Friday, 19th August 2022

ಶಾಪಿಂಗ್ ಮಾಲ್‍’ನಲ್ಲಿ ಗುಂಡಿನ ದಾಳಿ: ಮೂವರ ಸಾವು

ಕೋಪನ್‍ಹೇಗನ್: ಶಾಪಿಂಗ್ ಮಾಲ್‍ಗೆ ದುಷ್ಕರ್ಮಿ ನುಗ್ಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಮೃತಪಟ್ಟು, ಮೂವರ ಸ್ಥಿತಿ ಚಿಂತಾಜನಕ ವಾಗಿದೆ. ರಾಜಧಾನಿ ಕೋಪನ್‍ಹೇಗನ್‍ನ ಹೊರವಲಯದಲ್ಲಿರುವ ಸ್ಕ್ಯಾಂಡಿ ನೇವಿ ಯಾದ ಅತಿದೊಡ್ಡ ಶಾಪಿಂಗ್ ಮಾಲ್‍ಗಳಲ್ಲಿ ಒಂದಾದ ಫೀಲ್ಡ್ಸ್‍ನಲ್ಲಿ ಗುಂಡಿನ ದಾಳಿ ನಡೆದಿದೆ.

ಗುಂಡಿನ ದಾಳಿಗೆ 40 ವರ್ಷದ ವ್ಯಕ್ತಿ ಹಾಗೂ ಇಬ್ಬರು ಯುವಕರು ಬಲಿ ಯಾಗಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ಯಾನಿಸ್‍ನ 22 ವರ್ಷದ ಯುವಕನೊಬ್ಬ ದಾಳಿ ನಡೆಸಿದ್ದು, ಆತನನ್ನು ಬಂಧಿಸಿ ವಿಚಾರಣೆ ಗೊಳಪಡಿಸಲಾಗಿದೆ. ದಾಳಿಯಲ್ಲಿ  ಉಗ್ರ ಸಂಘಟನೆಯ ಭಾಗಿಯಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ದಾಳಿಯ ಸಮಯದಲ್ಲಿ ಮಾಲ್ ಜನಸಂದಣಿಯಿಂದ ಕೂಡಿತ್ತು, ಆದ್ದರಿಂದ ಘಟನೆಗೆ ಅನೇಕ ಪ್ರತ್ಯಕ್ಷದರ್ಶಿಗಳು ಇದ್ದರು. ಇದು ಭಯೋತ್ಪಾದಕರ ಕೈವಾಡವಾಗಿದೆ ಎಂದು ಐಟಿ ಸಲಹೆಗಾರ ಹ್ಯಾನ್ಸ್ ಕ್ರಿಶ್ಚಿಯನ್ ಸ್ಟೋಲ್ಟ್‍ಹೇಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೆಟ್ಟೆ ಫ್ರಡೆರಿಕ್ಸೆನ್ ಇದೊಂದು ಕ್ರೂರ ದಾಳಿಯಾಗಿದ್ದು, ಇದನ್ನು ದೇಶ ಸಹಿಸದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.