Wednesday, 24th April 2024

ತುಳಿತಕ್ಕೆ ಒಳಗಾದ ಸ್ಲಂ ಜನರನ್ನು ರಕ್ಷಿಸಿ

ರಾಯಚೂರು : ದಲಿತ ಸಮರ ಸೇನೆ ಸ್ಲಮ್ ಜನರ ಕ್ರಿಯಾ ವೇದಿಕೆ ಬೆಂಗಳೂರು, ರಾಯಚೂರಿನ ಜಿಲ್ಲಾ ಸಮಿತಿಯು ಮೂಲ ಸೌಕರ್ಯ, ವಸತಿ ವಂಚಿತ ವಿಶೇಷ ವರ್ಗದ ಜನರಿಗೆ, ವಿಕಲಚೇತನರಿಗೆ ವಿಧವೆಯರಿಗೆ, ಬೀದಿ ಬದಿಯ ವ್ಯಾಪಾರಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಲಿಂಗಸಗೂರಿನ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ತಹಸೀಲ್ದಾರರೊಂದಿಗೆ ನೇರ ಸಂವಾದ ನಡೆಸಿದ ದಲಿತ ಸಮರ ಸೇನೆ, ಸ್ಲಮ್ ಜನರ ಕ್ರಿಯಾವೇದಿಕೆಯ ಜಿಲ್ಲಾ ಅಧ್ಯಕ್ಷ ನೀಲಕಂಠ ಅನೀಲ್ ವಿವಿಧ ಕಾರಣಕ್ಕೆ ಸಮಾಜದಲ್ಲಿ ನೊಂದು,ತುಳಿತಕ್ಕೊಳಪಟ್ಟು, ಸಮಾಜದ ಮುಖ್ಯವಾಹಿನಿ ಯಿಂದ ದೂರ ತಳ್ಳಲ್ಪಟ್ಟ ಈ ವರ್ಗದವರಿಗೆ ಇನ್ನೂ ಕೂಡ ಶೌಚಾಲಯ ಕುಡಿಯುವ ನೀರು,ವಸತಿ ಸಿಗದಿರುವುದು ದುರಂತ, ಕೊಳಗೇರಿಗಳಾಗಿ ಎರಡು ಮೂರು ದಶಕಗಳಿಂದಲೇ ಸರಕಾರದಿಂದ ಘೋಷಣೆಗೊಂಡರೂ ಇನ್ನೂ ಕೊಳಚೆಪ್ರದೇಶಗಳಾಗಿಯೇ ಇರುವ ಜನಕ್ಕೆ ಮತ್ತು ವಿಶೇಷ ವರ್ಗದವರಿಗೆ ಸರಕಾರ ಕೂಡಲೇ ಭೂಮಿ ಮತ್ತು ವಸತಿ, ಮೂಲ ಸೌಕರ್ಯಗಳನ್ನು ಕಲ್ಪಿಸ ಬೇಕೆಂದು ಆಗ್ರಹಿಸಿ ವಿಶೇಷ ವರ್ಗದವರಿಗಾಗಿರುವ ಹಕ್ಕು ಅವಕಾಶಗಳ ಬಗ್ಗೆ ಚರ್ಚಿಸಿದರು.

ತಹಸೀಲ್ದಾರರು ಕೊಳಚೆಪ್ರದೇಶಗಳನ್ನು ಬೇಟಿ ಮಾಡಬೇಕೆಂದು ಆಗ್ರಹಿಸಿದ ಜಿಲ್ಲಾಧ್ಯಕ್ಷ ನೀಲಕಂಠ ಅನೀಲ್ ಶೋಷಿತ ಹಕ್ಕು ವಂಚಿತ ,ಅಂಚಿಗೆ ತಳ್ಳಲ್ಪಟ್ಟ ಜನವರ್ಗದವರನ್ನು ಜಾಗೃತಗೊಳಿಸಿ ಅವರ ಹಕ್ಕುಗಳನ್ನು ಅವರು ಪಡೆಯುವಂತೆ ಸಂಘಟಿಸು ತ್ತಿರುವ ಈ ನಮ್ಮ ಕಾರ್ಯಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಿಕ್ಕು ತಪ್ಪಿಸುತ್ತಾ ಅಡ್ಡಿಪಡಿಸುತ್ತಿದ್ದು, ಇದು ಅಧಿಕಾರಿಗಳಿಗೂ ಮತ್ತು ಹಕ್ಕು ವಂಚಿತ ಶೋಷಿತ ಜನರಿಗೂ ತೊಂದರೆ ಆಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನರು ತಮ್ಮ ಗಮನದಲ್ಲಿಟ್ಟು ಕೊಳ್ಳಬೇಕು ಎಂದರು.

