Wednesday, 1st February 2023

ಆಗ ಗಜಕ್ಕೂ ಗಲ್ಲು, ಇನ್ನು ತೇಗಿಗೂ ತೆರಿಗೆ !

ವಿದೇಶವಾಸಿ

dhyapaa@gmail.com

ಸಣ್ಣ ಪ್ರಾಣಿಗಳು, ಕೀಟಗಳು ಜಾಗ ಖಾಲಿ ಮಾಡಬೇಕು ಎಂದು ಪತ್ರ ಬರೆಯುವುದು, ಅದನ್ನು ಓದಿ ಅವುಗಳೆಲ್ಲ ಅನುಸರಿಸ ಬೇಕು ಎಂಬ ಕಲ್ಪನೆ ಇದೆಯಲ್ಲ, ಅದೇ ಭಾರೀ ಮಹಾನ್ ಕಲ್ಪನೆ ಬಿಡಿ. ನಾವೇನಾದರೂ ಆ ಕಾಲದಲ್ಲಿದ್ದಿದ್ದರೆ ಅಥವಾ ಈಗೇನಾದರೂ ಆ ಕಾನೂನು ಇದ್ದಿದ್ದರೆ, ಸೊಳ್ಳೆ, ನೊಣ, ಜೇಡ, ಮಿಡತೆ ಎಲ್ಲರೊಂದಿಗೂ ಪತ್ರ ವ್ಯವಹಾರ!

No animal was harmed in anyway during writing of this article. ಇದು 1916 ರ ಸೆಪ್ಟೆಂಬರ್‌ನಲ್ಲಿ ನಡೆದ ಘಟನೆ. ಅವಳ ಹೆಸರು ಮೇರಿ. ಏಷ್ಯಾ ಮೂಲದ ಮೇರಿಗೆ ಅಮೆರಿಕದ ಟೆನೆಸ್ಸೀಯಲ್ಲಿ ಕೆಲಸ. ಆಕೆ ಕೆಲಸ ಮಾಡಿಕೊಂಡಿದ್ದದ್ದು ಒಂದು ಸರ್ಕಸ್ ಕಂಪನಿಯಲ್ಲಿ.

ಅದೂ ಅಂತಿಂಥ ಸರ್ಕಸ್ ಕಂಪನಿಯಲ್ಲ, 1900 ರ ಆರಂಭದಲ್ಲಿ ವಿಶ್ವವಿಖ್ಯಾತವಾಗಿದ್ದ ‘ಚಾರ್ಲ್ಸ್ ಸ್ಪಾರ್ಕ್’ ಕಂಪನಿಯಲ್ಲಿ. ಆ ಕಂಪನಿ spaark’s world famous show ಹೆಸರಿನ ಸರ್ಕಸ್ ನಡೆಸುತ್ತಿತ್ತು. ಸುಮಾರು ಇಪ್ಪತ್ತೈದು ಬಗೆಯ ಸ್ವರ ಹೊರಡಿಸುವುದರ ಜತೆಗೆ ಕೆಲವು ವಿಶಿಷ್ಠವಾದ ಕಸರತ್ತನ್ನೂ ಮಾಡುತ್ತಿದ್ದ ಮೇರಿ ಪ್ರಮುಖ ಆಕರ್ಷಣೆಯಾಗಿ ಜನ ಮಣ್ಣನೆ ಗಳಿಸಿದ್ದಳು. ಆ ದಿನ ಮೇರಿ ಸರ್ಕಸ್ ಪ್ರಚಾರಕ್ಕಾಗಿ ಟೆನೆಸ್ಸೀ ನಗರದ ಬೀದಿಯಲ್ಲಿ ತನ್ನ ಸಹಚರರೊಂದಿಗೆ ಹೆಜ್ಜೆ ಹಾಕುತ್ತಿದ್ದಳು. ಬೀದಿ ಬದಿಯ ಅಂಗಡಿಯಲ್ಲಿರುವ ಕಲ್ಲಂಗಡಿ ಹಣ್ಣು ಅವಳ ಕಣ್ಣಿಗೆ ಬಿತ್ತು. ಅದನ್ನು ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿ ಹಣ್ಣು ತಿನ್ನಲು ಆರಂಭಿಸಿದಳು. ಅದು ತನ್ನ ಮರಣಕ್ಕೆ ನಾಂದಿಯಾಗುತ್ತದೆ ಎಂಬ ಒಂದು ಸಣ್ಣ ಸೂಟೂ
ಅವಳಿಗೆ ಸಿಗಲಿಲ್ಲ. ಅದೂ ಅಂತಿಂಥ ಮರಣವಲ್ಲ, ಗಲ್ಲು ಶಿಕ್ಷೆ!

