Saturday, 10th April 2021

ರಾಜ್ಯ ಬಜೆಟ್‌ನಲ್ಲಿ ರಾಜ್ಯದ ರೈತರ ಸಬಲೀಕರಣಕ್ಕಾಗಿ ಅನುದಾನ: ಸಿಎಂಗೆ ಮನವಿ

ಮೂಡಲಗಿ: ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರೊಂದಿಗೆ ಸಂವಾದ ನಡೆಸಿದ ವರದಿಯನ್ನು ರೈತ ಮೋರ್ಚಾ ಪದಾಧಿಕಾರಿಗಳ ನಿಯೋಗ ಬೆಂಗಳೂರಿನ ಗೃಹ ಕಛೇರಿ ಕಾವೇರಿ ನಿವಾಸದಲ್ಲಿ ಶನಿವಾರ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ, ಹುಟ್ಟುಹಬ್ಬಕ್ಕೆ ಶುಭ ಕೋರಿದ ಬಳಿಕ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ರೈತರ ಸಬಲೀಕರಣಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರೈತರ ಮುಗ್ಧತೆಯನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುವ ಹೀನಸ್ಥಿತಿಗೆ ದೇಶದ ವಿರೋಧ ಪಕ್ಷಗಳು ತಲುಪಿರುವುದು ಅತ್ಯಂತ ದೌಭಾಗ್ಯದ ಸಂಗತಿ. ರಾಜ್ಯ ಪ್ರವಾಸ ಮಾಡಿ ರೈತರೊಂದಿಗೆ ಸಂವಾದ ನಡೆಸಿ ರೈತರ ವಿಚಾರಗಳನ್ನು ಮನಗಂಡು ಸಂಪೂರ್ಣ ವರದಿಯನ್ನು ಮುಖ್ಯಮಂತ್ರಿಗಳಿಗೆ ಅರ್ಪಿಸಿದ್ದೇವೆ ಎಂದರು.

ಮನರೇಗಾ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ, ಜಾಬ್ ಕಾರ್ಡಗಳನ್ನು ನೀಡುವುದರ ಮುಖಾಂತರ ರೈತರ ಉತ್ಪನ್ನ ವೆಚ್ಚವನ್ನು ಕಡಿಮೆ ಮಾಡುವುದರ ಮುಖಾಂತರ ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕರಿಸಬೇಕಾಗಿದೆ. ರೈತರ ಉತ್ಪನ್ನಗಳಿಗೆ ಬೆಲೆ ಕುಸಿತವಾದಾಗ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ಅನಿವಾರ್ಯವಾಗಿ ಸಣ್ಣ ರೈತರು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಿ ಆರ್ಥಿಕ ಸಂಕಷ್ಠಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಬೆಳೆ ರೈತರ ಕೈಗೆ ಬಂದಾಗ ಖರೀದಿ ಕೇಂದ್ರಗಳನ್ನು ತೆರೆದು ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರ ಮುಖಾಂತರ ರೈತರಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ರೈತರ ಬೆಳೆಗೆ ಆಕಸ್ಮಿಕ ಬೆಂಕಿ ಬಿದ್ದು, ಬೆಳೆ ನಾಶವಾದಾಗ ರೈತರಿಗೆ ಹಳೆ ಕಾನೂನಿಡಿಯಲ್ಲಿ ಅತ್ಯಂತ ಕಡಿಮೆ ಪರಿಹಾರ ಮಾತ್ರ ಇದ್ದು ರೈತರಿಗೆ ಗರಿಷ್ಠ ಪರಿಹಾರ ಸಿಗುವಂತೆ ಮಾಡಬೇಕಾಗಿದೆ. ಗಂಗಾ ಕಲ್ಯಾಣದಂತಹ ಲಘು ನೀರಾವರಿ ಯೋಜನೆಗಳನ್ನು ಬಿ.ಪಿ.ಎಲ್ ಕಾರ್ಡ ಹೊಂದಿರುವ ಎಲ್ಲಾ ಜಾತಿಯ ರೈತರಿಗೂ ದೊರಕಿಸಿಕೊಡೇಕಾಗಿದೆ. ತರಕಾರಿ ಮತ್ತು ಹಣ್ಣುಹಂಪಲಗಳನ್ನು ರೈತರು ದಾಸ್ತಾನು ಮಾಡಲು ಸಾಕಷ್ಟು ಶೈತ್ಯಾಗಾರಗಳನ್ನು ನಿರ್ಮಿಸಬೇಕಾಗಿರುವುದು ಸೇರಿದಂತೆ ಹಲವಾರು ವಿಷಯಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದ್ದು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇವೆ ಎಂದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶಗೌಡ ಸಿ.ವಿ., ಷಣ್ಮಖ ಗುರಿಕಾರ, ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ, ಕಾರ್ಯದರ್ಶಿ ಪ್ರಸನ್ನ್ ಕರಿಕೇರಿ, ಖಜಾಂಚಿ ಲಲ್ಲೇಶ ರೆಡ್ಡಿ, ಬೆಂಗಳೂರು ದಕ್ಷಿಣ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮುನಿರಾಜು ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *