Monday, 13th July 2020

ಶಾಸಕ ಸ್ಥಾನಕ್ಕೆ ಆನಂದ್‌ ಸಿಂಗ್ ರಾಜೀನಾಮೆ

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಸೋಮವಾರ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು 13 ತಿಂಗಳ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರಕಾರಕ್ಕೆ ಭಾರಿ ಹೊಡೆತ ನೀಡಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಆನಂದ್ ಸಿಂಗ್ ಅವರು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸಿಂಗ್ ಅವರ ರಾಜೀನಾಮೆ, ರಾಜ್ಯದಲ್ಲಿ ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ಬಹಳಷ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸಮ್ಮಿಶ್ರ ಸರಕಾರದ ನಡೆಯಿಂದ ಬೇಸತ್ತು ರಾಜೀನಾಮೆ ನೀಡಲು ಆಲೋಚನೆ ಮಾಡುತ್ತಿರುವಾಗಲೇ ಈ ಅನಿರೀಕ್ಷಿತ ಬೆಳವಣೆಗೆ ಮತ್ತಷ್ಟು ಶಾಸಕರಿಗೆ ಪುಷ್ಠಿ ನೀಡಲಿದೆ ಎನ್ನಲಾಗಿದೆ.

ಸಿಂಗ್ ಅವರಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನು ಅನೇಕ ಶಾಸಕರು ಕೂಡ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಇದರಿಂದ ಮೈತ್ರಿ ಸರಕಾರದ ಭವಿಷ್ಯ ಡೋಲಾಯಮಾನಕ್ಕೆ ಸಿಕ್ಕಂತೆ ಆಗಿದೆ.

ರಾಜ್ಯದ ಮುಖ್ಯಮಂತ್ರಿ ಎಚ್ .ಡಿ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿ ಇರುವಾಗಲೇ ಈ ಘಟನೆ ಜರುಗಿದೆ. ಈ ಹಿಂದೆ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪರಾಭವಗೊಳಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ರಮೇಶ್ ಜಾರಕಿಹೊಳಿ ಬಂಡಾಯದ ಬಾವುಟ ಹಾರಿಸಿಕೊಂಡೇ ಕಾಂಗ್ರೆಸ್‌ನಲ್ಲಿ ಮುಂದುವರಿದಿದ್ದಾರೆ.

Leave a Reply

Your email address will not be published. Required fields are marked *