ಮೇರಿಯನ್ನು ಗಲ್ಲಿಗೇರಿಸಲು ಒಂದು ದೊಡ್ಡ ಕ್ರೇನ್ ತರಲಾಯಿತು. ಅದಕ್ಕೆ ಮೇರಿಯ ಕುತ್ತಿಗೆಗೆ ನೇಣು ಬಿಗಿದು ಮೇಲೆ ಎತ್ತುತ್ತಿದ್ದಂತೆ, ಅವಳು ವಿಲವಿಲ ಒದ್ದಾಡತೊಡಗಿದಳು. ಅದರಿಂದ ಸರಪಳಿ ಹರಿದು ಮೇರಿ ಕೆಳಕ್ಕೆ ಬಿದ್ದಳು. ಸುಮಾರು
ಐವತ್ತು ಕ್ವಿಂಟಲ್ ತೂಕದ ಮೇರಿಯ ಭಾರ ತಡೆದುಕೊಳ್ಳಲು ಸರಪಳಿ ವಿಫಲವಾಗಿತ್ತು. ಸಮತೋಲನ ಕಳೆದುಕೊಂಡ ಕ್ರೇನ್ ಇನ್ನೊಂದು ಕಡೆ ಬಿದ್ದು ನುಜ್ಜುಗುಜ್ಜಾಯಿತು. ಸುಮಾರು ಇಪ್ಪತ್ತು ಅಡಿ ಮೇಲಿಂದ ಕೆಳಗೆ ಬಿದ್ದ ಹೊಡೆತಕ್ಕೆ ಮೇರಿಯ ಸೊಂಟ ಮುರಿದಿತ್ತು. ಆಗ ಇನ್ನೂ ದೊಡ್ಡ ಕ್ರೇನ್ ತಂದು, ಮೇರಿಯನ್ನು ಗಲ್ಲಿಗೇರಿಸಿ, ಪ್ರಾಣ ತೆಗೆಯಲಾಯಿತು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಇದಕ್ಕೆ ಸಾಕ್ಷಿಯಾದರು. ಅಂದ ಹಾಗೆ, ‘ಮೇರಿ’ ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡುವ ಆನೆಯ ಹೆಸರು! ಅಸಲಿಗೆ ಆಗಿದ್ದೇನೆಂದರೆ, ಆರು ವರ್ಷದಿಂದ ಅದೇ ಕಂಪನಿಯಲ್ಲಿ ಮೇರಿ ಸರ್ಕಸ್ ಮಾಡು ತ್ತಿದ್ದಳು. ಈ ಘಟನೆ ನಡೆಯುವುದಕ್ಕಿಂತ ಕೆಲವು ದಿನಗಳ ಮೊದಲು ಮೇರಿಯ ಮಾವುತ ಮತ್ತು ಕಂಪನಿಯ ಮಾಲಿಕನ ನಡುವಿನ ಮನಃಸ್ತಾಪದ ಕಾರಣ, ಮಾವುತ ಕಂಪನಿ ಬಿಟ್ಟು ಹೋಗಿದ್ದ. ಆತನ ಬದಲಾಗಿ ಬಂದ ಮಾವುತನೊಂದಿಗೆ ಮೇರಿ ಇನ್ನೂ ಹೊಂದಿಕೊಂಡಿರಲಿಲ್ಲ.

