇಕಾದ ಹೆಚ್ಚುವರಿ ಹಣಕಾಸಿನ ನೆರವನ್ನೂ ತುರ್ತು ರೀತಿಯಲ್ಲಿ ಒದಗಿಸಲಾಗುವುದು ಎಂದು ಅಧಿಕಾರಿಗಳಿಗ ಸೂಚಿಸಿರುವುದಾಗಿ ಹೇಳಿದರು.