Sunday, 25th September 2022

ಧೋನಿಗೆ ಇಂದಿನದ್ದು 200ನೇ ಪಂದ್ಯ: ಗೆಲುವು ಅನಿವಾರ್ಯ

ಅಬುಧಾಬಿ: ರಾಜಸ್ಥಾನ ರಾಯಲ್ಸ್‌ ತಂಡದ ಎದುರಿನ ಹಣಾಹಣಿಯು ಧೋನಿಗೆ 200ನೇ ಪಂದ್ಯವಾಗಲಿದೆ.  ಹೌದು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ಯಲ್ಲಿ ‘ದ್ವಿಶತಕ’ ಸಾಧನೆ ಮಾಡಿದ ಮೊದಲ ಆಟಗಾರನಾಗಲಿದ್ದಾರೆ.

ಅಲ್ಲದೇ ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಇನ್ನುಳಿದಿರುವ ಐದು ಪಂದ್ಯಗಳಲ್ಲಿ ಜಯಿಸುವ ಒತ್ತಡವೂ ಅವರ ಮೇಲಿದೆ.

ಈ ಎರಡೂ ತಂಡಗಳು ತಲಾ ಒಂಬತ್ತು ಪಂದ್ಯಗಳನ್ನು ಆಡಿವೆ. ಮುಂದಿನ ಹಾದಿಯು ತಂತಿ ಮೇಲಿನ ನಡಿಗೆಯಂತಿದೆ. ಸಿಎಸ್‌ಕೆ ಆರು ಮತ್ತು ರಾಜಸ್ಥಾನ ಏಳನೇ ಸ್ಥಾನಗಳಲ್ಲಿವೆ. ಮೊದಲ ಸುತ್ತಿನ ಪಂದ್ಯದಲ್ಲಿ ಚೆನ್ನೈ ರಾಜಸ್ಥಾನ ಎದುರು ಸೋತಿತ್ತು. ಎರಡು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಫಾಫ್ ಡುಪ್ಲೆಸಿ, ರವೀಂದ್ರಜಡೇಜ ಮತ್ತು ಅಂಬಟಿ ರಾಯುಡು ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.

ಆಲ್‌ರೌಂಡರ್‌ ಡ್ವೇನ್ ಬ್ರಾವೊ ತೊಡೆಯ ಗಾಯದಿಂದಾಗಿ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಆದ್ದರಿಂದ ಅವರ ಬದಲಿಗೆ ಜೋಶ್ ಹ್ಯಾಜಲ್‌ವುಡ್ ಸ್ಥಾನ ಪಡೆಯಬಹುದು. ದೀಪಕ್ ಚಾಹರ್, ಸ್ಯಾಮ್ ಕರನ್, ಕರ್ಣ ಶರ್ಮಾ ಮತ್ತು ಶಾರ್ದೂಲ್ ಠಾಕೂರ್ ಅವರ ಬೌಲಿಂಗ್ ಪಡೆ ಹೆಚ್ಚು ನಿಖರ ಎಸೆತಗಳನ್ನು ಪ್ರಯೋಗಿಸಬೇಕಿದೆ.

ರಾಯಲ್ಸ್‌ನ ವೇಗಿ ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ ಮತ್ತು ಶ್ರೇಯಸ್ ಗೋಪಾಲ್ ಅವರನ್ನು ಎದುರಿಸಲು ಚೆನ್ನೈ ಬ್ಯಾಟಿಂಗ್ ಪಡೆ ಹೆಚ್ಚು ಶ್ರಮಪಡಬೇಕಿದೆ.