Saturday, 24th October 2020

ವಿಶ್ವಶಾಂತಿಯ ರಾಜಧಾನಿ !

ಡಾ.ಉಮಾಮಹೇಶ್ವರಿ ಎನ್.

ಜಗತ್ತಿನ ಶಾಂತಿಯ ರಾಜಧಾನಿ ಎಂದು ಹೆಸರಾಗಿರುವ ಜಿನೀವಾ ಬಹು ಸುಂದರ ನಗರ. ವಿಶ್ವದ ಹಲವು ಪ್ರಸಿದ್ಧ ಸಂಸ್ಥೆಗಳಿರುವ ಸ್ಥಳವಿದು.

ಪರ್ವತ ರಾಜ್ಯ ಸ್ವಿಟ್ಜರ್ಲೆಂಡ್‌ನ ನಗರಗಳಲ್ಲಿ, ಜೂರಿಕ್‌ನ ನಂತರ ಅತಿ ಹೆಚ್ಚು ಜನದಟ್ಟಣೆ ಯ ನಗರವೆಂದರೆ ಜಿನೀವಾ. ಯುನೈಟೆಡ್ ನೇಷನ್ಸ್, ರೆಡ್ ಕ್ರಾಸ್, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಕಾರ್ಮಿಕ ಸಂಸ್ಥೆಗಳಂತಹ ಪ್ರಸಿದ್ಧ ಜಾಗತಿಕ ಸಂಸ್ಥೆಗಳಿರುವ ಸ್ಥಳವಿದು. ಇಲ್ಲಿ ಹಲವಾರು ಪ್ರಖ್ಯಾತ ಆರ್ಥಿಕ ಸಂಸ್ಥೆಗಳೂ ಇವೆ.

ಜನಜೀವನ ಅತಿ ಸುಖಕರವಾಗಿರುವ ನಗರಗಳ ಪಟ್ಟಿಯಲ್ಲಿ ಇರುವ ಈ ನಗರದ ವಾಸ್ತವ್ಯ ದುಬಾರಿ. ಜಿನೀವಾ ಶಾಂತಿ ಒಪ್ಪಂದದ ನಂತರ ಇದನ್ನು ‘ಶಾಂತಿಯ ರಾಜಧಾನಿ’ ಎಂದೂ ಕರೆಯಲಾಗುತ್ತದೆ. ಜಿನೀವಾ ನಗರವು ಜಿನೀವಾ ಕ್ಯಾಂಟನ್’ನ ರಾಜಧಾನಿ. ಜಿನೀವಾ ಕ್ಯಾಂಟನ್‌ನ ಒಟ್ಟು ಜನಸಂಖ್ಯೆೆ 11 ಲಕ್ಷದಲ್ಲಿ ಏಳು ಲಕ್ಷಗಳಷ್ಟು ಜನ ಜಿನೀವಾ ನಗರವಾಸಿ ಗಳು. 16 ನೇ ಶತಮಾನ ದಲ್ಲಿ ಕ್ಯಾಲ್ವಿನ್ ಸುಧಾರಣೆಗೆ ಸಾಕ್ಷಿಯಾದ ಈ ಪ್ರದೇಶ ಪ್ರೊಟೆ ಸ್ಟೆಂಟ್ ರೋಮ್ ಎಂದೂ ಗುರುತಿಸಲ್ಪಡುತ್ತದೆ.

ರೋಮನ್ ಕೆಥೊಲಿಕ್ ಫ್ರಾನ್ಸ್‌‌ನಿಂದ ಬೇರ್ಪಟ್ಟ ನಂತರ ಯುರೋಪಿನ ಬೇರೆ ದೇಶಗಳ ಹಾಗೂ ಇತರ ಖಂಡಗಳ ಜೊತೆಗೆ ಆರ್ಥಿಕ ಹಾಗೂ ಬೌದ್ಧಿಕ ಸಂಪರ್ಕ ಗಟ್ಟಿ ಮಾಡಿಕೊಂಡಿತು. ಆರ್ಥಿಕವಾಗಿ ಹಾಗೂ ಔದ್ಯಮಿಕವಾಗಿ ಮುಂಚೂಣಿಯಲ್ಲಿರುವ ಈ ಸ್ಥಳ ಹಲವಾರು ಉದ್ಯಮಗಳ ಹಾಗೂ ಸಂಘಸಂಸ್ಥೆಗಳ ಪ್ರಮುಖ ಕಛೇರಿಗಳಿರುವ ಸ್ಥಳ.

 ಚರ್ಚ್‌ಗಳು ಪ್ರಮುಖ ಆಕರ್ಷಣೆ
ನಗರದ ಆಗ್ನೇಯ ದಿಕ್ಕಿನಲ್ಲಿರುವ ಜಿನೀವಾ ಸರೋವರ ಇಲ್ಲಿನ ಒಂದು ಆಕರ್ಷಣೆ. ನಗರದ ಪುರಾತನ ಭಾಗ ಸ್ವಲ್ಪ ಎತ್ತರದಲ್ಲಿ ರುವ ‘ಮೇಲಿನ ನಗರ’. ರೋನ್ ನದಿಯ ದಂಡೆಯ ಸಮೀಪದ ಬೆಟ್ಟ ಮತ್ತು ಆಸುಪಾಸು ಹಳೆನಗರದ ಸ್ಥಾನ. ಐತಿಹಾಸಿಕವಾಗಿ ಪ್ರಸಿದ್ಧವಾಗಿ ರುವ ಈ ಭಾಗದಲ್ಲಿ ಸೈಂಟ್ಪಿಯರೆ ಪ್ರೊಟೆಸ್ಟೆಂಟ್ ಚರ್ಚ್ ಪ್ರಮುಖವಾಗಿ ನೋಡಬೇಕಾದ ತಾಣ.

1150ರಲ್ಲಿ ರೋಮನ್ ಕೆಥೊಲಿಕರಿಂದ ನಿರ್ಮಿತವಾದ ಇದು ಪ್ರೊಟೆಸ್ಟೆಂಟ್ ಚಳವಳಿಯ ನಂತರ ಪ್ರೊಟೆಸ್ಟೆಂಟ್ ಚರ್ಚ್ ಆಯಿತು. ಹಳೆಯ ನಗರದ ಅಗಲಕಿರಿದಾದ ಓಣಿಗಳ ಇಕ್ಕೆಲಗಳಲ್ಲೂ ಪುರಾತನ ಕಟ್ಟಡಗಳಿವೆ. ಈ ಕಟ್ಟಡಗಳು ಹಲವಾರು
ಕಲೆ, ಪುರಾತನ ವಸ್ತುಗಳ ಸಂಗ್ರಹಾಲಯ ಹಾಗೂ ವ್ಯಾಪಾರದ ತಾಣಗಳು. ಈ ಗುಡ್ಡದ ಬುಡದಲ್ಲಿ 19 ನೇ ಶತಮಾನದ
ನಿರ್ಮಿತಿಗಳು, ರೈಲ್ವೆೆನಿಲ್ದಾಣ ಹಾಗೂ ವಸತಿಗಳಿವೆ. ಪ್ರೇಕ್ಷಣೀಯವಾದ ಇತರ ಚರ್ಚುಗಳೂ ಈ ನಗರದಲ್ಲಿವೆ. ಕಲೆ ಮತ್ತು
ಇತಿಹಾಸದ ಮ್ಯೂಸಿಯಂ, ಕೈಗಡಿಯಾರಗಳ ಮ್ಯೂಸಿಯಂ ಹಾಗೂ ಅರಿಯಾನ ಮ್ಯೂಸಿಯಂ ಇಲ್ಲಿನ ಪ್ರಮುಖ ವಸ್ತು ಸಂಗ್ರಹಾ ಲಯಗಳು.

