ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗರಂ
ಚಿತ್ರದುರ್ಗ: ಬಿಜೆಪಿ ದಲಿತರಿಗೆ ನೀಡಿದಷ್ಟು ಅವಕಾಶವನ್ನು ಕಾಂಗ್ರೇಸ್ ನವರು ನೀಡಿಲ್ಲ. ಸುಮ್ಮನೇ ಬಡಾಯಿ ಮಾತನಾಡುತ್ತಾರೆ. ಮುಸ್ಲಿಂ ಅಬ್ದುಲ್ ಕಲಾಂ ರನ್ನು ನಾವು ರಾಷ್ಟ್ರಪತಿ ಮಾಡಿದ್ದೇವೆ. ದಲಿತರಾದ ಕೋವಿಂದ್ ರನ್ನು ರಾಷ್ಟ್ರಪತಿ ಮಾಡಿದ್ದೇವೆ. ದಲಿತರಾದ ಗೋವಿಂದ್ ಕಾರಜೋಳರನ್ನು ಡಿಸಿಎಂ ಮಾಡಿದ್ದೇವೆ. ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿಗೆ ಚಿತ್ರದುರ್ಗದಲ್ಲಿ ಸಂಸದ ರನ್ನಾಗಿಸಿ ಮಂತ್ರಿ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಚಿತ್ರದುರ್ಗದಲ್ಲಿ ಜಿ. ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆ ಯಲ್ಲಿ ಆರಂಭಿಸಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಸುದ್ದಿಗಾರ ರೊಂದಿಗೆ ಮಾತನಾಡಿ, ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಹೀಗೆ ತಿರುಗೇಟು ನೀಡಿದರು.
ಅತಿಹೆಚ್ಚು ಅಂಬೇಡ್ಕರ್ ಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆಗೆ ನಿಂತಾಗ ಅಂಬೇಡ್ಕರ್ ಅವರನ್ನು ಕಾಂಗ್ರೇಸ್ ನವರು ಸೋಲಿಸಿದರು. ಎರಡನೇ ಬಾರಿ ಅವರ ಸಹಾಯಕನನ್ನು ಎದುರು ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಭಾರತರತ್ನವೂ ಕೊಡಲಿಲ್ಲ ಎಂದರು.
ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ನಾವು. ಕಾಂಗ್ರೆಸ್ ಜಗಜೀವನ್ ರಾಮ್ ರನ್ನು ಪ್ರಧಾನಿ ಮಾಡಲಿಲ್ಲ ಸೋಲಿಸಿದರು. ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಚಿತ್ರದುರ್ಗದ ಚಂದ್ರಪ್ಪ, ದೃವನಾರಾಯಣ, ಖರ್ಗೆ ಸೇರಿ ದಲಿತ ಮುಖಂಡರನ್ನು ಸೋಲಿಸಿದ್ಧೇ ಕಾಂಗ್ರೇಸ್ ಸಾಧನೆ ಎಂದರು.
ಇವತ್ತಿಗೂ ಖರ್ಗೆ, ಪರಮೇಶ್ವರ್ ಮುಂದಕ್ಕೆ ಬರಲು ಬಿಡಲ್ಲ. ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದೆ. ಸಿದ್ಧರಾಮಣ್ಣನ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಸಿಎಂ ಆದರು ಜೆಡಿಎಸ್ ನಲ್ಲಿ ಇದ್ದಿದ್ದರೇ ಇನ್ನೂ ಕನಸು ಕಾಣಬೇಕಿತ್ತು ಎಂದರು.
ಸಿದ್ಧರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರು ಮಾಡಲು ಅಸಾಧ್ಯ. ಸಿದ್ಧರಾಮಣ್ಣ ಅರ್ಕಾವತಿ ಘಟನೆ ಮುಚ್ಚಿ ಹಾಕಿದ್ದಾರೆ. ನಮ್ಮಲ್ಲಿ ಮಿತ್ರ ಮಂಡಳಿ, ವಲಸಿಗ ಪದ ಸರಿಯಲ್ಲ. ಬಿಜೆಪಿಯಿಂದ ಶಾಸಕರಾಗಿದ್ದಾರೆ ಎಂದರು. ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುವುದಾಗಿ ಸಿಎಂ ಹೇಳಿದ್ದಾರೆ. ಸಿಎಂ ಈಗಾಗಲೇ ನೆರೆ ವೀಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಗಮನಿಸಿ ಹೇಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜಿ.ಎಂ ಗ್ರೂಪ್ ನಿರ್ದೆಶಕರಾದ ಜಿ.ಎಸ್. ಅನಿತ್ ಕುಮಾರ್, ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ ಮತ್ತಿತರರು ಇದ್ದರು.