Monday, 30th January 2023

ಹವಾಮಾನಕ್ಕೂ ಮಾನಸಿಕ ಆರೋಗ್ಯಕ್ಕೂ ನಂಟು ಉಂಟು

ಶ್ವೇತಪತ್ರ

shwethabc@gmail.com

ವಿಜ್ಞಾನಿಗಳು ಪರಿಸರವಾದಿಗಳು ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ಎದುರಿಸಲು ವಿಂಡ್ ಪವರ್, ಸೋಲಾರ್ ಪವರ್ ಹೀಗೆ ಅನೇಕ
ನವೀಕರಿಸಬಹುದಾದ ಶಕ್ತಿಗಳ ಮೂಲಕ ನಮ್ಮ ಕಾಡುಗಳನ್ನು, ಪರಿಸರವನ್ನು ಉಳಿಸುವತ್ತ ಜೊತೆ ಜೊತೆಗೆ ಹಸಿರು ಮನೆಯಿಂದ ಅನಿಲ ಹೊರ ಸೂಸುವಿಕೆಯ ನಿಯಂತ್ರಣದ ಬಗ್ಗೆ ಚರ್ಚಿಸುತ್ತಲಿದ್ದರೆ ಇತ್ತ ಅಮೆರಿಕದ ಮಿನೆಪೊಲಿಸ್‌ನಲ್ಲಿ ಅಮೆರಿಕ ಸೈಕಲಾಜಿಕಲ್ ಅಸೋಸಿಯೇಷನ್ ಸಮಾ ವೇಶದಲ್ಲಿ ನೇಚರ್ ಕನ್ಸರ್ವೆನ್ಸಿ ಎಂಬ ಎನ್‌ಜಿಓದ ಮುಖ್ಯ ವಿಜ್ಞಾನಿ ಕ್ಯಾತರಿನ್ ಹೆಯೋ ಆ ಸಮಾವೇಶದಲ್ಲಿ ತಮ್ಮ ಮಾತುಗಳನ್ನು ಹೀಗೆ ಪ್ರಾರಂಭಿ ಸುತ್ತಾರೆ-ಹವಾಮಾನ ಬದಲಾವಣೆಯು ನಿಮ್ಮಲ್ಲಿ ಯಾವ ಭಾವನೆಯನ್ನು ಮೂಡಿಸಿದೆ? ಹೀಗೆ ಪ್ರಶ್ನೆಯ ಮೂಲಕ ಶುರುವಿಟ್ಟು ಕೊಳ್ಳುವ ಅವರ ಮಾತಿಗೆ ಸಭಿಕರಿಂದ ದೊರೆಯುವ ಉತ್ತರಗಳು ಹೀಗಿರುತ್ತವೆ, ಕೆಲವರು ಆತಂಕಮಯ ವಾಗಿದೆ ಎಂದರೆ, ಕೆಲವರು ಹತಾಶೆ ಎನಿಸುತ್ತಿದೆ ಎನ್ನುತ್ತಾರೆ.

ಕೆಲವರು ಭಯವಾಗುತ್ತಿದೆ ಎಂದರೆ, ಕೆಲವರಲ್ಲಿ ಭರವಸೆಯೇ ಇಲ್ಲವೆನಿಸುತ್ತಿರುತ್ತದೆ. ಇಂತಹ ಉತ್ತರಗಳು ಬಂದಾಗ ಹೇಯೋ ಮತ್ತೆ ಹೇಳುತ್ತಾರೆ, ಈ ಋಣಾತ್ಮಕ ಭಾವಗಳನ್ನು ಮನದಲ್ಲಿಯೇ ಕುದಿಯಲು ಬಿಟ್ಟರೆ ನಾವೆಲ್ಲರೂ ಹೆಚ್ಚಿನದೇನೂ ಸಾಧಿಸಲಾಗದು. ಹವಾಮಾನ ಬದಲಾವಣೆ ಯಿಂದ ಮನಸ್ಸಿನಲ್ಲಿ ಉಂಟಾಗುವ ನೆಗೆಟಿವ್ ಭಾವನೆಗಳನ್ನು ನಿರ್ವಹಿಸಲು ನಮಗೆ ಗೊತ್ತಿಲ್ಲದೇ ಹೋದರೆ ನಮ್ಮ ಮನಸ್ಸು ಮರಗಟ್ಟಿ ಹೋಗುತ್ತದೆ.

