Friday, 7th October 2022

ಸೈಕ್ಲಿಂಗ್‌ ಆರಂಭಿಸುವ ಮುನ್ನ ಫಿಟ್ ಆಗಿ

ಉದ್ಯಮವಾಗಿ ಬದಲಾದ ಫಿಟ್‌ನೆಸ್: ಕಾಳಜಿ ಪೂರ್ವಕ ನಿಯಮಬದ್ಧತೆಗೆ ಕಿವಿಮಾತು

ವಿಶ್ವವಾಣಿ ಕ್ಲಬ್‌ಹೌಸ್ – ಸಂವಾದ 311

ಫಿಟ್‌ನೆಸ್. ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ಪದ. ಫಿಟ್ ನೆಸ್‌ಗಾಗಿಯೇ ವ್ಯಾಯಾಮಗಳಿವೆ. ಫಿಟ್‌ನೆಸ್ ಎಂಬುದು ದೊಡ್ಡ ಉದ್ಯಮವಾಗಿ ಬದಲಾಗಿದೆ. ಕೋಟ್ಯಂತರ ಮಂದಿ ಫಿಟ್‌ನೆಸ್ ಮೊರೆ ಹೋಗುತ್ತಿದ್ದರೆ ಲಕ್ಷಾಂತರ ಮಂದಿ ಇದರಿಂದ ಹಣ ಸಂಪಾದಿಸಿ ಜೀವನ ನಿರ್ವಹಣೆ ಮಾಡುತ್ತಾರೆ. ಇಂತಹ ಫಿಟ್‌ನೆಸ್ ವ್ಯಾಯಾಮದ ಕುರಿತು ಸೈಕ್ಲಿಸ್ಟ್ ನಿಥಿನ್ ಜಗಪತ್ ಮಾತನಾಡಿ ದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಫಿಟ್‌ನೆಸ್ ವ್ಯಾಯಾಮ’ ವಿಚಾರದ ಬಗ್ಗೆ ಅವರು ತಮ್ಮದೇ ಸಾಧನೆ ಯನ್ನು ಹೇಳುವ ಮೂಲಕ ಅರಿವಿನ ಉಪ ನ್ಯಾಸ ನೀಡಿದರು. ಕೆಲಸದ ಒತ್ತಡದಿಂದಾಗಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವು ದಿಲ್ಲ. ಕೆಲಸ ಬಿಟ್ಟ ನಂತರ ನಮ್ಮ ಆರೋಗ್ಯದ ಪರಿಸ್ಥಿತಿ ಬಗ್ಗೆ ಚಿಂತೆ ಪ್ರಾರಂಭ ವಾಗುತ್ತದೆ. ನನಗೆ ೪೦ ವರ್ಷ ತುಂಬಿದ ನಂತರ ಫಿಟ್‌ನೆಸ್ ಬಗ್ಗೆ ಕಾಳಜಿ ಮೂಡಲಾ ರಂಭಿಸಿತು. ೨೦೧೫ರಲ್ಲಿ ಫಿಟ್ ನೆಸ್ ವ್ಯಾಯಾಮ ಆರಂಭಿಸಲು ನಿರ್ಧರಿಸಿದೆ. ಆದರೆ, ಹೇಗೆ ಆರಂಭಿಸುವುದು ಎಂಬುದು ತಿಳಿಯಲಿಲ್ಲ. ಆಗ ಸಾಮಾಜಿಕ ಜಾಲತಾಣಗಳಲ್ಲಿ ಓಟದ ಬಗ್ಗೆ ಹೆಚ್ಚಿನ ಜಾಹೀರಾತುಗಳು ಹರಿದಾಡುತ್ತಿದ್ದವು.

ಅವುಗಳನ್ನು ನೋಡಿ ಮ್ಯಾರಥಾನ್ ಓಟ ಆಯೋಜಿಸುವ ಸಂಸ್ಥೆಯನ್ನು ಸಂಪರ್ಕಿಸಿ ಸೇರ್ಪಡೆಯಾದೆ. ಅಲ್ಲಿ ಬೆಂಗಳೂರಿನಲ್ಲಿ ನಡೆಯುವ ಟಿಸಿಎಸ್ ರನ್ನಿಂಗ್ ಈವೆಂಟ್‌ಗೆ ತಯಾರಾಗಲು ತರಬೇತಿ ನೀಡಿದರು. ಆರಂಭದಲ್ಲಿ ನಿಧಾನವಾಗಿ ವಾಕಿಂಗ್, ಜಾಗಿಂಗ್ ಮಾಡಿಸಿ ನಂತರ ಓಟದ ತರಬೇತಿ ನೀಡಿದರು. ತರಬೇತಿ ಬಳಿಕ ೧೦ಕೆ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಸಾಮರ್ಥ್ಯ ಗಳಿಸಿದೆ ಎಂದರು.

