Tuesday, 18th January 2022

ಗ್ರಹಿಕೆಯ ನಾನಾ ಮುಖಗಳು !

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಕಲಿಕೆಯ ಹಂತದಲ್ಲಿರುವ ಮಕ್ಕಳಿಗೆ ಈ ಗ್ರಹಿಕೆ ಎಂಬುದು ಬಹಳ ಮುಖ್ಯವಾದುದು. ಎಲ್ಲ ಮಕ್ಕಳೂ ಎಲ್ಲ ವಿಷಯ ಗಳಲ್ಲೂ ಪರಿಣಿತರಾಗಿರುವುದಿಲ್ಲ. ಕೆಲವರು ಗಣಿತ, ಕೆಲವರುಚ ಸಮಾಜ, ಮತ್ತೆ ಕೆಲವರು ವಿಜ್ಞಾನಪ್ರಿಯರು. ಇನ್ನು ಕೆಲವರಿಗೆ ಕನ್ನಡ ಕಷ್ಟವೆನಿಸಿದರೆ, ಮತ್ತೆ ಕೆಲವರಿಗೆ ಇಂಗ್ಲಿಷ್, ಹಿಂದಿ, ಸಂಸ್ಕೃತವನ್ನು ಕಲಿಯುವುದು ಕಷ್ಟ.

1996 ಆಗಸ್ಟ್ 15ರಂದು ಕನ್ನಡದ ವಾರಪತ್ರಿಕೆಯ ಕಚೇರಿಗೆ ಕಾಲಿಟ್ಟಾಗ ಪತ್ರಿಕೆಗಳ ಸ್ವರೂಪವಾಗಲಿ, ಪತ್ರಿಕಾ ಕಚೇರಿಗಳ
ಸ್ವರೂಪ ವಾಗಲಿ, ಅಲ್ಲಿನ ವ್ಯವಸ್ಥೆಯಾಗಲಿ ಯಾವ ರೀತಿಯದ್ದಾಗಿರುತ್ತದೆ ಎಂಬ ಸಣ್ಣ ಕಲ್ಪನೆಯೂ ಇರಲಿಲ್ಲ.

ಇನ್ನು ಗಂಭೀರವಾದ ಓದು, ಬರವಣಿಗೆಯಂತೂ ದೂರದ ಮಾತು. ಹೆಚ್ಚಂದ್ರೆ ಬಾಲ್ಯದಲ್ಲಿ ಒಂದಷ್ಟು ಪಠ್ಯಪುಸ್ತಕಗಳ ಜೊತೆಗೆ ಲೈಬ್ರರಿಯಲ್ಲಿ ದೊರೆಯುತ್ತಿದ್ದ ಕತೆಗಳು, ಕಾದಂಬರಿ ಗಳನ್ನು ಓದಿದ್ದನ್ನು ಬಿಟ್ಟರೆ ಮತ್ಯಾವ ಸಾಹಿತ್ಯದ ಪ್ರಕಾರದ ಅರಿವೂ ಇರಲಿಲ್ಲ. ಕವಿತೆಗಳಂತೂ ಮಾರು ದೂರ. ಇನ್ನು ಹಳೆಗನ್ನಡದ ಕಾವ್ಯಗಳಂತೂ ಕಬ್ಬಿಣದ ಕಡಲೆ. ಅರ್ಥವಾಗದ್ದನ್ನು ಅಷ್ಟ್ಯಾಕೆ ಕಷ್ಟ ಪಟ್ಟು ಓದಿ ತಿಳಿಯಬೇಕು? ಅನ್ನುವ ನಿರ್ಲಕ್ಷ್ಯ!

