Tuesday, 31st January 2023

ಬೆಕ್ಕಿಗಿಂತ ವಿಭಿನ್ನ ಈ ಪೆನುಗು ಬೆಕ್ಕು

ಶಶಾಂಕಣ

shashidhara.halady@gmail.com

ನಮ್ಮ ರಾಜ್ಯದಲ್ಲಿ ಕೆಲವು ದಶಕಗಳ ಹಿಂದೆ ಪುನುಗು ಬೆಕ್ಕುಗಳನ್ನು ಹಿಡಿದು, ಬೋನಿನಲ್ಲಿಟ್ಟು, ಅವುಗಳು ಸ್ರವಿಸುವ ಪುನುಗನ್ನು ಸಂಗ್ರಹಿಸುವ ಪರಿಪಾಠವಿತ್ತು! ಆ ದ್ರವವನ್ನು ಮೈ, ಕೈಗೆ ಅಂಟಿಸಿಕೊಂಡರೆ ಸುವಾಸನೆ! ಆದರೆ, ಕೃತಕ ಸುವಾಸನೆಗಳು ಕಡಿಮೆ ಬೆಲೆಗೆ ದೊರೆಯಲು ಆರಂಭವಾದ ನಂತರ, ಪುನುಗಿಗೆ ಇದ್ದ ಬೇಡಿಕೆ ಕಡಿಮೆಯಾಯಿತು.

ಬಹಳ ವರ್ಷಗಳ ಹಿಂದೆ ನಮ್ಮ ಹಳ್ಳಿಮನೆಯಲ್ಲಿ, ಸೊಪ್ಪು ಹರಡಿ, ಅದರ ಮೇಲೆ ದನಕರುಗಳನ್ನು ಕಟ್ಟುತ್ತಿದ್ದರು. ನಮ್ಮ ಮನೆಯಲ್ಲಿ ಆರೆಂಟು ಮಲೆನಾಡು ಗಿಡ್ಡ ತಳಿಯ ಹಸು, ಕರು, ಗುಡ್ಡಗಳಿದ್ದವು. ಹೆಚ್ಚು ‘ಬಾಲ್’ ಗಂಟಿ ಇದ್ದಷ್ಟೂ, ಮನೆಯವರಿಗೆ ಹೆಮ್ಮೆ. ‘ನಿಮ್ಮ ಮನೇಲಿ ಎಷ್ಟು ಬಾಲ್ ಗಂಟಿ ಇವೆ’ ಎಂಬುದು ನಮ್ಮ ಕಡೆಯ ಗ್ರಾಮೀಣರು ಪರಸ್ಪರ ಕೇಳಿಕೊಳ್ಳುತ್ತಿದ್ದ ಪ್ರಶ್ನೆ. ಆ ಗಂಟಿಗಳನ್ನು ಕಟ್ಟುವ ಜಾಗವಾದ ಹಟ್ಟಿಯ ನೆಲದ ಮೇಲೆ, ಪ್ರತಿದಿನ ಹಸಿರು ಸೊಪ್ಪನ್ನು ಹರಡುವ ಕ್ರಮ. ಈ ರೀತಿ ನಾಲ್ಕಾರು ವಾರ ಸೊಪ್ಪು ಹರಡಿದ ನಂತರ, ಅಲ್ಲಿ ತಯಾರಾಗುತ್ತಿದ್ದ ಗೊಬ್ಬರವನ್ನು ತೆಗೆದು, ಕೃಷಿಗೆ ಉಪಯೋಗಿಸು ತ್ತಿದ್ದರು.

ಬೆಳಗ್ಗೆ ಎದ್ದ ಕೂಡಲೇ, ಮನೆಯಲ್ಲಿರುವ ಒಂದಿಬ್ಬರ ಕೆಲಸವೆಂದರೆ, ‘ಗಂಟಿ ಕಾಲಡಿಗೆ ಹಾಕುವ’ ಸೊಪ್ಪು ತರುವುದು. ನಾನು ನಮ್ಮ ಅಮ್ಮಮ್ಮನ ಜತೆ, ಹಲವು ಬಾರಿ ಸೊಪ್ಪು ಕೊಯ್ದು ತರಲು ಹೋಗಿದ್ದುಂಟು. ನಮ್ಮ ಮನೆಯಿಂದ ಒಂದು ಕಿ.ಮೀ. ದೂರದಲ್ಲಿದ್ದ ‘ದೇವಸ್ಥಾನದ ಗುಡ್ಡೆ’ಯಿಂದ ಸೊಪ್ಪು ತರುತ್ತಿದ್ದುದು ಜಾಸ್ತಿ. ಇದಕ್ಕೆ ಎರಡು ಕಾರಣ ಗಳಿದ್ದವು. ಮೊದಲನೆಯ ದೆಂದರೆ ಆ ಜಾಗವು ಸರಕಾರದ ಒಡೆತನದ್ದು. ಅಲ್ಲಿ ಸೊಪ್ಪು ಕುಯ್ಯಲು ಯಾರ ಅನುಮತಿಯೂ ಬೇಕಿರಲಿಲ್ಲ.