ಮುಂದಿನ ಹಂತದಲ್ಲಿ ವೇಗವಾಗಿ ಓಡುವ ತರಬೇತಿ ಪಡೆಯಲು ನಿರ್ಧರಿಸಿದೆ. ಅದಕ್ಕೆ ಸಹಾಕಾರ ಸಿಗಬೇಕಾದರೆ ರನ್ನಿಂಗ್ ಜತೆಗೆ
ಸೈಕ್ಲಿಂಗ್ ಇರಬೇಕಿತ್ತು. ಆದರೆ, ಸೈಕ್ಲಿಂಗ್‌ಗೆ ಯಾವ ಸೈಕಲ್ ಖರೀದಿ ಮಾಡಬೇಕು ಎಂಬ ಗೊಂದಲ ಸೃಷ್ಟಿಯಾಯಿತು. ಮಾರು ಕಟ್ಟೆಯಲ್ಲಿ ಸೈಕ್ಲಿಂಗ್ ಮಾಡುವವರಿಗೆಂದೇ ೨೦ ಸಾವಿರ ರು.ನಿಂದ ೨ ಲಕ್ಷ ರು.ವರೆಗಿನ ವಿವಿಧ ರೀತಿಯ, ವಿಶೇಷ ಸೌಲಭ್ಯಗಳುಳ್ಳ ಸೈಕಲ್ಗಳು ದೊರೆಯುತ್ತವೆ. ತಮ್ಮ ಅಗತ್ಯಕ್ಕೆ ತಕ್ಕ ಸೈಕಲ್‌ಗಳನ್ನು ಕೊಳ್ಳುವುದು ಅವರವರಿಗೆ ಬಿಟ್ಟದ್ದು. ಹೀಗೆ ಸೈಕ್ಲಿಂಗ್ ಆರಂಭಿ ಸಿದ ನಾನು ಕ್ರಮೇಣ ಸೈಕ್ಲಿಸ್ಟ್ ಆದೆ ಎಂದು ಮಾಹಿತಿ ನೀಡಿದರು.

ಸೈಕ್ಲಿಂಗ್‌ನಲ್ಲಿ ಹಲವು ವಿಧ: ರೇಸ್ ಫಾರ್ಮೆಟ್: ಈ ಸೈಕ್ಲಿಂಗ್‌ನಲ್ಲಿ ಹೆಚ್ಚಾಗಿ ಶಾಲಾ-ಕಾಲೇಜು ಮಕ್ಕಳು, ಪ್ರೊಫೆಶನಲ್
ಸೈಕಲಿಸ್ಟ್ ಇದರಲ್ಲಿ ಭಾಗಿಯಾಗುತ್ತಾರೆ. ಈ ವಿಧಾನದಲ್ಲಿ ನಿಗದಿತ ಸಮಯದಲ್ಲಿ ಇಂತಿಷ್ಟು ಕಿಲೋಮೀಟರ್ ತಲುಪುವ ಗುರಿ ಇರುತ್ತದೆ.

ಎನಡ್ಯೋರಿಂಗ್ ಸೈಕಲಿಂಗ್: ಈ ವಿಧಾನದಲ್ಲಿ ಎಷ್ಟು ಹೊತ್ತು ಸೈಕ್ಲಿಂಗ್ ಮಾಡುತ್ತೀರಾ ಎಂಬುದು ಮುಖ್ಯವಾಗುತ್ತದೆ. ೨೦೦,
೩೦೦, ೪೦೦ ಮತ್ತು ೬೦೦ ಕಿ.ಮೀ. ಗುರಿ ಇರುತ್ತದೆ. ಸಾಮರ್ಥ್ಯಕ್ಕೆ ತಕ್ಕಂತೆ ದೂರ ಆಯ್ಕೆ ಮಾಡಿಕೊಳ್ಳಬಹುದು. ಕಡಿಮೆ ಅವಧಿ ಯಲ್ಲಿ ೬೦೦ ಕಿ.ಮೀ. ಮುಗಿಸಿದರೆ ಸೂಪರ್ ರ‍್ಯಾಂಡ್ -ನರ‍್ಸ್ ಎಂಬ ಬಿರುದು ನೀಡಲಾಗುತ್ತದೆ. ಈ ಮ್ಯಾರಥಾನ್‌ಗೆ ಯಾರು ಬೇಕಾದರೂ ನೋಂದಣಿ ಆಗಬಹುದು. ಆದರೆ, ಆಯೋಜಕರ ಷರತ್ತುಗಳಿರುತ್ತವೆ.

ಅಲ್ಟ್ರ ಸೈಕ್ಲಿಂಗ್: ಇದರಲ್ಲಿ ೬೦೦ ಕಿ.ಮೀ. ಗೂ ಹೆಚ್ಚು ದೂರ ಕ್ರಮಿಸಬೇಕು. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಾಯೋ ಜಕರಿಂದ ಕೆಲವು ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ೧,೦೦೦ಕಿ.ಮೀ.ಗೆ ೭೫ ಗಂಟೆ , ೧,೨೦೦ ಕಿ.ಮೀ.ಗೆ ೯೦ ಗಂಟೆ, ೧,೫೦೦ ಕಿ.ಮೀ.ಗೆ ೧೨೫ಗಂಟೆ ಎಂಬ ಸಮಯವಿರುತ್ತದೆ. ಅಂದರೆ, ಕನಿಷ್ಠ ಗಂಟೆಗೆ ೧೫ ಕಿ.ಮೀ. ಸೈಕ್ಲಿಂಗ್ ಮಾಡಬೇಕು.