ಅಂದು ಮೇರಿ ಅಂಗಡಿಗೆ ನುಗ್ಗಿ ಹಣ್ಣು ತಿನ್ನುತ್ತಿರುವಾಗ ಮಾವುತ ಆಕೆಯನ್ನು ತಿವಿಯುತ್ತಲೇ ಇದ್ದ. ಅದರಿಂದ ವ್ಯಗ್ರಗೊಂಡ ಮೇರಿ, ತನ್ನ ಮೇಲೆ ಕುಳಿತಿದ್ದವನನ್ನು ಎತ್ತಿ ಕೆಳಗೆ ಹಾಕಿ, ಕಾಲಿನಿಂದ ಹೊಸಕಿ ಹಾಕಿದಳು. ಅಲ್ಲಿದ್ದವರೆಲ್ಲ ಹೇಗೋ
ಮೇರಿಯನ್ನು ಹಿಡಿದು ನಿಲ್ಲಿಸಿದರು. ಆ ಕ್ಷಣದಿಂದಲೇ, ಮಾವುತನನ್ನು ಕೊಂದ ಆನೆಯನ್ನು ಕೊಲ್ಲಬೇಕು ಎಂಬ ಮಾತು ಆರಂಭವಾಗಿ ಕೊನೆಗೆ ಗಜಕುಲ ಸಂಜಾತೆಗೆ ಗಲ್ಲು ಶಿಕ್ಷೆ ನೀಡಲಾಯಿತು.

ಈ ಘಟನೆಯ ಕುರಿತು ಎಲ್ಲೋ ಓದಿದ ಅಸ್ಪಷ್ಟ ನೆನೆಪು ಮರುಕಳಿಸಿದ್ದು ಕಳೆದ ಶುಕ್ರವಾರ. ವಿಶ್ವವಾಣಿ ಪತ್ರಿಕೆಯ ‘ಶಿಶಿರಕಾಲ’ ಅಂಕಣದಲ್ಲಿ ಶಿಶಿರ್ ಹೆಗಡೆಯವರು ‘ಪ್ರಾಣಿಗಳೇಕೆ ಕಾನೂನು ಪಾಲಿಸುವುದಿಲ್ಲ?’ ವಿಷಯದ ಕುರಿತು ಬರೆದಿದ್ದರು. ಅದರಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ, ಕೃಷಿಕ ಕಂಬಳಿಹುಳುವಿನ ಮೇಲೆ ದಾವೆ ಹೂಡಿದ ವಿಷಯ, ಇಂತಹ ಇನ್ನೂ ಕೆಲವು ಕತೆಗಳನ್ನು ಹೇಳುವ, ಎಡ್ವರ್ಡ್ ಇವಾ ಬರೆದ The Criminal Prosecution Capital Punishment ಪುಸ್ತಕದ ಕುರಿತು ಬರೆದಿದ್ದನ್ನು ಓದಿದಾಗ ಎಂದೋ ಓದಿ ಮರೆತಿದ್ದನ್ನು ಪುನರ್ ಮನನ ಮಾಡಿಕೊಳ್ಳುವಂತಾಯಿತು.

ಅದೇ ರೀತಿಯ ಇನ್ನೊಂದು ಪುಸ್ತಕವೆಂದರೆ ಇಂಗ್ಲೆಂಡಿನ ಲೇಖಕ, ವಕೀಲ ಸದಾಕತ್ ಕದ್ರಿ ಬರೆದ The Trial: Four Thousand Years of Courtroom Drama. ಅದರಲ್ಲಿ ಶವ ಅಥವಾ ಇನ್ಯಾವುದೋ ನಿರ್ಜೀವ ವಸ್ತುಗಳ ವಿಚಾರಣೆ ಮತ್ತು ಪ್ರಯೋಗಗಳ ಕುರಿತು ಹೇಳಿದ್ದಾರೆ. ಮಾತು ಬರದ ಪ್ರಾಣಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಎಷ್ಟು ಸರಿ ಎಂದು ಕೇಳಬಹುದು. ಆದರೆ ಇದು ನಿನ್ನೆ ಮೊನ್ನೆಯದಲ್ಲ.

