Sunday, 29th November 2020

ವೈದ್ಯರ ಸೇವೆಗೆ ಸಿಗಲಿ ಗೌರವ

ಪ್ರತಿಕ್ರಿಯೆ

ಡಾ.ಸಿಂಚನ.ವಿ.

ಇತ್ತೀಚೆಗೆ ಲೇಖಕಿ ಉಮಾ ಮಹೇಶ ವೈದ್ಯ ಬರೆದ ‘ಲೇಖನ ಔಷಧಿ ಇಲ್ಲದ ರೋಗಕ್ಕೆ ಚಿಕಿತ್ಸೆ ನೀಡಿ, ಲೂಟಿ ಹೊಡೆದರೇ ಕೋಟಿ ಕೋಟಿ…’ ಲೇಖನಕ್ಕೆ ಪ್ರತ್ಯುತ್ತರವಾಗಿ ಈ ಲೇಖನವನ್ನು ಬರೆಯುತ್ತಿದ್ದೇನೆ.

ಈ ತಿಂಗಳ 20ಕ್ಕೆ ಬರೋಬರಿ ಎಂಟು ತಿಂಗಳಾಯಿತು. ಈ ಕರೋನಾ ರೋಗವು ನಮ್ಮ ಕರ್ನಾಟಕಕ್ಕೆ ಕಾಲಿಟ್ಟು… ಅಲ್ಲಿಂದ ಇಲ್ಲಿಯವರೆಗೆ ಘನ ಸರಕಾರವು ಲಾಕ್ ಡೌನ್, ಸೀಲ್ ಡೌನ್ ಎಂದು ರಾಜ್ಯವನ್ನೇ ಸ್ತಬ್ಧಗೊಳಿಸಿತ್ತು. ಮೊದಲಿಗೆ ಸರಕಾರದ ಎಲ್ಲಾ ಆಸ್ಪತ್ರೆಗಳನ್ನು ಯುದ್ಧ ಮಾದರಿಯಲ್ಲಿ ಸಜ್ಜುಗೊಳಿಸಿ, ಕರೋನಾ ರೋಗವನ್ನು ತಡೆಗಟ್ಟಲು ಅಣಿಗೊಳಿಸಿ, ಟೆಸ್ಟಿಂಗ್, ಟ್ರೇಸಿಂಗ್,
ಟ್ರ್ಯಾಪಿಂಗ್, ಟ್ರೀಟ್ ಮೆಂಟ್ ಎಂಬ ನಾಲ್ಕು ಅಂಶಗಳಿಂದ ನೂತನ ಟೆಕ್ನಾಲಜಿ ಬಳಸಿ, ಹಗಲಿರುಳು ವೈದ್ಯರು, ದಾದಿಯರು, ಮೆಡಿಕಲ್ ಹಾಗೂ ನಾನ್ ಮೆ ಡಿಕಲ್ ಸಿಬ್ಬಂದಿ, ಪೊಲೀಸ್, ಕಂದಾಯ ಇಲಾಖೆ, ಪೌರಕಾರ್ಮಿಕರು, ಸಂಘ ಸಂಸ್ಥೆಗಳು, ಮಠ ಮಾನ್ಯಗಳ ನೆರವಿನಿಂದ ರೋಗ ಪತ್ತೆಹಚ್ಚಲು, ತಡೆಗಟ್ಟಲು, ಚಿಕಿತ್ಸೆ ನೀಡಲು ಹರಸಾಹಸವೇ ನಡೆಸಿದ ಫಲವೇ ಇಂದು ರೋಗ ನಿಯಂತ್ರಣಕ್ಕೆ ಬರುವುದನ್ನು ಕಾಣುತ್ತಿದ್ದೇವೆ.

ಇಂದು 8,51,212 ಪ್ರಕರಣಗಳಲ್ಲಿ 8,08,700 ರೋಗಿಗಳು ಗುಣಮುಖರಾಗಿದ್ದು, 11,449 ರೋಗಿಗಳು ಮಾತ್ರ ಮರಣ ಹೊಂದಿ ದ್ದಾರೆ. ಈಗ ರಾಜ್ಯದಲ್ಲಿ 31063 ರೋಗಿಗಳುಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟನ್ನು ಏಕೆ ಹೇಳಿದೆ ಎಂದರೆ ನೀವು ಔಷಧ ವಿಲ್ಲದ ಕಾಯಿಲೆ ಎಂದರಲ್ಲ ಅದಕ್ಕೆ… ನಿಜ… ಕರೋನಾ ರೋಗಕ್ಕೆ ಔಷಧ/ ಲಸಿಕೆ ಇಲ್ಲ.. ಆದರೆ ಅದನ್ನು ತಡೆಗಟ್ಟಲು, ರೋಗದ ತೀವ್ರತೆ ಕಡಿಮೆ ಮಾಡಲು, ಸಾವಿನಿಂದ ತಡೆಯಲು ಅಲೋಪತಿಯಲ್ಲಿ ಹಲವು ಮಾರ್ಗಗಳು ಇವೆ. ಈ ಕರೋನಾ ರೋಗವು ಪ್ರಪಂಚಕ್ಕೆ ಹೊಸತು. ಇದರ ನಡೆ, ವಿಚಿತ್ರ ಹಾಗೂ ವಿಭಿನ್ನ. ದೇಶದಿಂದ ದೇಶಕ್ಕೆ, ಪ್ರಾಂತ್ಯದಿಂದ ಪ್ರಾಂತ್ಯಕ್ಕೆ, ರಾಜ್ಯ ದಿಂದ ರಾಜ್ಯಕ್ಕೆ.

