Saturday, 10th April 2021

ಮಾ.30ರವರೆಗೆ ಮಾನಹಾನಿ ವರದಿ ಪ್ರಸಾರಕ್ಕೆ ಮಧ್ಯಂತರ ತಡೆ

ಬೆಂಗಳೂರು : ತಮ್ಮ ವಿರುದ್ಧದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ಕೋರಿ ಆರು ಸಚಿವರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದ್ದು ಮಾರ್ಚ್ 30ರವರೆಗೆ ಮಾನಹಾನಿ ವರದಿ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯ ನಂತರ ಇನ್ನೂ ಹಲವು ಸಚಿವರ ಸಿಡಿ ಬಿಡುಗಡೆಯಾಗಲಿದೆ ಎಂದೇ ಹೇಳಲಾಗುತ್ತಿತ್ತು. ತಮ್ಮ ತೇಜೋವಧೆಗಾಗಿ ಷಡ್ಯಂತ್ರ ರೂಪಿಸಲಾಗಿದೆ ಎಂಬುದಾಗಿ ಆರೋಪಿಸಿದ ಆರು ಸಚಿವರು, ತಮ್ಮ ವಿರುದ್ಧದ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಸಿಟಿ ಸಿವಿಲ್ ಕೋರ್ಟ್ ನ ಸಿಸಿಹೆಚ್-20ರ ನ್ಯಾಯಾಧೀಶ ಬಿ.ಎಸ್.ವಿಜಯಕುಮಾರ್ ಅವರ ನ್ಯಾಯಪೀಠವು, ಅರ್ಜಿಯನ್ನು ಮಾನ್ಯ ಮಾಡಿ, ರಾಜ್ಯದ ಎಲ್ಲಾ ಮಾಧ್ಯಮಗಳಿಗೆ 6 ಸಚಿವರ ಬಗ್ಗೆ ಯಾವುದೇ ಮಾನಹಾನಿ ವರದಿ ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿ, ತುರ್ತು ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ ಅರ್ಜಿಯ ವಿಚಾರಣೆ ಮಾರ್ಚ್ 30ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಹೆಚ್ ಟಿ ಸೋಮಶೇಖರ್, ನಾರಾಯಣಗೌಡ, ಡಾ.ಕೆ.ಸುಧಾಕರ್ ಹಾಗೂ ಭೈರತಿ ಬಸವರಾಜ್ ತಮ್ಮ ವಿರುದ್ಧದ ಸುದ್ದಿಗಳ ಪ್ರಸಾರವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *