Sunday, 29th November 2020

ಮನ ಬೆಳಗುವ ದೀಪಾವಳಿ

ಡಾ.ಪ್ರಕಾಶ್ ಕೆ.ನಾಡಿಗ್ ತುಮಕೂರು

ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲೂ, ಮತ ಧರ್ಮಗಳಲ್ಲೂ ಹಬ್ಬ, ಹರಿದಿನ ಮತ್ತು ಆಚರಣೆಗಳಿಗೆ ಅದರದೇ ಆದ ವಿಶೇಷತೆ ಇದೆ, ಮಹತ್ವ ಇದೆ. ನಮ್ಮ ನಾಡಿನ ವಿಶೇಷ ಹಬ್ಬ ಎನಿಸಿರುವ ದೀಪಾವಳಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಎಲ್ಲರ ಮನೆ ಮುಂದೆ ದೀಪದ ಸಾಲುಗಳು, ತೂಗು ಬಿಟ್ಟ ಆಕಾಶ ಬುಟ್ಟಿ, ಸಿಡಿಯುವ ಬಾಣ – ಬಿರುಸುಗಳು. ಈ ಸಾಂಪ್ರದಾಯಿಕ ಆಚರಣೆಯ ಹಿಂದೆ ಪುರಾತನ ಸಂಸ್ಕೃತಿಯ ನೆನಪುಗಳಿವೆ, ಸಾವಿರಾರು ವರ್ಷಗಳಿಂದ ಪಾಲಿಸಿ ಕೊಂಡು ಬಂದ ಪದ್ಧತಿಗಳ ತಳಪಾಯವಿದೆ. ನಿಜವಾಗಿ ನೋಡಿದರೆ, ನಮ್ಮ ನಾಡಿನ ಅತಿ ದೊಡ್ಡ ಹಬ್ಬ ಎನಿಸಿರುವ ದೀಪಾವಳಿಯ ಸಂಭ್ರಮವು ಆರು ದಿನಗಳ ಕಾಲ ನಡೆಯುವ ಅಪೂರ್ವ ವಿದ್ಯಮಾನ.

ದೀಪಾವಳಿ ಹಬ್ಬದ ಆಚರಣೆ ಭಾರತದಾದ್ಯಂತ ಪಸರಿಸಿದೆ. ಕೃಷಿ, ಗದ್ದೆ, ತೋಟ, ಬಯಲು, ಆಲಯ, ವ್ಯಾಪಾರಿ, ಕಾರ್ಮಿಕ, ಎಲ್ಲರಿಗೂ ದೀಪಾವಳಿ ಎಂದರೆ ಗೌರವ, ಪೂಜ್ಯ. ಆ ನಿಟ್ಟಿನಲ್ಲಿ, ಇದು ನಮ್ಮ ದೇಶದ ಬಹು ದೊಡ್ಡ ಹಬ್ಬ. ಈಚಿನ ವರ್ಷದಲ್ಲಿ ದೀಪಾವಳಿಗೆ ಜಾಗತಿಕ ಮಾನ್ಯತೆಯೂ ದೊರೆಯುತ್ತಿದೆ. ಅಮೆರಿಕದ ಶ್ವೇತ ಭವನದಲ್ಲೂ ದೀಪಾವಳಿ ಯನ್ನು ಅಮೆರಿಕದ ಅಧ್ಯಕ್ಷರೇ ಸ್ವತಃ ಆಚರಿಸುವ ಮೂಲಕ, ಬೆಳಕಿನ ಮೌಲ್ಯವನ್ನು ಆರಾಧಿಸಿದರು, ನಮ್ಮ ನಾಡಿನ ಸಾಂಸ್ಕೃತಿ ಪರಂಪರೆಯನ್ನು ಗೌರವಿಸಿದರು. ಕತ್ತಲೆ ಎಂಬ ಮಾಲಿನ್ಯವನ್ನು ದೂರಮಾಡಿ ಬೆಳಕೆಂಬ ಪ್ರಭೆಯಿಂದ ಮನೆ, ಮನೆ ಶುದ್ಧಿಮಾಡಿಕೊಳ್ಳು ವುದೇ ಈ ಹಬ್ಬದ ಅರ್ಥ.

