Friday, 19th April 2024

ಆಫ್​​ಲೈನ್ ಕ್ಲಾಸ್​​ಗಳೇ ಬೆಸ್ಟ್ ಸರ್: ಮುಖ್ಯಮಂತ್ರಿಯೊಂದಿಗೆ ಸಂತಸ ಹಂಚಿಕೊಂಡ ವಿದ್ಯಾರ್ಥಿಗಳು

ಬೆಂಗಳೂರು: ‘ಆನ್​​ಲೈನ್​​ಗಿಂತ ಆಫ್​​ಲೈನ್ ಕ್ಲಾಸ್​​ಗಳೇ ಬೆಸ್ಟ್ ಸರ್. ನಿಮಗೆ ಧನ್ಯವಾದಗಳು’ ಎಂದು ವಿದ್ಯಾರ್ಥಿಗಳು, ಸೋಮವಾರ 9, 10 ನೇ ತರಗತಿಗಳು ಮತ್ತು ಪಿಯು ತರಗತಿಗಳು ಪುನರಾರಂಭವಾದ ಸಂಭ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಜೊತೆಗೆ ಹಂಚಿಕೊಂಡರು.

ಸಚಿವರು ಮತ್ತು ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆಗಾಗಿ ಸಿಎಂ ಬೊಮ್ಮಾಯಿ‌ ಅವರು, ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು‌. ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿದರು.

‘ಆನ್​​ಲೈನ್ ತರಗತಿಯಲ್ಲಿ ಶಿಕ್ಷಕರೊಂದಿಗೆ ಪ್ರಶ್ನೋತ್ತರಗಳಿಗೆ ಅವಕಾಶವಿಲ್ಲ. ನೆಟ್​ವರ್ಕ್ ಸಮಸ್ಯೆ ಯಿಂದ ಕೆಲವೊಮ್ಮೆ ಸರಿಯಾಗಿ ಕೇಳಿಸುತ್ತಿದ್ದಿಲ್ಲ. ಸಂಪರ್ಕ ಕಡಿತವಾದಾಗ ಒಂಟಿಯಾಗಿ ಗೋಡೆ ನೋಡುತ್ತಾ ಕುಳಿತುಕೊಳ್ಳಬೇಕಾಗುತ್ತಿತ್ತು’ ಎಂದು ವಿದ್ಯಾರ್ಥಿನಿ ಹೇಳಿದಳು.

ಶಿಕ್ಷಕರ ಜೊತೆ ನೇರ ಸಂವಾದ ನಡೆಸಬಹುದು. ಬಹಳ ದಿನಗಳ ನಂತರ ಸಹಪಾಠಿಗಳ ಜೊತೆಗೂ ಬೆರೆತು, ಪರಸ್ಪರ ಚರ್ಚಿಸಲು ಅವಕಾಶ ಸಿಕ್ಕಿದೆ ಎಂದು ವಿದ್ಯಾರ್ಥಿಗಳು ಹರ್ಷದ ಹೊಳೆಯಲ್ಲಿ ಮಿಂದೆದ್ದರೆ, ಪ್ರಿನ್ಸಿಪಾಲರು ಹಾಗೂ ಶಿಕ್ಷಕರು ಸಹಿತ ಹರ್ಷೋಲ್ಲಾಸ ವ್ಯಕ್ತಪಡಿಸಿದರು.

ಸಿಎಂ ಬೊಮ್ಮಾಯಿ ಮಾತನಾಡಿ, ‘ಕೆಲವು ದಿನಗಳ ಹಿಂದೆಯಷ್ಟೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದೆವು. ಇವತ್ತು ನಿಜವಾಗಲೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕರೊನಾದಿಂದ ಸ್ವಾತಂತ್ರ್ಯ ದೊರೆತಿದೆ. ಪಾಲಕರು ನಿರ್ಭೀತಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು‌. ಯಾವುದೇ ಆತಂಕವಿಲ್ಲದೆ ಶಾಲೆ-ಕಾಲೇಜುಗಳಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.

ಕಷ್ಟಪಟ್ಟು ಓದಿ ಯಶಸ್ಸು ಗಳಿಸಿ. ಜೊತೆಗೆ ಆರೋಗ್ಯದ ಕಡೆ ಗಮನ ಹರಿಸಿ ಎಂದ ಸಿಎಂ ಬೊಮ್ಮಾಯಿ, ‘ಜೀವನವಿಡೀ ವಿದ್ಯಾರ್ಥಿಯೇ ಆಗಿರಬೇಕು ಎಂದು ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *

error: Content is protected !!