ಎರಡನೆಯ ಕಾರಣವೆಂದರೆ, ಅಲ್ಲಿದ್ದ ನಾಲ್ಕೆಂಟು ಎಕರೆ ವಿಶಾಲ ಮಟ್ಟಸ ಪ್ರದೇಶದಲ್ಲಿ, ನೂರಾರು ಪೊದೆಗಳು ದಟ್ಟವಾಗಿ ಬೆಳೆದಿದ್ದು, ಅದರ ಎಲೆಗಳು ಕೈಗೆಟಕುವ ಎತ್ತರದಲ್ಲಿದ್ದವು. ಹೆಚ್ಚು ಶ್ರಮವಿಲ್ಲದೆ, ಮಕ್ಕಳು ಸಹ ಆ ಪೊದೆಗಳಿಂದ ಸೊಪ್ಪು ಕೊಯ್ಯಬಹುದಿತ್ತು. ಪೊದೆಯು ಪೂರ್ತಿ ಒಣಗದಂತೆ, ನಾಲ್ಕಾರು ವಾರಗಳಲ್ಲಿ ಸಾಕಷ್ಟು ಚಿಗಿತು, ಪುನಃ ಸೊಪ್ಪು ಕೊಯ್ಯಲು ಸಾಧ್ಯವಾಗುವಂತೆ ಕೆಲವು ಕೊಂಬೆಗಳನ್ನು ಮಾತ್ರ ಕೊಯ್ಯುವ ಪದ್ಧತಿ. ಈ ಕ್ರಮದಲ್ಲಿ ಊರಿನವರೆಲ್ಲ ಸೊಪ್ಪು ಕೊಯ್ಯುತ್ತಾ
ಬಂದಿದ್ದರಿಂದಾಗಿ, ಬಹಳ ವರ್ಷಗಳಿಂದಲೂ ಅದು ಸೊಪ್ಪು ಕೊಯ್ಯುವ ಜಾಗವಾಗಿ ಮುಂದುವರಿದಿತ್ತು.

ಈಗ ಅಲ್ಲಿರುವ ಖಾಲಿ ಜಾಗದಲ್ಲೆಲ್ಲಾ ಅಮೇಶಿಯಾ ಮರಗಳನ್ನು ಬೆಳೆದಿದ್ದಾರೆ, ಆದ್ದರಿಂದ ಅಲ್ಲಿದ್ದ ಪೊದೆಗಳೆಲ್ಲಾ ನಿರ್ನಾಮ ವಾಗಿವೆ. ಜತೆಗೆ, ಸೊಪ್ಪನ್ನು ನೆಲಕ್ಕ ಹಾಸಿ, ಹಸುಗಳನ್ನು ಸಾಕುವ ಪದ್ಧತಿಯೂ ನಮ್ಮೂರಿನಿಂದ ಕಣ್ಮರೆಯಾಗಿದೆ. ಅದಕ್ಕೆ ಕಾರಣ, ವಿದೇಶಿ ತಳಿಯ ಹಸುಗಳ ಜನಪ್ರಿಯತೆ. ಅದು ಬೇರೆ ವಿಚಾರ. ಆ ಗುಡ್ಡದಲ್ಲಿ ಸೊಪ್ಪು ಕೊಯ್ಯುವಾಗ, ಒಮ್ಮೊಮ್ಮೆ ಯಾವುದಾದರೂ ಎಲೆಯನ್ನು ನಮ್ಮ ಅಮ್ಮಮ್ಮ ಮೂಸಿ ನೋಡುತ್ತಿದ್ದರು. ಅದೇನು ಎಂದು ಕೇಳಿದರೆ, ‘ಪುನುಗಿನ ಬೆಕ್ಕು ಪರಿಮಳ ಅಂಟಿಸಿ ಹೋಗಿದೆ’ ಎನ್ನುತ್ತಾ, ಆ ಎಲೆಯನ್ನು ನನಗೆ ಕೊಡುತ್ತಿದ್ದರು.