ಚತುರ್ದಶಿಯಂದು ಎಣ್ಣೆೆ ಸ್ನಾನ ಏಕೆ?
ಸಮುದ್ರ ಮಂಥನದ ಸಮಯದಲ್ಲಿ ವಿಷ್ಣು ಅಮೃತ ಕಳಶವನ್ನು ಹಿಡಿದು ಬರುತ್ತಾನೆ. ನರಕ ಚತುರ್ದಶಿಯ ದಿನ ಎಲ್ಲರ ಮನೆಯ ಹಂಡೆಯಲ್ಲಿ ತುಂಬುವ ನೀರಿನಲ್ಲಿ ಗಂಗಾಮಾತೆಯೂ ಹಾಗೂ ಮೈಗೆ ತಲೆಗೆ ಹಚ್ಚಿಕೊಳ್ಳುವ ಎಣ್ಣೆಯಲ್ಲಿ ಮಹಾ ಲಕ್ಷ್ಮಿಯ ಸಾನಿಧ್ಯವಿರುತ್ತದೆ ಎಂಬ ನಂಬಿಕೆ. ಹಾಗಾಗಿ ಈ ನೀರಿನಿಂದ ಸ್ನಾನ ಮಾಡಿದರೆ ಒಳ್ಳೆಯದು ಮತ್ತು ಆರೋಗ್ಯವೂ ವೃದ್ಧಿಸುವುದು ಮತ್ತು ಹಿರಿಯರು ಕಿರಿಯರು ಎಲ್ಲರೂ ತಪ್ಪದೇ ಎಣ್ಣೆ ಅಭ್ಯಂಜನ ಮಾಡಬೇಕೆಂಬ ಪದ್ಧತಿ. ನರಾಕಸುರನನ್ನು ಸಂಹರಿಸಿದ ಮೇಲೆ ಮನೆಗೆ ಬಂದ ಕೃಷ್ಣ, ಎಣ್ಣೆ ಅಭ್ಯಂಜನ ಮಾಡಿದ್ದನೆಂದು ಪುರಾಣಗಳಲ್ಲಿ ಹೇಳಿದೆ.

ಹಬ್ಬ ಪ್ರಾರಂಭವಾಗಿದ್ದು ಯಾವಾಗ?

ತ್ರೇತಾಯುಗದಿಂದಲೂ ಈ ಹಬ್ಬ ಆಚರಣೆಯಲ್ಲಿದೆ ಎಂದು ಪುರಾಣಗಳು ಹೇಳುತ್ತವೆ. ರಾಮ ಚಂದ್ರನು, ರಾವಣನನ್ನು
ಸಂಹರಿಸಿ ಸೀತಾ ಮಾತೆಯನ್ನು ಕರೆದುಕೊಂಡು ಅಯೋಧ್ಯೆಗೆ ಬಂದಾಗ ಅಲ್ಲಿನ ನಿವಾಸಿ ಗಳು ಇಡಿ ಅಯೋಧ್ಯಾ ನಗರವನ್ನು ಹಣತೆ ದೀಪಗಳಿಂದ ಬೆಳಗಿ ಅಲಂಕರಿಸಿದ್ದರು. ಅಂದಿ ನಿಂದ ದೀಪಾವಳಿ ಹಬ್ಬದ ಆಚರಣೆಗೆ ಬಂದಿತು.

