Sunday, 19th May 2024

ಕ್ವಾರಂಟೈನ್‌ ವಾಸಿಗಳಿಗೆ ಊಟ, ಅಗತ್ಯ ಸೌಕರ್ಯಕ್ಕೆ ಕ್ರಮ

ರಾಯಚೂರು:

ಕೊರೋನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ಪ್ರಸ್ತುತ ಲಾಕ್‌ಡೌನ್ ಜಾರಿಯಲ್ಲಿದೆ. ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನದಂತೆ ಅಂತಾರಾಜ್ಯದ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರೆ ವ್ಯಕ್ತಿಗಳು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ.

ಈಗಾಗಲೇ ಮಧ್ಯಪ್ರದೇಶದ ನರಸಿಂಗ್‌ಪುರಕ್ಕೆ ೩೧ ಜನರನ್ನು ಹಾಗೂ ರಾಜಸ್ಥಾನದ ಬಿನ್‌ಮಾಳ್‌ಕ್ಕೆ ೭೦ ವಲಸೆ ಕಾರ್ಮಿಕರನ್ನು ಅವರ ಸ್ವ-ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ ಹಾಗೂ ಬಿಹಾರ ರಾಜ್ಯದ ೨೯೦ ಕಾರ್ಮಿಕರು ಹಾಗೂ ಉತ್ತರ ಪ್ರದೇಶದ ೧೨೦ ಜನರನ್ನು ಸ್ವ-ರಾಜ್ಯಕ್ಕೆ ಕಳುಹಿಸಿಕೊಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಹೊರ ರಾಜ್ಯದಿಂದ ರಾಯಚೂರು ಜಿಲ್ಲೆಗೆ ಬಂದ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಕಟ್ಟಡದಲ್ಲಿ ಊಟದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ವಾರಂಟೈನ್‌ಗೊಳಗಾದ ವ್ಯಕ್ತಿಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಕಲಂ ೩೪ (m) ರನ್ವಯ ಜಿಲ್ಲಾಧಿಕಾರಿಯವರ ಕಚೇರಿಯಿಂದ ಸಲಹಾ ಸಮಿತಿ ರಚಿಸಿ, ಸಮಿತಿಯ ನಿರ್ಣಯದಂತೆ ತಲಾ ಒಬ್ಬರಂತೆ ಒಂದು ದಿನಕ್ಕೆ ದೊಡ್ಡವರಿಗೆ ೭೫ ರೂ.ಗಳು ಮತ್ತು ೧೪ ವರ್ಷದೊಳಗಿನ ಮಕ್ಕಳಿಗೆ ೫೦ ರೂ.ಗಳನ್ನು ಅಡುಗೆ ಸಹಾಯಕರೊಂದಿಗೆ ಅಡುಗೆ ಮಾಡಿಸಿ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸ್ವಸಹಾಯ ಗುಂಪಿನವರು ತಯಾರಿಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಕಿಶೋರಿಯರಿಗೆ ಹಾಗೂ ಮಹಿಳೆಯರಿಗೆ ತಲಾ ೫ ರಂತೆ ವಿತರಿಸುವ ಕ್ರಮಕೈಗೊಳ್ಳಲಾಗಿದೆ. ಈ ಮೊತ್ತವು “ಸೇವಾ ಸಿಂಧು” ಆ್ಯಪ್‌ನಲ್ಲಿ ನೋಂದಣಿ ಯಾದವರಿಗೆ ಮಾತ್ರ ಲಭ್ಯವಿರುವ ಎಸ್.ಡಿ.ಆರ್.ಎಫ್ ನಿಧಿಯ ಅನುದಾನದಡಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ತಹಸೀಲ್ದಾರರು ವೆಚ್ಚ ಮಾಡಬಹುದಾಗಿದೆ.

ಅದರೊಂದಿಗೆ ದಾನಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಯವರು ಸ್ವಯಂಪ್ರೇರಿತರಾಗಿ ಮುಂದೆ ಬಂದಲ್ಲಿ ಅವರ ಸೇವೆಯನ್ನು ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!