Wednesday, 1st February 2023

ಬಿಜೆಪಿ ಅಸ್ತ್ರವನ್ನೇ ತಿರುಗಿಸಿ ಬಿಡುತ್ತಿದೆ ಕಾಂಗ್ರೆಸ್

ವರ್ತಮಾನ

maapala@gmail.com

ಯುಪಿಎ ಸರಕಾರದ ವಿರುದ್ಧ 2014ರಲ್ಲಿ ಮತ್ತು 2018ರಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪ್ರಯೋಗಿಸಿದ್ದ ಅಸಗಳನ್ನೇ ಇದೀಗ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಯೋಗಿಸಲಾರಂಭಿಸಿದೆ. ಆದರೆ, ಅದು ನಿರೀಕ್ಷಿತ ಪ್ರಮಾಣದಲ್ಲಿ ಗುರಿ ತಲುಪದೇ ಇರುವ ಕುರಿತು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸು ಗಳಿಸುವುದು ಕಷ್ಟ.

2014ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಸರಕಾರವನ್ನು ಎದುರಿಸಲು ಬಿಜೆಪಿಗೆ ಇದ್ದ ಎರಡು ಅಸಗಳೆಂದರೆ ಅದು ಯುಪಿಎ-೨ ಅವಧಿಯಲ್ಲಿ ನಡೆದಿದ್ದ ಸಾಲು ಸಾಲು ಹಗರಣಗಳು ಮತ್ತು ನರೇಂದ್ರ ಮೋದಿ ನೇತೃತ್ವದಲ್ಲಿ ಗುಜರಾತ್‌ನಲ್ಲಿ ಬಿಜೆಪಿ ನೀಡಿದ್ದ ಭ್ರಷ್ಟಾಚಾರರಹಿತ, ಅಭಿವೃದ್ಧಿ ಪರ ಆಡಳಿತ.

ಈ ಎರಡು ವಿಚಾರಗಳನ್ನು ಮುಂದಿಟ್ಟುಕೊಂಡೇ ಬಿಜೆಪಿ ಹೋರಾಟ ನಡೆಸಿತ್ತು. 2 ಜಿ ತರಂಗಾಂತರ ಹಗರಣ, ಕಲ್ಲಿದ್ದಲು ಹಗರಣ, ಕಾಮನ್‌ ವೆಲ್ತ್ ಹಗರಣ… ಹೀಗೆ ಸಾಲು ಸಾಲು ಹಗರಣಗಳ ಪಟ್ಟಿಯನ್ನೇ ಮುಂದಿಟ್ಟುಕೊಂಡ ಬಿಜೆಪಿ, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವುದಾಗಿ ಘೋಷಣೆ ಮಾಡಿತು.

ಇದನ್ನು ಜನ ನಂಬಿದರು. ಆದರೆ, ಈ ಹಗರಣಗಳ ತನಿಖೆ ಮುಂದೆ ಯಾವ ರೀತಿ ನಡೆಯಿತು? ಎಷ್ಟು ಮಂದಿ ಜೈಲಿಗೆ ಹೋದರು ಎಂಬುದು ನಂತರದ ಪ್ರಶ್ನೆ. ಆದರೆ, ಯುಪಿಎ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ಗೆ ಈ ಹಗರಣಗಳೇ
ಮುಳುವಾಯಿತು. ಇನ್ನು ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗಿದ್ದ ನರೇಂದ್ರ ಮೋದಿ ಗುಜರಾತ್
ಮುಖ್ಯಮಂತ್ರಿಯಾಗಿ ೨೦೦೨ರಿಂದ ನೀಡಿದ ಆಡಳಿತ, ಅಲ್ಲಿನ ಅಭಿವೃದ್ಧಿ ಕಾರ್ಯಗಳು, ಭ್ರಷ್ಟಾಚಾರ ರಹಿತ ವ್ಯವಸ್ಥೆ
ರೂಪಿಸಲು ಕೈಗೊಂಡಿರುವ ಕ್ರಮಗಳು ಕೂಡ ಬಿಜೆಪಿಗೆ ಚುನಾವಣೆಗೆ ಹೊಸ ವೇದಿಕೆ ಸಿಕ್ಕಿತ್ತು. ಈ ಆಡಳಿತವನ್ನೇ
ಯುಪಿಎ ಹಗರಣಗಳ ವಿರುದ್ಧ ಬಳಸಿಕೊಂಡಿತ್ತು.