ಅದನ್ನು ಮೂಸಿದರೆ, ಹೌದೋ ಅಲ್ಲವೋ ಎಂಬಂತೆ ವಾಸನೆ ಇದ್ದರೂ, ಅದು ಸುವಾಸನೆ ಎಂದು ಗುರುತಿಸಿ, ಆಘ್ರಾಣಿಸಲು ನನ್ನಿಂದಾಗುತ್ತಿರಲಿಲ್ಲ. ‘ಪುನುಗಿನ ಬೆಕ್ಕು ಓಡಾಡುವ ಜಾಗ ಇದು. ತನ್ನ ಬಾಲದಿಂದ ಪರಿಮಳವನ್ನು ಈ ಎಲೆಗೆ ಅಂಟಿಸಿ ಹೋಗಿದೆ’ ಎನ್ನುತ್ತಿದ್ದರು ಅಮ್ಮಮ್ಮ. ಪುನುಗಿನ ಬೆಕ್ಕು ತನ್ನ ಬಾಲದ ಬಳಿ ಇರುವ ಗ್ರಂಥಿಗಳಿಂದ ಒಸರುವ ದ್ರವವು ಸುಗಂಧ ಬೀರುತ್ತದೆ ಎಂದು ಆ ನಂತರ ನಾನು ಓದಿ ತಿಳಿದ ವಿಚಾರ.

ಅವು ರಾತ್ರಿ ಸಂಚರಿಸುವ ಪ್ರಾಣಿಗಳಾಗಿದ್ದರಿಂದ, ನಮಗೆ ಅವು ಕಾಣಿಸುವುದಿಲ್ಲ ಎಂದು ನಮ್ಮ ಅಮ್ಮಮ್ಮ ಹೇಳಿದ್ದರಿಂದ, ಅದರ ಕುರಿತು ಒಂದು ರೀತಿಯ ನಿಗೂಢ ಕುತೂಹಲವನ್ನು ಹುಟ್ಟಿಸಿದ್ದರು. ನಮ್ಮ ಹಳ್ಳಿಯಲ್ಲಿ ಪುನುಗಿನ ಬೆಕ್ಕುಗಳು ಇದ್ದವು
ಎಂಬುದಕ್ಕೆ ಬಲವಾದ ಪುರಾವೆಯೆಂದರೆ, ಅವುಗಳನ್ನು ಸಾಕಿದ್ದ ಬೋನು! ನೆನಪಿಸಿಕೊಳ್ಳಲು ಈಗ ತಮಾಷೆ ಎನಿಸುತ್ತದೆ – ಆದರೆ, ನಮ್ಮ ಹಳ್ಳಿಯ ಮಹನೀಯರೊಬ್ಬರ ಮನೆಯಲ್ಲಿ, ಪುನುಗು ಬೆಕ್ಕುಗಳನ್ನು ಇಡಬಹುದಾದ, ದೊಡ್ಡ ಗಾತ್ರದ ಎರಡು ಮರದ ಬೋನುಗಳಿದ್ದವು.

ನಾವು ನೋಡುವಾಗಲಾಗಲೇ ಅವು ಹಳೆಯದಾಗಿ, ಅದರ ಒಂದೆರಡು ಪಟ್ಟಿಗಳು ಬಿದ್ದು ಹೋಗುವ ಸ್ಥಿತಿಗೆ ತಲುಪಿದ್ದವು. ಆಗಾಗ ಅವರ ಮನೆಗೆ ಯಾವುದಾದರೂ ಕಾರ್ಯನಿಮಿತ್ತ ನಾವು ಹೋಗುವುದಿತ್ತು. ‘ಇದೇ ಕಾಣ್, ಪುನುಗಿನ ಬೆಕ್ಕಿನ ಬೋನು’ ಎಂದು ನಮ್ಮ ಅಮ್ಮಮ್ಮ ಆ ದೊಡ್ಡ ಬೋನುಗಳನ್ನು ತೋರಿಸುತ್ತಿದ್ದುದರಿಂದ, ಅಲ್ಲಿ ಹಿಂದೆ ಪುನುಗು ಬೆಕ್ಕನ್ನು ಬಂಧಿಸಿ ಇಟ್ಟಿದ್ದರು ಎಂದು ನಾವು ತಿಳಿಯಬೇಕಿತ್ತು!