ವ್ಯತ್ಯಾಸವಾಗುತ್ತಿದೆ. ಇದನ್ನು ಸರಿಯಾಗಿ ಅಭ್ಯಸಿಸಿ ಹಲವಾರು ಮಾರ್ಗಗಳನ್ನು ಅಲೋಪತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ,
ಐಸಿಎಂಆರ್, ಎಫ್.ಡಿ.ಎಗಳು ಸೂಚಿಸಿದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಇವೆಲ್ಲ ಅಲೋಪತಿಯಲ್ಲಿ Evidence Based
Medicine ತತ್ವದಲ್ಲಿ ಪ್ರಾಯೋಗಿಸಲಾಗುತ್ತದೆ.

ಯಾವುದೇ ರೋಗವನ್ನು ಸೂಕ್ತ ಚಿಕಿತ್ಸೆಯಿಲ್ಲವೆಂದು ಕೈಬಿಡಲಾಗುವ ಪ್ರಮಯವೇ ಇರುವುದಿಲ್ಲ. ಹಿಪೊಕ್ರೆಟಿಕ್ ಪ್ರಮಾಣ ಪಡೆದಿರುವ ಅಲೋಪತಿ ವೈದ್ಯರು ಕಡೆಯವರೆಗೂ ಸಾವಿನಿಂದ ರೋಗಿಯನ್ನು ಉಳಿಸಲು ಪ್ರಯತ್ನ ಪಟ್ಟೇ ಪಡುತ್ತಾರೆ. ಚಿಕಿತ್ಸೆ ಯಿಲ್ಲವೆಂದು ಕೈಕಟ್ಟಿ ಕೂರುವವರಲ್ಲ. ಯಾವುದೇ ಔಷಧವದರೂ ಪರಿಣಾಮವಿದ್ದಷ್ಟೇ , ಅಡ್ಡ ಪರಿಣಾಮವಿರುತ್ತದೆ. ಅದರ ಉಪಯೋಗ ಮತ್ತು ಅಪಾಯವನ್ನು ತುಲನೆ ಮಾಡಿ ಚಿಕಿತ್ಸೆ ನೀಡುವುದೇ ವೈದ್ಯರ ಕೆಲಸ. ನೀವು ಜನರಿಗೆ ಕರೋನಾಗೆ ಚಿಕಿತ್ಸೆ ಇದೆಯೇ? ಅಡ್ಡ ಪರಿಣಾಮವಿಲ್ಲವೇ? ಎಂದು ವೈದ್ಯರನ್ನು ಕೇಳಿ ಎಂದು ಕರೆ ಕೊಟ್ಟಿರುವುದು ನೋಡಿದರೆ… ಈ ವಿಷಯ ನಿಮಗೆ ತಿಳಿದಿಲ್ಲವೆನಿಸುತ್ತದೆ.

ರೆಮಿಡಿಸಿವಿರ್ ಔಷಧವು ಪ್ರಾಯೋಗಿಕವಾಗಿ ಹಲವಾರು ದೇಶಗಳಲ್ಲಿ ಬಳಸಿ, ಉಪಯೋಗಿಸುತ್ತಿರುವ ಔಷಧ. ಇದು ಸೂಕ್ತ
ಸಮಯದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಂಡು ಬಳಸಿದಲ್ಲಿ ಖಂಡಿತ ಉಪಯೋಗವಾಗುತ್ತದೆ. ರೋಗಿಯ ಸೂಕ್ತ ಆಯ್ಕೆ ಅತ್ಯ ಮೂಲ್ಯ. ಅಲ್ಲದೇ ಈ ಔಷಧವನ್ನು ಬಳಸುವಾಗ ರೋಗಿಯ ಸಂಬಂಧಿಕರ ಒಪ್ಪಿಗೆ ಬೇಕೇ ಬೇಕು. ಇದರ ಅಡ್ಡ ಪರಿಣಾಮ ಗಳನ್ನು ತಿಳಿಸಿ, ಒಪ್ಪಿಗೆ ಪಡೆದೆ ನೀಡಲಾಗುತ್ತಿದೆ ಎಂಬ ಅಂಶಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ನೀವು ವಿಕಿಪೀಡಿಯ ಹೇಳಿದಂತೆ ಎಂದು ಇಂಟರ್ ನೆಟ್ ಜ್ಞಾನವನ್ನು ಬಳಸಿ ಹೇಳಿದ್ದು ನೋಡಿ, ನಿಮಗೆ ಅಧುನಿಕ ವೈದ್ಯಶಾಸ್ತ್ರದ
ಸೀಮಿತ ಜ್ಞಾನವಿದ್ದು, ಅದರ ಬಗ್ಗೆ ಮಾತನಾಡಲು, ತುಂಬ ಅಭ್ಯಸಿಸಿ, ಕರೋನಾ ಚಿಕಿತ್ಸೆಯಲ್ಲಿ ತೊಡಗಿರುವ ಅಲೋಪತಿ
ವೈದ್ಯರೊಂದಿಗೆ ಚರ್ಚಿಸುವ ಅಗತ್ಯತೆಯಿದೆ ಎನಿಸುತ್ತದೆ. ಇನ್ನೂ ಡಾ.ಗಿರಿಧರ್ ಕಜೆ ಔಷಧದ ಬಗ್ಗೆ ಮಾತನಾಡುವಷ್ಟು ನೀವು ಲೂಟಿ ಹೊಡೆದಿದ್ದಾರೆ ಎಂದು ಅಪಾದಿಸಿದ್ದೀರಿ..

