Thursday, 22nd February 2024

ಹೆಲ್ಮೆಟ್ ಹಾಕದ ವಕೀಲರ ಮೇಲೆ ಹಲ್ಲೆ: 6 ಪೊಲೀಸ್ ಸಿಬ್ಬಂದಿ ಅಮಾನತು

ಚಿಕ್ಕಮಗಳೂರು: ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಸಂಬಂಧ ಚಿಕ್ಕಮಗಳೂರು ಪೊಲೀಸರು ಮತ್ತು ವಕೀಲರ ನಡುವೆ ಹೈಡ್ರಾಮ ನಡೆದಿದೆ. ಹೆಲ್ಮೆಟ್ ಹಾಕದ ಕಾರಣ ಲಾಯರ್ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು, ಠಾಣೆಯ ಮುಂದೆ ವಕೀಲರು ಪ್ರತಿಭಟನೆ ಮಾಡಿದರು.

ಅಂತಿಮವಾಗಿ 6 ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ.

ಹೆಲ್ಮೆಟ್ ಹಾಕದ ಕಾರಣಕ್ಕೆ ವಕೀಲ ಪ್ರೀತಮ್ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಕೀಲ ಪ್ರೀತಮ್ ದಂಡ ಕಟ್ಟುತ್ತೇನೆ ಎಂದು ಹೇಳಿದರೂ ಸಹ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಠಾಣೆಗೆ ಕರೆದೊಯ್ದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರು ಹಲ್ಲೆ ಮಾಡಿದ್ದರಿಂದ ಪ್ರೀತಮ್ ಎದೆ, ಬೆನ್ನು, ಕೈಯಲ್ಲಿ ರಕ್ತದ ಕಲೆಯಾಗಿದೆ. ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಪ್ರೀತಮ್ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆ ಬಳಿ ಮತ್ತು ಠಾಣೆಯ ಮುಂದೆ ನೂರಾರು ವಕೀಲರು ಪ್ರತಿಭಟನೆ ಮಾಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕುಮಾರ್, ಗುರುಪ್ರಸಾದ್ ಎಂಬ ಪೊಲೀಸ್ ಸಿಬ್ಭಂದಿ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಶುಕ್ರವಾರ ವಕೀಲರು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ನಿರೀಕ್ಷೆ ಇದೆ. ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸುವಂತೆ ವಕೀಲರು ಪಟ್ಟು ಹಿಡಿದಿದ್ದಾರೆ. ವಿವಿಧ ಜಿಲ್ಲೆಗಳಿಂದ ವಕೀಲರು ಸಭೆಗೆ ಆಗಮಿಸುತ್ತಿದ್ದಾರೆ.

ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಹೇಳಿಕೆ ನೀಡಿ, “ಈ ಘಟನೆ ಸಂಬಂಧ 6 ಜನ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಮಾಡ ಲಾಗಿದೆ. ಓರ್ವ ಪಿಎಸ್‌ಐ, ಓರ್ವ ಎಎಸ್‌ಐ, ಓರ್ವ ಹೆಡ್ ಕಾನ್ಸ್‌ಟೇಬಲ್, ಮೂವರು ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ” ಎಂದರು.

ಘಟನೆ ಬಗ್ಗೆ ಮಾಹಿತಿ ನೀಡಿದ ವಕೀಲರು, ಹೆಲ್ಮೆಟ್ ಹಾಕದ ಲಾಯರ್ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ನಗರ ಠಾಣೆಯಲ್ಲಿ ನಡೆದಿದೆ. ಯುವ ವಕೀಲರೊಬ್ಬರಿಗೆ ಪೊಲೀಸ್ ಠಾಣೆಯಲ್ಲಿ ಮನಸ್ಸೋ ಇಚ್ಛೆ ಥಳಿಸಲಾಗಿದೆ.

ವಕೀಲ ಪ್ರೀತಮ್ ನಾನು ದಂಡ ಕಟ್ಟುತ್ತೇನೆ ಎಂದು ಹೇಳಿದರೂ ಸಹ ಪೊಲೀಸ್ ಠಾಣೆಗೆ ಕರೆದದುಕೊಂಡು ಹೋಗಿದ್ದಾರೆ. ಬೈಕ್ ಕೀ ಕಿತ್ತುಕೊಂಡ ಪೊಲೀಸರನ್ನು ಪ್ರೀತಮ್ ಪ್ರಶ್ನೆ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!