ಇದರ ಜತೆಗೆ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ವಿರುದ್ಧ ಯುಪಿಎ ಸರಕಾರ ತೆಗೆದುಕೊಂಡ ಸೇಡಿನ
ಕ್ರಮಗಳು, ಕೆಲವು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಗಲಭೆ ಸಂದರ್ಭದಲ್ಲಿ ಆದ ಘಟನೆಗಳನ್ನು ಆಧರಿಸಿ ನರೇಂದ್ರ ಮೋದಿ ಆಡಳಿತವನ್ನು ಹೀನಾಮಾನ ಟೀಕೆ ಮಾಡಿದನ್ನೇ ಬಿಜೆಪಿ ತನ್ನ ಅನುಕೂಲಕ್ಕೆ ಬಳಸಿಕೊಂಡಿತು. ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ದಿನವಿಡೀ ವಿಚಾರಣೆ ನಡೆಸಿದ್ದನ್ನು ಪ್ರಸ್ತಾಪಿಸಿ, ಯುಪಿಎ ಯಾವ ರೀತಿ ಸೇಡಿನ ರಾಜಕಾರಣ ಮಾಡಿದೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸುತ್ತಾ, ಅದನ್ನು ಮತಬ್ಯಾಂಕ್ ಆಗಿ ಪರಿವರ್ತಿಸಿಕೊಂಡಿತು.

ಬಳಿಕ ನಡೆದಿದ್ದು ಇತಿಹಾಸ. ಎನ್‌ಡಿಎ ಅಧಿಕಾರಕ್ಕೆ ಬಂದಿದ್ದು, ಒಂದು ಕಡೆಯಾದರೆ ಬಿಜೆಪಿ ಏಕಾಂಗಿಯಾಗಿ ಬಹುಮತ
ಗಳಿಸಿತ್ತು. ಇದನ್ನೇ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಿರುದ್ಧವೂ ಬಿಜೆಪಿ
ಬಳಕೆ ಮಾಡಿಕೊಂಡಿತ್ತು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಹಾಸಿಗೆ, ದಿಂಬು ಪೂರೈಕೆ ಹಗರಣ, ಸ್ಲಂ
ಬೋರ್ಡ್ ಹಗರಣ, ಅರ್ಕಾವತಿ ಹಗರಣ ಹೀಗೆ ಹಲವು ಅಕ್ರಮಗಳನ್ನು ಪ್ರಸ್ತಾಪಿಸಿತ್ತು. ಪ್ರಧಾನಿ ನರೇಂದ್ರ ಮೋದಿ
ಅವರನ್ನು ಆ ಸರಕಾರವನ್ನು 10 ಪರ್ಸೆಂಟ್ ಕಮಿಷನ್ ಸರಕಾರ ಎಂದು ಘೋಷಿಸಿದರು.

ಆ ವೇಳೆ ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂತು. ಇದೀಗ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಿಂದೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಬಳಸಿದ್ದ ಅಸವನ್ನೇ ತಿರುಗು ಬಾಣವಾಗಿ ಬಳಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಕಳೆದ ಒಂದು ವರ್ಷದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ವಿಚಾರದಲ್ಲಿ ನಡೆದ ಹಗರಣವನ್ನು
ಆಗಾಗ್ಯೆ ಪ್ರಸ್ತಾಪಿಸುತ್ತಲೇ ಇದೆ. ಇದರ ಜತೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಆರೋಪವನ್ನು
ಮುಂದಿಟ್ಟುಕೊಂಡು ಬಿಜೆಪಿ ಸರಕಾರವನ್ನು 40 ಪರ್ಸೆಂಟ್ ಕಮಿಷನ್ ಸರಕಾರ ಎಂದು ಟೀಕಿಸುತ್ತಿದೆ.