ಸುಮಾರು ಆರು ಅಡಿ ಉದ್ದ, ನಾಲ್ಕು ಅಡಿ ಅಗಲ, ಐದು ಅಡಿ ಎತ್ತರದ ಆ ಬೋನನ್ನು ಒಳ್ಳೆಯ ಮರದಿಂದ, ಸಣ್ಣ ಕಲಾಕೃತಿಯ ರೀತಿ ತಯಾರಿಸಲಾಗಿತ್ತು. ಅಂತಹ ಕೆಲಸಕ್ಕೆ ಉತ್ತಮವಾಗಿ ಕೂಡಿ ಬರುವ ಮರಗಳೆಂದರೆ ಹಲಸು, ಹೆಬ್ಬಲಸು ಮತ್ತು ತೇಗ. ಮನೆಯ ಕಿಟಕಿಗೆ ಬಳಸುವ ವಿನ್ಯಾಸದ ಮರದ ಪಟ್ಟಿಗಳನ್ನು ಅಳವಡಿಸಿ, ಕಿಂಡಿ ಕಿಂಡಿಯಾಗಿ ಕಾಣುವಂತೆ ಮಾಡಿದ್ದ ಆ ಬೋನಿನ ಮೇಲ್ಭಾಗವನ್ನು ಮತ್ತು ತಳಭಾಗವನ್ನು ಮರದ ಹಲಗೆಗಳಿಂದ ಮುಚ್ಚಲಾಗಿತ್ತು. ಸುತ್ತಲೂ ಅಳವಡಿಸಿದ್ದ ಮರದ
ಪಟ್ಟಿಗಳ ನಡುವೆ ಅದಕ್ಕೆ ಒಂದು ಬಾಗಿಲು ಸಹ ಇತ್ತು. ಪುನುಗು ಬೆಕ್ಕನ್ನು ಬೋನಿನ ಒಳಗೆ ಇಡಲು, ಹೊರಗೆ ತೆಗೆಯಲು ಆ ಬಾಗಿಲಿನ ಉಪಯೋಗವೆ? ಎಲ್ಲವೂ ನಮ್ಮ ಊಹೆ ಮಾತ್ರ.

ಏಕೆಂದರೆ, ಆ ಬೋನುಗಳಲ್ಲಿ ಪುನುಗು ಬೆಕ್ಕುಗಳನ್ನು ಇಡುವ ಪದ್ಧತಿ ತಪ್ಪಿಹೋಗಿದೆ ಎನ್ನುತ್ತಿದ್ದರು ಅಮ್ಮಮ್ಮ. ‘ಅದರಲ್ಲೇಕೆ ಪುನುಗು ಬೆಕ್ಕನ್ನು ಇಡುತ್ತಿದ್ದರು’ ಎಂಬ ಪ್ರಶ್ನೆಗೆ ‘ಅವು ಪುನುಗು ಕೊಡುತ್ತಿವೆ, ಅದನ್ನು ತೆಗೆದು ಮೈಗೆ, ಕೈಗೆ ಹಚ್ಚಿಕೊಂಡರೆ ಒಳ್ಳೆಯ ಪರಿಮಳ ಬರುತ್ತದೆ’ ಎಂಬ ಉತ್ತರ ಅಮ್ಮಮ್ಮನದು. ಹಾಗಿದ್ದರೆ, ಆ ಬೋನಿನ ಒಡೆತನ ಹೊಂದಿದ್ದ ಮಹನೀಯರು ಸುಗಂಧ ಪೂಸಿಕೊಂಡು ಓಡಾಡುತ್ತಿದ್ದರು ಎಂದಾಯಿತು. ಅದಿರಲಿ, ನಮ್ಮೂರಿನ ಬೆಟ್ಟ, ಹಾಡಿ, ಹಕ್ಕಲು, ಗುಡ್ಡಗಾಡು ಪ್ರದೇಶದಲ್ಲಿ ಪುನುಗು ಬೆಕ್ಕುಗಳು ವಾಸಿಸುತ್ತಿದ್ದವು ಮತ್ತು ಅವುಗಳನ್ನು ಹಿಡಿದು, ಬೋನಿನಲ್ಲಿಟ್ಟು ಪುನುಗು ಅಥವಾ ಸುಗಂಧ ದ್ರವ್ಯ ತೆಗೆಯುತ್ತಿದ್ದರು ಎಂಬುದಕ್ಕೆ ಪುರಾವೆಯಾಗಿ ಆ ಎರಡು ಮರದ ಬೋನುಗಳಿದ್ದವು.