ಜಿನೀವಾದಲ್ಲಿ ಕೇವಲ ಶೇಕಡಾ ಎರಡರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಹೆಚ್ಚಿನವರು ಒಂದಲ್ಲ ಒಂದು ಸಂಸ್ಥೆ
ಯಲ್ಲಿ ಕಾರ್ಯ ನಿರ್ವಹಿಸುವವರು. ಕೆಥೊಲಿಕ್ ಹಾಗೂ ಪ್ರೊಟೆಸ್ಟೆಂಟ್ ಜನರು ಸಮಾನ ಪ್ರಮಾಣದಲ್ಲಿದ್ದಾರೆ. ಫ್ರೆಂಚ್,
ಜರ್ಮನ್, ಇಟಾಲಿಯನ್ ಅಧಿಕೃತ ಭಾಷೆಗಳಾಗಿವೆ. 25 ಶೇಕಡಾ ಜನರು ಇಂಗ್ಲಿಷ್ ಮಾತನಾಡುತ್ತಾರೆ. ಹೆಚ್ಚಿನವರು ಎರಡು ಭಾಷೆಗಳಲ್ಲಿ ವ್ಯವಹರಿಸುವ ಪ್ರಾವೀಣ್ಯತೆ ಹೊಂದಿದ್ದಾರೆ.

ಚಾಕಲೇಟ್ ಗಡಿಯಾರ ವ್ಯವಹಾರ
ಅಂತಾರಾಷ್ಟ್ರೀಯ ಸಂಘಸಂಸ್ಥೆಗಳು, ಸಿಇಆರ್‌ಎನ್ ನಂತಹ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು, ಪ್ರಸಿದ್ಧ ವಿತ್ತ ಸಂಸ್ಥೆಗಳ ಜತೆ,
ಇದು ಪ್ರಮುಖ ಉದ್ದಿಮೆಗಳ ಕೇಂದ್ರವೂ ಹೌದು. ಚಾಕಲೇಟ್, ಗಡಿಯಾರಗಳು, ರಾಸಾಯನಿಕಗಳು, ಪರ್‌ಫ್ಯೂಮ್ ಇಲ್ಲಿ ತಯಾ ರಾಗುವ ಹೆಸರುಗಳಿಸಿದ ವಸ್ತುಗಳು. ಆಹಾರ ಸಂಸ್ಕರಣಾ ಘಟಕಗಳೂ ಇಲ್ಲಿವೆ.

ಹಳೆ ನಗರದೊಳಗಿನ ವಿಶೇಷಗಳನ್ನು ಕಾಲ್ನಡಿಗೆಯಲ್ಲಿ ಗೈಡ್ ಗಳ ಮಾರ್ಗದರ್ಶನದಲ್ಲಿ ತೋರಿಸುವ ಹಾಗೂ ವಿವರಿಸುವಂತಹ ವ್ಯವಸ್ಥೆ ಇಲ್ಲೂ ಇದೆ. ಇದಲ್ಲದೆ ವಿಶೇಷ ಬಸ್ ಪ್ರಯಾಣದಲ್ಲಿ ಆಧುನಿಕ ನಗರದ ವಿಶೇಷಗಳನ್ನು, ಪ್ರಮುಖ ಕಟ್ಟಡಗಳನ್ನು ವಿವರಿಸುತ್ತಾ ತೋರಿಸುವ ವ್ಯವಸ್ಥೆಯೂ ಇದೆ.

ನೆರೆಯ ಫ್ರಾನ್ಸ್‌ ದೇಶದ ವ್ಯಾಪ್ತಿಯಲ್ಲಿರುವ ಸಲೇವ್ ಪರ್ವತವು ಅತಿ ಹತ್ತಿರದಲ್ಲಿರುವ ಪರ್ವತ. ಇದಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ,  ಕೇಬಲ್ ಕಾರು ಹಾಗೂ ಚಾರಣ ಮಾರ್ಗಗಳಿವೆ. ಯುರೋಪಿನ ಪ್ರಮುಖ ನಗರಗಳಿಂದ ರೈಲು ಮಾರ್ಗ, ರಸ್ತೆ ಹಾಗೂ ವಿಮಾನಗಳ ಸಂಪರ್ಕ ಹೊಂದಿದ ನಗರ ಜಿನೆವಾ. ಕೆಲವೆಡೆಗಳಿಗೆ ಜಲಮಾರ್ಗದ ಸಂಪರ್ಕವೂ ಇದೆ. ನಗರದೊಳಗಿನ ಓಡಾಟ ಬಸ್ ಮತ್ತು ಟ್ರಾಮ್‌ಗಳಲ್ಲಿ.

