Friday, 3rd February 2023

ಗಡಿ ವಿವಾದದ ಹಿಂದೆ ರಾಜಕೀಯ ಲಾಭವಷ್ಟೆ

ವರ್ತಮಾನ

maapala@gmail.com

ಪದೇ ಪದೆ ಗಡಿ ವಿವಾದವನ್ನು ಕೆದಕುತ್ತಾ ಕರ್ನಾಟಕದ ಜತೆ ಕಾಲ್ಕೆರೆದುಕೊಂಡು ಜಗಳಕ್ಕೆ ಬರುವ ಮಹಾರಾಷ್ಟ್ರದ ರಾಜಕೀಯ ನಾಯಕರ ಉದ್ದೇಶ ರಾಜಕೀಯ ಲಾಭವಷ್ಟೇ ಹೊರತು ಬೇರೇನೂ ಅಲ್ಲ.

ಏಕೆಂದರೆ, ಬೆಳಗಾವಿ ಸೇರಿದಂತೆ ರಾಜ್ಯದ ಯಾವುದೇ ಭೂ ಪ್ರದೇಶ ತನಗೆ ದಕ್ಕುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗೆಂದು, ಸುಮ್ಮನಿದ್ದರೆ ಮರಾಠಿ ಮತಗಳು ವಿಭಜನೆಯಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂಬುದು ಅಲ್ಲಿನ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಜೀವ ಬಂತು ಎಂದರೆ ಎರಡು ರಾಜ್ಯಗಳ ಪೈಕಿ ಒಂದು ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ ಎಂದೇ ಲೆಕ್ಕ.

ಏಕೆಂದರೆ, ಬೆಳಗಾವಿ ತನಗೆ ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಮಹಾರಾಷ್ಟ್ರ ಕಳೆದ ಕೆಲವು ದಶಕಗಳಿಂದ ಅದಕ್ಕಾಗಿ ಹೋರಾಟ, ಕಾನೂನು ಸಮರ ಮುಂದುವರಿಸುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಗಡಿ ವಿವಾದದ ಕೂಗು ಕಮ್ಮಿಯಾಗಿತ್ತಾದರೂ ಇದೀಗ ಡಿಽರನೆ ಮೈಕೊಡವಿ ನಿಂತಿದೆ. ಇದಕ್ಕೆ ಕಾರಣ ಮಹಾರಾಷ್ಟ್ರದ ವೋಟ್‌ಬ್ಯಾಂಕ್ ರಾಜಕಾರಣ. ಅಲ್ಲಿ ಮರಾಠಿಗರು ಒಗ್ಗಟ್ಟಾಗಿ ಮತ ಹಾಕುತ್ತಾರೆ. ಆ ಸಮುದಾಯದ ಮತಗಳನ್ನು ಯಾರು ಹೆಚ್ಚಾಗಿ ಪಡೆಯುತ್ತಾರೋ, ಅವರು ಗೆಲ್ಲುತ್ತಾರೆ ಎಂಬುದು ರಾಜಕೀಯ ಲೆಕ್ಕಾಚಾರ.

ಹೀಗಾಗಿ ವಿವಾದ ಬಗೆಹರಿಯಬೇಕು ಎನ್ನುವುದಕ್ಕಿಂತಲೂ ಅದನ್ನು ಜೀವಂತವಾಗಿಟ್ಟು ಅಧಿಕಾರ ರಾಜಕಾರಣ ಮಾಡುವುದು ಮಹಾರಾಷ್ಟ್ರದ ರಾಜಕಾರಣಿಗಳು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಸಂಪ್ರದಾಯ. ರಾಜ್ಯಗಳ ಪುನರ್ವಿಂಗಡಣೆ ಸಂದರ್ಭದಲ್ಲಿ ಬೆಳಗಾವಿಯನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಲಾಯಿತು. ಇದನ್ನು ಮಹಾರಾಷ್ಟ್ರ ವಿರೋಧಿಸಿದ್ದರಿಂದ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತು. ಈ ತಂಡ ಅಧ್ಯಯನ ನಡೆಸಿ, ಎರಡೂ ಸರಕಾರಗಳ ವಾದ ಆಲಿಸಿ, ಗಡಿ ಭಾಗದ ಜನರನ್ನು ಸಂದರ್ಶಿಸಿ ವರದಿ ನೀಡಿತು. ಅದರನ್ವಯ ಮಹಾರಾಷ್ಟ್ರ ತನಗೆ ಬೇಕೆಂದು ವಾದಿಸಿದ್ದ ೮೧೪ ಹಳ್ಳಿಗಳ ಪೈಕಿ ನಿಪ್ಪಾಣಿ, ಖಾನಾಪುರ ಹಾಗೂ ನಂದಘಡ ಒಳಗೊಂಡ ೨೬೨ ಹಳ್ಳಿಗಳನ್ನು ನೀಡಿತು.