ನಂತರದ ವರ್ಷಗಳಲ್ಲಿ ಹೆಬ್ರಿ, ಕಬ್ಬಿನಾಲೆ ಮೊದಲಾದ ಪ್ರದೇಶಗಳಲ್ಲಿ ಅಂತಹದೇ ಮರದ ಬೋನುಗಳನ್ನು ಕಂಡಿದ್ದೆ. ಪುನುಗು ಬೆಕ್ಕುಗಳನ್ನು ಸಾಕಲೆಂದೇ ಮಾಡಿಸಿದ ಬೋನು ಅವು ಎಂದು ಅಲ್ಲಿನವರು ಹೇಳುತ್ತಿದ್ದರು. ಆದರೆ, ನಮ್ಮೂರಿನಲ್ಲಿ ಬಂಧನ ದಲ್ಲಿಟ್ಟ ಪುನುಗು ಬೆಕ್ಕುಗಳನ್ನು ನೋಡುವ ಅವಕಾಶವಾಗಲಿಲ್ಲ. ಆ ಸಮಯಕ್ಕಾಗಲೇ ಪುನುಗು ಬೆಕ್ಕುಗಳಿಂದ (ಸ್ಮಾಲ್ ಇಂಡಿಯನ್ ಸಿವಿಟ್ ಕ್ಯಾಟ್) ಪುನುಗು ಸಂಗ್ರಹಿಸುವ ಹವ್ಯಾಸ ಅಥವಾ ಉಪಕಸುಬು ಮರೆಯಾಗಿತ್ತು. ಅದಕ್ಕೆ ಒಂದು ಮುಖ್ಯ ಕಾರಣವೆಂದರೆ, ಅಂಗಡಿಗಳಲ್ಲಿ ದೊರಕಲು ಆರಂಭವಾಗಿದ್ದ, ಕಡಿಮೆ ಬೆಲೆಯ ಕೃತಕ ಸುಗಂಧ.

ಇನ್ನೊಂದು ಕಾರಣವೆಂದರೆ ಪುನುಗು ಬೆಕ್ಕುಗಳ ಆವಾಸಸ್ಥಾನದ ನಾಶ. ಕೆಲವು ಕಡೆ ರೈತರು ಮರದಿಂದ ಸಂಗ್ರಹಿಸುವ ಶೇಂದಿಯನ್ನು ಇವು ಕುಡಿಯುವ ಅಭ್ಯಾಸವಿರುವುದರಿಂದ, ಟಾಡಿ ಕ್ಯಾಟ್ ಎಂಬ ಹೆಸರೂ ಇದೆ. ಇಂದು ನಮ್ಮ ದೇಶದಲ್ಲಿ ಎಂಟು ಪ್ರಭೇದದ ಪುನುಗು ಬೆಕ್ಕುಗಳಿದ್ದು, ಅವುಗಳ ಪೈಕಿ ಸ್ಮಾಲ್ ಇಂಡಿಯನ್ ಸಿವಿಟ್ ಕ್ಯಾಟ್, ದೇಶದಾದ್ಯಂತ ಕಾಣಸಿಗುತ್ತದೆ. ನಮ್ಮೂರಿನಲ್ಲಿದ್ದ ಪುನುಗು ಬೆಕ್ಕು ಇದೇ ಪ್ರಭೇದದ್ದು. ವಿಶೇಷವೆಂದರೆ, ಐಯುಸಿನ್ ಪಟ್ಟಿಯಲ್ಲಿ, ಈ ಜೀವಿಯನ್ನು ‘ಲೀಸ್ಟ್ ಕನ್ಸರ್ನ್’ ಅಂದರೆ, ಆ ಸಂತತಿಗೆ ಅಪಾಯವೇನಿಲ್ಲ ಎಂದು ಗುರುತಿಸಲಾಗಿದೆ.