ಮಾಂಟ್ ಬ್ಲಾಂಕ್ ಪರ್ವತದ ನೋಟ
ಕ್ವೇಡು ಮಾಂಟ್ ಬ್ಲಾಂಕ್ ಎಂಬ ಸರೋವರದ ದಂಡೆಯ ಭಾಗ ಮಾಂಟ್ ಬ್ಲಾಂಕ್ ಪರ್ವತದ ಸುಂದರ ನೋಟ ತೋರಿಸುತ್ತದೆ.
ಇಲ್ಲಿರುವ ಕಲಾಕೃತಿಗಳನ್ನು ಹೊಂದಿದ ಉದ್ಯಾನಗಳು ಸಂಜೆಯ ಕಾಲ್ನಡಿಗೆಗೆ ಪ್ರಶಸ್ತವಾದ ಸ್ಥಳ. ಬ್ರುಸ್ವಿಕ್ ಸ್ಮಾರಕ ಬ್ರುಸ್ವಿಕ್‌ನ
ರಾಜಕುಮಾರ ಎರಡನೇ ಕಾರ್ಲ್ಸ್’ನ ನೆನಪಿನಲ್ಲಿ ನಿರ್ಮಿತವಾಗಿದೆ. ತನ್ನ ಸಂಪತ್ತೆಲ್ಲವನ್ನೂ ಜಿನೀವಾ ನಗರಕ್ಕೆೆ ದಾನಮಾಡಿ
ಇಟೆಲಿಯಲ್ಲಿರುವ ಸ್ಮಾರಕವೊಂದರಂತೆ ತನ್ನ ಸ್ಮಾಾರಕ ರಚಿಸಬೇಕೆಂಬ ಬೇಡಿಕೆಯನ್ನು ಈತ ಇಟ್ಟಿದ್ದ ಅತಿ ಎತ್ತರದ ಕಾರಂಜಿ
ಜಿನೀವಾ ಸರೋವರದಲ್ಲಿ ಇರುವ ಕಾರಂಜಿ ಜೆಟ್ ಡೂವ್.

ಜಗತ್ತಿನಲ್ಲಿ ಅತಿ ಎತ್ತರಕ್ಕೆ ಚಿಮ್ಮುವ ಕಾರಂಜಿ ಎಂಬ ಖ್ಯಾತಿಗೆ ಪಾತ್ರವಾದ ಇದು 147 ಮೀಟರ್ ಗಳ ಎತ್ತರಕ್ಕೆ ಚಿಮ್ಮುತ್ತದೆ.
ಸರೋವರದ ಆಳದಲ್ಲಿ ಅಳವಡಿಸಿರುವ ಸೆಕೆಂಡಿಗೆ 500ಲೀಟರ್ ನೀರು ಚಿಮ್ಮಿಸುವ ಮೋಟರ್ ಇದರ ಹೆಗ್ಗಳಿಕೆಯ ಗುಟ್ಟು.
ಸರೋವರದ ಒಂದೆಡೆಯಿಂದ ಇನ್ನೊಂದೆಡೆಗೆ ಜಲಯಾನ ಕೈಗೊಳ್ಳುವುದು ಜನಪ್ರಿಯ ಪ್ರವಾಸಿ ಆಕರ್ಷಣೆ. ಪ್ರವಾಸಿಗರು
ಹೆಚ್ಚಾಗಿ ಒಂದು ಸುತ್ತು ಹಾಕಿ ಸರೋವರದ ಸುತ್ತಲೂ ಅಭಿವೃದ್ಧಿ ಹೊಂದಿದ ನಗರದ ಸೌಂದರ್ಯ, ದೂರದಿಂದ ಕಾಣಿಸುವ
ಚರ್ಚುಗಳ ನೋಟ, ನೀರಲ್ಲಿ ನಿಂತಿರುವ- ಚಲಿಸುವ ದೋಣಿಗಳು, ನೀರಲ್ಲಿ ಈಜುತ್ತಿರುವ- ಮೀನು ಹಿಡಿಯುತ್ತಿರುವ ಜಲಪಕ್ಷಿ ಗಳು, ಎತ್ತರದಲ್ಲಿ ಕಾಣುವ ಮೊಂಟ್ ಬ್ಲಾಂಕ್ ಪರ್ವತದ ಸೌಂದರ್ಯ, ಇತರ ಸುಂದರ ಪರ್ವತಗಳ ಸೊಗಸುಗಳನ್ನು ಆಸ್ವಾದಿ ಸುತ್ತಾರೆ. ಅಕ್ಕ ಪಕ್ಕದ ಊರುಗಳಿಗೂ ಜಲಮಾರ್ಗದ ಸಂಪರ್ಕ ಇದೆ.

