Thursday, 28th March 2024

ಉದ್ಯಾನವನ ಉಳಿಸಿ ಹೋರಾಟ ಸಮಿತಿ ವತಿಯಿಂದ 16ನೇ ದಿನದ ಅನಿರ್ದಿಷ್ಟಾವಧಿ ಧರಣಿ

ಮಾನ್ವಿ: ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಬಣ ತಾಲ್ಲೂಕು ಘಟಕ ಹಾಗೂ ಉದ್ಯಾನವನ ಉಳಿಸಿ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಶಾಸಕರ ಭವನದ ಎದುರುಗಡೆ ನಡೆಯುತ್ತಿರುವ 16ನೇ ದಿನದ ಧರಣಿ ಪ್ರತಿಭಟನೆಯಲ್ಲಿ ಉದ್ಯಾನವನ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಕೆ.ನಾಗಲಿಂಗಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲ್ಲೂಕಿನ ಪ್ರಭಾವಿ ರಾಜಕೀಯ ಮುಖಂಡರು ಆಕ್ರಮಿಸಿ ಕೊಂಡಿರುವ ಸರಕಾರಿ ಉದ್ಯಾನವನದ ಜಾಗವನ್ನು ತೆರವು ಗೊಳಿಸುವಂತೆ ಕಳೆದ 16 ದಿನಗಳಿಂದ ಧರಣಿ ನಡೆಸುತ್ತಿದ್ದು ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು, ಜಿಲ್ಲಾ ನಗರಾಭಿವೃದ್ದಿ ಕೋಶದ ಕಾರ್ಯಪಾಲಕ ಅಭಿಯಂತ ರರು, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ದಿಂದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಇದುವರೆಗೆ ಸರ್ವೆ ನಡೆಸಿ ಕ್ರಮ ಕೈಗೊಳ್ಳದೆ ಇರುವುದರಿಂದ ಮಾನ್ವಿ ನಗರದಲ್ಲಿ 1964 ರಲ್ಲಿ ಗೃಹ ಮಂಡಳಿ ವತಿಯಿಂದ ಸರ್ವೆ ನಂ 467/ಅ ವಿಸ್ತಿರ್ಣ 6.30 ಗುಂಟೆಯಲ್ಲಿ ನಿವೇಶನ ಹಾಗೂ ಮನೆ ನಿರ್ಮಾಣ ನಂತರದ ಉಳಿದ ಜಮೀನಿನಲ್ಲಿ ಸಾರ್ವಜನಿಕರಿಗೆ 3112 ಚ.ಮೀ ಉದ್ಯಾನವನಕ್ಕಾಗಿ ಸ್ಥಳವನ್ನು ಬಿಟ್ಟು ಅಭಿವೃದ್ದಿ ಪಡಿಸಲು ಪುರಸಭೆಗಾಗಿ ಬಿಟ್ಟು ಕೊಟ್ಟಿದ್ದು ಇದುವರೆಗೂ ಪುರಸಭೆ ವತಿಯಿಂದ ಉದ್ಯಾನವನ ಸ್ಥಳವನ್ನು ಅಭಿವೃದ್ದಿ ಪಡಿಸದೆ ಇರುವುದರಿಂದ ಕೆಲವರು ಈ ಸ್ಥಳವನ್ನು ಆಕ್ರಮಿಸಿ ಕೊಳ್ಳಲು ಮುಂದಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವವರ ಮೇಲೆ ಕ್ರಮ ಕೈಗೊಂಡು ಸರಕಾರಿ ಉದ್ಯಾನವನವನ್ನು ಉಳಿಸಿ ಕೊಳ್ಳಲು ಅಗದೆ ಇರುವುದರಿಂದ ಪುರಸಭೆ ಮುಖ್ಯಾಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅ.15ರಂದು ತಹಸೀಲ್ದಾರ್ ಕಛೇರಿ ಆವರಣದಲ್ಲಿ ಧ್ವಜರೋಹಣ ಸಮಯದಲ್ಲಿ ಪ್ರತಿಭಟನೆ ನಡೆಸಲಾಗುವುದು ಹಾಗೂ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

ನರಸಪ್ಪ ಜುಕೂರು, ಪ್ರಕಾಶ್ ದೋತರಬಂಡಿ, ಯಲ್ಲಪ್ಪ ಉಟಕನೂರು,ಬಸವರಾಜ ಬಾಗಲವಾಡ, ಮರಿಯಪ್ಪ, ಸಿದ್ದಾರ್ಥ, ಕರಿವೀರಯ್ಯಸ್ವಾಮಿ, ಮಲ್ಲಯ್ಯ, ರಾಮಕೃಷ್ಣ, ಶೇಖರಪ್ಪ, ಪ್ರಕಾಶ ತಡಕಲ್ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!