ಹವಾಮಾನ ವೈಪರೀತ್ಯಗಳು ಮನುಷ್ಯರ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಮಾನಸಿಕ ತಜ್ಞರು ಈ ನಿಟ್ಟಿನಲ್ಲಿ ತಯಾರಾಗಿರಬೇಕೆಂಬ ಎಚ್ಚರಿಕೆಯನ್ನು ನೀಡುತ್ತಾರೆ. ಹವಾಮಾನ ವೈಪರೀತ್ಯ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುವ ಪ್ರಮುಖವಾದ ಕಾರಣವಾಗುತ್ತಿದೆ. ಕಾಡ್ಗಿಚ್ಚುಗಳು, ಚಂಡಮಾರುತಗಳು ಎಲ್ಲಾ ವಯೋಮಾನ ದವರಲ್ಲೂ ಖಿನ್ನತೆ, ಆತಂಕ, ಒತ್ತಡಕಾರಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತಿವೆ.

ಸಂಶೋಧನೆಗಳು ವಿಪರೀತ ತಾಪಮಾನವು ಆತ್ಮಹತ್ಯೆಯ ಅಪಾಯವನ್ನು ಹೆಚ್ಚಾಗಿಸುವುದರ ಜೊತೆಗೆ ಮಾನಸಿಕತೆಯ ಕಾರಣವೊಡ್ಡಿ
ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತವೆ. ಲ್ಯಾಂಡ್‌ಸೆಟ್ ಎಂಬ ನಿಯತಕಾಲಿಕೆಯಲ್ಲಿ 2021 ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ೫೯% ರಷ್ಟು ಜನರು ಹವಾಮಾನ ಬದಲಾವಣೆ ಕುರಿತು ವಿಪರೀತ ಭಯ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ.

ಮನೋವಿಜ್ಞಾನಿ ಕ್ಲೇಟನ್ ಮಾತುಗಳಲ್ಲಿ ಹೇಳುವುದಾದರೆ, ಹವಾಮಾನ ಆತಂಕದ ಜೊತೆ ಹೋರಾಡುತ್ತಿರುವ ಜನರಲ್ಲಿ ವೈಯಕ್ತಿಕವಾಗಿ ನಮ್ಮ ಪೃಥ್ವಿಯನ್ನು ಉಳಿಸುವ ಜವಾಬ್ದಾರಿ ಹೆಚ್ಚಾಗಿರುತ್ತದೆ. ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಪ್ರಬಲವಾದ ಭಾವನಾತ್ಮಕ ವೈಪರೀತ್ಯ ಸಹಜ. ‘ಹವಾಮಾನ ಆತಂಕದ’ ಜೊತೆಗೆ ಯುವಕರು ತಾವು ಸೃಷ್ಟಿಸದ ಕೋಪ ತಾಪಗಳನ್ನು ಹವಾಮಾನ ಸೃಷ್ಟಿಸಿರುವ ವ್ಯತ್ಯಾಸಗಳ ಕಾರಣ
ಕ್ಕಾಗಿ ಬಳುವಳಿಯಾಗಿ ಪಡೆದುಕೊಳ್ಳುತ್ತಿದ್ದಾರೆ.