ಪ್ರೊಟೆಸ್ಟೆೆಂಟ್ ಚಳವಳಿ
ಜಿನೀವಾದಲ್ಲಿರುವ ಇಂಗ್ಲಿಷ್ ಗಾರ್ಡನ್, ಸಸ್ಯಶಾಸ್ತ್ರೀಯ ಉದ್ಯಾನ ಪ್ರಸಿದ್ಧವಾದವುಗಳು. ಸುಂದರವಾದ ಇನ್ನೊಂದು ಉದ್ಯಾನಕ್ಕೆ ಸಂಬಂಧಿಸಿ 1917ರಲ್ಲಿ ರಚಿಸಿರುವ ‘ಪ್ರೊಟೆಸ್ಟೆಂಟ್ ಸುಧಾರಣಾ ಚಳುವಳಿ’ಯ ಸ್ಮಾರಕ ತನ್ನದೇ ವೈಶಿಷ್ಟ್ಯ ಹೊಂದಿದೆ. ಚಳುವಳಿಯ ರೂವಾರಿ ಜಾನ್ ಕ್ಯಾಲ್ವಿನ್ ಮತ್ತು ಅವನ ಸಹಚರರ ಜೊತೆಗೆ ಆ ಕಾಲದ ಪ್ರಮುಖರ ಪ್ರತಿಮೆಗಳನ್ನು ಉದ್ದದ ಗೋಡೆಯೊಂದರ ಮೇಲೆ ಕಾಣಬಹುದು.

ಕಾಲಿಲ್ಲದ ಬೃಹತ್ ಕುರ್ಚಿ!
ಯುನೈಟೆಡ್ ನೇಷನ್ಸ್‌‌ನ ಕಟ್ಟಡದ ಹೊರಗೆ ಸದಸ್ಯ ರಾಷ್ಟ್ರಗಳ ಬಾವುಟಗಳು ಹಾರಾಡುತ್ತಿವೆ. ಅದರ ಎದುರಿಗೇ ಒಂದು ಕಾಲು ಮುರಿದಿರುವ ಬೃಹತ್ ಗಾತ್ರದ ಕುರ್ಚಿ ನಿಂತಿದೆ. 12 ಮೀಟರ್ ಎತ್ತರ, 5.5 ಟನ್ ತೂಕದ ಈ ಮರದ ಕಲಾಕೃತಿ ಲ್ಯಾಂಡ್ ಮೈನ್ ಗಳಲ್ಲಿ ಬಾಂಬ್‌ಗಳನ್ನಿಟ್ಟು ಸಿಡಿಸಿ ಜನರನ್ನು ಹೆಳವರನ್ನಾಗಿ ಮಾಡುವುದು ಸರಿಯಲ್ಲವೆಂಬ ಸಂದೇಶವನ್ನು ಭೇಟಿ ನೀಡುವ ರಾಜಕಾರಣಿಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಇದರ ವಿನ್ಯಾಸಕಾರ ಡೇನಿಯೆಲ್ ಬೆರ್ಸೆಟ್, ಕಲಾಕಾರ ಲೂಯಿಸ್ ಜಿನೇವ್. 2004ರವರೆಗೆ ಕಲಾಕಾರರ ವಶದಲ್ಲಿದ್ದ ಈ ಕೃತಿಯ ಒಡೆತನ ಸದ್ಯಕ್ಕೆ ’ಹ್ಯಾಂಡಿಕ್ಯಾಪ್ ಇಂಟರ್ ನ್ಯಾಷನಲ್’ ಎಂಬ ಸಂಸ್ಥೆಯದ್ದು.

Leave a Reply

Your email address will not be published. Required fields are marked *