Saturday, 16th October 2021

ಮೊದಲ ಸಲ ಯಾರಿಗೂ ಬೇಡವಾಗುವ ಹೊಸ ಐಡಿಯಾ

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ವಿಶ್ವಚಿತ್ರನಗರಿ ಹಾಲಿವುಡ್‌ಲ್ಲಿ ಒಂದು ಬೀದಿಯಿದೆ. ಅಲ್ಲಿಗೆ ಹೋದವರೆಲ್ಲ ಈ ಬೀದಿಗೆ ಹೋಗದೇ ಬರುವುದಿಲ್ಲ. ಅಲ್ಲಿ ನಿಂತು ಫೋಟೊ ತೆಗೆಸಿಕೊಳ್ಳದೆ
ಹಾಲಿವುಡ್ ಭೇಟಿ ಪೂರ್ಣವಾಗುವುದಿಲ್ಲ. ಈ ಬೀದಿಗೆ ‘ವಾಕ್ ಆಫ್ ಫೇಮ್’ ಅಂತ ಹೆಸರು. ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ ನಟ, ನಟಿ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ ಹಾಗೂ ಇತರ ಗಣ್ಯವ್ಯಕ್ತಿಗಳ ಹೆಸರನ್ನು ತಾಮ್ರದ ಅಕ್ಷರಗಳಲ್ಲಿ ಕೆತ್ತೆ, ನಕ್ಷತ್ರದ ಆಕಾರದೊಳಗೆ ಜೋಡಿಸಿ, ಅಲ್ಲಿನ ಫುಟ್‌ಪಾತ್ ಗೆ ಫಿಕ್ಸ್ ಮಾಡಲಾಗಿದೆ.

ಪ್ರತಿ ಆರು ಅಡಿ ಅಂತರದಲ್ಲಿ ಒಬ್ಬೊಬ್ಬರ ಹೆಸರಿನಂತೆ ಸುಮಾರು 2500 ಮಂದಿ ಹೆಸರನ್ನು 2.7 ಕಿ.ಮೀ. ಉದ್ದದ ಬೀದಿಯುದ್ದಕ್ಕೂ ಜೋಡಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿದವರೆಲ್ಲ ತಮ್ಮ ಆರಾಧ್ಯ ನಟ, ನಟಿಯರ ಹೆಸರಿನ ಮುಂದೆ ನಿಂತುಕೊಂಡು, ಫೋಟೊ ತೆಗೆಸಿಕೊಂಡು ಸಂಭ್ರಮಿಸುತ್ತಾರೆ. ಇದೊಂದು ರೀತಿಯಲ್ಲಿ ಸಾರ್ವಜನಿಕ ಸ್ಮಾರಕವಿದ್ದಂತೆ. ಇಷ್ಟು ಉದ್ದದ ಸ್ಮಾರಕ ಮತ್ತೆಲ್ಲೂ ಇಲ್ಲ. ಏನಿಲ್ಲವೆಂದರೂ ಪ್ರತಿವರ್ಷ ಒಂದು ಕೋಟಿ ಮಂದಿ ‘ವಾಕ್ ಆಫ್ ಫೇಮ್’ ಬೀದಿಗೆ ಭೇಟಿ ನೀಡುತ್ತಾರೆ. ಇಲ್ಲಿ ಯಾರ ಹೆಸರಿನ ನಕ್ಷತ್ರವನ್ನು ಬೇಕಾ ದರೂ ಫುಟ್‌ಪಾತ್‌ನಲ್ಲಿ ಕೆತ್ತಿ ಹಾಕಲು ಆಗುವುದಿಲ್ಲ.

ಅದಕ್ಕೆಂದೇ Hollywood Chamber of Commerce Walk of Fame Selec on Comi ee ಇದೆ. ಪ್ರತಿವರ್ಷ ಇನ್ನೂರಕ್ಕೂ ಹೆಚ್ಚು ಅರ್ಜಿಗಳು ಬರುತ್ತವೆ. ಆ ಪೈಕಿ ಹದಿನೈದಿಪ್ಪತ್ತು ಹೆಸರುಗಳು ಅಖೈರಾಗುತ್ತವೆ. ಇದಕ್ಕೆ ಮತದಾನವೂ ನಡೆಯುತ್ತದೆ. ಅಭಿಮಾನಿಗಳಲ್ಲಿ ಈ ‘ವಾಕ್ ಆಫ್ ಫೇಮ್’ ಬಗ್ಗೆ ಅದೆಂಥ ಅಭಿಮಾನ, ಹೆಮ್ಮೆ ಇದೆ ಅಂದ್ರೆ, ಈ ಫುಟ್‌ಪಾತಿನಲ್ಲಿ ಯಾರ ಹೆಸರು ಆಯ್ಕೆಯಾಗುತ್ತೋ ಅವರು ಹಾಲಿವುಡ್‌ನ ನಿಜವಾದ ಸ್ಟಾರ್! ಅವನೋ ಅವಳೋ ಸ್ಟಾರ್ ಆಗಿರಬಹುದು. ಆದರೂ ಅವರ ಹೆಸರು ಈ ಬೀದಿಯಲ್ಲಿನ ಫುಟ್‌ಪಾತಿನಲ್ಲಿ ಕಾಣಿಸಿಕೊಳ್ಳದಿದ್ದರೆ, ಅವರು ನಿಜವಾದ ಸ್ಟಾರ್ ಅಲ್ಲ.

ನಮ್ಮ ಕನ್ನಡ ನಟ ಶಂಕರನಾಗ್ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಹಾಲಿವುಡ್‌ನ ‘ವಾಕ್ ಆಫ್ ಫೇಮ್’ಗೆ ಹೋಗಿದ್ದರಂತೆ. ಈ ಐಡಿಯಾವೇ ಅವರಿಗೆ ಬಹಳ ಹಿಡಿಸಿ ತಂತೆ. ಈ ಬೀದಿಯುದ್ದಕ್ಕೂ ನಾಲ್ಕೈದು ಸಲ ನಡೆದಾಡಿ ತಮ್ಮ ಇಷ್ಟದ ನಟನಟಿಯರ ‘ನಕ್ಷತ್ರ’ದ ಮುಂದೆ ನಿಂತು ಫೋಟೋ ತೆಗೆಸಿಕೊಂಡರಂತೆ. ಇಡೀ ಬೀದಿ ಯೇ ಟೂರಿಸ್ಟ್ ಸೆಂಟರ್ ಆಗಿ ಬದಲಾದ ಹಾಗೆ ಅವರಲ್ಲಿ ಹೊಸ ಯೋಚನೆ ಹಾದುಹೋಯಿತಂತೆ.

ಬೆಂಗಳೂರಿಗೆ ಬಂದರವರೇ ತಮ್ಮ ಸ್ನೇಹಿತರ ಮುಂದೆ ‘ನಾವು ಒಂದು ವಾಕ್ ಆಫ್ ಫೇಮ್’ ಅನ್ನು ಯಾಕೆ ಆರಂಭಿಸಬಾರದು? ಎಂದು ಕೇಳಿ ಅವರಿಗೆಲ್ಲ ಈ ಯೋಚನೆಯನ್ನು ಬಣ್ಣಿಸಿದರಂತೆ. ಇದಕ್ಕಾಗಿ ಗಾಂಽನಗರ ಇಲ್ಲವೇ, ಎಂ, ಜಿ ರೋಡ್ ಲಾಯಕ್ಕಾದ ಸ್ಥಳ ಎಂದು ನಿರ್ಧರಿಸಿದರಂತೆ. ಶಂಕರನಾಗ್ ತಲೆಯಲ್ಲಿ ಯಾವುದಾದರೂ ಯೋಚನೆಯ ಹುಳ ಹೊಕ್ಕಿದರೆ ಕೇಳಬೇಕಾ? ಅದನ್ನು ಮಾಡಿ ಮುಗಿಸುವ ತನಕ ಸಮಾಧಾನವಿಲ್ಲ. ಗಾಂಧಿನಗರ ಹಾಗೂ ಎಂ.ಜಿ.ರೋಡಿನಲ್ಲಿ ‘ವಾಕ್ ಆಫ್ ಫೇಮ್’ ಗೆ ಪರವಾನಗಿ ಕೊಡುವಂತೆ ಮಹಾನಗರ ಪಾಲಿಕೆಗೆ ಅರ್ಜಿ ಕೊಟ್ಟರಂತೆ. ಪಾಲಿಕೆ ಒಪ್ಪಿಗೆ ಕೊಟ್ಟು ಬಿಡುತ್ತಿತ್ತೇನೊ!