ಒಂದು ಸಣ್ಣ ಆಡಿಟರ್ ಆಫೀಸಿನಲ್ಲಿ ಕೂಡುವ ಕಳೆಯುವ ಲೆಕ್ಕಾಚಾರದಲ್ಲಿ ಒಂದಂಕಿ ತಪ್ಪಿದರೂ ಮತ್ತೆ ಮತ್ತೆ ಅದೇ ಕೆಲಸ ವನ್ನು ಮಾಡುವಾಗ ಸಾಕೆನಿಸಿಬಿಟ್ಟಿತ್ತು. ಆಗಿನ್ನೂ ಕಂಪ್ಯೂಟರುಗಳಿಗೆ ಎ.ಸಿ. ರೂಮು ಬೇಕಿದ್ದಂಥ ಕಾಲ. ಒಂದು ಸಣ್ಣ ಕಮ್ಯಾಂಡಿಗೆ ನಿಖರವಾದ ಉತ್ತರ ಕೊಡುವ ಜೊತೆಗೆ ಅದರ ವೇಗದೆಡೆಗೆ ಹೆಚ್ಚಾಗಿ ಆಕರ್ಷಿತ ಳಾಗಿದ್ದೆ. ಹೀಗಾಗಿ ಕಂಪ್ಯೂಟರಿನಲ್ಲಿ ಕಥೆ ಕವನಗಳನ್ನು ಟೈಪು ಮಾಡಿ ಚಿve ಮಾಡಿಡುವುದಷ್ಟೆ ನಿನ್ನ ಕೆಲಸ. ಆದರೆ ಯಾವ ಕಾರಣಕ್ಕೂ ಅಲ್ಲಿನ ಸುದ್ದಿಗಳನ್ನಾಗಲೀ, ವಿಷಯಗಳನ್ನಾ ಗಲೀ ಯಾರೊಂದಿಗೂ ಹೇಳಬಾರದು ಅನ್ನುವ ಕರಾರಿನೊಂದಿಗೆ ಹೆಜ್ಜೆಯಿಟ್ಟವಳಿಗೆ ಅದು ರವಿ ಬೆಳಗೆರೆ ಯವರ ಕಚೇರಿಯೆಂದಾಗಲಿ, ಹಾಯ್ ಬೆಂಗಳೂರ್!

ಪತ್ರಿಕೆಯೆಂಬುದಾಗಲೀ ಗ್ರಹಿಕೆಗೇ ಬಂದಿರಲಿಲ್ಲ. ಆಗೆಲ್ಲ, ಈಗಿನಂತೆ ಸುಲಭವಾದ ನುಡಿ ಸಾಫ್ಟ್ ವೇರ್ ಇರಲಿಲ್ಲ. ಕಂಪ್ಯೂಟರಿನ ಮುಂದೆ ಕುಳಿತವಳಿಗೆ ಪ್ರಕಾಶಕ್ ಸಾಫ್ಟ್ ವೇರ್‌ನಲ್ಲಿದ್ದ ಅದರ ಕೀಲಿಮಣೆಯ ಪ್ರಕಾರವಾಗಿ ಅಕ್ಷರ ಕಲಿಯುವುದೇ ಒಂದು ದೊಡ್ಡ ಸಾಹಸವಾಗಿ ಕಂಡಿತ್ತು. ಟೈಪಿಂಗ್ ಇನ್ಸ್‌ಟಿಟ್ಯೂಟಿನಲ್ಲಿ ಟ್ಯೂಟರ್ ಆಗಿದ್ದ ವಳು. ಈಗ ಕಲಿತದ್ದನ್ನೆಲ್ಲ ಮರೆತು ಮತ್ತೆ ಮೊದಲಿ ನಿಂದ ಜೂನಿಯರ್ ವಿದ್ಯಾರ್ಥಿನಿಯಂತೆ ಕಲಿಯಬೇಕಾದ ಪರಿಸ್ಥಿತಿ ಎದುರಾದಾಗ ಇದರ ಸಹವಾಸವೇ ಬೇಡ ಅನ್ನಿಸಿಬಿಟ್ಟಿತ್ತು. ಆದರೆ ಮೊಟ್ಟ ಮೊದಲ ಬಾರಿಗೆ ಕನ್ನಡ ಅಕ್ಷರಗಳನ್ನು ಕಂಪ್ಯೂಟರಿನಲ್ಲಿ ನೋಡಿ ಖುಷಿಯಾಗಿ ಹೋಗಿತ್ತು.

ವಾರಗಳು ಕಳೆದು, ತಿಂಗಳು ತುಂಬುವ ಮೊದಲೇ ನಿಧನಿಧಾನಕ್ಕೆ ಒಂದೊಂದೇ ಅಕ್ಷರಗಳನ್ನು ಕೂಡಿಸಿ ಸಾಲುಗಟ್ಟಿಸಿ, ಪ್ಯಾರಾ ಗಳನ್ನು ಮಾಡಿ, ಪುಟಗಳನ್ನು ದಾಟುವ ಹೊತ್ತಿಗೆ ಕಂಪ್ಯೂಟರ್ ಅಂದರೇನೆಂಬುದು ಗ್ರಹಿಕೆಗೆ ಬಂದು, ಒಂದು ಸಾವಿರ
ರುಪಾಯಿಯ ಸಂಬಳ ಕೈ ಸೇರಿತ್ತು. ಕಲಿಯುವವರೆಗೂ ಬ್ರಹ್ಮವಿದ್ಯೆ, ಕಲಿತ ನಂತರ ಕೋತಿ ವಿದ್ಯೆ ಅನ್ನುವಂತೆ ಲೀಲಾಜಾಲವಾಗಿ ಕಣ್ಮುಚ್ಚಿಯೂ ರಾಶಿ ರಾಶಿ ಅಕ್ಷರಗಳನ್ನು ಮೂಡಿಸುವ ಕಲೆ ಕರಗತವಾಗಿ ಹೋಯ್ತು.

ಆದರೆ ಮತ್ತದೇ ಏಕತಾನತೆ. ದಿನ ಬೆಳಗಾದರೆ ಟೇಬಲ್ಲಿನ ಮುಂದೆ ಕಾದು ಕುಳಿತಿರುತ್ತಿದ್ದ ಅಕ್ಷರಗಳ ರಾಶಿ! ಏನಿದೆ ಈ ಅಕ್ಷರಗಳ ಒಳಗೆ ಎನ್ನುವ ಕುತೂಹಲದಿಂದಅಕ್ಷರಗಳನ್ನು ಮೂಡಿಸುವಾಗ ಓದಲಾರಂಭಿಸಿದೆ. ಓದುತ್ತ ಓದುತ್ತ ಸಾಕಷ್ಟು ವಿಷಯಗಳು ಗ್ರಹಿಕೆಗೆ ಬರಲಾರಂಭಿಸಿ ದವು. ವ್ಯಕ್ತಿಗಳು, ವ್ಯಕ್ತಿತ್ವಗಳು, ಬದ್ಧತೆ, ನಿಷ್ಠುರತೆ, ಬೂಟಾಟಿಕೆ, ಮುಖವಾಡಗಳು, ಸಮಸ್ಯೆಗಳು, ಪರಿಹಾರ ಗಳು, ಸಮಾಧಾನಗಳು, ಚಿಂತನೆಗಳು, ಕವಿತೆ, ಸಂಗೀತ, ಸಾಹಿತ್ಯ, ಸಂವೇದನೆ, ಬದುಕು, ಬವಣೆ, ನೋವು, ನಲಿವು, ಆಸೆ, ಆಕಾಂಕ್ಷೆ, ಮಹತ್ವಾಕಾಂಕ್ಷೆ, ಪ್ರೀತಿ, ಪ್ರೇಮ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಮಾಟ-ಮಂತ್ರ, ವಂಚನೆ, ನೆತ್ತರ ಲೋಕ, ಇತಿಹಾಸ, ವಿಜ್ಞಾನ, ದೇಶ, ಭಾಷೆ, ನೆಲದ ಪರಿಚಯದೊಂದಿಗೆ ಅಲ್ಲಿನ ಆಚಾರ-ವಿಚಾರಗಳು, ನಂಬಿಕೆಗಳು, ಮೂಢ ನಂಬಿಕೆಗಳು, ನಡೆ-ನುಡಿಗಳು, ರೋಷ-ಆವೇಷಗಳು, ವೇಷ-ಭೂಷಣಗಳು, ಕಲೆ-ಸಂಸ್ಕೃತಿಗಳು, ಕವಿಗಳು, ಸಾಹಿತಿಗಳು, ಪತ್ರಕರ್ತರು, ಅಂಕಣಕಾರರು, ಬರಹಗಾರರು, ಸಾಧಕರು, ಚಿತ್ರಜಗತ್ತು, ಕಿರುತೆರೆ ಜಗತ್ತು, ಅಲ್ಲಿನ ಒತ್ತಡ, ತಳಮಳ, ಅತಂತ್ರತೆ, ಯಶಸ್ಸು, ವರ್ಚಸ್ಸು ಎಲ್ಲ ವಿಷಯಗಳೂ ಗ್ರಹಿಕೆಗೆ ಬರಲಾರಂಭಿಸಿದವು.

ಕೆಲವು ಮೆಚ್ಚುಗೆಯಾದರೆ ಮತ್ತೆ ಕೆಲವು ಅಸಮಧಾನಗಳನ್ನುಂಟು ಮಾಡಿದವು. ಕೆಲವನ್ನು ಒಪ್ಪಿಕೊಳ್ಳಲಾಗಲೇ ಇಲ್ಲ. ಇಷ್ಟೆಲ್ಲದರ ನಡುವೆ ನನ್ನ ಆಸಕ್ತಿ ಬೆಳೆದದ್ದು ವ್ಯಕ್ತಿಗಳೊಳಗಿನ ವ್ಯಕ್ತಿತ್ವಗಳೆಡೆಗೆ. ಅವರ ಸಾಧನೆಗಳೆಡೆಗೆ! ಹೀಗಾಗಿ ಅದಕ್ಕೆ ಬೇಕಾದಂತಹ ಪೂರಕ ವಿಷಯಗಳನ್ನು ಗ್ರಹಿಸುತ್ತಾ ಬರಲಾರಂಭಿಸಿದೆ. ನೋಡನೋಡುತ್ತ ನನ್ನ ವ್ಯಕ್ತಿತ್ವದಲ್ಲೇ ಅದೆಷ್ಟೊಂದು
ಬದಲಾವಣೆಯಾಗುತ್ತಿರುವುದು ಗ್ರಹಿಕೆಗೆ ಬರಲಾರಂಭಿಸಿತು.

ರುಚಿ- ಅಭಿರುಚಿಗಳು ಬದಲಾದವು. ಪತ್ರಿಕೆಯ ಪುಟಗಳಂತೆಯೇ ನನ್ನ ಬದುಕನ್ನೂ ಸುಂದರಗೊಳಿಸಿಕೊಳ್ಳುತ್ತ ನಡೆದೆ. ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನೆಸೆಯುತ್ತ, ಅವಕಾಶಗಳನ್ನು ಕಸಿಯುತ್ತ, ಹಾಸ್ಯ, ಅಪಹಾಸ್ಯ ಮಾಡುತ್ತ ಬೆನ್ನಟ್ಟುತ್ತಿದ್ದ ಬದುಕಿಗೆ ದೃಢವಾಗಿ ನಿಂತು ಉತ್ತರಿಸುವುದನ್ನು ಕಲಿತೆ. ಉಸಿರಿರುವವರೆಗೂ ಈ ಕಲಿಕೆ ನಿರಂತರ.

ಕಲಿಕೆಯ ಹಂತದಲ್ಲಿರುವ ಮಕ್ಕಳಿಗೆ ಈ ಗ್ರಹಿಕೆ ಎಂಬುದು ಬಹಳ ಮುಖ್ಯವಾದುದು. ಎಲ್ಲ ಮಕ್ಕಳೂ ಎಲ್ಲ ವಿಷಯಗಳಲ್ಲೂ ಪರಿಣಿತರಾಗಿರುವುದಿಲ್ಲ. ಕೆಲವರು ಗಣಿತ ಪ್ರಿಯರಾದರೆ, ಕೆಲವರು ಸಮಾಜಪ್ರಿಯರು, ಮತ್ತೆ ಕೆಲವರು ವಿಜ್ಞಾನಪ್ರಿಯರು. ಇನ್ನು ಕೆಲವರಿಗೆ ಕನ್ನಡ ಕಷ್ಟವೆನಿಸಿದರೆ, ಮತ್ತೆ ಕೆಲವರಿಗೆ ಇಂಗ್ಲಿಷ್, ಹಿಂದಿ, ಸಂಸ್ಕೃತವನ್ನು ಕಲಿಯುವುದು ಕಷ್ಟ. ಅನ್ಯ ದೇಶದ
ಭಾಷೆಗಳನ್ನು ಕೆಲವರು ಸರಾಗವಾಗಿ ಕಲಿತರೆ, ಕೆಲವರಿಗೆ ಏನೇ ಮಾಡಿದರೂ ಕಲಿಯುವುದು ಸಾಧ್ಯವಾಗುವುದಿಲ್ಲ. ಕಾರಣ ಆ ವಿಷಯಗಳೆಡೆಗಿನ ಆಸಕ್ತಿ ಹಾಗೂ ಗ್ರಹಿಕೆ.

ಇದು ನಮ್ಮ ದಿನನಿತ್ಯದ ಪ್ರತಿಯೊಂದು ಸಣ್ಣ ಹಾಗೂ ಬೃಹತ್ ಪ್ರಮಾಣದ ಕೆಲಸ ಕಾರ್ಯಗಳ ನಡುವೆಯೂ ಅನುಭವಕ್ಕೆ ಬರುವಂಥದ್ದು. ಪ್ರತಿಯೊಂದು ವೃತ್ತಿಯಲ್ಲೂ ಈ ಗ್ರಹಿಕೆಯೆಂಬ ವಿಷಯ ಬಹಳ ಮಹತ್ತರವಾದುದು. ಒಂದೇ ವಿಷಯವನ್ನು ನೂರು ಜನ ನೂರು ರೀತಿಯಲ್ಲಿ ಗ್ರಹಿಸುವ ಸಾಧ್ಯತೆ ಇರುತ್ತದೆ. ಅದರಲ್ಲೂ ತನಿಖಾ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುವ ವೃತ್ತಿನಿರತರು ಹಾಗೂ ಅಧಿಕಾರಿಗಳ ಗ್ರಹಿಕೆ ಅತ್ಯಂತ ಪರಿಣಾಮಕಾರಿಯಾದ ಪ್ರಭಾವವನ್ನು ಬೀರುವಂತಹುದಾಗಿರುತ್ತದೆ.