ಎಲ್ಲಾ ಕಡೆ ಸಾಮಾನ್ಯವಾಗಿ ಕಾಣಸಿಗುವ ಜೀವಿಗಳನ್ನು ‘ಲೀಸ್ಟ್ ಕನ್ಸರ್ನ್’ ಎಂದೇ ಆ ಪಟ್ಟಿ ಗುರುತಿಸುತ್ತದೆ. ಆದರೆ, ನಮ್ಮ ಹಳ್ಳಿಯ ಸುತ್ತ ಮುತ್ತ, ಅವು ವಾಸಿಸುತ್ತಿದ್ದ ಗುಡ್ಡ ಬೆಟ್ಟಗಳಲ್ಲಿ ವ್ಯಾಪಕವಾಗಿ ಅಕೇಶಿಯಾ ಮರಗಳನ್ನು ಬೆಳೆಸಿದ್ದರಿಂದಾಗಿ, ಅಕೇಶಿಯಾ ಬುಡದಲ್ಲಿ ಬೇರೆ ಪೊದೆಗಳು ಚಿಗುರುವುದಿಲ್ಲವಾದ್ದರಿಂದ, ಅವುಗಳ ವಾಸಸ್ಥಳ ನಾಶವಾಗಿದ್ದಂತೂ ನಿಜ. ನಮ್ಮ ದೇಶದಲ್ಲಿ ಪುನುಗು ಬೆಕ್ಕುಗಳನ್ನು ಹಿಡಿದು ಬಂಧನದಲ್ಲಿಟ್ಟು ಅಥವಾ ಬೋನಿನಲ್ಲಿಟ್ಟು, ಅವುಗಳಿಂದ ಸುಗಂಧ ದ್ರವ್ಯವನ್ನು ತೆಗೆಯುವುದನ್ನು ಕಾನೂನು ಬಾಹಿರ ಚಟುವಟಿಕೆ ಎಂದು ವರ್ಗಿಕರಿಸಲಾಗಿದೆ.

ಆದರೆ, ಕೇರಳ ಮೊದಲಾದ ಪ್ರದೇಶಗಳಲ್ಲಿ, ಅಲ್ಲಲ್ಲಿ ಈ ಬೆಕ್ಕುಗಳನ್ನು ಬಂಧನದಲ್ಲಿಟ್ಟು, ಸುಂಗಂಧ ದ್ರವ್ಯ ತೆಗೆಯುವ ಕೆಲಸ
ನಡೆಯುತ್ತಿದೆ ಎಂಬ ವರದಿಗಳಿವೆ. ತಿರುಮಲದ ದೇವಾಲಯದಲ್ಲಿ ಪುನುಗು ಬೆಕ್ಕಿನಿಂದ ಸುಗಂಧ ದ್ರವ್ಯ ಸಂಗ್ರಹಿಸುವ ಚಟುವಟಿಕೆ ಮುಂಚಿನಿಂದಲೂ ಇತ್ತು; ಆದರೆ ಈಚಿನ ದಶಕಗಳಲ್ಲಿ ಅರಣ್ಯ ಇಲಾಖೆಯವರು ಇದರ ವಿರುದ್ಧ ಕಾನೂನು ಕ್ರಮ
ಕೈಗೊಂಡು, ಕಟ್ಲೆಯನ್ನೂ ನಡೆಸಿದ್ದಾರೆ!

ಜೀವಿಯೊಂದು ಸ್ರವಿಸುವ ದ್ರವವು ಮನುಷ್ಯನಿಗೆ ಸುಗಂಧ ದ್ರವ್ಯವಾಗಿ ರೂಪುಗೊಂಡ ಪರಿಯೇ ವಿಸ್ಮಯ ಹುಟ್ಟಿಸುವಂತಹದ್ದು. ಇವು ತಮ್ಮ ಜನನಾಂಗಗಳ ಬಳಿ ಸ್ರವಿಸುವ ದ್ರವವು, ಅಲ್ಲೇ ಸನಿಹದ ಪುಟ್ಟ ಚೀಲದಲ್ಲಿ ಸಂಗ್ರಹಗೊಳ್ಳುತ್ತದೆ. ಅವು ಓಡಾಡುವಾಗ, ತಮ್ಮ ವ್ಯಾಪ್ತಿಯನ್ನು ಗುರುತಿಸಲೋ ಅಥವಾ ಸಂಗಾತಿಗೆ ಸೂಚನೆ ಕೊಡಲೆಂದೋ, ಎಲೆಗಳಿಗೆ, ಗಿಡಗಳಿಗೆ ಆ
ದ್ರವವನ್ನು ಪೂಸಿ ಹೋಗುತ್ತವೆ! ಆ ದ್ರವವು ಗಾಳಿಗೆ ತಾಗಿದಾಗ ಸುಗಂಧ ಬೀರಿದರೂ, ಮೂಲತಃ ಘಾಟು ವಾಸನೆಯದ್ದು ಎಂದು ಗುರುತಿಸಲಾಗಿದೆ.

