Sunday, 29th November 2020

ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಎಲ್ಲಾ ಚುನಾವಣೆಗಳಲ್ಲಿ ಜಯಗಳಿಸಲಿದೆ

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಿರಾ ವಿಧಾನಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ಪರವಾಗಿ ಪ್ರಚಾರಕ್ಕೆ ತೆರಳುವ ಮಾರ್ಗಮಧ್ಯೆ ತುಮಕೂರಿನ ಜಾಸ್‌ಟೋಲ್ ಬಳಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ ಅವರು ಆತ್ಮೀಯವಾಗಿ ಸ್ವಾಗತಿಸಿ, ಶುಭ ಕೋರಿದರು.

ಈ ಸಂದರ್ಭದಲ್ಲಿ ಕೆಲಹೊತ್ತು ಮುರಳೀಧರ ಹಾಲಪ್ಪ ಮತ್ತು ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿ ಶಿರಾಕ್ಕೆ ಪ್ರಯಾಣ ಬೆಳೆಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು,ರಾಜ್ಯದಲ್ಲಿ ಅ.28 ರಂದು ನಡೆಯಲಿರುವ ನಾಲ್ಕು ವಿಧಾನ ಪರಿಷತ್ ಮತ್ತು ನ.3 ರಂದು ನಡೆಯಲಿರುವ ಶಿರಾ ಹಾಗೂ ಆರ್.ಆರ್.ನಗರ ವಿಧಾನಸಭೆ ಉಪಚುನಾವಣೆ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತಪೂರ್ವ ಗೆಲುವನ್ನು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಭಾರಿಗೆ ಈ ಚುನಾವಣೆಗಳು ನಡೆಯುತ್ತಿದ್ದು, ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಪ್ರತೀ ಗ್ರಾಮಗಳಲ್ಲೂ ಪ್ರತಿಯೊಂದು ಸ್ಥಳಗಳಲ್ಲೂ ಡಿ.ಕೆ.ಶಿವಕುಮಾರ್ ಅವರಿಗೆ ಅತ್ಯುತ್ತಮವಾದ ಸ್ವಾಗತ ಸಿಗುತ್ತಿದೆ. ಪ್ರತಿಯೊಂದು ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಟಿ.ಬಿ.ಜಯ ಚಂದ್ರ ಅವರು ಉಸ್ತುವಾರಿ ಸಚಿವರಾಗಿ ಸುಮಾರು 2500 ಕೋಟಿ ರೂ.ಗಳನ್ನು ತಂದು ಶಿರಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದ್ದರಿಂದ ಶಿರಾ ಕ್ಷೇತ್ರದಲ್ಲಿ ಮತದಾರರು ನಮ್ಮ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರ ದಿಂದ ಗೆಲ್ಲಿಸುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರೇವಣಸಿದ್ಧಯ್ಯ, ಪುಟ್ಟರಾಜು, ಟಿ.ಎಸ್.ನಿರಂಜನ್, ಮರಿಚನ್ನಮ್ಮ, ಗೀತ ಸೇರಿ ದಂತೆ ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *