Sunday, 17th October 2021

ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರೂ ಇರುತ್ತಾರೆ, ಕಲ್ಲು ಎಸೆಯುವವರು ಇರುತ್ತಾರೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ಆಡಿರುವ ಮಾತುಗಳಿಗೂ, ನನಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಪಕ್ಷದ ಹೇಳಿಕೆಗಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಕಲೆಕ್ಷನ್ ಗಿರಾಕಿ, ಪರ್ಸಂಟೇಜ್ ಹೆಚ್ಚಿಸಿದ್ದಾರೆ ಎಂಬ ಉಗ್ರಪ್ಪ ಹಾಗೂ ಸಲೀಂ ಅವರ ಸಂಭಾಷಣೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಶಿಸ್ತಿನ ಪಕ್ಷ ಈ ನಿಟ್ಟಿನಲ್ಲಿ ಇಬ್ಬರು ನಾಯಕರ ವಿರುದ್ಧ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಕ್ರಮ ಕೈಗೊಂಡಿದೆ. ಇಬ್ಬರು ನಾಯಕರ ಹೇಳಿಕೆಯನ್ನು ಗಮನಿಸಿದ್ದೇನೆ. ಅದು ಪಕ್ಷದ ಹೇಳಿಕೆಯಲ್ಲ. ಅವರ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಇಬ್ಬರು ನಾಯಕರ ಹೇಳಿಕೆಗಳು ಪಕ್ಷಕ್ಕೆ ಹಾಗೂ ನಮಗೆ ಮುಜುಗರವುಂಟು ಮಾಡಿದೆ. ನನಗೆ ಯಾವುದೇ ಪರ್ಸಂಟೇಜ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಅಗತ್ಯವಿದ್ದರೆ ಗೃಹ ಸಚಿವರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ತನಿಖೆ ನಡೆಸಲಿ ಎಂದು ಹೇಳಿದರು.

ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರೂ ಇರುತ್ತಾರೆ, ಕಲ್ಲು ಎಸೆಯುವವರು ಇರುತ್ತಾರೆ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.

ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ, ನನ್ನದೇ ಆದ ಮಾತಿನ ಶೈಲಿಯಿದೆ. ನನಗೆ ನನ್ನದೇ ಆದ ನಡತೆ ಇದೆ. ನನ್ನ ಬಾಡಿ ಲಾಂಗ್ವೆಜ್ ಇರುವುದೇ ಹಾಗೆ. ಯಾವುದೇ ಷಡ್ಯಂತ್ರ ನಡೆಸುವ ಅಗತ್ಯವೂ ನನಗಿಲ್ಲ. ಪಕ್ಷದ ನಾಯಕರಿಬ್ಬರೂ ಕೆಲ ಆಂತರಿಕ ವಿಚಾರವಾಗಿ ಮಾತನಾಡಿರುವುದು ನಿಜ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *