Thursday, 28th January 2021

ಡಿ.14, 15 ರಂದು ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಚರ್ಚೆ: ವಿಧಾನ ಸಭೆಯ ಸಭಾಧ್ಯಕ್ಷ

ಬೆಂಗಳೂರು: ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಕುರಿತ ಡಿ.14 ಮತ್ತು 15 ರಂದು ರಾಜ್ಯ ವಿಧಾನಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಡಿ.7 ರಿಂದ 15 ರ ವರೆಗೆ ನಡೆಯಲಿರುವ 15 ನೇ ವಿಧಾನಸಭೆಯ ಎಂಟನೇ ಅವೇಶನದ ಮುಖ್ಯಾಂಶಗಳ ಕುರಿತು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ನ. 25,26 ರಂದು ಗುಜರಾತ್‍ನ ಕೆವಾಡಿಯಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ವಿಷಯವನ್ನು ಗಂಭೀರ ವಾಗಿ ಪರಿಗಣಿಸಿ ಭಾರತದಲ್ಲೇ ಪ್ರಪಥಮವಾಗಿ ಈ ವಿಷಯವನ್ನು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಚಿಂತನ-ಮಂಥನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ರಾಜ್ಯ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಸ್ತಾಪಿಸಿದ್ದು, ಎಲ್ಲರ ಸಹಕಾರವನ್ನು ಕೋರಿರುವುದಾಗಿ ಸಭಾಧ್ಯಕ್ಷರು ತಿಳಿಸಿದರು.

ಡಿ.7 ರಿಂದ ಪ್ರಾರಂಭವಾಗುವ ಚಳಿಗಾಲದ ಅವೇಶನದಲ್ಲಿ ಪ್ರಶ್ನೋತ್ತರ ಒಳಗೊಂಡಂತೆ ಎಲ್ಲಾ ಕಾರ್ಯಕಲಾಪಗಳು ಇರುತ್ತವೆ. ಸದನದಲ್ಲಿ ಹತ್ತು ವಿಧೇಯಕಗಳು ಮಂಡನೆಗೆ ಸಿದ್ಧವಿವೆ.

Leave a Reply

Your email address will not be published. Required fields are marked *