ರಾಜ್ಯದಿಂದ ದಾಖಲೆಯ 594 ಟಿಎಂಸಿ ಹರಿವು
ಅಪಾಯವಾದರೂ ನೀರು ಬೇಡ ಎನ್ನದ ತಮಿಳುನಾಡು
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಕಳೆದ ಐದಾರು ತಿಂಗಳಿನಿಂದ ರಾಜ್ಯದಲ್ಲಿ ಬೇಡ ಎಂದರೂ ಹುಚ್ಚೆದ್ದು ಸುರಿದ ಎಡೆಬಿಡದ ಮಳೆ ತಮಿಳುನಾಡಿಗೆ ಸುಮಾರು ೫೯೪.೮೮ ಟಿಎಂಸಿಗಳ ಐತಿಹಾಸಿಕ ದಾಖಲೆ ಪ್ರಮಾಣದ ನೀರು ಹರಿಸಿದೆ.
ಇದು ಉಭಯ ರಾಜ್ಯಗಳ ನಡುವೆ ಕಾವೇರಿ ವಿವಾದ ಆರಂಭವಾದ ಪಲ್ಲವರು, ಚೋಳರ ಕಾಲದಿಂದ ಹಿಡಿದು ಈತನಕ ಹರಿದಿರುವ ನೀರಿನ ಎಲ್ಲಾ ದಾಖಲೆಗಳನ್ನೂ ಮುರಿದು ಇದೊಂದು ಸಾರ್ವಕಾಲಿಕ ದಾಖಲೆಯಾದಂತಾಗಿದೆ. ಇದೇ ರೀತಿ ನಿರಂತರ ಮಳೆ ಸುರಿದರೆ ಸರಕಾರದ ಜಲವರ್ಷದ ಲೆಕ್ಕದಂತೆ ಮೇ ಅಂತ್ಯದವರೆಗೂ ಸುಮಾರು ೮೦೦ ಟಿಎಂಸಿ ಗಳಷ್ಟು ನೀರು ತಮಿಳು ನಾಡಿಗೆ ಹರಿದು ಹೋಗುವ ಸಾಧ್ಯತೆ ಇದೆ ಎಂದು ಜಲಸಂಪ ನ್ಮೂಲ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕಲ್ಪನೆಗೂ ನಿಲುಕದಷ್ಟು ಮಳೆ ಸುರಿದ ಕಾರಣ ತಮಿಳುನಾಡಿಗೆ ನಿರೀಕ್ಷೆಗೂ ಮೀರಿ ನೀರು ಹರಿದಿದ್ದು, ಇದರಿಂದ ಬರೀ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡಿಗೂ ಸಾಕಷ್ಟು ಹಾನಿ ಉಂಟಾಗಿದೆ. ಇದೇ ವೇಳೆ ಆಂಧ್ರಪ್ರದೇಶದ ಕೃಷ್ಣಾ ನದಿಯಿಂದಲೂ ಸಾಕಷ್ಟು ನೀರು ಹರಿದು ತೊಂದರೆಯಾಗಿದೆ. ಇದರಿಂದ ನೊಂದಿರುವ ತಮಿಳುನಾಡು ನೆರೆಯ ಆಂಧ್ರಪ್ರದೇಶವನ್ನು ನೀರು ಹರಿಸಬೇಡಿ ಎಂದು ವಿನಂತಿಸಿ ಪತ್ರವನ್ನೂ ಬರೆದಿದೆ.