ಗೋವಾದಲ್ಲಿ ನರಕ ಚತುರ್ದಶಿ ನರಾಕಾಸುರನನ್ನು ಕೃಷ್ಣ ಸಂಹರಿಸಿದ ದಿನವನ್ನು ನರಕ ಚತುರ್ದಶಿಯನ್ನಾಗಿ ಅಚರಿಸುವ ಪರಿಪಾಠ ಬೆಳೆದು ಬಂದಿದೆ. ನರಕ ಚತುರ್ದಶಿ ಎಂದರೆ ನಮ್ಮೊಳಗಿರುವ ನರಕ ರೂಪಿ ಅಸುರಿ ಶಕ್ತಿಯನ್ನು ಕೊಂದು ಸಜ್ಜನ ಭಾವನೆಗಳನ್ನು ನಮ ಲ್ಲಿರುವ ಆತ್ಮಜ್ಯೋತಿಯನ್ನು ಬೆಳಗುವುದು ಎಂದೂ ತಿಳಿಯಬಹುದು. ದುಷ್ಟ ನರಕಾಸುರ ನನ್ನು ಸಂಹರಿಸಿದ ಕಾರಣಕ್ಕಾಗಿ ಅಂದು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ನರಕ ಚತು ರ್ದಶಿಯನ್ನು ಗೋವಾ ಪ್ರಾಂತ್ಯದಲ್ಲಿ ವಿಶೇಷ ವಾಗಿ ಆಚರಿಸುತ್ತಾರೆ. ನಮ್ಮಲ್ಲಿ ಗಲ್ಲಿಗಲ್ಲಿಗಳಲ್ಲಿ ಗಣಪತಿ ಇಡುವ ಹಾಗೆ ಅಲ್ಲಿ ಒಂದಡಿಯಿಂದ ಹಿಡಿದು ನೂರಡಿಯ ವರೆಗೂ ನರಕಾಸುರನ ಮೂರ್ತಿ ತಯಾರಿಸಿ, ಅಲಂಕಾರಿಕ ಪೆಂಡಾಲ್ ಗಳಲ್ಲಿ ಅದನ್ನು ಇಡುತ್ತಾರೆ. ನೀರು ತುಂಬುವ ಹಬ್ಬದ ದಿನ ಗೋವನ್ನರು ರಾತ್ರಿ ಊಟಮಾಡಿ, ಈ ರೀತಿ ಇಟ್ಟ ನರಕಾಸುರನನ್ನು ನೋಡಲು ಹೋಗುತ್ತಾರೆ. ಅಂದು ರಾತ್ರಿ ಅಲ್ಲಿ ಯಾರು ಮಲಗುವುದಿಲ್ಲ. ಬೆಳಗ್ಗೆ ಐದಕ್ಕೆಲ್ಲ ಈ ನರಕಾಸುರ ಪ್ರತಿಮೆಗಳನ್ನು ಸುಟ್ಟು ಮನೆಗೆ ಹೋಗಿ ತಲೆ ಸ್ನಾನ ಮಾಡಿ ನರಕ ಚತುರ್ದಶಿ ಆಚರಿಸುತ್ತಾರೆ.

ಅಮಾವಾಸ್ಯೆಯಂದೇ ಲಕ್ಷ್ಮೀ ಪೂಜೆ
ಅಶ್ವಯುಜ ಮಾಸದಲ್ಲಿ ಬರುವ ಈ ಅಮವಾಸ್ಯೆ ಶುಭಕಾರಕವಾಗಿದ್ದು ಅಂದು ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆ ಮನ ದಲ್ಲಿ ಸಮೃದ್ಧಿ ತುಂಬುತ್ತದೆ ಎಂಬ ನಂಬಿಕೆ. ಅಮಾವಾಸ್ಯೆಯ ಕತ್ತಲೆಯಲ್ಲಿ ದೀಪದ ಬೆಳಕು ಹೇಗೆ ಎಲ್ಲಾ ಕಡೆ ಪಸರಿಸು ತ್ತದೋ ಹಾಗೇ ನಮ್ಮ ಜೀವನವೂ ಬೆಳಗುತ್ತದೆ ಎಂಬ ನಂಬಿಕೆ. ಉತ್ತರ ಭಾರತೀಯರಿಗೆ ತಮ್ಮ ವ್ಯಾಪಾರ ವಹಿವಾಟಿನ ನೂತನ ವರ್ಷ ಪ್ರಾರಂಭವಾಗುವುದೇ ಈ ದಿನ. ಮಲೆನಾಡು ಭಾಗದಲ್ಲಿ ಈ ವೇಳೆಗಾಗಲೇ ತಾವು ಬೆಳೆದ ಪೈರು ಕೈಗೆ ಬಂದಿರುತ್ತದೆ. ಬತ್ತ, ಅಡಿಕೆ ಮುಂತಾದ ದವಸ ಧಾನ್ಯಗಳು ಸಹ ಲಕ್ಷ್ಮೀಯ ರೂಪವೇ ಆಗಿದೆ. ಅಂದು ಈ ದವಸ ಧಾನ್ಯವನ್ನೆಲ್ಲಾ ರಾಶಿ ಮಾಡಿ ಲಕ್ಷ್ಮಿಯ ರೂಪವಾದ ಇದನ್ನು ಪೂಜಿಸುವ ಪರಿಪಾಠ ಬೆಳೆದು ಬಂದಿದೆ.