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಖಂಡಿತ ದೊರೆತಿದೆ. ಇನ್ನೂ ಖಾಸಗಿ ಆಸ್ಪತ್ರೆ, ಖಂಡಿತವಾಗಿ ಹಣವುಳ್ಳವರ, ಐಷಾರಾಮಿ ಜನರ ಆಯ್ಕೆ… ಅವರಿಗೆ ಬೇಕಾದ ವಾತಾವರಣದಲ್ಲಿ, ಸಾವಿನಿಂದ ಅಭಯ ನೀಡುವ ಆಯ್ಕೆಗಾಗಿ ಹಣ ನೀಡಿರುತ್ತಾರೆ..ಬಿಡಿ… ಬಹುತೇಕ ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರವನ್ನೇ ಪಡೆದಿರುತ್ತಾರೆ. ಕೆಲವು ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ, ಜನಕ್ಕೆ ತಕ್ಕಂತೆ, ಅವರವರ ಆಯ್ಕೆಗೆ ತಕ್ಕಂತೆ ದರ ವಿಧಿಸಿರುತ್ತಾರೆ. ಇದರಲ್ಲಿ ಲೂಟಿಯ ಅಂಶವೆಲ್ಲಿ ಬರುತ್ತದೆ. ಒಬ್ಬ ಚಿಕಿತ್ಸೆ ನೀಡುವು ದನ್ನು ಐ.ಪಿ.ಸಿ.ಕಲಂ.715ಕ್ಕೆ ತಾಳೆ ಮಾಡಿ, ಕೊಲೆ ಸಮಾನವೆನ್ನುವುದಾದರೆ, ವೈದ್ಯ ಯಾವ ಧೈರ್ಯದ ಮೇಲೆ ಚಿಕಿತ್ಸೆ  ನೀಡ ಬೇಕು? ನೀವೇ ಹೇಳಿ? ಪ್ರತಿ ವೈದ್ಯನು ಯಾವುದೇ ಔಷಧವನ್ನು ತಾನು ತಯಾರಿಸುವುದಿಲ್ಲ.. ಔಷಧದ ಮೇಲಿರುವ ತಯಾರಕ ಮುದ್ರಿಸಿರುವ ಹೆಸರು, ಒಳಗೊಂಡ ಅಂಶಗಳನ್ನು, ಅವಧಿಗಳನ್ನು ನಂಬಿ, ದೇವರ ಮೇಲೆ ಭಾರ ಹಾಕಿ, ರೋಗಿಯ ಒಳತಿಗಾಗಿ ನೀಡುತ್ತಾನೆ ಎಂಬ ಅಂಶ ನಿಮ್ಮ ಗಮನಕ್ಕೆ ಬಾರದೇ ಹೋದದ್ದು ಸೋಜಿಗ. ಒಟ್ಟಾರೆ ಈ ಲೇಖನವು , ಕೊರೋನ ರೋಗದಿಂದ ಯೋಧರಷ್ಟೇ ಜೀವದ ಹಂಗು ತೊರೆದು, ಹಗಲಿರುಳು ದುಡಿದ, ದುಡಿಯುತ್ತಿರುವ ವೈದ್ಯ, ಶುಶ್ರೂಷಕಾ ಹಾಗೂ  ಪೂರಕ ಸಿಬ್ಬಂದಿಯ ಸೇವೆಯನ್ನು ಅಣುಕಿಸಿದೆ ಹಾಗೂ ಮನ ನೋಯಿಸಿದೆ.

Leave a Reply

Your email address will not be published. Required fields are marked *