Friday, 2nd June 2023

ಕೋವಿಡ್-19 ಲಾಕ್ ಡೌನ್ ಸಂತ್ರಸ್ತರಿಗೆ ಶ್ರೀ ಕಣ್ವ ಮಠ ಆಡಳಿತ ಮಂಡಳಿ ಟ್ರಸ್ಟ್‌ ನ ನೆರವು :

ಯಲಹಂಕ :
ಯಲಹಂಕದ ರೈತರ ಸಂತೆ ಆವರಣದ ಸಮೀಪವಿರುವ ಶ್ರೀ ಕಣ್ವ ಮಠದ ಆಡಳಿತ ಮಂಡಳಿ ಟ್ರಸ್ಟ್ ವತಿಯಿಂದ ಕೋವಿಡ್-19 ಲಾಕ್ ಡೌನ್ ಸಂತ್ರಸ್ತರಿಗೆ ಆಹಾರದ ಪ್ಯಾಕೇಟ್, ದಿನಸಿ ಕಿಟ್, ಹಣ್ಣು, ತರಕಾರಿ, ಬಿಸ್ಕಿಟ್, ಬ್ರೆಡ್ ಸೇರಿದಂತೆ ಸಂತ್ರಸ್ತರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಲಾಕ್ ಡೌನ್ ಆರಂಭದ ದಿನದಿಂದಲೂ ನೀಡಲಾರಂಭಿಸಿದ್ದು, ಲಾಕ್ ಡೌನ್ ಮುಕ್ತಾಯದ ವರೆಗೂ ತಮ್ಮ  ಕೈಲಾಗುವ ನೆರವು ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ ಎಂದು ಅಧ್ಯಕ್ಷರಾದ ವೈ. ಎನ್‌. ಗುರುರಾಜಾರಾವ್‌ ತಿಳಿಸಿದ್ದಾರೆ.
ಶ್ರೀ ಕಣ್ವ ಮಠ  ಆಡಳಿತ ಮಂಡಳಿ ಟ್ರಸ್ಟ್ ನ  ಕಾರ್ಯದರ್ಶಿಗಳಾದ ಡಾ.ವೈ.ವಿ.ನಾಗರಾಜ್ ಮಠದ ಆಡಳಿತ ಮಂಡಳಿಯ ನೆರವಿನ ಜೊತೆಗೆ ತಮ್ಮ ಹಲವಾರು  ಸ್ನೇಹಿತರ ಸಹಕಾರದೊಂದಿಗೆ ಸಂತ್ರಸ್ತರಿಗೆ ಕೈಲಾದ ನೆರವು ನೀಡುತ್ತಿದ್ದಾರೆ.
ಸ್ಲಂಗಳು, ಬಡವರೇ ನೆಲೆಸಿರುವ ಪ್ರದೇಶಗಳಿಗೆ ಭೇಟಿ ನೀಡಿ,  ನಿಜವಾದ ಸಂತ್ರಸ್ತರನ್ನು  ಹುಡುಕಿ ನೆರವು ನೀಡುತ್ತಿದ್ದಾರೆ.
ಇವರ ನೆರವಿನ ಕೈಗಳು ಬರಿಯ ಜನರಿಗಷ್ಟೇ ಸೀಮಿತವಾಗದೆ ಆಹಾರಕ್ಕಾಗಿ ಆಹಾಕಾರ ಎದುರಿಸುತ್ತಿರುವ ಬೀದಿ ನಾಯಿಗಳು, ಬೆಟ್ಟ, ದೇವಾಲಯಗಳ ಬಳಿ ಕಾಣಸಿಗುವ ಕೋತಿಗಳು, ಮರಿ ಕೋತಿಗಳು, ಅಳಿಲು ಸೇರಿದಂತೆ ವಿವಿಧ ಪ್ರಾಣಿಗಳಿಗೂ ಆಹಾರ ನೀಡುತ್ತಾ ಮೂಕ ಪ್ರಾಣಿಗಳ ಹಸಿವಿನ ದಾಹ ತೀರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ.
ಹಾಗೆಯೇ ಕೊರೋನ ಸೋಂಕು, ಅದರ ಹರಡುವಿಕೆ, ಹರಡುವಿಕೆ ತಡೆಗಟ್ಟಲು ಅನುಸರಿಸಬೇಕಿರುವ ಕ್ರಮಗಳ ಕುರಿತು ಕನಿಷ್ಠ ತಿಳಿವಳಿಕೆ ಹಾಗೂ ಜಾಗೃತಿಯನ್ನು ಮೂಡಿಸವುದರಲ್ಲಿ ಸಹ ಇವರ ತಂಡ ನಿರತವಾಗಿದ್ದು, ಡಾ।ಕೆ.ಎಸ್‌.ರವೀಂದ್ರನಾಥ್‌, ವಿಶ್ರಾಂತ ಕುಲಪತಿಗಳು, RGUHS, SJIC ಹೃದಯ ರೋಗ ತಜ್ಞರು, ಸಲಹೆಗಾರರಾಗಿ ಇವರೊಟ್ಟಿಗಿದ್ದು,  ಇವರ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.  ವೈ. ಎನ್‌. ಸೋಮಸುಂದರ್‌, ಎನ್‌. ವೆಂಕಟೇಶಮೂರ್ತಿ, ವೈ. ವಿ. ಶ್ರೀನಿವಾಸ್‌ ಅನೇಕರಿದ್ದಾರೆ.
ಈ ಕುರಿತು ಶ್ರೀ ಕಣ್ವ ಮಠ ಆಡಳಿತ ಮಂಡಳಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ವೈ.ವಿ.ನಾಗರಾಜ್ ಮಾತನಾಡಿ ಆಹಾರ ಮತ್ತು ನೀರಿಗೆ ಯಾವ ಜಾತಿ, ಧರ್ಮ, ಮತ,ಪಂಥಗಳ ಬೇಧವಿಲ್ಲ, ಆಹಾರ , ಮನುಷ್ಯ , ಪ್ರಾಣಿ, ಪಕ್ಷಿಗಳ ಮೂಲಭೂತ ಅವಶ್ಯಕತೆ ಯಾಗಿದ್ದು, ಆಹಾರದ ದಾಹ ತಣಿಸುವುದು ಅತ್ಯಂತ ಪುಣ್ಯದ ಕಾರ್ಯವಾಗಿದ್ದು, ಕರೋನಾ ಮಹಾಮಾರಿ ದೇಶಾದ್ಯಂತ ತನ್ನ ಕಬಂದ ಬಾಹುಗಳನ್ನು ವಿಸ್ತರಿಸಿ ರುದ್ರ ನರ್ತನ ಮಾಡುತ್ತಿರುವ ಇಂತಹ ವಿಷಮ ಕಾಲದಲ್ಲಿ ಅನ್ನದಾನ ಮತ್ತು ವೈಜ್ಞಾನಿಕವಾಗಿ ಸಾಮಾನ್ಯ ಕನಿಷ್ಠ ತಿಳುವಳಿಕೆಯ ಜಾಗೃತಿ  ಮೂಡಿಸುವುದು ಅತ್ಯವಶ್ಯಕ ಎಂದರು.
error: Content is protected !!