ಹದಿಮೂರರಿಂದ ಹದಿನೆಂಟನೆಯ ಶತಮಾನದವರೆಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಜಾರಿಯಲ್ಲಿತ್ತು. ಯುರೋಪ್ನಲ್ಲಿ ಮನುಷ್ಯರಿಗೆ ನೀಡುವ ಶಿಕ್ಷೆಯನ್ನೇ ಪ್ರಾಣಿಗಳಿಗೂ ನೀಡುತ್ತಿದ್ದರು. ಪ್ರಾಣಿಗಳ ಪರ- ವಿರೋಧವಾಗಿ ವಾದಿಸಲು ವಕೀಲರು ಇರುತ್ತಿದ್ದರು. ಪ್ರಾಣಿಗಳ ಮೇಲಿನ ಮೊಕದ್ದಮೆ, ಪ್ರಕರಣಗಳೆಲ್ಲ ಸಾಮಾನ್ಯವಾಗಿ ಚರ್ಚಿನಲ್ಲಿ ಅಥವಾ ಆ ಕಾಲದಲ್ಲಿದ್ದ
ಸಾಮಾಜಿಕ ನ್ಯಾಯಾಲಯದಲ್ಲಿ ಇತ್ಯರ್ಥವಾಗುತ್ತಿದ್ದವು. ಹಂದಿ, ಕುದುರೆ, ನಾಯಿ, ಕುರಿ, ಕತ್ತೆ, ಗೂಳಿಯಿಂದ ಹಿಡಿದು ಮಿಡತೆ, ಬಸವನ ಹುಳದ ವಿರುದ್ಧವೂ ಕೇಸು ದಾಖಲಾದ ಉಖವಿದೆ.

ಅದೆ ಹೋಗಲಿ, 1596 ರಲ್ಲಿ ಡಾಲಿನ್ ವಿರುದ್ಧವೂ ಕಟ್ಲೆ ಹೂಡಿದ್ದಿದೆ. ಸಮುದ್ರದಲ್ಲಿರುವ ಡಾಲಿನ್ ಮನುಷ್ಯನಿಗೆ ಯಾವ ರೀತಿ ಉಪದ್ರವ ಕೊಟ್ಟಿತ್ತೋ, ಅದನ್ನು ಹೇಗೆ ಹಿಡಿದು ತಂದರೋ, ಒಂದು ವೇಳೆ ಹಿಡಿದರೂ, ಅದೇ ಹೌದೋ, ಅಲ್ಲವೋ… ಭಗವಂತನೇ ಬಲ್ಲ! ಆದರೆ ಫ್ರಾನ್ಸ್‌ನಲ್ಲಿ ಪ್ರಾಣಿಗಳ ಮೇಲೆ ಕೇಸು ಹಾಕುವುದು ಸಾಮಾನ್ಯವಾಗಿತ್ತು. ಅದರಲ್ಲಿ ಅತಿ ಹೆಚ್ಚು ಕೇಸು ಜಡಿಸಿಕೊಂಡ ಪ್ರಾಣಿ ಎಂದರೆ ‘ಸರಣಿ ಅಪರಾಧಿ’ ಎಂದು ಪಟ್ಟ ಕಟ್ಟಿಕೊಂಡ ಹಂದಿ.

ಪ್ರಾಣಿಗಳು ಮತ್ತು ನ್ಯಾಯಾಲಯ ಪ್ರಸಿದ್ಧವಾದ ಕತೆಯೊಂದಿದೆ. ಇದು 1457 ರಲ್ಲಿ ಫ್ರಾನ್ಸ್‌ನಲ್ಲಿ ಘಟಿಸಿದ್ದು. ತಾಯಿ ಹಂದಿ ಮತ್ತು ಅದರ ಆರು ಮರಿ ಹಂದಿಗಳು ಅಪರಾಧಿ ಸ್ಥಾನದಲ್ಲಿದ್ದವು. ಅವುಗಳ ಮೇಲೆ ಐದು ವರ್ಷದ ಮಗುವೊಂದನ್ನು ಕೊಂದ ಆರೋಪ ಇತ್ತು. ಪರ ವಿರೋಧಗಳನ್ನೆಲ್ಲ ಆಲಿಸಿದ ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆ ಇದ್ದುದರಿಂದ ಆರು ಮರಿಗಳನ್ನು ಖುಲಾಸೆಗೊಳಿಸಿತು. ತಾಯಿ ಹಂದಿಗೆ ಮರಣದಂಡನೆ ವಿಧಿಸಿತು!