ಟೂರಿಂಗ್ ಸೈಕ್ಲಿಂಗ್: ಇದರಲ್ಲಿ ಭಾಗವಹಿಸುವವರಿಗೆ ಆಯೋಜಕರಿಂದ ಎಲ್ಲಾ ರೀತಿಯ ಸೌಲಭ್ಯವಿರುತ್ತದೆ. ಇದಕ್ಕೆ ಯಾವುದೇ
ಸಮಯ ಅಥವಾ ಇಂತಿಷ್ಟು ದೂರದ ಗುರಿ ತಲುಪಬೇಕು ಎಂಬ ನಿಯಮ ಇರುವುದಿಲ್ಲ. ಕೇವಲ ರಿಲ್ಯಾಕ್ಸಿಂಗ್‌ಗಾಗಿ ಮಾಡು ಸೈಕ್ಲಿಂಗ್.

ಟ್ರಯತ್ಲಾನ್: ರನ್ನಿಂಗ್, ಸೈಕಲಿಂಗ್ ಮತ್ತು ಸ್ವಿಮಿಂಗ್ ಈ ಮೂರನ್ನು ಮಾಡುವುದಕ್ಕೆ ಟ್ರಯತ್ಲಾನ್ ಎಂದು ಕರೆಯಲಾಗುತ್ತದೆ.
ಈ ಮೂರನ್ನು ನಿಗದಿತ ಸಮಯದಲ್ಲಿ ಮುಗಿಸಿದವರಿಗೆ ‘ಐರನ್ ಮ್ಯಾನ್’ ಬಿರುದು ನೀಡಲಾಗುತ್ತದೆ.

***

ಎಲ್ಲಾ ರೀತಿಯ ಸೈಕ್ಲಿಂಗ್‌ಗೆ ಅದರದ್ದೇ ಆದ ತರಬೇತಿಗಳು ಇರುತ್ತವೆ.

ಚೈನಾ, ತೈವಾನ್, ಇಂಡೋನೇಶಿಯಾದಿಂದ ಹೆಚ್ಚು ರೇಸಿಂಗ್ ಸೈಕಲ್‌ಗಳನ್ನು ರಫ್ತು ಮಾಡಿಕೊಳ್ಳಲಾಗುತ್ತದೆ.

ಫಿಟ್ನೆಸ್‌ಗಾಗಿ ಸೈಕ್ಲಿಂಗ್ ಅಥವ ರನ್ನಿಂಗ್ ಮಾಡಬೇಡಿ.

ಮೊದಲು ಫಿಟ್ ಅಗಿ ನಂತರ ಶುರು ಮಾಡುವುದು ಸೂಕ್ತ ಯಾವುದೇ ಮ್ಯಾರಥಾನ್ ಪ್ರಾರಂಭಿಸುವ ಮುನ್ನ ದೈಹಿಕ ಸಾಮರ್ಥ್ಯದ ಬಗ್ಗೆ ವೈದ್ಯರ ಬಳಿ ತಿಳಿಯುವುದು ಒಳೆಯದು.

ನಿಧಾನವಾಗಿ ಆರಂಭಿಸಿ
ರನ್ನಿಂಗ್ ಮತ್ತು ಸೈಕ್ಲಿಂಗ್ ಇವೆಂಟ್‌ಗಳು ಹವ್ಯಾಸಕ್ಕೆ ಪ್ರಾರಂಭವಾಗಿ ಈಗ ದೊಡ್ಡ ವ್ಯವಹಾರವಾಗಿದೆ. ವಿವಿಧ ಶೂ ಸಂಸ್ಥೆಗಳು, ಎನರ್ಜಿ ಡ್ರಿಂಗ್ಸ್ ಸಂಸ್ಥೆ ಸೇರಿದಂತೆ ಹತ್ತು ಹಲವು ಸಂಸ್ಥೆಗಳು ಇದರಲ್ಲಿ ಭಾಗಿಯಾಗುತ್ತಾರೆ. ಇದಲ್ಲದೆ, ಕರೋನಾ ಲಾಕ್‌ಡೌನ್‌ ನಿಂದ ವರ್ಕ್ ಫ್ರಮ್ ಹೋಮ್ ಶುರುವಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲಿಂಗ್ ಮೊರೆಹೋಗಿದ್ದಾರೆ. ಇದರಿಂದ ಸೈಕಲ್‌ಗಳಿಗೆ ಬಾರಿ ಬೇಡಿಕೆ ಕೂಡ ಬಂದಿದೆ. ಆದರೆ, ಯಾವುದೇ ಮ್ಯಾರಥನ್ ಆರಂಭಿಸುವ ವೇಳೆ ನಿಧಾನಗತಿಯಲ್ಲಿ ಶುರು ಮಾಡಬೇಕು ಎಂದು ಸಲಹೆ ಮಾಡಿದರು.