ಬಲಿಪಾಡ್ಯಮಿಯ ಮಹತ್ವ
ಕಾರ್ತಿಕ ಮಾಸದ ಅಮಾವಾಸ್ಯೆ ಮರುದಿನದ ಪಾಡ್ಯವನ್ನು ಬಲಿ ಪಾಡ್ಯಮಿಯನ್ನಾಗಿ ಆಚರಿಸುತ್ತಾರೆ. ಭಾರತದ ಬಹುಭಾಗ ವನ್ನು ಆಳಿಕೊಂಡಿದ್ದ ಬಲಿ ಚಕ್ರವರ್ತಿಯು ದಾನಶೂರ. ಯಾರು ಏನನ್ನು ಕೇಳಿದರೂ ಇಲ್ಲವೆನ್ನದ ಸಹೃದಯಿ. ಮತ್ತು ಇದೇ
ಸಮಯದಲ್ಲಿ ದೈವಭಕ್ತ. ಇವನ ರಾಜ್ಯವನ್ನೇ ದಾನವಾಗಿ ಕೇಳಿದ ವಾಮನನಿಗೆ ಶರಣಾಗಿ, ತನ್ನಲ್ಲಿದ್ದದ್ದನ್ನೆಲ್ಲಾ ಸಮರ್ಪಿಸಿ, ತನ್ನ
ರಾಜ್ಯವನ್ನು ತೊರೆದು ಹೋಗುತ್ತಾನೆ.

ಆಗ ವಾಮನ (ವಿಷ್ಣು) ಅವನಿಗೊಂದು ವರ ನೀಡಿ, ಪ್ರತಿ ವರ್ಷ ದೀಪಾವಳಿಯ ಸಮಯದ ಮೂರು ದಿನ ತನ್ನ ರಾಜ್ಯಕ್ಕೆ ತಾನು ವಾಪಸು ಬರಬಹುದು ಎಂದು ಹೇಳುತ್ತಾನೆ. ತಮ್ಮ ಪ್ರೀತಿಯ ರಾಜನು ವಾಪಸು ಬರುವ ಆ ದಿನವನ್ನು ಜನರು ಬಲಿಪಾಡ್ಯಮಿ ಯನ್ನಾಗಿ ಆಚರಿಸುತ್ತಾರೆ. ಪ್ರಜೆಗಳ ಸೇವೆ ಮಾಡುತ್ತಾ ದೈವತ್ವವನ್ನು ಪಡೆದ ಬಲಿ ಚಕ್ರವರ್ತಿಯ ಪೂಜೆಯನ್ನು ಇಂದು ಮಾಡ ಬೇಕು. ಮಲೆನಾಡು ಹಳೆ ಮೈಸೂರು ಭಾಗದಲ್ಲಿ ಈ ದಿನದಂದು ಬಲಿಯನ್ನು ಪ್ರತಿನಿಧಿಸುವ ‘ಕೆರಕ’ ಅಂದರೆ ಸಗಣಿಯಿಂದ ಸಣ್ಣ
ಗೋಪುರದ ಹಾಗೆ ಮಾಡಿ ಅದರಲ್ಲಿ ಚೆಂಡು ಹೂವನ್ನು ಸಿಕ್ಕಿಸಿ, ಮನೆಯ ಎಲ್ಲಾ ಬಾಗಿಲುಗಳ ಎಡಬಲದಲ್ಲಿ, ದೇವರ ಕೋಣೆ ಯಲ್ಲಿ, ಅಡುಗೆಮನೆಯಲ್ಲಿ, ಕೊಟ್ಟಿಗೆಯಲ್ಲಿ ಇಡುವ ಮೂಲಕ ಬಲಿಂದ್ರಪೂಜೆಯನ್ನು ಮಾಡುವ ಪರಿಪಾಠವಿದೆ.

