Saturday, 10th April 2021

ರೈತರಿಂದ ಅಕ್ರಮವಾಗಿ ಹಣ ವಸೂಲಿ: ತಪ್ಪಿತಸ್ಥರ ವಿರುದ್ದ ಕ್ರಿಮಿನಲ್‌ ಕೇಸ್‌-ಜಿಲ್ಲಾಧಿಕಾರಿ

ಚಿಕ್ಕನಾಯಕನಹಳ್ಳಿ: ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ದೂರುಗಳು ಕೇಳಿ ಬಂದಿದ್ದು ಅವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಗುಡುಗಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಅವ್ಯವಹಾರದ ವಾಸನೆ ಕಂಡು ಬರುತ್ತಿದೆ ಎಂಬ ವ್ಯಾಪಕ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಾಗಿ ಖರೀದಿ ಕೇಂದ್ರದಲ್ಲಿ ರಾಗಿಯನ್ನು ನೀಡಲು ವಿವಿಧ ಹಂತಗಳನ್ನು ರೈತರು ದಾಟಬೇಕಿದೆ. ನೊಂದಣಿ ಪಡೆದ ರೈತನ ಟ್ರಾಕ್ಟರ್ ಅಥಾವ ವಾಹನವನ್ನು ಗೇಟಿನ ಒಳಗಡೆ ಬಿಡಲು 50 ರೂ ಪೀಕಬೇಕಿದೆ. ಅಲ್ಲಿಂದ ರಾಗಿಯನ್ನು ತೂಕ ಮಾಡಿಸಿ ಎಂಟ್ರಿ ಪಡೆಯಬೇಕು. ಬಳಿಕ ಆ ರಾಗಿಯನ್ನು ಅನ್‌ಲೋಡ್ ಮಾಡಿಸಿ ಸ್ಲಿಪ್ ಪಡೆಯಬೇಕು ಇವುಗಳ ನಡುವೆ ರಾಗಿಯ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆ ನಡೆಯುವ ಪ್ರತಿ ಹಂತದಲ್ಲೂ 100 ರಿಂದ 200 ರೂ ಹಣದ ಬೇಡಿಕೆ ಎದುರಾಗು ತ್ತದೆ ಯಾರು ಒಮ್ಮಲೆ 500 ರಿಂದ 1000 ಹಣ ನೀಡುವರೋ ಅವರಿಗೆ ತ್ವರಿತವಾಗಿ ರಾಗಿ ಖರೀದಿಯಾಗುತ್ತಿದೆ. ಇಲ್ಲದಿದ್ದರೆ ರಾಗಿ ಗುಣಮಟ್ಟದಿಂದ ಕೂಡಿಲ್ಲ ಹೆಚ್ಚು ಧೂಳಿನಿಂದ ಕೂಡಿದೆ ಎಂದು ಸತಾಯಿಸುತ್ತಾರೆ ಎಂದು ರೈತರು ಆಕ್ರೋಷ ವ್ಯಕ್ತಪಡಿಸಿದರು.

ಎಪಿಎಂಸಿ ಆವರಣದಲ್ಲಿ ಮೂಲಸೌಕರ್ಯಗಳ ಕೊರತೆ ಕಂಡುಬಂದಿದ್ದು ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆೆ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಗಿ ಖರೀದಿಯ ನೊಂದಣಿ ಮಾ.14 ಕ್ಕೆ ಮುಗಿಯಲಿದೆ. ಆದರೆ ನಾವು ಈಗಾಗಲೇ ಈ ತಿಂಗಳ 31 ರವರೆಗೆ ವಿಸ್ತರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದು ಅದು ಈಡೇರುವ ಭರವಸೆ ಇದೆ. ರೈತರು ಯಾರು ಹೆದರುವ ಅವಶ್ಯಕತೆ ಇಲ್ಲ ಜಿಲ್ಲಾಧಿಕಾರಿಗಳು ತಿಳಿಸಿದರು.

ರಾಗಿ ತಂದು ಮಾರಾಟ ಮಾಡುವುದಕ್ಕೆ 2 ರಿಂದ 3 ದಿನವಾಗುತ್ತಿದೆ. ಅಲ್ಲಿಯವರೆಗೂ ರಾಗಿ ಹೊತ್ತ ಟ್ರಾಕ್ಟರ್‌ಗಳು ರಸ್ತೆಯಲ್ಲಿ ನಿಲ್ಲಬೇಕಿದೆ. ಸಿಬ್ಬಂದಿಯ ಕೊರತೆಯಿಂದ ಈ ರೀತಿ ಆಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. 2 ರಿಂದ 3 ದಿನವಾದರೂ ರಾಗಿ ಖರೀದಿ ಮಾಡುತ್ತಿಲ್ಲ. ಟ್ರಾಕ್ಟರ್ ಬಾಡಿಗೆ ಡ್ರೈವರ್ ಕೂಲಿ ಊಟ ತಿಂಡಿ ಸೇರಿದಂತೆ ನಿತ್ಯವೂ ನಮಗೆ 1 ರಿಂದ 2 ಸಾವಿರ ರೂ ಖರ್ಚಾಗುತ್ತಿದೆ ಎಂದು ರೈತರು ತಮ್ಮ ಅಳಲನ್ನು ಮಾಧ್ಯಮದವರ ಮುಂದೆ ತೋಡಿಕೊಂಡರು.

Leave a Reply

Your email address will not be published. Required fields are marked *