Friday, 27th May 2022

ರಾಜ್ಯದಲ್ಲಿ ರೂಪಾಂತರಿ ಸೋಂಕು ದೃಢ: ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಧ್ಯಾಹ್ನ ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸಭೆ ಕರೆದಿದ್ದಾರೆ. ಕರ್ನಾಟಕದಲ್ಲಿ ಗುರುವಾರ ಇಬ್ಬರಿಗೆ ಓಮಿಕ್ರಾನ್​ ರೂಪಾಂತರಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಕೋವಿಡ್- 19 ನಿಯಂತ್ರಣ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಕಂದಾಯ ಸಚಿವರು, ಆರೋಗ್ಯ ಸಚಿವರು, ಸರ್ಕಾರದ ಮುಖ್ಯ ಕಾರ್ಯ ದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯ ದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕೆಐಎಬಿ ಕೋವಿಡ್ ನೋಡಲ್ ಅಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ಹಾಜರಿಗೆ ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೂ ಹಾಜರಿರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿಯಿಂದ ಸೂಚನೆ ಕೊಡಲಾಗಿದೆ. ಕರ್ನಾಟಕದ ಇಬ್ಬರಿಗೆ ಓಮಿಕ್ರಾನ್ ರೂಪಾಂತರದ ಸೋಂಕು ದೃಢಪಟ್ಟಿ ರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೋವಿಡ್ ಎದುರಿಸಿದ ರೀತಿಯಲ್ಲಿಯೇ ಓಮಿಕ್ರಾನ್ ಪರಿಸ್ಥಿತಿಯನ್ನೂ ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕದ ಇಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ವಿವರ ಸಿಕ್ಕಿಲ್ಲ. ನಮ್ಮ ಆರೋಗ್ಯ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ ನಾನು ಚರ್ಚಿಸಿದೆ. ಕೇಂದ್ರ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆಯಲು ಸೂಚಿಸಿದ್ದೇನೆ. ಹೈರಿಸ್ಕ್ ದೇಶಗಳ ಪ್ರಯಾಣಿಕರಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ವಿಮಾನ ನಿಲ್ದಾಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಓಮಿಕ್ರಾನ್ ಪ್ರಕರಣಗಳ ಕುರಿತು ಮಾಹಿತಿ ನೀಡಿರುವ ಕೇಂದ್ರ ಸರ್ಕಾರವು, ಕೊರೊನಾ ರೂಪಾಂತರದ ಸೋಂಕು ಪತ್ತೆಯಾಗಿ ರುವ ಇಬ್ಬರೂ ಕರ್ನಾಟಕದವರು ಎಂದಿದೆ. ಕೇಂದ್ರ ಸರ್ಕಾರದ ಪ್ರಮುಖರು ಮತ್ತು ತಜ್ಞರ ಜೊತೆ ಈ ಸಂಬಂಧ ಚರ್ಚೆ ಮಾಡ ಬೇಕಿದೆ. ಪೂರ್ಣ ವರದಿ ಬಂದ ಬಳಿಕ ಪರಿಸ್ಥಿತಿಯ ಯಥಾಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ.