Tuesday, 26th October 2021

ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೂಚನೆ

– ಮಕ್ಕಳಲ್ಲಿ ಮಾದಕ ದ್ರವ್ಯ, ಮಾದಕ ವಸ್ತುಗಳ ಸೇವನೆ, ಅಕ್ರಮ ಸಾಗಾಣಿಕೆ ತಡೆಗಟ್ಟುವಿಕೆ ಕುರಿತ ಜಂಟಿ ಕ್ರಿಯಾ ಯೋಜನಾ ಸಭೆ

ಕೊಪ್ಪಳ: ಮಕ್ಕಳಲ್ಲಿ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅದಕ್ಕೂ ಮೊದಲು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಆಯೋಜಿಸಿದ್ದ ಮಕ್ಕಳಲ್ಲಿ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ತಡೆಗಟ್ಟುವಿಕೆ ಕುರಿತ ಜಂಟಿ ಕ್ರಿಯಾಯೋಜನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ-ಕಾಲೇಜುಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು, ತಂಬಾಕು ಉತ್ಪನ್ನಗಳು ಹಾಗೂ ಮಾದಕ ವಸ್ತುಗಳ ಮಾರಾಟ ನಿಷೇಧಿಸಲಾಗಿದೆ. ಆದಾಗ್ಯೂ ಮಕ್ಕಳಿಗೆ ತಂಬಾಕು, ತಂಬಾಕು ಉತ್ಪನ್ನಗಳು, ಮಾದಕ ದ್ರವ್ಯಗಳು ಸುಲಭವಾಗಿ ದೊರೆಯುತ್ತಿದ್ದು, ಇದರಿಂದ ಮಕ್ಕಳ ಆರೋಗ್ಯದಲ್ಲಿ ದುಷ್ಪರಿ ಣಾಮಗಳು ಉಂಟಾಗು ತ್ತಿವೆ. ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಮಾದಕ ವಸ್ತುಗಳು ತಡೆಯನ್ನುಂಟು ಮಾಡುತ್ತವೆ. ಆದ್ದರಿಂದ ಸದ್ಯ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಪೂರಕವಾಗಿ ಮಕ್ಕಳ ಗ್ರಾಮ ಸಭೆಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕೆಲವು ಶಾಲೆಗಳಲ್ಲಿ ಶಿಕ್ಷಕರು ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ. ಮಕ್ಕಳಿಗೆ ಮಾದರಿಯಾಗಿರಬೇಕಾದ ಶಿಕ್ಷಕರೇ ಮಾದಕ ವಸ್ತುಗಳ ಸೇವನೆ ಮಾಡಿದರೆ ಅದರಿಂದ ಮಕ್ಕಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಪ್ರತಿ ಶಾಲಾ ಮುಖ್ಯೋಪಾಧ್ಯಾಯರಿಗೆ ಮಾದಕ ವ್ಯಸನಿಯಾದ ಶಿಕ್ಷಕರ ಮಾಹಿತಿ ನೀಡು ವಂತೆ ಹಾಗೂ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿ. ಜಿಲ್ಲೆಯ ವಿವಿಧ ಶಾಲೆ ಗಳಿಗೆ ದಿಢೀರ್ ಭೇಟಿ ನೀಡಿಯೂ ಅಂತಹ ಶಿಕ್ಷಕರನ್ನು ಹಾಗೂ ಶಾಲಾ ವ್ಯಾಪ್ತಿಯ ನಿಷೇಧಿತ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಪರಿಶೀಲನೆ ನಡೆಸಬೇಕು. ಶಾಲಾ ನಿಷೇಧಿತ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ ಕಂಡುಬಂದಲ್ಲಿ ಅವರಿಗೆ ನಿಯಮಾನುಸಾರ ದಂಡ ವಿಧಿಸುವ ಜೊತೆಗೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಂದು ಡಿಡಿಪಿಐಗೆ ಸೂಚನೆ ನೀಡಿದರು.

ಶಾಲಾ–ಕಾಲೇಜು ಮಕ್ಕಳಲ್ಲಿ ಹಲವರು ನೇರವಾಗಿ ಮಾದಕ ವಸ್ತುಗಳನ್ನು ಖರೀದಿಸದೇ ಇರುವುದರಿಂದ ಅಂತಹ ಮಕ್ಕಳನ್ನು ಗುರುತಿಸಲು ಕಷ್ಟವಾಗುತ್ತದೆ. ಆದ್ದರಿಂದ ಗ್ರಾಮಗಳಲ್ಲಿ, ನಗರದಲ್ಲಿ ಸಂದೇಹಾಸ್ಪದವಾಗಿ ವ್ಯಾಪಾರ ನಡೆಸುವ ಯಾವುದೇ ಅಂಗಡಿಗಳ ಮೇಲೆ ಕಾನೂನು ರೀತ್ಯ ಸಂಬಂಧಿಸಿದ ಅಧಿಕಾರಿಗಳು ದಾಳಿ ಮಾಡಬಹುದು. ಔಷಧ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಔಷಧ ನಿಯಂತ್ರಕರು ಸೂಕ್ತ ನಿರ್ದೇಶನ ನೀಡಬೇಕು. ಔಷಧ ಅಂಗಡಿಗಳಲ್ಲಿ ದೊರೆಯುವ ಯಾವುದೇ ಔಷಧಿಗಳನ್ನು ವೈದ್ಯರ ಶಿಫಾರಸ್ಸಿನ ಹೊರತು ಮಕ್ಕಳಿಗೆ ನೀಡಬಾರದು. ಸಿಸಿ ಟಿವಿಗಳ ಮೂಲಕ ಮಕ್ಕಳು ಪಡೆಯುವ ಔಷಧಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು. ಆಗಿಂದಾಗ್ಗೆ ಸಿಸಿ ಟಿವಿಯನ್ನು ಪರಿಶೀಲಿಸಿ, ಅನುಮಾನಸ್ಪದ ವಿಷಯಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಬಾರ್‌ಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಕ್ಕಳು ಕಾರ್ಯನಿರ್ವಹಿಸುವಂತಿಲ್ಲ. ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಬೇಕು. ಅಂತಹ ಮಕ್ಕಳು ಕಂಡು ಬಂದಲ್ಲಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಒಪ್ಪಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳನ್ನು ರಕ್ಷಿಸಿ ಬಾಲ ಮಂದಿರಕ್ಕೆ ಕಳುಹಿಸಬೇಕು. 1ರಿಂದ 2 ವರ್ಷದ ಮಕ್ಕಳಿಗೆ ಮತ್ತು ಬರುವ ಔಷಧಿ ನೀಡಿ ಮಕ್ಕಳು ದೀರ್ಘ ಕಾಲ ಪ್ರಜ್ಞೆ ತಪ್ಪುವಂತೆ ಮಾಡಿ, ಅವರನ್ನು ತೋರಿಸಿ ಭಿಕ್ಷೆ ಬೇಡುವ ಮಹಿಳೆಯರನ್ನು ಗುರುತಿಸಿ ಅಂತಹವರಿಂದ  ಮಕ್ಕಳನ್ನು ರಕ್ಷಿಸಬೇಕು. ವಿವಿಧ ಉದ್ದೇಶಗಳಿಗೆ ಮಕ್ಕಳನ್ನು ಅಕ್ರಮವಾಗಿ ಸಾಗಾಟ ಮಾಡುವ ಸಂಭವವಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ ಮಕ್ಕಳ ಅಕ್ರಮ ಸಾಗಾಣಿಕೆಯನ್ನು ತಡೆಯಬೇಕು. ವಸತಿ ಶಾಲೆಗಳಲ್ಲಿ ವರ್ಚುವಲ್ ವೇದಿಕೆ ಮೂಲಕ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲೆಗಳು ಆರಂಭವಾಗಿದ್ದು, ಗ್ರಾಮಗಳಿಂದ ಬೇರೆ ಕಡೆಗೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಕಷ್ಟ ಪಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಶಾಲಾ ಮುಖ್ಯೋಪಾಧ್ಯಾಯರಿಂದ ಶಾಲೆಗೆ ಬೇರೆ ಗ್ರಾಮಗಳಿಂದ ಬರುವ ಮಕ್ಕಳ ಮಾಹಿತಿ ಪಡೆದು, ಸರಿಯಾದ ಸಮಯಕ್ಕೆ ಬಸ್ ದೊರೆಯುವಂತೆ ಸೌಲಭ್ಯ ಕಲ್ಪಿಸಲು ಕಲ್ಯಾಣ ಕರ್ನಾಟಕ ಸಾರಿಗೆಯ ವಿಭಾಗೀಯ ನಿಯಂತ್ರಕರನ್ನು ಸಂಪರ್ಕಿಸಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸ ಬೇಕು. ಶಾಲಾ ವಿದ್ಯಾರ್ಥಿಗಳಿಗೆ, ಅವರ ಶೈಕ್ಷಣಿಕ ಅಭಿವೃದ್ಧಿಗೆ ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಾತನಾಡಿ, ತಾಂಡಾ ಪ್ರದೇಶಗಳಲ್ಲಿ, ಗ್ರಾಮ ಹಾಗೂ ನಗರ ಪ್ರದೇಶದ ಹೊರ ವಲಯಗಳಲ್ಲಿ ವಾಸಿಸುವ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಆರೋಗ್ಯ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ಕೌನ್ಸೆಲಿಂಗ್ ಮೂಲಕ ತಿಳುವಳಿಕೆ ಮೂಡಿಸಿ, ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಹೇಳಿದರು.

ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಮಾತನಾಡಿ, ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾದಲ್ಲಿ ಅಥವಾ ಮಕ್ಕಳ ಮೇಲೆ ಯಾವುದೇ ದೌರ್ಜನ್ಯ, ಅನ್ಯಾಯ ನಡೆಯುತ್ತಿರುವುದು ಸಾರ್ವಜನಿಕರಿಗೆ ಕಂಡುಬಂದಲ್ಲಿ ಮಕ್ಕಳು ಅಥವಾ ಸಾರ್ವಜನಿಕರು ಯಾವುದೇ ಸಮಯದಲ್ಲಿ ಸಹಾಯ ವಾಣಿ ಸಂಖ್ಯೆ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮಕ್ಕಳ ರಕ್ಷಣೆ ಬರೀ ಇಲಾಖೆಗಳಷ್ಟೇ ಅಲ್ಲದೆ ಎಲ್ಲ ನಾಗರಿಕರ ಕರ್ತವ್ಯ ಎಂದು ಮಕ್ಕಳ ರಕ್ಷಣೆ ಕುರಿತಾದ ಕಾನೂನು, ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ಅಕ್ಕಮಹಾದೇವಿ, ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ, ಡಿಡಿಪಿಯು ರವಿಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

Leave a Reply

Your email address will not be published. Required fields are marked *