ಆದರೆ ಕಾವೇರಿಯಿಂದ ಹಿಂದೆಂದೂ ಕೇಳರಿಯ ದಷ್ಟು ನೀರು ಹರಿದಿದ್ದರೂ ನೀರು ಸಾಕು ಎಂದು ಹೇಳುವ ಪ್ರಯತ್ನವನ್ನು ಮಾತ್ರ ಮಾಡಿಲ್ಲ. ಇಷ್ಟೇ ಅಲ್ಲ, ಕಾವೇರಿ ನದಿ ದಿಕ್ಕು ಬದಲಿಸಿ ತಮ್ಮ ವ್ಯಾಪ್ತಿಯ ವೈಗೈ ಮತ್ತು ಗುಂಡಾರ್ ನದಿಗಳಿಗೆ ಕಾವೇರಿ ನೀರು ಹರಿಸಿಕೊಳ್ಳುವ ನಿಯಮ ಬಾಹಿರ ಎನ್ನಲಾಗುವ ಯೋಜನೆ ರೂಪಿಸಿದೆ. ಅದೇ ಕರ್ನಾಟಕ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಮೇಕೆದಾಟು ಯೋಜನೆಗೆ ಮಾತ್ರ ತಕರಾರು ಮಾಡುತ್ತಾ ಕೋರ್ಟ್ ಮೆಟ್ಟಿಲೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀರು ಬೇಡ ಎಂದು ಆಂಧ್ರಕ್ಕೆ ಪತ್ರ: ಸರಕಾರದ ಲೆಕ್ಕಾಚಾರದ ಪ್ರಕಾರ ಪ್ರತಿ ವರ್ಷ ಜೂನ್ನಿಂದ ಮುಂದಿನ ಮೇ ವರೆಗೂ ಜಲ ವರ್ಷ ಎಂದು ಕರೆಯಲಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಈ ಅವಧಿಯಲ್ಲಿ ಕರ್ನಾಟಕ ತಮಿಳುನಾಡಿಗೆ ಪ್ರತಿ
ವರ್ಷ ೧೭೭.೨೫ ಟಿಎಂಸಿ ನೀರನ್ನು ನೀಡಬೇಕಾಗುತ್ತದೆ. ಹೀಗಾಗಿ ಈ ವರ್ಷ ಜೂನ್ನಿಂದ ನವೆಂಬರ್ ವರೆಗೂ ಸುಮಾರು ೧೪೫.೭೯ ಟಿಎಂಸಿ ನೀರು ತಮಿಳುನಾಡಿಗೆ ಹೋಗಬೇಕಿತ್ತು. ಆದರೆ ಈಗ ಕರ್ನಾಟಕದಿಂದ ತಮಿಳುನಾಡಿಗೆ ಸುಮಾರು ೫೯೪ ಟಿಎಂಸಿಗಳಷ್ಟು ನೀರು ಹರಿಸಲಾಗಿದೆ. ಅಂದರೆ ಕೇವಲ ೬ ತಿಂಗಳ ಅವಧಿಯಲ್ಲಿ ಹರಿಸಬೇಕಾದ ನೀರಿನ ಪ್ರಮಾಣಕ್ಕಿಂತ ೪ ಪಟ್ಟು ನೀರು ಹೆಚ್ಚಾಗಿ ತಮಿಳು ನಾಡು ಸೇರಿದೆ.
ಹಾಗೆ ನೋಡಿದರೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲವಿವಾದ ಆರಂಭವಾದ (೧೭೭೯ರ ರಾಜರ ಆಳ್ವಿಕೆ) ಕಾಲದಿಂದಲೂ ಈತನಕ ಇಷ್ಟು ಪ್ರಮಾಣದ ನೀರು ಹರಿಸಿರುವ ದಾಖಲೆಯೇ ಇಲ್ಲ. ಅಷ್ಟಕ್ಕೂ ಪ್ರತಿ ಬಾರಿ ನೀರಿಗಾಗಿ ತಗಾದೆ ತೆಗೆಯುವ ತಮಿಳುನಾಡು ಪ್ರತಿ ಬಾರಿ ಮಳೆ ಹೆಚ್ಚು ಮಳೆ ಬಂದಾಗಲೂ ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕಾದ ೧೨೭ ಟಿಎಂಸಿಗಿಂತಲೂ ಅಽಕ ನೀರು ಹೋಗುತ್ತದೆ. ಆದರೆ ಆ ಎಲ್ಲಾ ನೀರನ್ನು ತಮಿಳುನಾಡು ಸದ್ಬಳಕೆ ಮಾಡಿಕೊಳ್ಳದೆ ವೃಥಾ ನೀರು ಸಮುದ್ರ ಸೇರುವಂತಾಗುತ್ತದೆ. ಹಾಗಂತ ಆ ನೀರನ್ನು ಕರ್ನಾಟಕದದರೂ ಬಳಕೆ ಮಾಡೋಣ ಎಂದರೆ ತಮಿಳುನಾಡು ಅದಕ್ಕೂ ಅಡ್ಡಿ ಮಾಡುತ್ತದೆ.