ಪೇ ಸಿಎಂ ಅಭಿಯಾನ ನಡೆಸುತ್ತಿದೆ. ಪಿಎಸ್‌ಐ ನೇಮಕ ಅಕ್ರಮ, ಶಾಲಾ ಶಿಕ್ಷಕರ ನೇಮಕ, ಉಪನ್ಯಾಸಕರ ನೇಮಕ
ಅಕ್ರಮಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದೆ. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಯಲ್ಲಿ ನಡೆದಿರುವ ಅಕ್ರಮಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಅಷ್ಟೇ ಅಲ್ಲ, ಬಿಜೆಪಿ ಅಕ್ರಮಗಳ ವಿರುದ್ಧ ಇದು ಆರಂಭಿಕ ಹೋರಾಟ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಗರಣಗಳನ್ನು ಬಯಲಿಗೆಳೆಯುವುದಾಗಿ ಸವಾಲು ಹಾಕಿದೆ. ಅದಕ್ಕೆ ಪೂರಕ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ.

ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಇನ್ನೂ ಒಂದಷ್ಟು ದಾಖಲೆಗಳನ್ನು ಬಿಡುಗಡೆ
ಮಾಡುವುದು ಖಚಿತ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ವಿಚಾರಣೆಯನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾರಂಭಿಸಿದೆ. ವರ್ಷಗಳ ಹಿಂದಿನ ಅಕ್ರಮ ಹಣ ವರ್ಗಾವಣೆ ಪ್ರಕರಣ ಮುಂದಿಟ್ಟುಕೊಂಡು
ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಪದೇ ಪದೆ ಇಬ್ಬರನ್ನೂ ವಿಚಾರಣೆಗೆ ಕರೆಯುತ್ತಿರುವುದು, ನ್ಯಾಯಾಲಯದ ವಿಚಾರಣೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ.

ಮಾನಸಿಕ ಕಿರುಕುಳ ನೀಡುವ ಮೂಲಕ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಂತೆ ನೋಡಿಕೊಳ್ಳುತ್ತಿದೆ. ಆ ಮೂಲಕ ಕಾಂಗ್ರೆಸ್ಸನ್ನು ಸೋಲಿಸಲು ಕೆಟ್ಟ ರಾಜಕಾರಣ ಮಾಡುತ್ತಿದೆ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದನ್ನು ಖಂಡಿಸಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದ ಪ್ರತಿಭಟನೆಗಳೇ ಇದಕ್ಕೆ ಸಾಕ್ಷಿ.

ಆದರೆ, ಈ ಯಾವುದೇ ಹೋರಾಟದಲ್ಲೂ ಕಾಂಗ್ರೆಸ್‌ಗೆ ನಿರೀಕ್ಷಿತ ಯಶಸ್ಸು ಲಭಿಸಿಲ್ಲ. ಇದಕ್ಕೆ ಕಾರಣ ಆ ಪಕ್ಷದ ನಾಯಕ ಅತಿಯಾದ ಆತ್ಮವಿಶ್ವಾಸ ಮತ್ತು ಆರೋಪಗಳಲ್ಲೂ ವಿಜೃಂಬಣೆ ತೋರಿಸುತ್ತಿರುವುದು. 2018ರ ವಿಧಾನಸಭೆ
ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಕಾಂಗ್ರೆಸ್ ಸರಕಾರವನ್ನು 10 ಪರ್ಸೆಂಟ್ ಕಮಿಷನ್ ಸರಕಾರ
ಎಂದು ಆರೋಪಿಸಿದಾಗ ಅದು ನಂಬುವಂತಿತ್ತು. ಆದರೆ, ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಸರಕಾರ ಎಂದು
ಕಾಂಗ್ರೆಸ್ ಆರೋಪಿಸಿದಾಗ, ಇಷ್ಟೊಂದು ಕಮಿಷನ್ ಕೊಟ್ಟು ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ.
ಆದರೆ, ಆರೋಪವನ್ನು ಗಂಭೀರ ಎಂಬುದನ್ನು ತೋರಿಸಿಕೊಳ್ಳಲು ಅತಿಯಾದ ವಿಜೃಂಬಣೆ ಮಾಡಿರುವುದರಿಂದ ಈ ಆರೋಪ ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ.