ಬಲಿಪಾಡ್ಯಮಿಯಂದು ಬಲಿಂದ್ರ ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ. ಇಂದ್ರನ ದಾಳಿಯಿಂದ ತನ್ನ ಗೋ ಸಮೂಹವನ್ನು ರಕ್ಷಿಸಲು ಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋ ವರ್ಧನಪೂಜೆಯನ್ನು ಆಚರಿಸಲಾಗುತ್ತದೆ. ಹಲವು ಕಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ. ಈ ದಿನ
ಗೋಪುಜೆಗೂ ಬಹಳ ಮಹತ್ವವಿದ್ದು. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಬಹಳ ಮಹತ್ವವಿದೆ. ಸಾತ್ವಿಕ ಪ್ರವೃತ್ತಿಯ ಗೋ ಮಾತೆಯನ್ನು ಅಂದು ಪೂಜಿಸಿ ಸಾತ್ವಿಕ ಗುಣಗಳನ್ನು ತಮ್ಮಲ್ಲಿ ಆಹ್ವಾನಿಸಿಕೊಳ್ಳುತ್ತಾರೆ. ಅಂದು ಮಾಡುವ ವಿಶೇಷ ಅಡುಗೆ ಯನ್ನು ಗೋವಿಗೆ ತಿನ್ನಿಸಿದ ನಂತರವೇ ಮನೆಯವರು ಊಟ ಮಾಡುವ ಪರಿಪಾಠವಿದೆ.

ಉತ್ತರ ಭಾರತದಲ್ಲಿ ದೀಪಾವಳಿ

ನರಕ ಚತುರ್ದಶಿಯ ಹಿಂದಿನ ದಿನವನ್ನು ಉತ್ತರ ಭಾರತದಲ್ಲಿ ಧನ್ ತ್ರಯೋದಶಿ ಅಥವಾ ಧನ್ ತೆರೆಸ್ ಎಂಬುದಾಗಿ ಆಚರಿಸು ತ್ತಾರೆ. ಅಂದು ಹೊಸ ಬಂಗಾರವನ್ನು ಖರೀದಿಸುವ ಪರಿಪಾಠವಿದೆ. ಹೀಗೆ ಮಾಡುವುದರಿಂದ ಪ್ರತಿದಿನ ಮನೆಯಲ್ಲಿ ಧನವು ನೆಲೆಸುತ್ತದೆ ಎಂಬ ನಂಬಿಕೆ. ಲಕ್ಷ್ಮೀ ಪೂಜೆಯ ವೇಳೆಗೆ ಹಿಂದಿನ ವರ್ಷದಿಂದ ಅಲ್ಲಿನ ವರೆಗೆ ಆದ ಜಮಾ ಖರ್ಚುಗಳನ್ನು ಲೆಕ್ಕ ಹಾಕಿ, ಉಳಿದ ಹಣವನ್ನು ದೇವತಾರಾಧನೆಗೆ ಮೀಸಲಾಗಿಡುವುದರಿಂದ ಸತ್ಕಾರ್ಯಕ್ಕಾಗಿ ಖರ್ಚುಮಾಡುವ ಪದ್ಧತಿ. ಇದ ರಿಂದಾಗಿ ಧನಲಕ್ಷ್ಮಿ ಮನೆಯಲ್ಲಿ ನೆಲಸಿ ಹರಸುತ್ತಾಳೆ ಎಂದು ಪ್ರತೀತಿ. ದಕ್ಷಿಣ ಭಾರತದಲ್ಲಿ ಅಶ್ವಿಯಜ ಶುಕ್ಲ ಚತುರ್ದಶಿ ಯಂದು ನರಕ ಚತುರ್ದಶಿ, ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಹಾಗೂ ಕಾರ್ತಿಕ ಪಾಡ್ಯದಂದು ಬಲಿಪಾಡ್ಯಮಿಯನ್ನು ಮಾಡಿದರೆ, ಉತ್ತರ ಭಾರತದಲ್ಲಿ ನರಕ ಚತುರ್ದಶಿಯ ಹಿಂದಿನ ದಿನ ತ್ರಯೋದಶಿಯಂದು ಧನ್ ತ್ರಯೋದಶಿ ಅಥವಾ ಧನ್ ತರೆಸ್ ಎಂದು ಆಚರಿಸುತ್ತಾರೆ.

