Friday, 19th July 2024

ಕರೋನಾ ಸೋಂಕು: ಕುಕ್ಕೆ ಕ್ಷೇತ್ರದಲ್ಲಿ ಆ.30ರವರೆಗೆ ಪೂಜಾ ಸೇವೆಗೆ ನಿಷೇಧ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆ.30ರವರೆಗೆ ಪೂಜಾ ಸೇವೆಗಳಿಗೆ ಅವಕಾಶವಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30 ರವರೆಗೆ ಯಾವುದೇ ಸೇವೆಗಳು ನಡೆಯುವುದಿಲ್ಲ. ಕೇವಲ ದೇವರ ದರ್ಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ದೇವರ ದರ್ಶನಕ್ಕೂ ಅವಕಾಶ ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಭಕ್ತರ ಆರೋಗ್ಯ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆ.30ರ ವರೆಗೂ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ, ಚವಲ, ಪಂಚಾಮೃತ ಮಹಾಭಿಷೇಕ, ಪ್ರಾರ್ಥನೆ ಸೇರಿದಂತೆ ಎಲ್ಲ ಸೇವೆಗಳನ್ನು ನಿಷೇಧಿಸಲಾಗಿದೆ.

ವಾರದ ದಿನಗಳಲ್ಲಿ ಬೆಳಗ್ಗೆ 7.00ರಿಂದ ಮಧ್ಯಾಹ್ನ 11.30 ತನಕ, ಮಧ್ಯಾಹ್ನ 12.15-1.30 ಹಾಗೂ 2.30ರಿಂದ ರಿಂದ ಸಂಜೆ 7.00 ತನಕ ಭಕ್ತರು ಸುಬ್ರಹ್ಮಣ್ಯ ದೇವರ ದರ್ಶನ ಮಾಡಬಹುದು. ದರ್ಶನದ ಸಂದರ್ಭದಲ್ಲಿ ಮಂಗಳಾರತಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ತಂಗುವ ಭಕ್ತರು 72 ಗಂಟೆಯೊಳಗೆ ಆರ್‌ಟಿ- ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕೋವಿಡ್ ಎರಡನೇ ಅಲೆ ವೇಳೆ ಲಾಕ್‌ಡೌನ್ ಮಾಡಲಾಗಿದ್ದು, ಈ ಅವಧಿಯಲ್ಲಿ ರಾಜ್ಯದ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗಿತ್ತು. ಪ್ರತಿದಿನ ಅರ್ಚಕರು, ಸಿಬ್ಬಂದಿಗಳು ಮಾತ್ರ ತೆರಳಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

 

Leave a Reply

Your email address will not be published. Required fields are marked *

error: Content is protected !!