ಬೆಂಗಳೂರು: ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ನಿಯಮ ತೆಗೆಯುವ ಬಗ್ಗೆ ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಮಹಾರಾಷ್ಟ್ರ ಸೇರಿ ಕೆಲವು ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ಸಹಿತ ಕೆಲವು ಕೋವಿಡ್ ನಿಯಮಗಳನ್ನು ಸಡಿಲಿಸ ಲಾಗಿದೆ. ರಾಜ್ಯದಲ್ಲಿಯೂ ಯಾವ ಯಾವ ನಿಯಮಗಳನ್ನು ಸಡಿಲಿಸಬೇಕು ಎಂಬುದನ್ನು ಚಿಂತಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಶೇ.90ರಷ್ಟು ಜನ ಈಗಾಗಲೇ ಮಾಸ್ಕ್ ಹಾಕುತ್ತಿಲ್ಲ. ಹಾಗಂತ ನಾವೇನೂ ದಂಡ ವಿಧಿಸುತ್ತಿಲ್ಲ. ಇದೊಂದು ರೀತಿ ಯಲ್ಲಿ ಅಘೋಷಿತ ಮಾಸ್ಕ್ ತೆಗೆದಂತಾಗಿದೆ. ಮಾಸ್ಕ್ ಬೇಕೆ? ಬೇಡವೇ? ಎಂಬುದನ್ನು ಚರ್ಚಿಸಿ ಸರ್ಕಾರ ಸೂಕ್ತ ಆದೇಶ ಹೊರಡಿಸು ತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಓಮೈಕ್ರಾನ್‌ನ ಮತ್ತೊಂದು ತಳಿ ಚೈನಾ ಸಹಿತ ಕೆಲವು ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನಗಳನ್ನೂ ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಕಳುಹಿಸಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.