ಭಾವನ ಬಿದಿಗೆ
ದಕ್ಷಿಣ ಭಾರತದ ಕೆಲವು ಕಡೆ ಪಾಡ್ಯದ ಮಾರನೇ ದಿನ ಭಾವನ ಬಿದಿಗೆ ಹಾಗೂ ಅಕ್ಕನ ತದಿಗೆ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇದು ಅಣ್ಣ ತಂಗಿ, ಅಕ್ಕ ತಮ್ಮಂದಿರ ಬಾಂಧವ್ಯ ವನ್ನು ಪ್ರತಿನಿಧಿಸುತ್ತದೆ. ಇದು ರಕ್ಷಾಬಂಧನದ ಆಚರಣೆಯನ್ನೇ ಹೋಲುತ್ತದೆ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಭಾಯಿ ದೂಜ್, ಮಹಾರಾಷ್ಟ್ರ್ರೆದಲ್ಲಿ ಭಾವು ಬೇಜ್ ಆಚರಣೆ ಇದೆ. ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರಿಗೆ ಉಡುಗೊರೆ ನೀಡಿ ಶುಭ ಹಾರೈಸುತ್ತಾರೆ.

ಮರುದಿನ ಅಕ್ಕನ ತದಿಗೆ. ಅಣ್ಣ ತಮ್ಮಂದಿರು ತಮ್ಮ ಅಕ್ಕ ತಂಗಿಯರಿಗೆ ಉಡುಗೊರೆ ನೀಡುತ್ತಾರೆ. ನರಕಾಸುರನನ್ನು ಸಂಹರಿಸಿದ ನಂತರ ಕೃಷ್ಣನು, ತನ್ನ ಸಹೋದರಿ ಸುಭದ್ರೆಯ ನಿವಾಸಕ್ಕೆ ಬಂದಾಗ ಸುಭದ್ರೆ ತನ್ನ ಅಣ್ಣನಿಗೆ ತಿಲಕವನ್ನಿಟ್ಟು, ಕೊರಳಿಗೆ ಹೂವಿನ ಹಾರ ಹಾಕಿ, ಆರತಿ ಮಾಡಿ ಸಿಹಿ ತಿನಿಸಿ, ಆತ್ಮೀಯವಾಗಿ ಬರಮಾಡಿಕೊಂಡಂಳು ಎಂಬ ನಂಬಿಕೆ. ಬನ್ನಿ, ಜ್ಯೋತಿ ಹಚ್ಚಿ ಬೆಳಕು ಬೀರಿ ದೀಪಾವಳಿ ಆಚರಿಸೋಣ.

ನೀರು ತುಂಬುವ ಹಬ್ಬ
ನರಕ ಚತುರ್ದಶಿಯ ಹಿಂದಿನ ದಿನ ಸ್ನಾನಗೃಹವನ್ನೆಲ್ಲಾ ಸ್ವಚ್ಛ ಮಾಡಿ ಹಂಡೆಯನ್ನು ತೊಳೆದು ಅದಕ್ಕೆ ಸುಣ್ಣ, ಕೆಮ್ಮಣ್ಣು ಹಚ್ಚಿ ಮಾಲಿಂಗನ ಬಳ್ಳಿಯನ್ನು ಸುತ್ತುವುದರಿಂದ ದೀಪಾವಳಿಯ ಸಡಗರ ಆರಂಭ. ಹಂಡೆಗೆ ದೀಪ ಬೆಳಗುವುದರ ಮೂಲಕ ದೀಪಾವಳಿ ಹಬ್ಬಕ್ಕೆ ಸಾಂಪ್ರಯಿಕ ಚಾಲನೆ ಸಿಗುತ್ತದೆ. ನರಕ ಚತುರ್ದಶಿಯಂದು, ಬೆಳಗಿನ ಜಾವ ಎಲ್ಲರೂ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡುವ ಮೂಲಕ ಈ ಸಂಪ್ರದಾಯಕ್ಕೊಂದು ಅರ್ಥಪೂರ್ಣ ಆರಂಭವನ್ನು ರೂಪಿಸಲಾಗಿದೆ.

Leave a Reply

Your email address will not be published. Required fields are marked *