ಸೊಲ್ಲಾಪುರ ಸೇರಿದಂತೆ ೨೪೭ ಹಳ್ಳಿಗಳನ್ನು ಕರ್ನಾಟಕಕ್ಕೆ ನೀಡಲಾಯಿತು. ಇದಲ್ಲದೆ, ೨೬೦ ಹಳ್ಳಿಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಅವುಗಳನ್ನು ಕರ್ನಾಟಕಕ್ಕೆ ನೀಡಲು ಮಹಾರಾಷ್ಟ್ರ ಒಪ್ಪಿಕೊಂಡಿತು. ಆದರೆ, ಮಹಾಜನ್ ಆಯೋಗ ವರದಿ ಸಲ್ಲಿಸಿದ ನಂತರ ಮಹಾರಾಷ್ಟ್ರ ಇದನ್ನು ತಿರಸ್ಕರಿಸಿತು. ಈಗಲೂ ಬೆಳಗಾವಿ ತನಗೆ ಸೇರಬೇಕು ಎಂಬ ಬೇಡಿಕೆ ಮುಂದುವರಿಸಿದೆ. ಆದರೆ, ಈ ಬೇಡಿಕೆ ಈಡೇರುವುದಿಲ್ಲ ಎಂಬುದು ಮಹಾರಾಷ್ಟ್ರಕ್ಕೂ ಗೊತ್ತಿದೆ. ಏಕೆಂದರೆ, ಮಹಾಜನ್ ಆಯೋಗ ತನ್ನ ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಸ್ಪಷ್ಟವಾಗಿ ಹೇಳಿದೆ. ಅಷ್ಟೇ ಅಲ್ಲ, ಬೆಳಗಾವಿ ಮೇಲಿನ ಮಹಾರಾಷ್ಟ್ರದ ಹಕ್ಕು ಚಲಾವಣೆ ಇತ್ತೀಚಿನದ್ದಾಗಿದೆ. ಸಂಸತ್ತಿನಲ್ಲಿ ಈ ಕುರಿತು ನಿಲುವಳಿ ಮಂಡಿಸಿದಾಗ ಸರಕಾರದ ಕಡೆಯಿದ್ದ ಮಹಾರಾಷ್ಟ್ರದ ಯಾವುದೇ ಸದಸ್ಯರೂ ಬೆಳಗಾವಿ ಪುನರ್ ವಿಂಗಡಣೆ ವಿರುದ್ಧ ಮತ ಚಲಾಯಿಸಲಿಲ್ಲ.

ಬೌಗೋಳಿಕವಾಗಿ ಬೆಳಗಾವಿ ೩ ಕಡೆಗಳಲ್ಲಿ ಕನ್ನಡ ಪ್ರಾಧಾನ್ಯವಿರುವ ಹಳ್ಳಿಗಳನ್ನು ಹೊಂದಿದೆ. ಒಂದು ಕಡೆಯಿಂದ ಮಹಾರಾಷ್ಟ್ರವಿದೆ. ಹೀಗಾಗಿ ಬೆಳಗಾವಿ ಪುನರ್‌ವಿಂಗಣೆ ಮಾಡಿದರೆ ಮೂರು ಭಾಗಗಳ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಬೇಕು. ಐತಿಹಾಸಿಕ ದಾಖಲೆಗಳೂ ಬೆಳಗಾವಿ ಕನ್ನಡಿಗರ ನಾಡಾಗಿತ್ತು ಎಂಬುದು ತಿಳಿದುಬರುತ್ತದೆ. ಬೆಳಗಾವಿಯ ಹಳೆಯ ದಾಖಲೆಗಳೆಲ್ಲವೂ ಕನ್ನಡ ದಲ್ಲೇ ಇವೆ. ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಲು ಸಾಧ್ಯವಿಲ್ಲ ಎಂದು ಮಹಾಜನ್ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