ಪರಿಸರ ಉಳಿಸುವ ಕಾರಣಕ್ಕಾಗಿ ಈ ಕೋಪ ಸಾತ್ವಿಕವಾಗಿ ಬಳಕೆಯಾದರೆ ಸಾಮಾಜಿಕವಾಗಿ ಇದನ್ನು ನಾವೆಲ್ಲರೂ ಒಪ್ಪಬಹುದಾಗಿದೆ.
ಆದರೆ ಇದೇ ಕೋಪವು ವಿಧ್ವಂಸಕವಾಗಿ ವ್ಯಕ್ತವಾದರೆ ಅದನ್ನು ನಿಭಾಯಿಸುವ ಅಗತ್ಯ ಹೆಚ್ಚಾಗಿರುತ್ತದೆ. ಮಕ್ಕಳಲ್ಲೂ ಹವಾಮಾನ ಆತಂಕ ಕಂಡು ಬರುತ್ತಿದೆ. ಪೋಷಕರು ಈ ಹೊಸ ಸಮಸ್ಯೆಯಿಂದ, ಬಿಕ್ಕಟ್ಟಿನಿಂದ ಅವರನ್ನು ಹೊರತರಲು ಹರಸಾಹಸ ಪಡುತ್ತಿದ್ದಾರೆ. ಕ್ಲೇಟನ್ ಹೇಳುವ ಎರಡು ಮುಖ್ಯ ವಿಚಾರಗಳೆಂದರೆ – ಭೂಮಿಯ ಸಮಸ್ಯೆಗಳ ಬಗ್ಗೆ ಮಕ್ಕಳ ಹತ್ತಿರ ಮುಚ್ಚಿಡಬೇಡಿ, ಮಾತನಾಡಿ, ಜೊತೆಗೆ ಪ್ರಪಂಚವೇ ಕೊನೆಯಾಗುತ್ತಿದೆ ಎಂಬ ಅವೈಜ್ಞಾನಿಕ ಜ್ಞಾನವನ್ನು ಅವರ ತಲೆಗೆ ತುಂಬಬೇಡಿ. ಅದು ಅವರಲ್ಲಿ ಬೇರೆಯದೇ ಯೋಚನೆ ಗಳನ್ನು ಮೂಡಿಸುತ್ತದೆ ಎನ್ನುತ್ತಾರೆ.

ಸಮಾಜವಾಗಿ ನಾವೆಲ್ಲರೂ ಮಕ್ಕಳಿಗೆ ಹವಾಮಾನ ವೈಪರೀತ್ಯದ ಕುರಿತ ಭಾವನೆಗಳನ್ನು ನಿಭಾಯಿಸುವ ಕೌಶಲ್ಯಗಳನ್ನು ಬೆಳೆಸಬೇಕಿದೆ. ಸಮಾಜವಾಗಿ, ಸಮುದಾಯವಾಗಿ, ಪೋಷಕರಾಗಿ ನಾವೆಲ್ಲರೂ ಮಕ್ಕಳ ಮನಸ್ಸನ್ನು ತೆರೆಸುವ ಕೆಲಸ ಮಾಡಬೇಕಿದೆ. ಹೀಗೆ ಮಾಡುವಾಗ ಮೊದಲು ನಾವು ಪರಿಸರ ಪ್ರೇಮಿ ವರ್ತನೆಯನ್ನು ರೂಢಿಸಿಕೊಳ್ಳಬೇಕು. ಆಹಾರವನ್ನು ವ್ಯರ್ಥ ಮಾಡದಿರುವುದು, ಮಿತವಾಗಿ ನೀರನ್ನು ಬಳಸುವುದು, ಬರ್ತಡೇಗಳಲ್ಲಿ ಅಥವಾ ಮನೆಯ ಇನ್ಯಾವುದೋ ಕಾರ್ಯಕ್ರಮಗಳಲ್ಲಿ ಗಿಡ ನೆಡುವುದು- ಹೀಗೆ ಪುಟ್ಟ ಪುಟ್ಟ ಸಂಗತಿಗಳ ಮೂಲಕ
ಮಕ್ಕಳ ಮನಸ್ಸಿನಲ್ಲಿ ಆಶಾವಾದ, ಪರಿಸರ ಪ್ರೇಮಿ ವರ್ತನೆಯನ್ನು ಮೂಡಿಸಬಹುದಾಗಿದೆ.