ನೆಪೊಲಿಯನ್ ಯುದ್ಧ ಮಾಡುತ್ತಿದ್ದ ಸಂದರ್ಭದಲ್ಲಿ ಇಂಗ್ಲೆಂಡಿನ ಹಾರ್ಟ್ಲ್‌ಪೂಲ್‌ನಲ್ಲಿ ಒಂದು ಘಟನೆ ನಡೆಯಿತು. ಇದು 1800 ರ ಆರಂಭದ ವರ್ಷಗಳಲ್ಲಿ ನಡೆದ ಘಟನೆ. ಸಮುದ್ರದಲ್ಲಿ ಚಲಿಸುತ್ತಿದ್ದ ಫ್ರೆಂಚ್ ಹಡಗೊಂದು ಚಂಡಮಾರುತಕ್ಕೆ ಸಿಲುಕಿ ಧ್ವಂಸವಾಯಿತು. ಅದರಲ್ಲಿದ್ದವರೆಲ್ಲ ಸತ್ತು ಹೋದರೂ, ಅವರ ಜತೆಗಿದ್ದ ಒಂದು ದೊಡ್ಡ ಮಂಗ ಮಾತ್ರ ಬದುಕಿ ಹಾರ್ಟ್ಲ್‌ ಪೂಲ್ ದಡಸೇರಿತ್ತು. ದುರಾದೃಷ್ಟ ವೆಂದರೆ, ಸಮುದ್ರದಲ್ಲಿ ಬದುಕಿದ ಕೋತಿ ದಡದಲ್ಲಿ ಪ್ರಾಣ ಬಿಡಬೇಕಾಯಿತು. ಅದಕ್ಕೆ ಕಾರಣ, ಹಡಗಿನಲ್ಲಿದ್ದ ಜನ ಮನರಂಜನೆಗೆಂದು ಮಂಗಕ್ಕೆ ಫ್ರೆಂಚ್ ಸೈನಿಕರ ಸಮವಸ ತೊಡಿಸಿದ್ದರು.

ಹಾರ್ಟ್ಲ್‌ಪೂಲ್ ದಡದಲ್ಲಿಸೇರಿದ ಜನರು ಮಂಗವನ್ನು ಸಾಮಾಜಿಕ ನ್ಯಾಯಲಯಕ್ಕೆ ಕರೆದೊಯ್ದರು. ಅಲ್ಲಿ ಮಂಗವನ್ನು ವಿಚಾರಣೆಗೆ ಒಳಪಡಿಸಲಾಯಿತು. ಮಂಗ ಯಾವ ಪ್ರಶ್ನೆಗೂ ಉತ್ತರಿಸದಿದ್ದಾಗ ಅದನ್ನು ಫ್ರೆಂಚ್ ಗೂಢಚಾರ ಎಂದು ನಿರ್ಧರಿಸಿ, ಗಲ್ಲು ಶಿಕ್ಷೆ ವಿಧಿಸಲಾಯಿತು. ಹಾಗಂತ ನ್ಯಾಯಾಲಯದಲ್ಲಿ ಪ್ರತಿ ಬಾರಿಯೂ ಪ್ರಾಣಿಗಳಿಗೆ ಮರಣದಂಡನೆ ಶಿಕ್ಷೆ ವಿಽಸುತ್ತಿರಲಿಲ್ಲ.

ಕೆಲವೊಮ್ಮೆ ಆಪಾದನೆಯಿಂದ ಖುಲಾಸೆ ಗೊಳಿಸಿದ್ದೂ ಇದೆ. ಅದಕ್ಕೆ ಉತ್ತಮ ಉದಾಹರಣೆ 1750 ರಲ್ಲಿ ನಡೆದ ಒಂದು ಕತ್ತೆಯ ಕತೆ. ಕತ್ತೆಯ ಪರವಾಗಿ ದಾವೆ ಹೂಡಿದವರು ಯಾರೋ ಗೊತ್ತಿಲ್ಲ. ಆದರೆ ಕತ್ತೆಯೊಂದಿಗೆ ಒಬ್ಬ ಮನುಷ್ಯ ಸಂಯೋಗ ನಡೆಸುತ್ತಿದ್ದಾನೆ ಎಂದು ಇಬ್ಬರನ್ನೂ ಕೋರ್ಟಿಗೆ ಎಳೆಯಲಾಗಿತ್ತು. ಅಂದು ಕತ್ತೆಯ ಪರವಾಗಿ ಸಾಕ್ಷಿ ಹೇಳಲು ಸಾಕಷ್ಟು ಜನ
ನ್ಯಾಯಾಲಯಕ್ಕೆ ಬಂದಿದ್ದರು. ಕತ್ತೆಯ ನಡತೆ, ಸದ್ಗುಣಗಳನ್ನು ಪರಿಗಣಿಸಿದ ನ್ಯಾಯಾಲಯ ಕತ್ತೆಯನ್ನು ಆರೋಪಮುಕ್ತ ಗೊಳಿಸಿತು. ಅದೇ ಕೇಸಿನಲ್ಲಿ ಇನ್ನೊಬ್ಬ ಆರೋಪಿಯಾಗಿದ್ದ ಮನುಷ್ಯನಿಗೆ ಮರಣದಂಡನೆ ವಿಧಿಸಿತು.