ಕ್ಷತ್ರಿಯರಲ್ಲದವರಿಗೆ ಬಿಲ್ವಿದ್ಯೆಯನ್ನು ಹೇಳಿಕೊಡಲು ಇಚ್ಛಿಸದ ದ್ರೋಣಾಚಾರ್ಯರ ನಿರಾಕರಣೆಯ ನಂತರವೂ ನಿರಾಶನಾಗದೆ ದಿನವೂ ದೂರದಲ್ಲಿ ನಿಂತು ದ್ರೋಣಾಚಾರ್ಯರು ಕೌರವರಿಗೆ, ಪಾಂಡವರಿಗೆ ಹೇಳಿಕೊಡುತ್ತಿದ್ದ ವಿದ್ಯೆಯನ್ನು ಗ್ರಹಿಸಿಕೊಂಡು ಕಾಡಿಗೆ ಮರಳಿ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಅವರನ್ನೇ ತನ್ನ ಮಾನಸ ಗುರುವೆಂದು ಭಾವಿಸಿ ಶ್ರದ್ಧೆಯಿಂದ ಶಬ್ದವೇದಿ ವಿದ್ಯೆಯನ್ನು ಅಭ್ಯಾಸ ಮಾಡುವಾಗ ತನ್ನ ಏಕಾಗ್ರತೆಗೆ ಭಂಗ ತಂದ ಬೊಗಳುತ್ತಿದ್ದ ನಾಯಿಯ ಕಡೆಗೆ ನೋಡದೆಯೇ ಬಾಣ ಪ್ರಯೋಗ ಮಾಡಿ ನಾಯಿಯ ಬೊಗಳುವಿಕೆಯನ್ನು ನಿಲ್ಲಿಸಿದ ಏಕಲವ್ಯನ ಗ್ರಹಿಕೆಯ ಹಿಂದಿರುವ ಶ್ರದ್ಧೆ ಅದೆಷ್ಟು ಅಪಾರವಾದದ್ದು!

ಸೂರ್ಯೋದಯವಾಗುತ್ತಿದ್ದಂತೆ ಚಿಲಿಪಿಲಿಗುಟ್ಟುತ್ತ ಆಹಾರವನ್ನು ಹುಡುಕುತ್ತಾ ತಮ್ಮ ಗೂಡಿನಿಂದ ಹೊರ ಬೀಳುವ ಹಕ್ಕಿಗಳ ಹಿಂಡು ಹೇಗೆ ಸಂಜೆಯಾಗುತ್ತಿದ್ದಂತೆಯೇ ಅಲ್ಲಿ ಯಾವ ಮುಖ್ಯರಸ್ತೆ, ಅಡ್ಡರಸ್ತೆಗಳ ಫಲಕಗಳಿಲ್ಲ ದಿದ್ದರೂ ದಾರಿತಪ್ಪದೇ ತಮ್ಮ ತಮ್ಮ ಗೂಡಿಗೆ ಮರಳಿ ಬರುತ್ತವೆ? ಅಂಚೆ ವ್ಯವಸ್ಥೆ ಆರಂಭವಾಗುವ ಮುನ್ನ ಸಂದೇಶಗಳನ್ನು ರವಾನಿಸಲು ಪಾರಿವಾಳಗಳ
ಕಾಲಿಗೆ ಸಂದೇಶದ ಪತ್ರವನ್ನು ಕಟ್ಟಿ ಹಾರಿಬಿಡುತ್ತಿದ್ದರಂತೆ.

ಅದು ಹೇಗೆ ಅವರು ಬಯಸಿದ ಸ್ಥಳಕ್ಕೆ ಹೋಗಿ ಸಂದೇಶವನ್ನು ಮುಟ್ಟಿಸಿ ಮತ್ತೆ ಮರಳಿ ಬರುತ್ತಿತ್ತು? ನಾವೆಲ್ಲ ಸಣ್ಣ ವಯಸ್ಸಿನಲ್ಲಿ ಕೇಳಿದ ಬಾಯಾರಿದ ಕಾಗೆ, ತಳದಲ್ಲಿದ್ದ ಶೇಖರವಾಗಿದ್ದ ನೀರನ್ನು ಮೇಲೆ ತರಲು ನೀರಿನ ಹೂಜಿಗೆ ಕಲ್ಲು ಹಾಕಿದ ಜಾಣತನದ ಕತೆ! ಅದಕ್ಕೆ ಆ ಅರಿವು ಎಲ್ಲಿಂದ ಮೂಡಿತು ಅನ್ನುವ ವಿಸ್ಮಯ! ಅದಕ್ಕಿಂತ ಹೆಚ್ಚಿನ ಸೋಜಿಗವೆನಿಸಿದ್ದು ಸಂತಾನೋತ್ಪತ್ತಿಗಾಗಿ
ಋತುಗಳಿಗನು ಗುಣವಾಗಿ ಪ್ರತೀ ವರುಷ ದೇಶ-ದೇಶ ಗಳನ್ನು ದಾಟಿ ನಿಶ್ಚಿತ ಪ್ರದೇಶಕ್ಕೇ ವಲಸೆ ಬರುವ ಹಕ್ಕಿಗಳ ದಿಕ್ಕನ್ನು ಅರಿಯುವ ಗ್ರಹಿಕೆಯ ಅದ್ಭುತ ಪ್ರಕ್ರಿಯೆ!