ನಮ್ಮಲ್ಲಿರುವ ಮತ್ತೊಂದು ಮನಸ್ಥಿತಿ ಎಂದರೆ ಮನುಷ್ಯರ ಕಾರಣದಿಂದ ಉಂಟಾದ ಹವಾಮಾನ ವೈಪರೀತ್ಯವನ್ನು ನಮ್ಮಲ್ಲಿ ಅನೇಕರು ನಿರಾಕರಣೆಯ ಮೂಲಕ ವ್ಯಕ್ತಪಡಿಸುತ್ತೇವೆ. ಯಾವುದೋ ವಿಪತ್ತು ಉಂಟಾದಾಗ ಕೆಲವರು ಇದಕ್ಕೆಲ್ಲ ಕಾರಣ ಹವಾಮಾನ ವೈಪರೀತ್ಯವಲ್ಲ ಎಂದೇ
ವಾದಿಸುತ್ತಾರೆ. ಇದು ಹವಾಮಾನ ವೈಪರೀತ್ಯಕ್ಕೆ ನಮ್ಮ ಕಾಳಜಿಗೆ ವ್ಯಕ್ತಪಡಿಸುವ ಪ್ರತಿರೋಧವೇ ಆಗಿರುತ್ತದೆ. ಇನ್ನೂ ಕೆಲವರು ತಮ್ಮ ಸುತ್ತಮುತ್ತಲು ನಡೆಯುವ ನೈಸರ್ಗಿಕ ವಿಕೋಪಗಳ ಬಗ್ಗೆ ಮಾಹಿತಿ ಇದ್ದರೂ ಅದರ ಬಗ್ಗೆ ಯಾವುದೇ ನಡೆಯನ್ನು ವ್ಯಕ್ತಪಡಿಸುವುದಕ್ಕೆ ಹಿಂಜರಿ ಯುತ್ತಾರೆ.

ಇಂತಹ ವರ್ತನೆಯನ್ನು ಅನುಮೋದಿಸುವುದಕ್ಕೆ ನಮ್ಮೆಲ್ಲರ ಬಳಿ ನಮ್ಮದೇ ಆದ ಸಂಜ್ಞಾನಾತ್ಮಕ ಭಾವನಾತ್ಮಕ ಕಾರಣಗಳು ಉಂಟು. ಎಷ್ಟೋ ಬಾರಿ ಜೀವನ ಶೈಲಿ ಬದಲಿಸಿಕೊಳ್ಳಲಾಗದೆ ಆರಾಮದ ಬದುಕಿಗೆ ಪ್ರಯತ್ನಿಸಿದಾಗ ಕೂಡ ಅನೇಕರಲ್ಲಿ ಹವಾಮಾನ ವೈಪರೀತ್ಯದ ನಿರಾಕರಣೆ ಕಂಡುಬರುತ್ತದೆ. ಹೀಗೆ ಸ್ನೇಹಿತರ ಜೊತೆಗೆ ಎಲೆಕ್ಟ್ರಿಕ್ ಗಾಡಿಗಳ ಉಪಯೋಗದ ಬಗ್ಗೆ ಮಾತುಕತೆ ಬಂದಾಗ ನನ್ನ ಸ್ನೇಹಿತೆಯೊಬ್ಬಳು ಅಯ್ಯೋ ಅವೆಲ್ಲ ಎಲ್ಲಿ ಸಾಧ್ಯ ಆಗುತ್ತೆ? ಚಾರ್ಜ್ ಮಾಡಬೇಕು, ಬ್ಯಾಟರಿ -ಲ್ ಅಪ್ಡೇಟ್ ಇದ್ಯಾ ನೋಡ್ಕೋಬೇಕು, ಈ ಎಲ್ಲ ತಲೆನೋವುಗಳ ಮಧ್ಯೆ ಪೆಟ್ರೋಲ್ ಗಾಡಿಗಳೇ ವಾಸಿ ಎಂದು ವಾದಿಸುತ್ತಾಳೆ.