ಹದಿನಾರನೆಯ ಶತಮಾನದಲ್ಲಿ, ಇಲಿಗಳು ಮನೆಯಲ್ಲಿಟ್ಟ ಕಾಳುಕಡಿಗಳನ್ನು ತಿಂದು ಹಾಕುತ್ತಿವೆ ಎಂದು ಒಬ್ಬ ನ್ಯಾಯಾಲ ಯದ ಮೊರೆ ಹೋಗಿದ್ದ. ನ್ಯಾಯಾಲಯ ಇಲಿಗಳ ಪರವಾಗಿ ವಾದಿಸಲು ಒಬ್ಬ ವಕೀಲರಿಗೆ ಪರವಾನಿಗೆ ನೀಡಿತ್ತು. ಅಂತೆಯೇ
ಇಲಿಗಳನ್ನು ನ್ಯಾಯಾಲಯಕ್ಕೆ ಕರೆತರಲು ಆದೇಶ ವನ್ನೂ ಹೊರಡಿಸಿತ್ತು. ಇಲಿಗಳು ನ್ಯಾಯಲಕ್ಕೆ ಬರಲು ಸಾಧ್ಯವಿಲ್ಲ ಎಂದು ಇಲಿಗಳ ಪರ ವಕೀಲರು ವಾದಿಸಿದರು. ಅದಕ್ಕೆ ಅವರು ನೀಡಿದ ಕಾರಣ ಅದ್ಭುತವಾಗಿತ್ತು. ಇಲಿಗಳು ರಸ್ತೆಯಲ್ಲಿ ಬರುವಾಗ ಬೆಕ್ಕು, ನಾಯಿಯಂತಹ ಪ್ರಾಣಿಗಳು ಅವನ್ನು ತಿಂದುಹಾಕುತ್ತವೆ, ಅವಕ್ಕೆ ಪ್ರಾಣ ಭಯ ಇದೆ ಎಂದು ನ್ಯಾಯವಾದಿಗಳು ವಾದಿಸಿದ್ದರು.

ನ್ಯಾಯಾಧೀಶರೂ ಅದಕ್ಕೆ ಒಪ್ಪಿಗೆ ಸೂಚಿಸಿದರು. ಅಂತಿಮವಾಗಿ, ಇಲಿಗಳು ಮನೆ ಬಿಟ್ಟು ಹೋಗಬೇಕು ಎಂದು ನ್ಯಾಯಲಯ ನೋಟೀಸ್ ಜಾರಿ ಮಾಡಿತು. ಇದು ಮಾದರಿಯಾಗಿ, ಕೆಲವು ಮುಕದ್ದಮೆಗಳು ಹೀಗೆಯೇ ನಡೆದು, ಅದೇ ರೀತಿಯ ತೀರ್ಪುಗಳು ಹೊರಬಂದವು. ಇಲಿಯನ್ನಾದರೂ ಬೋನಿನಲ್ಲಿ ಹಿಡಿದು ತರಬಹುದು. ಅದೇ ಸೊಳ್ಳೆ, ನೊಣಗಳಾದರೆ ಹೇಗೆ
ಜೀವಂತ ಹಿಡಿದು ತರುವುದು? ಸಣ್ಣ ಪ್ರಾಣಿಗಳು, ಕೀಟಗಳು ಜಾಗ ಖಾಲಿ ಮಾಡಬೇಕು ಎಂದು ಪತ್ರ ಬರೆಯುವುದು, ಅದನ್ನು
ಓದಿ ಅವುಗಳೆಲ್ಲ ಅನುಸರಿಸಬೇಕು ಎಂಬ ಕಲ್ಪನೆ ಇದೆಯಲ್ಲ, ಅದೇ ಭಾರೀ ಮಹಾನ್ ಕಲ್ಪನೆ ಬಿಡಿ.

