Friday, 24th May 2024

ಜಿಲ್ಲಾಧಿಕಾರಿಗಳಿಂದ ರಿಮ್ಸ್‍ನಲ್ಲಿ ಕೋವಿಡ್-19 ಲ್ಯಾಬ್ ಕಾಮಗಾರಿ ಪರಿಶೀಲನೆ

ರಾಯಚೂರು:

ಕೋವಿಡ್-19 ಶಂಕಿತರ ಗಂಟಲಿನ ದ್ರವವನ್ನು ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ಪ್ರಯೋಗಾಲಯವನ್ನು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುತ್ತಿದ್ದು, ಅದರ ಕಾಮಗಾರಿಗಳನ್ನು ಪರಿಶೀಲನೆ ನಡೆಸಲು ಮೇ.13ರ ಬುಧವಾರ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ರಿಮ್ಸ್ ಡೀನ್ ಬಸವರಾಜ ಪೀರಾಪುರ ಅವರೊಂದಿಗೆ ಕೋವಿಡ್-19 ಪ್ರಯೋಗಾಲಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿಯವರು, ಆದಷ್ಟು ಶೀಘ್ರವಾಗಿ ಜಿಲ್ಲೆಯಲ್ಲಿ ಲ್ಯಾಬ್ ಕಾರ್ಯಾರಂಭಿಸಬೇಕು, ನಿಯಮಾನುಸಾರ ಸಿವಿಲ್ ಹಾಗೂ ತಾಂತ್ರಿಕ ಕಾಮಗಾರಿಗಳನ್ನು ಪೂರ್ಣಗೊಳಿ, ಪ್ರಯೋಗಾಲಯದ ಉಪಕರಣಗಳನ್ನು ಅಳವಡಿಸುವಂತೆ ನಿರ್ದೇಶನ ನೀಡಿದರು.

ಈಗಾಗಲೇ ಪ್ರಯೋಗಾಲಯ ಸ್ಥಾಪನೆಯ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ, ಲ್ಯಾಬ್ ಉಪಕರಣಗಳು ಬಂದಿದ್ದು, ಅವುಗಳನ್ನು ಅಳವಡಿಸುವ ಕಾರ್ಯವಾಗಬೇಕಿದ್ದು, ಅದಕ್ಕಾಗಿ ಬೆಂಗಳೂರಿನಿಂದ ಎಂಜಿನಿಯರುಗಳು ಮೇ.14ರ ಗುರುವಾರ ಬರಲಿದ್ದಾರೆ, ಎರಡರಿಂದ ಮೂರು ದಿನದೊಳಗೆ ಉಪಕರಣಗಳ ಅಳವಡಿಕೆ ಪೂರ್ಣಗೊಳ್ಳಲಿದೆ, ಪ್ರಯೋಗಾಲಯ ಸಿದ್ದಗೊಂಡ ನಂತರ ಐಸಿಎಂಆರ್‍ಗೆ ಅನುಮತಿ ಕೋರಲಾಗುವುದು, ಅಗತ್ಯ ಮೂಲಭೂತ ಸೌಕರ್ಯಗಳು ಸಿದ್ದಗೊಂಡಿರುವುದರಿಂದ ಅವರು ಕೂಡಲೇ ಅನುಮತಿ ನೀಡಲಿದ್ದಾರೆ, ಅಲ್ಲದೇ ಗಂಟಲಿನ ದ್ರವ ಪರೀಕ್ಷೆ ಮಾಡುವ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ಸಹ ಕೊಡಿಸಲಾಗಿದೆ ಎಂದು ರಿಮ್ಸ್ ಡೀನ್ ಬಸವರಾಜ ಪೀರಾಪುರ ಅವರು ತಿಳಿಸಿದರು.

ಪ್ರಯೋಗಾಲಯ ಕಾರ್ಯಾರಂಭಗೊಂಡ ನಂತರ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳು ಸಜ್ಜಾಗಿದ್ದಾರೆ, ಮೂರರಿಂದ ನಾಲ್ಕು ಗಂಟೆಯೊಳಗೆ ಕೋವಿಡ್-19ರ ಫಲಿತಾಂಶ ಬರಲಿದೆ ಎಂದವರು ಹೇಳಿದರು.

ಕ್ಯಾಷುಟೆಕ್‍ನ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಪಟ್ಟೇದ್, ಪ್ರಾಜೆಕ್ಟ್ ಎಂಜಿನಿಯರ್ ವಿಜಯ್ ಕುಮಾರ್ ಹಾಗೂ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!