ಬೆಕ್ಕಿಗಿಂತಲೂ ದೊಡ್ಡಗಾತ್ರದ ಪುನುಗು ಬೆಕ್ಕುಗಳನ್ನು ಸಾಕಿದರೆ, ನಾಲ್ಕಾರು ವಾರಗಳಿಗೊಮ್ಮೆ ಪುನುಗನ್ನು ಸಂಗ್ರಹಿಸಬಹುದು ಎಂಬ ಮಾಹಿತಿಯಿದ್ದರೂ, ಈ ಚಟುವಟಿಕೆ ನಮ್ಮ ದೇಶದಲ್ಲಿ ಕಾನೂನು ಬಾಹಿರ ಎನಿಸಿದ್ದರಿಂದ, ಇವೆಲ್ಲವೂ ಕೇಳಿ ತಿಳಿದ ಸಂಗತಿಗಳೆಂದೇ ಹೇಳಬಹುದು. ಆದರೆ, ಬೇರೆ ದೇಶಗಳಲ್ಲಿ, ಮುಖ್ಯವಾಗಿ ಆಫ್ರಿಕಾದ ಕೆಲವು ಕಡೆ ಪುನುಗು ಸಂಗ್ರಹಿಸುವ ಕೆಲಸ ನಡೆದಿದೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿವಿಟ್ ಸುಗಂಧ ದ್ರವ್ಯಕ್ಕೆ ಸಾಕಷ್ಟು ಬೇಡಿಕೆ ಇದೆ.

ನಿಶಾಚರಿಗಳಾಗಿರುವ ಪುನುಗು ಬೆಕ್ಕುಗಳು ತುಸು ಅಪರೂಪ ಎನಿಸಿದ್ದರೂ, ನಮ್ಮ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಾನಿಸಿದ ವರದಿಗಳು ಸಾಕಷ್ಟಿವೆ. ಕರಾವಳಿಯ ಕುರುಚಲು ಕಾಡು, ಪಶ್ಚಿಮ ಘಟ್ಟ ಪ್ರದೇಶ, ಬಯಲು ಸೀಮೆಯ ಎಲೆ ಉದುರುವ ಕಾಡು ಮೊದಲಾದ ಪ್ರದೇಶಗಳಲ್ಲಿ ಇವು ಆಗಾಗ ಕಂಡು ಬಂದ ವರದಿಗಳಿವೆ. ಅಚ್ಚರಿಯ ವಿಚಾರವೆಂದರೆ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ (೨೦೨೧) ಬೆಂಗಳೂರಿನಂತ ಮಹಾ ನಗರದ ಮಧ್ಯೆ ಪುನುಗು ಬೆಕ್ಕು ಪತ್ತೆಯಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳಗಿನ ವಾಯು ವಿಹಾರಕ್ಕೆ ಹೋದವರೊಬ್ಬರಿಗೆ, ಗಾಯಗೊಂಡ ಪುನುಗು ಬೆಕ್ಕು ಕಾಣಿಸಿತ್ತು. ಮೊದಲಿಗೆ ಅವರು ಅದನ್ನು ಮುಂಗುಸಿ ಎಂದೇ ತಿಳಿದು, ವನ್ಯ ಜೀವಿ ರಕ್ಷಕರಿಗೆ ಮಾಹಿತಿ ತಿಳಿಸಿದರು.