ಮಹಾಜನ್ ವರದಿಯನ್ನು ಒಪ್ಪಿಕೊಂಡ ಕರ್ನಾಟಕ, ರಾಜ್ಯ ಪುನರ್‌ವಿಂಗಡಣೆಯಲ್ಲಿ ತನ್ನ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದರೂ ಯಾವುದೇ ತಕರಾರು ಎತ್ತದೆ ಸುಮ್ಮನೆ ಕುಳಿತಿದೆ. ಆ ಮೂಲಕ ಎರಡು ರಾಜ್ಯಗಳ ಸೌಹಾ
ರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದೆ. ಆದರೆ, ಮಹಾರಾಷ್ಟ್ರ ಮಾತ್ರ ಆಗಾಗ್ಗೆ ಗಡಿ ವಿವಾದವನ್ನು ಕೆದಕುತ್ತಲೇ ಇದೆ.
ಬೆಳಗಾವಿ ಸೇರಿದಂತೆ ಕರ್ನಾಟಕದ ಜಾಗವನ್ನು ಪಡೆಯಲು ಸತತ ಪ್ರಯತ್ನ ಮಾಡುತ್ತಿದೆ. ಮಹಾಜನ್ ಆಯೋಗದ
ವರದಿಯನ್ನು ಕೇಂದ್ರ ಸರಕಾರ ಒಪ್ಪಿಕೊಂಡ ಮೇಲೂ, ತಾನು ಕೇಳುತ್ತಿರುವ ಪ್ರದೇಶಗಳು ಯಾವುದೇ ಕಾರಣಕ್ಕೂ
ಸಿಗುವುದಿಲ್ಲ ಎಂದು ಗೊತ್ತಾದ ಬಳಿಕವೂ ಬೆಳಗಾವಿ, ನಿಪ್ಪಾಣಿ, ಕಾರವಾರಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ
ಎಂದು ಅಲ್ಲಿನ ರಾಜಕಾರಣಿಗಳು ಬೊಬ್ಬಿರಿಯುತ್ತಲೇ ಇದ್ದಾರೆ. ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಪ್ರದೇಶಗಳು
ನಮ್ಮವು ಎಂದು ಹೇಳಿಕೊಳ್ಳುತ್ತಿದ್ದಾರೆ.

ಮಹಾರಾಷ್ಟ್ರದ ರಾಜಕಾರಣಿಗಳು ಹೀಗೆ ಕೂಗು ಹಾಕಿದಾಗ ಅದಕ್ಕೆ ಪ್ರತಿಕ್ರಿಯಿಸುವುದು ಅನಿವಾರ್ಯ. ಇಲ್ಲದೇ ಇದ್ದರೆ
ಕನ್ನಡಪರ ಹೋರಾಟಗಾರರು, ಗಡಿ ಭಾಗದ ಕನ್ನಡಿಗರು ಬಿಡುವುದಿಲ್ಲ. ಹೀಗಾಗಿ ಜತ್ ತಾಲೂಕನ್ನು ಕರ್ನಾಟಕಕ್ಕೆ
ಪಡೆಯುತ್ತೇವೆ. ಸೊಲ್ಲಾಪುರ, ಅಕ್ಕಲಕೋಟೆ ನಮಗೆ ಸೇರ ಬೇಕು. ಬೆಳಗಾವಿಯ ಒಂದಿಂಚು ಜಾಗವನ್ನೂ ಬಿಟ್ಟುಕೊ ಡುವುದಿಲ್ಲ ಎಂದು ರಾಜ್ಯದ ರಾಜಕಾರಣಿಗಳು ಹೇಳುತ್ತಾರೆ. ಇದರಿಂದ ರಾಜಕಾರಣಿಗಳ ಬೇಳೆ ಬೇಯುತ್ತದೆಯಾದರೂ ಎರಡು ರಾಜ್ಯಗಳ ಜನರ ಮಧ್ಯೆ ಸೌಹಾರ್ದತೆಗೆ ಧಕ್ಕೆಯಾಗುತ್ತದೆ. ಆದರೆ, ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಗಿರುವ ರಾಜಕೀಯ ಪಕ್ಷಳಿಗೆ ಮಾತ್ರ, ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಬೆಳಗಾವಿ ವಿವಾದ ಒಂದು ರೀತಿ ಮತಬ್ಯಾಂಕ್ ಎನ್ನುಂತಾಗಿದೆ.

