Wednesday, 29th June 2022

ಪರಿಸರಕ್ಕೆ ಹಾನಿ ಮಾಡಿಲ್ಲವೆಂದು ಎನ್ ಜಿ ಟಿ ಗೆ ಮನವರಿಕೆ: ಬಸವರಾಜ್ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಯಾವುದೇ ರೀತಿಯ ನೆಲ-ಜಲ ಹಾಗೂ ಅಂತರಾಜ್ಯ ನೆಲ-ಜಲದ ವಿಷಯ ಬಂದಾಗ ನಮ್ಮ ಸರ್ಕಾರ ಅದನ್ನು ಗಂಭೀರ ವಾಗಿ ತೆಗೆದುಕೊಂಡು ರಾಜ್ಯದ ಹಿತಾಸಕ್ತಿ ಕಾಪಾಡಿಕೊಂಡು ಬಂದಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಅದೇ ರೀತಿ, ಚೆನೈನಲ್ಲಿರುವ ಎನ್ ಜಿ ಟಿ (ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ) ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸೋ ಮೋಟೊ ಪ್ರಕರಣ ದಾಖಲಿಸಿ ಕೊಂಡು ಇದರ ಬಗ್ಗೆ ನಮ್ಮ ಕಾನೂನು ಇಲಾಖೆ , ಅಡ್ವೋಕೇಟ್ ಜನರಲ್ ಹಾಗೂ ಕಾನೂನು ತಜ್ಞರ ತಂಡ ಕೂಲಂಕುಷ ಚರ್ಚೆ ಮಾಡಿತ್ತು.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಇದನ್ನು ನವದೆಹಲಿಯ ಎನ್ ಜಿ ಟಿ ಮುಂದೆ ಹೋಗಿ ಕರ್ನಾಟಕದ ಮೇಕೆದಾಟು ಯೋಜನೆಯಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ ಹಾಗೂ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಮಾಡಿಲ್ಲವೆಂದು ಎನ್ ಜಿ ಟಿ ಗೆ ಮನವರಿಕೆ ಮಾಡಿಕೊಡಲಾಯಿತು.

ಅದರಂತೆ ಇಂದು ಟ್ರಿಬ್ಯೂನಲ್ ಆದೇಶವು ರಾಜ್ಯದ ಪರವಾಗಿ ಬಂದಿದೆ. ಈ ವಿಷಯದ ಕುರಿತು ಒಂದು ಮುಖ್ಯ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಅಲ್ಲಿ ಕೂಡ ಕರ್ನಾಟಕದ ಹಿತಾಸಕ್ತಿ ಕಾಪಾಡುವ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು.