Sunday, 24th September 2023

ಐಸಿಯುನಲ್ಲಿರುವ ಕಾಂಗ್ರೆಸ್, ತಿರುಕನ ಕನಸು ಕಾಣುತ್ತಿದೆ

ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟ: ಕಲಬುರಗಿಯಲ್ಲಿ ಮಾಜಿ ಸಿಎಂ ಶೆಟ್ಟರ್ ಹೇಳಿಕೆ

ಕಲಬುರಗಿ: ಈಶಾನ್ಯ ರಾಜ್ಯಗಳ ಫಲಿತಾಂಶ ಬಂದಮೇಲೆ ಕಾಂಗ್ರೇಸ್ ಧೂಳಿಪಟವಾಗಿದೆ. ದೇಶದಲ್ಲಿ ದುರ್ಬಿನ್ ಹಿಡಿದುಕೊಂಡು ಹುಡುಕಿದರು ಕಾಂಗ್ರೆಸ್ ಪಕ್ಷ ಸಿಗೋದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

ಭಾನುವಾರ ನಗರದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ತಿರುಕನ ಕನಸು ಕಾಣುತ್ತಿದ್ದಾರೆ. ಕನಸು ನನಸಾಗುವುದು ಸತ್ಯಕ್ಕೆ ದೂರವಾದ ಮಾತಾಗಿದೆ. ಕರ್ನಾಟಕ ಐಸಿಯುನಲ್ಲಿದೆ. ಅದನ್ನು ಬದುಕಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅದು ನಿಜವಾಗುವುದಿಲ್ಲ. ಸಣ್ಣ ರಾಜ್ಯಗಳಲ್ಲಿ ಗೆಲ್ಲಲು ಆಗದ ಕಾಂಗ್ರೆಸ್, 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಹೇಳ ಹೆಸರಿಲ್ಲದೆ ಮಾಯವಾಗಲಿದೆ ಎಂದು ಅವರು ವ್ಯಂಗ್ಯವಾಡಿದರು.

ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಿಂದ ಪ್ರಾರಂಭವಾದ ಬಿಜೆಪಿಯ ವಿಜಯ್ ಸಂಕಲ್ಪ ಯಾತ್ರೆಯು ಒಟ್ಟು ನಾಲ್ಕು ತಂಡಗಳಲ್ಲಿ ರಾಜ್ಯದ ಎಲ್ಲಾ ಕಡೆ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದು, ಎಲ್ಲಾ ಕಡೆಗೆ ಜನರಿಂದ ಉತ್ತಮ ಬೆಂಬಲ ಬಿಜೆಪಿ ಪರವಾಗಿದೆ. ನಮ್ಮ ಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದು, ಬಸವಕಲ್ಯಾಣ, ಹುಮನಾಬಾದ, ಬಾಲ್ಕಿ, ಬೀದರ್, ಚಿಂಚೋಳಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಮಾರ್ಚ್.17ರವರಿಗೆ ಕಲ್ಯಾಣ ಕರ್ನಾಟಕದ 40 ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ತಿಳಿಸದರು.

ಎಸ್ಸಿ-ಎಸ್ಟಿ ಮೀಸಲಾತಿ‌ ಹೆಚ್ಚಾಳ‌ ಮಾಡಿದ್ದ ಬೊಮ್ಮಾಯಿ ನೇತೃತ್ವದ ಸರಕಾರ ರಾಜ್ಯದಲ್ಲಿ ಅಭಿವೃದ್ಧಿ ಪ್ರಗತಿಯತ್ತ ಸಾಗುತ್ತಿದೆ. ಅಲ್ಲದೇ, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ಅನುದಾನ ನೀಡಿದ್ದು, ನಂಜುಂಡಪ್ಪ ವರದಿಯಂತೆ ಈ ಭಾಗದ ಅಭಿವೃದ್ಧಿಗಾಗಿ ಸರಕಾರ ಬದ್ದವಾಗಿದೆ ಎಂದರು.

ವಿರುಪಾಕ್ಷಪ್ಪ ಮಾಡಾಳ್ ಪುತ್ರನ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ಸದ್ಯ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದೆ. ನಮ್ಮ ಸರಕಾರದಲ್ಲಿ ಯಾರಿಗೂ ರಕ್ಷಣೆ ಕೊಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರಿಗೆ ಕಾನೂನು ಕ್ರಮದ ಮೂಲಕವೇ ಶಿಕ್ಷೆ ಆಗಲಿದೆ. ಇದರಿಂದ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎನ್ನುವ ಮಾತು ತಪ್ಪು. ಯಾವುದೇ ಕಾರಣಕ್ಕೂ ಇದರಿಂದ ನಮಗೆ ಹಿನ್ನಡೆ ಆಗೋದಿಲ್ಲ. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಸುನೀಲ್ ವಲ್ಯಾಪುರ್, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮೂಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
*
ಈ ಹಿಂದೆ ಬಿಜೆಪಿಗೆ ರಾಜ್ಯದಲ್ಲಿ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆದರೆ, ವಿಜಯ ಸಂಕಲ್ಪ ಯಾತ್ರೆಗೆ ವ್ಯಕ್ತವಾಗುತ್ತಿರುವ ಜನ ಬೆಂಬಲ ನೋಡುತ್ತಿದ್ದರೆ. 2023ರ ವಿಧಾನಸಭೆ ಚುನಾವಣೆಯಲ್ಲಿ 113 ಸೀಟ್ ದಾಟಿ 130 ರಿಂದ 140 ಸ್ಥಾನ ಗೆಲ್ಲುವ ಮೂಲಕ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. 2024ರ ಲೋಕ‌ಸಭೆ ಚುನಾವಣೆಯಲ್ಲೂ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬರಲಿದೆ.

ಜಗದೀಶ್ ಶೆಟ್ಟರ್
ಮಾಜಿ ಮುಖ್ಯಮಂತ್ರಿ

*
ಜಗತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಂ1 ಸ್ಥಾನದಲ್ಲಿ ಇದ್ದಾರೆ. ನೆರೆಯ ದೇಶಗಳು ಆರ್ಥಿಕ ದಿವಾಳಿ ಆಗಿರುವ ಈ ಸಂದರ್ಭದಲ್ಲಿ ಭಾರತ ಬ್ರಿಟನ್ ದೇಶವನ್ನೇ ಹಿಂದಿಕ್ಕಿ 5ನೇ ಸ್ಥಾನದಲ್ಲಿ ಬಂದಿದೆ. ಮುಂದಿನ 5 ವರ್ಷಗಳಲ್ಲಿ ಭಾರತ 1ನೇ ಸ್ಥಾನಕ್ಕೆ ಬರಲಿದೆ. ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಇಡೀ ಜಗತ್ತೇ ಒಪ್ಪಿಕೊಂಡಿದ್ದೆ. ಪಾಕಿಸ್ತಾನದ ಪ್ರಜೆಗಳು ಸಹ ಅವರ ನಾಯಕತ್ವವನ್ನು ಗುಣಗಾನ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಶಟ್ಟರ್ ಹೇಳಿದರು.

error: Content is protected !!