ಅರಣ್ಯಗಳಲ್ಲಿ ದಟ್ಟವಾದ ಗಿಡ,ಮರ, ಪೊದೆಗಳ ನಡುವೆ ಕತ್ತಲಲ್ಲೂ ನೀರನ್ನು, ಆಹಾರವನ್ನು ಹುಡುಕುತ್ತಾ ಬರುವ ಪ್ರಾಣಿಗಳು ಮತ್ತೆ ತಮ್ಮ ನೆಲೆಗೆ ಮರಳುವ ಪರಿ! ಕಳ್ಳನನ್ನು ವಾಸನೆಯ ಮೂಲಕ ಪತ್ತೆ ಹಚ್ಚುವ ವಿಶೇಷ ಅರಿವಿರುವ ಶ್ವಾನಗಳು. ಇದಕ್ಕೆಲ್ಲ ಯಾವ ಗುರುವಿರುತ್ತಾರೆ? ನಮ್ಮ ಜ್ಞಾನ, ಅನುಭವ ಹೆಚ್ಚಾದಷ್ಟೂ ನಮ್ಮ ಗ್ರಹಿಕೆಯೂ ಹೆಚ್ಚು ಗಹನತೆ ಹಾಗೂ ನಿರ್ದಿಷ್ಟತೆ ಯಿಂದ ಕೂಡಿರುತ್ತದೆ. ಗ್ರಹಿಕೆ ಅನ್ನುವುದು ದಿನದಿಂದ ದಿನಕ್ಕೆ ವಿಸ್ತಾರವಾಗುತ್ತ ಹೋಗಬೇಕು. ಇಲ್ಲದಿದ್ದರೆ ಅದು ಕೇವಲ
ಕೆಲವು ವಿಷಯಗಳಿಗೆ ಮಾತ್ರ ಸೀಮಿತಗೊಂಡು ನಿಂತ ನೀರಾಗಿ ಬಿಡುವ ಸಾಧ್ಯತೆ ಇರುತ್ತದೆ. ಗ್ರಹಿಕೆ ಎನ್ನುವುದು ಒಂದು ಅರಿವಿನ ಕಾರ್ಯವಾಗಿದ್ದು, ಅದು ನಮ್ಮ ಪಂಚೇಂದ್ರಿಯಗಳ ಮೂಲಕ ಅನುಭವಕ್ಕೆ ಬರುವ ಪ್ರಕ್ರಿಯೆ. ನಮ್ಮ ಸುತ್ತಲಿರುವ ಜಗತ್ತಿನಲ್ಲಿ ನಮ್ಮ ಅನುಭವವನ್ನು ಸೃಷ್ಟಿಸುತ್ತಾ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಗ್ರಹಿಕೆ ಒಂದು ವಿದ್ಯಮಾನ ಅಥವಾ ವಸ್ತುವಿನ ಪ್ರತಿಬಿಂಬವಾಗಿದೆ. ಇದು ಮಾನವ ಮನಸ್ಸಿನ ಪ್ರಮುಖ ಜೈವಿಕ ಪ್ರಕ್ರಿಯೆ ಯಾಗಿದೆ. ಈ ಕಾರ್ಯವನ್ನು ವಸ್ತುವಿನ ಸಮಗ್ರ ಚಿತ್ರದ ರಚನೆಯಲ್ಲಿ ಒಳಗೊಂಡಿರುವ ಇಂದ್ರಿಯಗಳ ಮೂಲಕ ಪಡೆಯಲಾ
ಗುತ್ತದೆ. ಗ್ರಹಿಕೆಯಿಂದ ಹೊರಹೊಮ್ಮುವ ವಿವಿಧ ಸಂವೇದನೆಗಳ ಮೂಲಕ ಇದು ವಿಶ್ಲೇಷಕಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ದೃಷ್ಟಿಹೀನರು ಸ್ಪರ್ಶ ಗಳಿಂದ, ದನಿಗಳಿಂದ, ತಮ್ಮದೇ ಆದ ಕಲ್ಪನೆಗಳ ಮೂಲಕ ಗ್ರಹಿಸಬಲ್ಲರು. ಇದರಿಂದ ಮಾಹಿತಿಯು ಇಂದ್ರಿಯಗಳ ಮೂಲಕ ಮಾತ್ರವಲ್ಲದೆ ತಿಳುವಳಿಕೆಯ ಮೂಲಕವೂ ಪ್ರತಿಫಲಿಸುತ್ತದೆ ಎಂಬುದನ್ನು ಅರಿಯಬಹುದು.