ಇದನ್ನು ನಮ್ಮ ಸೈಕಾಲಜಿ ಭಾಷೆಯಲ್ಲಿ ಪ್ರೇರೇಪಿತ ಮರೆವು ಎನ್ನುತ್ತೇವೆ. ಮುಂದೆ ನಮಗೆ ಮತ್ತು ಇಳೆಗೆ ಅಪಾಯವಿದೆ ಎಂದು ಗೊತ್ತಿದ್ದರೂ
ಬದಲಾವಣೆಗೆ ಮನಸ್ಸು ಒಲ್ಲದು. ಅದಕ್ಕೆ ಮನಸ್ಸು ಹವಾಮಾನ ವೈಪರೀತ್ಯದ ನಿರಾಕರಣೆಯನ್ನೇ ಮೈಗೂಡಿಸಿಕೊಂಡು ಬಿಡುತ್ತದೆ. ಈ ವಿಷಯದಲ್ಲಿ ಪ್ರತಿರೋಧಿಸುವ ಗುಣಲಕ್ಷಣ ನಮ್ಮೆಲ್ಲರಲ್ಲೂ ಇದೆ. ಅದಕ್ಕೆ ನಮ್ಮದೇ ಆದ ಕಾಳಜಿ ಮತ್ತು ಭಯಗಳಿವೆ. ಇಂತಹ ಮನಸ್ಥಿತಿಯನ್ನು ನಾವು
ಮೀರಬೇಕಿದೆ. ಹವಾಮಾನ ವೈಪರೀತ್ಯ ಕೆಲವೊಮ್ಮೆ ನಮಗೆ ದೂರದಲ್ಲಿರುವ ಅಪಾಯವೆನಿಸಿದರೆ, ಕೆಲವೊಮ್ಮೆ ನಾಳೆಯೇ ನಾವು ಮನಗಾಣ ಬಹುದಾದ ಸಂಗತಿಯೂ ಆಗಿದೆ. ಈ ಕುರಿತ ವರದಿಯನ್ನು ಓದಿದ ಮಕ್ಕಳು ನಾಳೆ ನಮ್ಮನ್ನು ಕೇಳಬಹುದು, ನಮ್ಮ ಭವಿಷ್ಯವೇನೆಂದು. ಈ ಪ್ರಶ್ನೆಗಳೇ ನಮ್ಮ ಮನೋಭಾವದಲ್ಲಿ ಬದಲಾವಣೆ ಮೂಡಿಸಬೇಕಿದೆ.

ನಮ್ಮಲ್ಲಿನ ಪ್ರತಿಯೊಬ್ಬರಲ್ಲೂ ಹವಾಮಾನ ವೈಪರೀತ್ಯವನ್ನು ಸರಿದೂಗಿಸಲು ಮತ್ತೆ ಚೈತನ್ಯ ಮೈದುಂಬಿಸಿಕೊಂಡು ಕನೆಕ್ಟ್ ಆಗುವ ಆಶಯ ಒಡಮೂಡಿಸಿಕೊಳ್ಳಬೇಕಿದೆ. ಎಷ್ಟೋ ಜನರಲ್ಲಿ ಹೆಚ್ಚಾಗಿ ಅಂತರ್ಮುಖಿ ಸ್ವಭಾವದವರಲ್ಲಿ ಹವಾಮಾನ ವೈಪರೀತ್ಯದ ಭಯವು ಉಂಟಾಗುತ್ತಲಿದ್ದು
ಯಾರೊಂದಿಗೂ ಅವರು ಹಂಚಿಕೊಳ್ಳದ ಕಾರಣ ಆತಂಕವು ಮತ್ತಷ್ಟು ಬಿಗಡಾಯಿಸುತ್ತಿದೆ. ನಾವೇ ತಂದುಕೊಂಡಿರುವ ಸಮಸ್ಯೆಗಳಿಗೆ ಆತಂಕ, ಖಿನ್ನತೆಯಿಂದ ಮನಸ್ಸು ಒದ್ದಾಡುತ್ತಿದೆ. ಡಬ್ಲ್ಯೂಎಚ್‌ಓ ದ ಹೊಸ ನೀತಿಯಲ್ಲಿ ಹವಾಮಾನ ಬದಲಾವಣೆ ತಂದೊಡ್ಡುವ ಮಾನಸಿಕ ಸಮಸ್ಯೆಗಳ ಆತಂಕವನ್ನು ಚರ್ಚಿಸಲಾಗಿದೆ.

ಏಕೆಂದರೆ ಅದು ನಮ್ಮೆಲ್ಲರ ಬದುಕಿನ ದಿನನಿತ್ಯದ ಭಾಗವೇ ಆಗಿದೆ. ಇತ್ತೀಚಿನ ದಿನಗಳಲ್ಲಂತೂ ಹವಾಮಾನ ಬದಲಾವಣೆ ಹೆಚ್ಚೇ ಆಗಿದೆ. ವರ್ಷವಿಡೀ ಸುರಿವ ಮಳೆ, ಇದ್ದಕ್ಕಿದ್ದಂತೆ ವಾಯುಭಾರ ಕುಸಿತ, ಬರ, ನೆರೆ ಇವೆಲ್ಲವುಗಳ ಆರ್ಥಿಕ ಪರಿಣಾಮಗಳ ಬಗ್ಗೆ ನಮಗೆ ಹೆಚ್ಚಿನ ಅರಿವಿದೆ.
ಆದರೆ ಇವು ಉಂಟುಮಾಡುವ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲಿನ ಪರಿಣಾಮ ಆಳವಾಗಿರುತ್ತದೆ. ಚೇತರಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ನಮ್ಮನ್ನು ಕುಗ್ಗುವಂತೆಯೂ, ಕುಸಿಯುವಂತೆಯೂ ಮಾಡಿಬಿಡುತ್ತವೆ.