ನಾವೇನಾದರೂ ಆ ಕಾಲದಲ್ಲಿದ್ದಿದ್ದರೆ ಅಥವಾ ಈಗೇನಾದರೂ ಆ ಕಾನೂನು ಇದ್ದಿದ್ದರೆ, ಸೊಳ್ಳೆ, ನೊಣ, ಜೇಡ, ಮಿಡತೆ ಎಲ್ಲರೊಂದಿಗೂ ಪತ್ರ ವ್ಯವಹಾರ! ಅವು ಅದನ್ನು ಓದಿ, ಅರ್ಥ ಮಾಡಿಕೊಂಡು, ಅದರಂತೆ ಪಾಲಿಸಿದರೆ ಒಳ್ಳೆ ಯದು.
ಪಾಲಿಸದೇ ಧಿಕ್ಕರಿಸಿದರೆ, ಕೋರ್ಟು-ಕಚೇರಿ. ಇದೆಲ್ಲ ಹಿಂದಿನ ಕಾಲದ ಕತೆ ಬಿಡಿ, ಈಗ ಹಾಗೇನಿಲ್ಲ ಅಂದುಕೊಳ್ಳಬೇಡಿ. ಕಳೆದ ಜೂನ್ ತಿಂಗಳಿನಲ್ಲಿ ಬಂದ ಒಂದು ಸುದ್ದಿ ಎಷ್ಟು ಜನ ಕೇಳಿದ್ದೀರೋ ಗೊತ್ತಿಲ್ಲ. 2025 ರಿಂದ ನ್ಯೂಝಿಲೆಂಡ್ ದೇಶ ಹಸು ಮತ್ತು ಕುರಿಗಳ ತೇಗಿಗೆ ದಂಡ ವಿಽಸಲು ನಿರ್ಧರಿಸಿದೆ.

ಇದನ್ನು ದಂಡ ಎನ್ನುವ ಬದಲು, ತೆರಿಗೆ ಎಂದಿದೆ. ನ್ಯೂಝಿಲೆಂಡ್ ದೇಶದಲ್ಲಿ ಅಂದಾಜು ಸುಮಾರು ಒಂದು ಕೋಟಿ ಹಸುಗಳೂ, ಎರಡೂವರೆ ಕೋಟಿ ಕುರಿಗಳೂ ಇವೆಯಂತೆ. ಅವುಗಳ ತೇಗು ಮತ್ತು ಹೂಸಿನಲ್ಲಿರುವ ಮಿಥೇನ್ ಜಾಗತಿಕ ತಾಪಮಾನ ಹೆಚ್ಚಿಸುತ್ತದೆ, ಅದು ಪರಿಸರಕ್ಕೆ ಒಳ್ಳೆಯದಲ್ಲ ಎಂಬ ನಿಟ್ಟಿನಲ್ಲಿ ಈ ಕಾನೂನು. ಅದನ್ನು ಹೇಗೆ ಅಳೆಯುತ್ತಾರೆ, ಎಷ್ಟು ತೆರಿಗೆ ಕಟ್ಟಬೇಕು ಎಂಬುದೆಲ್ಲ ಕುತೂಹಲವೇ ಆದರೂ, ಅದೇನಾದರೂ ಜಾರಿಗೆ ಬಂದರೆ, ಹಸು ಮತ್ತು ಕುರಿ
ಸಾಕುವ ರೈತರು ಈ ತೆರಿಗೆ ಕಟ್ಟಬೇಕಂತೆ. ಇನ್ನೂ ಏನೇನು ಕೇಳಬೇಕೋ, ಏನೇನು ನೋಡಬೇಕೋ!?

error: Content is protected !!