ಚಿತ್ರದುರ್ಗ: ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣ ಮಾಡುವ ಸಲುವಾಗಿ ಮೇ 26 ರಿಂದ ಜೂನ್ 7ರ ಬೆಳಗ್ಗೆ 6 ಗಂಟೆಯವರೆಗೆ 2 ದಿನಕೊಮ್ಮೆ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿದೆ.
ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರಗಳಂದು ಸಂಪೂರ್ಣ ಲಾಕ್‌ಡೌನ್ ಇರುತ್ತದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಕೋವಿಡ್-19ಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೇ 27, 29, 30 ಹಾಗೂ ಜೂನ್ 01, 03, 05 ಹಾಗೂ 06 ರಂದು ಜಿಲ್ಲೆಯಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಈ ದಿನಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸೇವೆಗಳಿರುವುದಿಲ್ಲ ಎಂದು ತಿಳಿಸಿದರು.
ತರಕಾರಿ, ಹಣ್ಣು, ದಿನಸಿ ಅಂಗಡಿಗಳು ಇರುವುದಿಲ್ಲ. ಹಾಲಿನ ಉತ್ಪನ್ನಗಳು ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಇರುತ್ತದೆ.
ಮೇ 26, 28, 31 ಹಾಗೂ ಜೂನ್ 02 ಹಾಗೂ 04 ರಂದು ಬೆಳಗ್ಗೆ 6 ರಿಂದ 10 ರವೆರೆಗೆ ಸಂಪೂರ್ಣ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಲಾಕ್‌ಡೌನ್ ವಿನಾಯಿತಿ ದಿನಗಳಂದು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸ ಲಾಗಿದೆ.
ಸಂಪೂರ್ಣ ಲಾಕ್‌ಡೌನ್ ವಿಧಿಸಿರುವ ದಿನಗಳಂದು ಹಾಲಿನ ಉತ್ಪನ್ನಗಳ ಮಾರಾಟ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ತುರ್ತು ಸೇವೆಗಳು, ಎಲ್ಲಾ ಆಸ್ಪತ್ರೆ, ಮೆಡಿಕಲ್ಸ್, ಪೆಟ್ರೋಲ್ ಬಂಕ್, ಇ-ಕಾಮರ್ಸ್, ತಿಂಡಿ ಮತ್ತು ಊಟ ಪಾರ್ಸೆಲ್ ಸೇವೆಗಳು, ಗೂಡ್ಸ್ ವಾಹನಗಳ ಸಂಚಾರ, ದಿನಸಿ ಪಾರ್ಸೆಲ್ ಸೇವೆಗಳು, ಸರ್ಕಾರದ ಮೇ 7 ಮತ್ತು ಮೇ 21ರಂದು ಇನ್ನಿತರೆ ಹೆಚ್ಚುವರಿ ಆದೇಶದಲ್ಲಿ ಉಲ್ಲೇಖಿಸಿರುವ ನಿರಂತರ ಉತ್ಪಾದನಾ ಕೈಗಾರಿಕೆ, ಉದ್ದಿಮೆಗಳು ಸೇವೆ ಪಡೆಯಬಹು ದಾಗಿದೆ.