Wednesday, 24th April 2024

ಕರೋನಾ ಮಾರ್ಗಸೂಚಿ ಪರಿಶೀಲಿಸಿದ ಐಜಿಪಿ

ತುಮಕೂರು: ನಗರ ಸೇರಿದಂತೆ ಜಿಲ್ಲೆಯಲ್ಲಿ ಕರೋನಾ ಸೋಂಕು ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಯಲ್ಲಿ ಕರೋನಾ ತಡೆಗಾಗಿ ಸರ್ಕಾರ ನೇಮಕ ಮಾಡಿರುವ ಕೋವಿಡ್ ನಿಯಂತ್ರಣ ಉಸ್ತುವಾರಿ ಐಜಿಪಿ ಸೀಮಂತಕುಮಾರ್ ಸಿಂಗ್ ಅವರು ನಗರಕ್ಕೆ ಭೇಟಿ ನೀಡಿ ಕರೋನಾ ಮಾರ್ಗಸೂಚಿ ಪಾಲನೆ ಸಂಬಂಧ ಪರಿಶೀಲನೆ ನಡೆಸಿದರು.

ನಗರದ ವಿವಿಧ ರಸ್ತೆಗಳು, ಬಡಾವಣೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಅವರೊಂದಿಗೆ ಭೇಟಿ ನೀಡಿದ ಐಜಿಪಿ ಸೀಮಂತಕುಮಾರ್ ಸಿಂಗ್ ಅವರು ಕರೋನಾ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಕೋವಿಡ್ ನಿಯಮಗಳ ಬಗ್ಗೆ ನಿರ್ಲಕ್ಷ÷್ಯ ತೋರದೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ಮಾಡಿದರು.

ನಗರದ ಬಿ.ಹೆಚ್. ರಸ್ತೆ, ಗಂಗೋತ್ರಿ ರಸ್ತೆ, ಎಸ್‌ಐಟಿ ಮುಖ್ಯ ರಸ್ತೆ, ಎಸ್.ಎಸ್.ಪುರಂ ರಸ್ತೆ, ಅಶೋಕ ರಸ್ತೆ, ರಿಂಗ್ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಸಂಚರಿಸಿದ ಕೋವಿಡ್ ಉಸ್ತುವಾರಿ ಸೀಮಂತಕುಮಾರ್ ಸಿಂಗ್ ಅವರು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಕೋವಿಡ್ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ವಾರಾಂತ್ಯ ಲಾಕ್‌ಡೌನ್ ಜಾರಿಗೊಳಿಸಿದೆ. ಈ ವಾರಾಂತ್ಯ ಲಾಕ್‌ಡೌನ್ ಸಂದರ್ಭದಲ್ಲಿ ವಿನಾ ಕಾರಣ ಸಾರ್ವಜನಿಕರು ರಸ್ತೆಗಿಳಿಯದೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮುಖೇನ ಕರೋನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈಜೋಡಿಸಬೇಕು. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜನತೆ ಪಾಲಿಸುವಂತೆಯೂ ಮನವಿ ಮಾಡಿದರು.

ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಷ್ಠಾನ ಕುರಿತು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಯಾಗಿದೆ. ಬಹಳ ಒಳ್ಳೆಯ ರೀತಿಯಲ್ಲಿ ಜಿಲ್ಲೆಯ ಜನರು ಸಹಕರಿಸುತ್ತಿದ್ದಾರೆ ಎಂದರು.

ಸರ್ಕಾರ ನನಗೆ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯ ಉಸ್ತುವಾರಿ ನೀಡಿದೆ. ಹಾಗಾಗಿ ತುಮಕೂರು ಜಿಲ್ಲೆಯಲ್ಲಿನ ಕೊರೊನಾ ನಿಯಮಗಳ ಕುರಿತು ಪರಿಶೀಲನೆ ಮಾಡಲು ಭೇಟಿ ನೀಡಿದ್ದೇನೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಮಾತನಾಡಿ, ಸರ್ಕಾರ ಘೋಷಣೆ ಮಾಡಿರುವ ವಾರಾಂತ್ಯ ಲಾಕ್‌ಡೌನ್, ಕರ್ಫೂ್ಯ ಸಂದರ್ಭದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಮನೆಗಳಿಂದ ಹೊರಬರದೆ ಮನೆಯೊಳಗೆ ಇದ್ದು ಈ ಮಹಾಮಾರಿ ನಿಯಂತ್ರಣಕ್ಕೆ ಸಹಕರಿಸಬೇಕು. ಒಂದು ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದೆ ವಿನಾ ಕಾರಣ ಮನೆಯಿಂದ ಹೊರ ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಖಚಿತ. ಇದಕ್ಕೆ ಜಿಲ್ಲೆಯ ಜನ ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ತಮಗಿದೆ ಎಂದರು.

ಮೇ 4ರ ವರೆಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!