ಹವಾಮಾನ ವೈಪರೀತ್ಯಗಳು ಕಳೆದುಕೊಳ್ಳುವ ಭಯ, ಒತ್ತಡ, ಬೇಗುದಿಯನ್ನು ತಂದೊಡ್ಡುತ್ತವೆ. ಇದನ್ನು ನಾವೆಲ್ಲರೂ ಮನಗಾಣಬೇಕಿದೆ. ದೀರ್ಘಾವಽಯಲ್ಲಿ ಹವಾಮಾನ ಬದಲಾವಣೆ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತಿದೆ. ಅಧಿಕ ಬಿಸಿಲ ತಾಪಮಾನ
ಉದ್ವಿಗ್ನತೆ, ಇಚ್ಚಿತ ರೋಗ, ಬುದ್ಧಿಮಾಂದ್ಯತೆ ಹಾಗೂ ಹೆಚ್ಚಾದ ಆತ್ಮಹತ್ಯೆಯ ಪ್ರವೃತ್ತಿಯನ್ನು; ದೀರ್ಘಕಾಲದ ದುಃಖ, ದಿಗ್ಭ್ರಮೆ, ಕೆಲಸದಲ್ಲಿ ನಿರುತ್ಸಾಹ, ಸಂಬಂಧಗಳಲ್ಲಿ ಇರಿಸುಮುರಿಸು, ಕುಗ್ಗಿದ ಆತ್ಮವಿಶ್ವಾಸ, ಆತ್ಮ ಗೌರವ, ಆಯಾಸವನ್ನು ಉಂಟುಮಾಡುತ್ತಿವೆ.

ಪರಿಸರಕ್ಕೂ ಮನಸ್ಸಿಗೂ ಇರುವ ಮುಖ್ಯವಾದ ನಂಟನ್ನು ನಾವು ಚಿಪ್ಕೋ ಚಳುವಳಿಯಲ್ಲಿ ಕಾಣಬಹುದು. ಬಿಸ್ನೋಯಿ ರಾಜಸ್ಥಾನದ ಒಂದು ಚಿಕ್ಕ ಸಮುದಾಯ. ಮರಗಳನ್ನು ಮತ್ತು ವನ್ಯಜೀವಿಗಳನ್ನು ತಮ್ಮ ಜೀವದಂತೆ ಕಾಪಾಡುತ್ತಾರೆ. ಅವರ ಗುರುಗಳು ಹಾಕಿಕೊಟ್ಟ 29 ನಿಯಮಗಳನ್ನು
ಪಾಲಿಸುತ್ತಾರೆ. ಮರ ಕಡಿತ ತಡೆಯಲು ಜೀವ ಕೊಡಲು ಸಿದ್ಧರಿರುತ್ತಾರೆ. ಮರ ಕಡಿಯಲು ಬಂದರೆ ಮರಗಳನ್ನು ತಬ್ಬಿಕೊಳ್ಳುತ್ತಾರೆ. ಮರ ಕಡಿಯುವ ಮೊದಲು ಅವರನ್ನು ಕಡಿಯಬೇಕಾಗುತ್ತದೆ. ಅದೇ ರೀತಿ ಹಿಮಾಲಯ ಪ್ರಾಂತ್ಯದ ಉತ್ತರಕಾಂಡದಲ್ಲಿ ಕಾಡುಗಳನ್ನು ರಕ್ಷಿಸಲು ಅಪ್ಪಿಕೋ ಚಳುವಳಿ ಪ್ರಾರಂಭವಾಯಿತು. ಈ ಚಳುವಳಿಯ ಉದ್ದೇಶ ಕಾಡುಗಳನ್ನು ಸಂರಕ್ಷಿಸುವುದು.