ಹೀಗಾಗಿ ಕುಡಿಯುವ ನೀರಿನ ಮೇಕೆದಾಟು ಯೋಜನೆ ನನೆಗುದಿಗೆ ಬಿದ್ದಿದೆ. ಇದರ ಮಧ್ಯೆ, ತಮಿಳುನಾಡಿನ ವಿಚಿತ್ರ ನಡೆಯೊಂದನ್ನು ನೋಡುವುದಾದರೆ, ೧೯೭೨ರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಕೃಷ್ಣಾ ನದಿಯಿಂದ ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕುಡಿಯುವ ಉದ್ದೇಶಕ್ಕಾಗಿ ತಲಾ ಐದು ಟಿಎಂಸಿ ನೀರು ಹರಿಸಬೇಕು ಎಂದು ಆದೇಶಿಸಲಾಗಿದೆ. ಈ ಬಾರಿ ಆಂಧ್ರಪ್ರದೇಶದಲ್ಲೂ ಮಳೆ ಹೆಚ್ಚಾಗಿ ಕೃಷ್ಣಾದಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ.
ಆದರೆ ತಮಿಳುನಾಡು ಈ ಬಾರಿ ನೀರು ಬೇಡ ಎಂದು ಆಂಧ್ರಪ್ರದೇಶಕ್ಕೆ ಪತ್ರವನ್ನು ಬರೆದಿದೆ. ಆದರೆ ಕರ್ನಾಟಕದಿಂದ ಮಾತ್ರ ಬೇಡ ಎಂದು ಹೇಳಿಲ್ಲ ಎಂದು ಅಧಿಕಾರಿಗಳು ಹೇಳಿzರೆ.
ಮೇಕೆ ದಾಟಬಹುದೇ?
ಇದೆಲ್ಲದರ ಮಧ್ಯೆ ಕಾವೇರಿ ನೀರು ಬಳಸುವ ಯೋಜನೆ ರೂಪಿಸಬಾರದು ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ನಲ್ಲಿ ತಕರಾರು ಮಾಡುತ್ತಿರುವ ತಮಿಳುನಾಡು, ತನ್ನ ವ್ಯಾಪ್ತಿಯ ವೈಗೈ ಮತ್ತು ಗುಂಡಾರ್ ನದಿಗಳಿಗೆ ಕಾವೇರಿ ನೀರನ್ನು ಹರಿಸಿ ಕೊಳ್ಳುವ (ಸಿವಿಜಿ ಲಿಂಕ್) ಯೋಜನೆ ರೂಪಿಸಿದೆ. ಕಳೆದ ಜನವರಿಯ ಇದರ ಕಾಮಗಾರಿ ಆರಂಭ ವಾಗಿದೆ. ಆದರೆ ಸರಕಾರ ತಡವಾಗಿ ಎಚ್ಚೆತ್ತುಕೊಂಡು ಇದಕ್ಕೆ ತಕರಾರು ಸಲ್ಲಿಸಿದೆ.
*
ನಿರಂತರ ಮಳೆಯಿಂದಾಗಿ ರಾಜ್ಯದಿಂದ ತಮಿಳುನಾಡಿಗೆ ೫೯೪.೮೮ ಟಿಎಂಸಿಯಷ್ಟು ಐತಿಹಾಸಿಕ ದಾಖಲೆಯಷ್ಟು ನೀರು ಹರಿದಿದೆ. ಮಳೆ ಇದೇ ರೀತಿ ಮುಂದುವರಿದರೆ ಇನ್ನೂ ಹೆಚ್ಚಿನ ನೀರು ಹರಿಯುವ ಸಾಧ್ಯತೆ ಇದೆ. ಇದರಿಂದ ಅಲ್ಲಿಯೂ ನೀರು ಸದ್ಬಳಕೆಯಾಗದೆ ಸಮುದ್ರ ಸೇರುತ್ತದೆ ಎನ್ನುವುದೇ ಬೇಸರ.
-ಎಂ.ಬಂಗಾರುಸ್ವಾಮಿ, ಜಲಸಂಪನ್ಮೂಲ ಇಲಾಖೆ ಹಿರಿಯ ಸಮನ್ವಯಾಽಕಾರಿ