Friday, 19th July 2024

ಡಾ.ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯೋತ್ಸವ

ಗದ್ದುಗೆಗೆ ವಿಶೇಷ ಪೂಜೆ, ಕಂಚಿನ ಪ್ರತಿಮೆ ಮೆರವಣಿಗೆ

ತುಮಕೂರು: ಡಾ.ಶ್ರೀ ಶಿವಕುಮಾರ ಶ್ರೀಗಳ 115ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ

ನಡೆನಾಡಿದ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ ಶಿವ ಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವ ದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗುತ್ತಿದ್ದಾರೆ.

ಇತ್ತ ಇನ್ನೊಂದೆಡೆ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ನೆರವೇರಿಸಲಾಗುತ್ತಿದೆ. ಬೆಳಿಗ್ಗೆ ಐದು ಗಂಟೆಯಿಂದಲೇ ವಿವಿಧ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಅಭಿಷೇಕ ನಡೆದಿವೆ. ‌ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.

ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಬಳಿಕ ಶ್ರೀಗಳ ಕಂಚಿನ ಪ್ರತಿಮೆ ಮೆರವಣಿಗೆ ಮಾಡಲಾಯಿತು. ಬಳಿಕ ಶ್ರೀಗಳ 115ನೇ ಜನ್ಮ ದಿನೋತ್ಸವದ ಅಂಗವಾಗಿ 115 ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಸಹ ನೆರವೇರಿಸಲಾಯಿತು.

ಸಿದ್ಧಗಂಗಾ_ ಮಠದಲ್ಲಿ ಇಂದು ಬೆಳಗ್ಗೆ 11 ಗಂಟೆಯ ವೇಳೆಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗುತ್ತಿದ್ದು ವಿಶೇಷ ಭದ್ರತೆ ಒದಗಿಸಲಾಗಿದೆ. ಅಮಿತ್ ಶಾ ಅವರ ಜೊತೆ ರಾಜ್ಯದ ವಿವಿಧ ಜನಪ್ರತಿನಿಧಿಗಳು, ನಾಯಕರು, ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದು ಭದ್ರತೆಗಾಗಿ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನೋತ್ಸವ ಗುರುವಂದನಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಈಗಾಗಲೇ ವೇದಿಕೆಗೆ ಆಗಮಿಸಿದ್ದಾರೆ.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ ಸೋಮಶೇಖರ್ ಅವರಿಂದ ಶ್ರೀ ಮಠದ ಐತಿಹ್ಯ ಹಾಗೂ ಶರಣರ ವಚನಗಳ ವಾಚನದ ಮೂಲಕ ಕಾಯಕ ಯೋಗಿ ಶ್ರೀಗಳ ಗುಣಗಾನ ಮಾಡಿದರು.

error: Content is protected !!