ಈಗ ಗಡಿ ವಿವಾದ ಮುನ್ನಲೆಗೆ ಬಂದಿರುವುದರ ಹಿಂದೆ ಇರುವುದು ಕೂಡ ಇದೇ ರಾಜಕೀಯ ಲೆಕ್ಕಾಚಾರ. ಗಡಿ ವಿವಾದ ಕುರಿತ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲು ಸುಪ್ರೀಂ ಕೋಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ಸರಕಾರ ನೇಮಿಸಿದ ವಕೀಲರ ವಾದ-ಪ್ರತಿವಾದಗಳನ್ನು ಪರಿಗಣಿಸಿ ನ್ಯಾಯಾಲಯ ಒಂದು ತೀರ್ಮಾನ ಕೈಗೊಳ್ಳುತ್ತದೆಯೇ ಹೊರತು ಸರಕಾರಗಳು ಏನೇ ಮಾಡಿದರೂ ಅದನ್ನು ಪರಿಗಣಿಸುವುದಿಲ್ಲ. ಆದರೂ ಮಹಾರಾಷ್ಟ್ರ ಸರಕಾರ ಸರ್ವಪಕ್ಷ ಸಭೆ ನಡೆಸಿದ್ದಲ್ಲದೆ, ತನ್ನ ಕಾನೂನು ತಂಡಕ್ಕೆ ನೆರವಾಗಲು ಮತ್ತು ಸರಕಾರದೊಂದಿಗೆ ಸಮನ್ವಯ ಸಾಽಸಲು ಸಚಿವರ ಸಮಿತಿ ನೇಮಕ ಮಾಡಿದೆ. ಅಷ್ಟೇ ಆಗಿದ್ದರೆ ಮಹಾರಾಷ್ಟ್ರ ಸರಕಾರ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದುಕೊಳ್ಳಬಹುದಿತ್ತು.

ಆದರೆ, ಅದರ ಜತೆ ಜತೆಗೆ ಕರ್ನಾಟಕ ದಲ್ಲಿರುವ ಮರಾಠಿಗರಿಗೆ ಆರೋಗ್ಯ ವಿಮೆ, ಇಲ್ಲಿರುವ ಮರಾಠಿ ಸ್ವಾತಂತ್ರ್ಯ ಯೋಧ ರಿಗೆ ಪಿಂಚಣಿ ಘೋಷಣೆ ಮಾಡಿದೆ. ಆ ಮೂಲಕ ಭಾಷೆಯ ವಿಚಾರದಲ್ಲಿ ಪರಸ್ಪರ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಹಾಗೆಂದು ಕರ್ನಾಟಕದಲ್ಲಿರುವ ಮರಾಠಿಗರಿಗೆ ಸರಕಾರ ಸೌಲಭ್ಯ ಒದಗಿಸದೇ ಸುಮ್ಮನುಳಿದಿಲ್ಲ. ಭಾಷೆಯನ್ನು ಮೀರಿ ಮರಾಠಿಗರಿಗೂ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಒದಗಿಸಿದೆ. ಸ್ವಾತಂತ್ರ್ಯ ಯೋಧರು ಪಿಂಚಣಿಯನ್ನೂ ಪಡೆಯುತ್ತಿದ್ದಾರೆ.

ಹೀಗಿರುವಾಗ ಮಹಾರಾಷ್ಟ್ರ ಈ ರೀತಿಯ ಕ್ಷುಲ್ಲಕ ನೀತಿಗಳನ್ನು ಅನುರಸುತ್ತಿರುವುದೇಕೆ ಎಂಬುದಕ್ಕೆ ಉತ್ತರ- ೨೦೨೩ರಲ್ಲಿ ಕರ್ನಾಟಕ ವಿಧಾನಸಭೆ ಮತ್ತು ೨೦೨೪ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಚುನಾವಣೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಏಕನಾಥ್ ಶಿಂದೆ ನೇತೃತ್ವದ ಬಿಜೆಪಿ-ಶಿವಸೇನೆ ಮೈತ್ರಿಕೂಟ ಗೆಲ್ಲಬೇಕಾದರೆ ಮರಾಠಿಗರ ಮತಗಳನ್ನು ಗಟ್ಟಿಗೊಳಿಸಿಕೊಳ್ಳಲೇ ಬೇಕು. ಅದಕ್ಕೆ ಮರಾಠಿ ಭಾಷಿಕರನ್ನು ಭಾವನಾತ್ಮಕವಾಗಿ ಒಗ್ಗೂಡಿಸಬೇಕು. ಏಕೆಂದರೆ, ಅವರು ಸಂಘಟಿತರಾಗುವುದು ಭಾವನಾತ್ಮಕ ವಿಚಾರಗಳ ಮೇಲೆ ಮಾತ್ರ.