ರಚ್ಚೆ ಹಿಡಿದು ಅಳುತ್ತಿರುವ ಮಗು ತನ್ನ ತಾಯಿಯ ಮಡಿಲಿಗೆ ಬಂದ ಕೂಡಲೇ ನಿಲ್ಲಿಸುವ ಅಳುವಿನ ಹಿಂದಿರುವ ಸುರಕ್ಷತಾ ಭಾವನೆಯ ಗ್ರಹಿಕೆ, ನಮ್ಮ ಪ್ರೀತಿಪಾತ್ರರು, ಅತ್ಯಾಪ್ತರು ತೊಂದರೆಯಲ್ಲಿ ಸಿಲುಕಿದಾಗ ನಮ್ಮ ಮನದಲ್ಲಿ ಉಂಟಾಗುವ ಆತಂಕದ
ಸೂಚನೆಯ ಗ್ರಹಿಕೆ, ನಾವು ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳದಂತೆ ನಮ್ಮನ್ನು ಎಚ್ಚರಿಸುವ ನಮ್ಮ ಅಂತಃಪ್ರಜ್ಞೆಯ ಗ್ರಹಿಕೆ, ಯಾರನ್ನಾದರೂ ತೀವ್ರವಾಗಿ ನೆನಪು ಮಾಡಿಕೊಳ್ಳುತ್ತಿರು ವಾಗ ಅವರೇ ಫೋನು ಮಾಡಿ ಮಾತನಾಡುವ ಟೆಲಿಪತಿಯ ಗ್ರಹಿಕೆ, ಕವಿತೆಯೊಳಗೆ ಅಡಗಿರುವ ಒಳ ಅರ್ಥವನ್ನು ಅರಿಯುವ ಗ್ರಹಿಕೆ, ಮಾತಿನ ಹಿಂದಿರುವ ಉದ್ದೇಶವನ್ನು ಅರಿಯುವ ಗ್ರಹಿಕೆ,
ಮನಸುಗಳ ಹಿಂದಿರುವ ಭಾವನೆಗಳನ್ನು ಅರಿಯುವ ಗ್ರಹಿಕೆ, ಹೀಗೆ ಮುಖ ನೋಡಿ ಮರುಳಾಗದೆ, ಗುಣವನ್ನು ಅರಿಯುವ ಗ್ರಹಿಕೆಯ ನಾನಾ ಮುಖಗಳನ್ನು ಅರಿಯುವ ಗ್ರಹಿಕೆ ನಮ್ಮ-ನಿಮ್ಮೆಲ್ಲರದಾಗಿರಲಿ.