ಕೊನೆಗೆ ಗೊತ್ತಾಗಿದ್ದೆಂದರೆ, ಅದು ಪುನುಗು ಬೆಕ್ಕು. ವಿಶ್ವವಿದ್ಯಾಲಯದ ಆವರಣದಲ್ಲಿ ಪತ್ತೆಯಾದ ಆ ಪುನುಗು ಬೆಕ್ಕು ನಾಯಿ ಅಥವಾ ಬೇರೆ ಪ್ರಾಣಿಗಳ ಆಕ್ರಮಣಕ್ಕೆ ಒಳಗಾದಂತೆ ಕಂಡಿತ್ತು ಎಂದು ವರದಿಯಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಕಾಡು ಪ್ರದೇಶದಲ್ಲಿ ಪುನುಗು ಬೆಕ್ಕು ಇದೆ ಎಂಬ ವಿಚಾರವು ಗಮನಾರ್ಹ. ಮಾಗಡಿ ಸುತ್ತಮುತ್ತಲಿನ ಕುರುಚಲು ಕಾಡು ಪ್ರದೇಶದಲ್ಲೂ ಪುನುಗು ಬೆಕ್ಕುಗಳು ಕಾಣಿಸಿದ ವರದಿಗಳಿವೆ. ಹೆಗ್ಗಣ ಹಿಡಿಯಲು ಇಟ್ಟ ಬೋನಿನಲ್ಲಿ ಪುನುಗು ಬೆಕ್ಕು ಸಿಕ್ಕಿಬಿದ್ದ ವರದಿಗಳೂ
ಆಗಾಗ ಕೇಳಿಬರುತ್ತಿವೆ.

ಅಂದರೆ, ನಾವೆಂದುಕೊಂಡಷ್ಟು ಅಪರೂಪದ ಜೀವಿ ಇದಲ್ಲ ಎಂದಾಯಿತು. ಇವು ಸಾಮಾನ್ಯವಾಗಿ ನಿಶಾಚರಿ. ಇನ್ನೂ ವಿಶೇಷ ವೆಂದರೆ, ಇವು ಕಾಫಿ ಹಣ್ಣನ್ನು ತಿಂದು, ಅದರ ಬೀಜವನ್ನು ವಿಸರ್ಜಿಸಿದಾಗ, ಆ ಬೀಜಗಳನ್ನು ಸಂಗ್ರಹಿಸಿ ತಯಾರಿಸಿದ
ಕಾಫಿಯು ಹೆಚ್ಚಿನ ರುಚಿ ಹೊಂದಿದೆ ಎಂಬ ಪ್ರಚಾರವಿದೆ! ಸಿವಿಟ್ ಕಾಫಿ ಅಥವಾ ಕೋಪಿಲುವಾಕ್ ಎಂಬ ಹೆಸರಿನಲ್ಲಿ ಈ ವಿಶಿಷ್ಟ ಕಾಫಿಯನ್ನು ಇಂಡೋನೇಷ್ಯಾದಲ್ಲಿ ಹೆಚ್ಚು ಪ್ರಚಾರಕ್ಕೆ ತಂದಿದ್ದು, ಅಂತಹ ಪ್ರಚಾರದಿಂದಲೇ ಈ ಕಾಫಿಗೆ ದುಬಾರಿ
ಮಾರುಕಟ್ಟೆಯನ್ನು ರೂಪಿಸಲಾಗಿದೆ. ಹಿಂದೆ, ಸಹಜವಾಗಿ ವಾಸಿಸುತ್ತಿದ್ದ ಸಿವಿಟ್‌ಗಳ ಮಲದಿಂದ ಈ ಕಾಫಿ ಬೀಜವನ್ನು ಸಂಗ್ರಹಿಸಲಾಗುತ್ತಿತ್ತು.

ಆದರೆ, ಈಚಿನ ವರ್ಷಗಳಲ್ಲಿ ಅವುಗಳನ್ನು ಅನಾರೋಗ್ಯಕರ ಬೋನಿನಲ್ಲಿ ಕೂಡಿಹಾಕಿ, ಒತ್ತಾಯದಿಂದ ಕಾಫಿ ಬೀಜಗಳನ್ನು ತಿನ್ನಿಸಿ, ಇಂತಹ ಬೀಜಗಳನ್ನು ಸಂಗ್ರಹಿಸಲಾಗುತ್ತಿದೆ. ನಮ್ಮ ದೇಶದ ಪುನುಗು ಬೆಕ್ಕುಗಳು ಕಾಫಿ ಹಣ್ಣನ್ನು ತಿಂದ ನಂತರ
ವಿಸರ್ಜಿಸುವ ಬೀಜವನ್ನು ವಾಣಿಜ್ಯಕವಾಗಿ ಉಪಯೋಗಿಸಬಹುದೇ, ಇಲ್ಲವೇ ಎಂಬ ವಿಚಾರದ ಕುರಿತು ಹೆಚ್ಚಿನ ಸಂಶೋಧನೆ ನಡೆದಂತಿಲ್ಲ.

error: Content is protected !!