ಕಳೆದ ಒಂದು, ಒಂದೂವರೆ ದಶಕದಿಂದ ಬೆಳಗಾವಿ ಮತ್ತು ಗಡಿ ಭಾಗದ ಪ್ರದೇಶಗಳಲ್ಲಿ ಕರ್ನಾಟಕ ಕೈಗೊಂಡಿರುವ
ಅಭಿವೃದ್ಧಿ ಕಾರ್ಯಗಳು, ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮುಂತಾದ ಕಾರ್ಯಕ್ರಮಗಳು ಕನ್ನಡಿಗರನ್ನು ಸಂಘಟಿತರನ್ನಾಗಿಸಿದೆ. ಹೀಗಾಗಿ ಆ ಪ್ರದೇಶದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆರ್ಭಟ ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಮೊದಲೆಲ್ಲಾ ಕನಿಷ್ಠ ಇಬ್ಬರು ಎಂಇಎಸ್ ಶಾಕರು ಆ ಭಾಗದಿಂದ ಆಯ್ಕೆಯಾಗುತ್ತಿದ್ದರು. ಆದರೆ, ಇದೀಗ ಒಬ್ಬೇ ಒಬ್ಬ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಲು ಸಾಧ್ಯವಾಗುತ್ತಿಲ್ಲ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ಎಂಇಎಸ್ ಧೂಳೀಪಟವಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಮತ್ತೆ ತಲೆ ಎತ್ತಬೇಕಾದರೆ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಲೇ ಬೇಕು. ಒಂದೊಮ್ಮೆ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್‌ನ ಒಬ್ಬರು ಅಥವಾ ಇಬ್ಬರು ವಿಧಾನಸಭೆ ಪ್ರವೇಶಿಸಿದರೆ ಅವರ ಮೂಲಕ ಎಂಇಎಸ್‌ಅನ್ನು ಗಡಿ ಭಾಗದಲ್ಲಿ ಸಂಘಟಿಸಬಹುದು.

ಸಹಜವಾಗಿಯೇ ಮಹಾರಾಷ್ಟ್ರದಲ್ಲೂ ಇದು ಪರಿಣಾಮ ಬೀರುತ್ತದೆ. ಮರಾಠಿಗರು ಆಡಳಿತ ಪಕ್ಷದ ಪರ ನಿಲ್ಲುತ್ತಾರೆ.
ಈ ಕಾರಣಕ್ಕಾಗಿಯೇ ಗಡಿ ವಿವಾದ ಕೆದಕುತ್ತಾ, ಆ ಮೂಲಕ ಮರಾಠಿಗರನ್ನು ಕರ್ನಾಟಕದ ವಿರುದ್ಧ ಎತ್ತಿಕಟ್ಟುತ್ತಾ
ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತದೆಯೇ ವಿನಃ ಬೇರೇನೂ ಅಲ್ಲ. ಏಕೆಂದರೆ,
ಬೆಳಗಾವಿ ಸೇರಿದಂತೆ ಕರ್ನಾಟಕದ ಯಾವ ಪ್ರದೇಶವೂ ತನಗೆ ಸಿಗುವುದಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿದೆ.
ಲಾಸ್ಟ್ ಸಿಪ್: ಹಾವು ಸಾಯುವುದಿಲ್ಲ, ಕೋಲು ಮುರಿಯುವುದಿಲ್ಲ ಎಂದು ಗೊತ್ತಿದ್ದರೂ ಅವರು ಹಾವು ಬಿಡುವುದನ್ನು ನಿಲ್ಲಿಸುವುದಿಲ್ಲ. ಇವರು ಕೋಲು ಎತ್ತುವುದನ್ನು ಬಿಡುವುದೂ ಇಲ್ಲ

error: Content is protected !!