ಪ್ರತಿಭಟನೆ ಹಿಂಪಡೆಯಲು ಆರು ಷರತ್ತುಗಳನ್ನು ಇಟ್ಟ ವೈದ್ಯರು, ಬೇಷರತ್‌ ಕ್ಷಮೆಯಾಚಿಸಲು ಮಮತಾಗೆ ಆಗ್ರಹ

ಮಮತಾ ಬ್ಯಾನರ್ಜಿ ನೇತೃತ್ವದದ ಪಶ್ಚಿಮ ಬಂಗಾಳ ಸರಕಾರದ ವಿರುದ್ಧ ನಾಲ್ಕು ದಿನಗಳಿಂದ ಧರಣಿ ಕುಳಿತಿರುವ ಪ್ರತಿಭಟನಾ ನಿರತ ವೈದ್ಯರು, ಮುಷ್ಕರ ಹಿಂಪಡೆಯಲು ಆರು ಷರತ್ತುಗಳನ್ನು ಮುಂದಿಟ್ಟಿದ್ದರು, ತಮ್ಮ ವರ್ತನೆಗಾಗಿ ಮುಖ್ಯಮಂತ್ರಿಗಳು ಕ್ಷಮಡಯಾಚಿಸಬೇಕು ಎಂದಿದ್ದಾರೆ.

“ಗುರುವಾರದಂದು SSKM ಆಸ್ಪತ್ರೆಯನ್ನು ತಾವು ಮಾತನಾಡಿದ ರೀತಿಗೆ ಮಮತಾ ಷರತ್ತುರಹಿತ ಕ್ಷಮೆಯಾಚಿಸಬೇಕು,” ಕಿರಿಯ ವೈದ್ಯರ ಜಂಟಿ ವೇದಿಕೆಯ ವಕ್ತಾರ ಡಾ. ಅರೀಂದಮ್‌ ದತ್ತಾ ಹೇಳಿದ್ದಾರೆ. ಆಸ್ಪತ್ರೆಯ ಆವರಣ ಪ್ರವೇಶಿಸಿರುವ ಹೊರಗಿನ ಮಂದಿ ಸಾಕಷ್ಟು ಘರ್ಷಣೆಯಲ್ಲಿ ಭಾಗಿಯಾಗಿದ್ದು, ಈ ಗಲಭೆಗಳು CPI(M) ಹಾಗೂ ಬಿಜೆಪಿಯ ಸಂಚಿನ ಭಾಗವಾಗಿವೆ ಎಂದು ದೀದಿ ಹೇಳಿದ್ದರು.

ಇನ್ನುಳಿದ ಐದು ಷರತ್ತುಗಳು
1. ಗಾಯಗೊಂಡಿರುವ ವೈದ್ಯರನ್ನು ಬ್ಯಾನರ್ಜಿ ಭೇಟಿ ಮಾಡಬೇಕು. ದಾಳಿಯನ್ನು ಖಂಡಿಸಿ ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಪ್ರಕಟಭೆ ಬಿಡುಗಡೆ ಮಾಡಬೇಕು.
2. NRS ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಗಲಭೆಯಲ್ಲಿ ವೈದ್ಯರಿಗೆ ರಕ್ಷಣೆ ಕೊಡಲು ವಿಫಲರಾದ ಪೊಲೀಸರ ಕ್ರಿಯಾಹೀನ ನಡವಳಿಕೆ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಈ ಕುರಿತು ಖುದ್ದು ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ, ದಾಖಲೆಗಳ ಸಮೇತ ತನಿಖೆಯ ಸಾಕ್ಷ್ಯಗಳನ್ನು ಒದಗಿಸಬೇಕು.
3. ದಾಳಿಕೋರರ ವಿರುದ್ಧ ತೆಗೆದುಕೊಂಡ ಕ್ರಮಗಳ ಕುರಿತಂತೆ ದಾಖಲೆಗಳು ಹಾಗೂ ವಿವರಗಳನ್ನು ಒದಗಿಸಬೇಕು.
4. ರಾಜ್ಯಾದ್ಯಂತ ಪ್ರತಿಭಟನೆಯಲ್ಲಿ ನಿರತರಾದ ಕಿರಿಯ ವೈದ್ಯರ ವಿರುದ್ಧ ದಾಖಲಿಸಲಾದ ಎಲ್ಲ ಸುಳ್ಳು ಪ್ರಕರಣಗಳು ಹಾಗೂ ಮೊಕದ್ದಮೆಗಳ ಹಿಂಪಡೆತ.
5. ವೈದ್ಯಕೀಯ ಸವಲತ್ತುಗಳು ಹಾಗೂ ಮೂಲ ಸೌಕರ್ಯಗಳಲ್ಲಿ ಸುಧಾರಣೆ ಹಾಗೂ ಶಸ್ತ್ರ ಸಜ್ಜಿತ ಪೊಲೀಸರ ನಿಯೋಜನೆ.

ಗಾಯಗೊಂಡ ವೈದ್ಯರನ್ನು ಬ್ಯಾನರ್ಜಿ ಇನ್ನೂ ಭೇಟಿಯಾಗಿಲ್ಲ.

ಕೆಲಸ ಮಾಡುವ ಸಂದರ್ಭ ತೋರಿದ ಉದಾಸೀನತೆಯ ವಿಚಾರವಾಗಿ, ಕೋಲ್ಕತ್ತಾದ NRS ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ದಂಗೆಕೋರರು ಹಲ್ಲೆ ಮಾಡಿದ ಕಾರಣ, ಇಬ್ಬರು ಕಿರಿಯ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗಿನಿಂದ, ತಾವು ಕೆಲಸ ಮಾಡುವ ಜಾಗಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಕೋರಿ ಪಶ್ಚಿಮ ಬಂಗಾಳದಲ್ಲಿರುವ ಕಿರಿಯ ವೈದ್ಯರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ದೇಶಾದ್ಯಂತ ವೈದ್ಯರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಜೂನ್‌ 17ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದೆ.

ಪರಿಸ್ಥತಿ ಕೈಮೀರಿ ಹೋಗುತ್ತಿರುವುದನ್ನು ಗ್ರಹಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್‌‌ವರ್ಧನ್‌, ಪೊಳ್ಳು ಪ್ರತಿಷ್ಠೆ ಬಿಟ್ಟು ಮಮತಾ ವೈದ್ಯರೊಂದಿಗೆ ಮಾತುಕತೆಗೆ ಮುಂದಾಗಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುವುದಲ್ಲದೇ ಅವರಿಗೆ ಭದ್ರತೆ ಒದಗಿಸಬೇಕು ಎಂದಿದ್ದಾರೆ.

ಶುಕ್ರವಾರ ಸಂಜೆಯ ವೇಳೆ ಕೋಲ್ಕತ್ತಾದ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನಲ್ಲಿ ಮತ್ತೊಬ್ಬ ಕಿರಿಯ ವೈದ್ಯನ ಮೇಲೆ ಹಲ್ಲೆ ನಡೆಸಲಾಗಿದೆ.

Leave a Reply

Your email address will not be published. Required fields are marked *