ಭೂಕುಸಿತ ಮಣ್ಣಿನ ಸವಕಳಿ ತಡೆಯುವುದು ಮತ್ತು ಅಲ್ಲಿನ ಜನರ ಬದುಕನ್ನು ರಕ್ಷಿಸುವುದು. ಅಲ್ಲಿನ ಸರ್ಕಾರ ಅರಣ್ಯ ನಾಶವನ್ನು ತಡೆಗಟ್ಟಲು
ವಿಫಲವಾದಾಗ ಜನರೇ ಒಗ್ಗೂಡಿ ಚಿಪ್ಕೋ ಚಳುವಳಿ ಆರಂಭಿಸಿದರು. ಒಂದು ಮರ ನಮ್ಮ ಗೆಳೆಯನಾಗಬಹುದು. ಇತ್ತೀಚೆಗೆ ಶಬ್ದ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ, ಅಸಮರ್ಪಕ ಕಸ ವಿಲೇವಾರಿ, ಓಜೋನ್ ಪದರದ ತಗ್ಗುವಿಕೆ, ತಾಪಮಾನ ಏರಿಕೆ ಮುಂತಾದವುಗಳ ಬಗ್ಗೆ ಅರಿವು ಹೆಚ್ಚಾಗಿದೆ ಮತ್ತು ಜನರಲ್ಲಿ ಕಳವಳವನ್ನುಂಟು ಮಾಡುತ್ತಿದೆ.

ಪರಿಸರ ಮನೋ ವಿಜ್ಞಾನವು ಮಾನವನ ಮತ್ತು ಪರಿಸರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದೆ. ಮಾನವ ಮತ್ತು ಪರಿಸರದ ಸಂಬಂಧ ಅವಿನಾಭಾವ. ಇದರಲ್ಲಿ ಮನೋವಿಜ್ಞಾನಿಗಳು ೩ ಆಯಾಮಗಳನ್ನು ಚರ್ಚಿಸುತ್ತಾರೆ. ಮೊದಲನೇ ಆಯಾಮ ಕನಿಷ್ಠ ದೃಷ್ಟಿಕೋನ. ಇದರ ಪ್ರಕಾರ ಬೌದ್ಧಿಕ ಪರಿಸರ ಮಾನವನ ವರ್ತನೆ ಮತ್ತು ಆರೋಗ್ಯದ ಮೇಲೆ ಕನಿಷ್ಠ ಪ್ರಭಾವ ಬೀರುತ್ತದೆ. ಎರಡನೆಯದು ಸಾಧನ
ದೃಷ್ಟಿಕೋನ. ಈ ಆಯಾಮದ ಪ್ರಕಾರ ಬೌದ್ಧಿಕ ಪರಿಸರವು ಮಾನವನ ಕಲ್ಯಾಣಕ್ಕಾಗಿ ಅಸ್ತಿತ್ವದಲ್ಲಿದೆ.

3ನೆಯದು ಆಧ್ಯಾತ್ಮಿಕ ದೃಷ್ಟಿಕೋನ. ಇದು ಪರಿಸರವನ್ನು ಹಾಳು ಮಾಡಬಾರದು ಬದಲಾಗಿ ಪೂಜಿಸಬೇಕು ಎಂದು ಹೇಳುತ್ತದೆ. ಇದು
ಮನುಷ್ಯ ಮತ್ತು ಪರಿಸರ ಪರಸ್ಪರ ಅವಲಂಬಿತವಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅಂದರೆ ಎಲ್ಲಿಯವರೆಗೂ ಪರಿಸರ ಉತ್ತಮ ಸ್ಥಿತಿಯಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಮನುಷ್ಯನು ಕೂಡ ನೆಮ್ಮದಿಯಿಂದ ಇರಲು ಸಾಧ್ಯ ಎಂದರ್ಥ. ಭಾರತೀಯ ಸಂಪ್ರದಾಯವು ಪರಿಸರದ ಬಗ್ಗೆ
ಆಧ್ಯಾತ್ಮಿಕ ದೃಷ್ಟಿಕೋನವನ್ನೇ ಪ್ರತಿಪಾದಿಸುತ್ತದೆ.

error: Content is protected !!