ಸಂಘಟನೆಯ ರಾಜ್ಯ ಸಂಚಾಲಕ ತಿಪ್ಪಣ್ಣ ಎನ್ ಛಲವಾದಿ ಬೆಂಗಳೂರು ಮಾತನಾಡಿ ಲಿಂಗಸಗೂರಿನ ಸ್ಲಮ್ ಜನರಿಗೆ, ವಿಶೇಷ ವರ್ಗದ ಜನರಿಗೆ ಇರುವ ಸಮಸ್ಯೆ ಸವಾಲುಗಳ ಬಗ್ಗೆ ಹಕ್ಕುಗಳ ಬಗ್ಗೆ ವಿವರಿಸಿ ಅವರ ಸಭಲೀಕರಣಕ್ಕೆ ತಾಲೂಕು ಆಡಳಿತ ಮುಂದಾಗಬೇಕೆಂದು ಒತ್ತಾಯಿಸಿದರು.

ಸರಕಾರದಲ್ಲಿ ಹಲವಾರು ಯೋಜನೆಗಳು ಇದ್ದರೂ ಇಂದಿಗೂ ಜನಸಾಮಾನ್ಯರು ,ಹೆಣ್ಣುಮಕ್ಕಳು, ವಿಕಲಚೇತನರು, ಲೈಂಗಿಕ ಕಾರ್ಯಕರ್ತರು ,ಲೈಂಗಿಕ ಅಲ್ಪಸಂಖ್ಯಾತರು ಮೂಲ ಸೌಕರ್ಯಕ್ಕಾಗಿ, ಶೌಚಾಲಯ, ನೀರಿಗಾಗಿ ಇಂದಿಗೂ ಬೀದಿ ಹೋರಾಟ, ಕಚೇರಿ ಕಚೇರಿಗೆ ಅಲೆಯಬೇಕಾಗಿರುವುದು ದುರಂತ, ವಿಶೇಷ ವರ್ಗದಡಿ ಇಂಥವರನ್ನು ಗುರುತಿಸಿದ ಸರಕಾರವು ವಿಶೇಷ ವರ್ಗ ದಡಿ ವಸತಿ ಸೌಕರ್ಯಗಳ ಅವಕಾಶ ನೀಡಿದ್ದರು ಇಂದಿಗೂ ಅವು ಮರಿಚಿಕೆ ಆಗಿದ್ದು ಸರಕಾರ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಎಂದು ಸಾಮಾಜಿಕ ಕಾರ್ಯಕರ್ತ, ಬರಹಗಾರ ಪ್ರಶಾಂತ್ ದಾನಪ್ಪ ತಿಳಿಸಿದರು.

ತಹಸೀಲ್ದಾರ್ ಕಚೇರಿ ಮುಂದೆ ನೆರೆದಿದ್ದ ವಿಶೇಷ ವರ್ಗದ ನೂರಕ್ಕೂ ಹೆಚ್ಚು ಮಹಿಳೆಯರ ಜೊತೆ ತಹಸೀಲ್ದಾರರು ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿ ಮನವಿಪತ್ರ ಸ್ವೀಕರಿಸಿ ಪೂರಕವಾಗಿ ಸ್ಪಂದಿಸಿ ಕಾನೂನಡಿರುವ ಅವಕಾಶಗಳಡಿ ವಿಶೇಷ ವರ್ಗದ ವಸತಿ ಹೀನರಿಗೆ ಭೂಮಿಯನ್ನು ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

ಈ ಸಮಯದಲ್ಲಿ ದಲಿತ ಸಮರ ಸೇನೆ ಕರ್ನಾಟಕ, ಸ್ಲಮ್ ಜನರ ಕ್ರಿಯಾವೇದಿಕೆ ಬೆಂಗಳೂರು, ಸಂಘಟನೆಯ ಮಾನವಿ ತಾಲೂಕ ಅಧ್ಯಕ್ಷ ಅನೀಲ್ ಕುಮಾರ್, ತಾಲೂಕು ಸಂಚಾಲಕ ಕರಿಯಪ್ಪ ಹಾಲುಮತ, ಮುಖಂಡ ಶ್ರೀನಿವಾಸ್ ರೆಡ್ಡಿ, ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!