ಮತ್ತೊಂಡೆದೆ ನಾಯಕರ ಅತಿಯಾದ ಆತ್ಮವಿಶ್ವಾಸದಿಂದಾಗಿ ಆರೋಪಗಳನ್ನು ಮಾಡುತ್ತಾ ಹೋಗಲಾಗುತ್ತಿದೆಯೇ ಹೊರತು ಅದನ್ನು ಜನರ ಮನಸ್ಸಿಗೆ ತಟ್ಟುವಂತೆ ಹೇಳುವಲ್ಲಿ ಪಕ್ಷ ವಿಫಲವಾಗುತ್ತಿದೆ. ಮೇಲಾಗಿ ಆರೋಪ ಮಾಡುವಾಗ
ಅದಕ್ಕೆ ಬೇಕಾದ ಎಲ್ಲಾ ಸರಕುಗಳನ್ನು ಒದಗಿಸದೆ ಕೆಲವೇ ದಾಖಲೆಗಳನ್ನು ನೀಡುವ ಮೂಲಕ ಮೂಲ ದಾಖಲೆಗಳನ್ನು
ಮರೆಮಾಚಲು ಅವಕಾಶ ಮಾಡಿಕೊಡುತ್ತಿದೆ.

ಇದರ ನಡುವೆ ನಾಯಕರ ನಡುವಿನ ಸಮನ್ವಯತೆಯ ಕೊರತೆಯೂ ಬಿಜೆಪಿ ವಿರುದ್ಧದ ಸಂಘಟಿತ ಹೋರಾಟ ಪರಿಣಾಕಾರಿ ಯಾಗದಂತೆ ಮಾಡುತ್ತಿದೆ. ಉದಾಹರಣೆಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ವಿಚಾರದಲ್ಲಿ ಆಗಿರುವ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಒಬ್ಬರೇ ಬಡಬಡಿಸುವಂತಾಯಿತೇ ಹೊರತು ಹಿರಿಯ ನಾಯಕರಿಂದ ಅವರಿಗೆ ಬೆಂಬಲ ಸಿಗಲಿಲ್ಲ. 40 ಪರ್ಸೆಂಟ್ ಕಮಿಷನ್ ವಿರುದ್ಧದ ಹೋರಾಟ ಎರಡೇ ದಿನಕ್ಕೆ ಮುಕ್ತಾಯ ಗೊಂಡಿತು. ಸದ್ಯ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇರುವುದರಿಂದ ಬಿಬಿಎಂಪಿಯ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಕುರಿತ ಹಗರಣದ ಕುರಿತು ಸಂಘಟಿತ ಹೋರಾಟ ಕಾಣುತ್ತಿದೆ.

ಆದರೆ, ಇದೇ ಒಗ್ಗಟ್ಟನ್ನು ಕಾಂಗ್ರೆಸ್ ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಆದರೆ, ಒಂದರ ಹಿಂದೆ ಒಂದರಂತೆ ಕಾಂಗ್ರೆಸ್ ಬಿಡುತ್ತಿರುವ ಅಸ್ತ್ರಗಳಿಂದ ಆಡಳಿತಾರೂಢ ಬಿಜೆಪಿ ಕೊಂಚ ಗಲಿಬಿಲಿಗೊಂಡಿರುವುದು ಮತ್ತು ಅದಕ್ಕೆ ಸೂಕ್ತ ತಿರುಗೇಟು ನೀಡುವಲ್ಲಿ ಬಿಜೆಪಿ ಎಡವುತ್ತಿರುವುದಂತೂ ಸತ್ಯ.

ಲಾಸ್ಟ್ ಸಿಪ್: ಯಾವುದೇ ಕೆಲಸವನ್ನು ಆರಂಭಿಸಿದಾಗ ಇದ್ದ ಉತ್ಸಾಹ, ಒಗ್ಗಟ್ಟು ಕೊನೆಯವರೆಗೂ ಮುಂದುವರಿದರೆ
ಮಾತ್ರ ಗುರಿ ತಲುಪಲು ಸಾಧ್ಯ.

error: Content is protected !!