ಕಾರಣ ಇಷ್ಟೇ. ಫುಟ್‌ಪಾತ್ ಮೇಲೆ ಕನ್ನಡದ ಮೇರು ನಟನಟಿಯರ ಹೆಸರುಗಳನ್ನೆಲ್ಲ ತಾಮ್ರದ ಹೆಸರುಗಳಲ್ಲಿ ಕೆತ್ತುತ್ತೀರಿ, ಹಾಲಿವುಡ್ ಬೀದಿಗಳಂತೆ ಇಲ್ಲೂ ಹಾಗೇ ಮಾಡ್ತೀರಿ ಅಂತಿಟ್ಟುಕೊಳ್ಳೋಣ. ಆದರೆ ಜನ ನಮ್ಮ ನಟನಟಿಯರ ಹೆಸರನ್ನು ತುಳಿದುಕೊಂಡು ಹೋಗುವುದನ್ನು ಹೇಗೆ ಸಹಿಸಿಕೊಳ್ಳುವುದು? ನಟ ಸಾರ್ವಭೌಮ ರಾಜಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಅಂಥವರ ಹೆಸರುಗಳನ್ನೆಲ್ಲ ಬೀದಿ ನೆಲದ ಮೇಲೆ ಬರೆಯಿಸಿದಾಗ ಅದನ್ನು ಕಾಲಿನಿಂದ ತುಳಿದು ಕೊಂಡು ಹೋದರೆ ನೋವಾಗದೇ, ಏನೋ ಒಂಥರಾ ಹಿಂಸೆಯಾಗದೇ ಇರುತ್ತದಾ? ಅವೆಲ್ಲ ಅಮೆರಿಕನ್ ಸಂಸ್ಕೃತಿಗೆ ಒಗ್ಗಬಹುದು, ನಮಗಲ್ಲ. ಕಲಾವಿದರಿಗೆ ಅಗೌರವ, ಅವಮಾನ ಮಾಡ್ಬೇಕು ಅಂತಿದ್ದರೆ ‘ವಾಕ್ ಆಫ್ ಫೇಮ್’ ಮಾಡಬಹುದು.

ಯಾವಾಗ ತಮ್ಮ ವೃತ್ತಿ ಬಾಂಧವರಿಂದ ಇಂಥ ಪ್ರತಿಕ್ರಿಯೆ ಬಂತೋ ಉಸಾಬರಿಯೇ ಬೇಡ ಎಂದು ಶಂಕರ್‌ನಾಗ್ ಸುಮ್ಮನಾಗಿ ಬಿಟ್ಟರು. ಹಾಗೆಂದು ಇದನ್ನು
ವಿರೋಽಸಿದವರೆಲ್ಲಾ ಹಾಲಿವುಡ್‌ಗೆ ಹೋಗಿ, ಆ ಬೀದಿಯ ಮೇಲೆ ನಡೆದು ಬಂದವರೇ! ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಮೊದಲ ಬಾರಿಗೆ ಯಾರಾ ದರೂ ಹೊಸ ಐಡಿಯಾವನ್ನು ಕೊಟ್ಟರೆ ಯಾರೂ ಒಪ್ಪಿಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ತಣ್ಣೀರು ಎರಚುತ್ತಾರೆ. ಅಪಹಾಸ್ಯ, ಗೇಲಿ ಮಾಡುತ್ತಾರೆ. ಇದು ಕೇವಲ ಶಂಕರನಾಗ್ ಅನುಭವವೊಂದೇ ಅಲ್ಲ.

ಸಮಾಜ ಜಗತ್ತು ಇರುವುದೇ ಹೀಗೆ. ಹೊಸ ಐಡಿಯಾ ಕಂಡರೆ ಎಲ್ಲರಿಗೂ ತಾತ್ಸಾರ, ಏನೋ ನಿರುತ್ಸಾಹ. ಹಾಗಾಗಿ ಬಿಟ್ಟರೆ, ಹೀಗಾಗಿ ಬಿಟ್ಟರೆ ಎಂಬ ಆತಂಕ. ನಾನು ಇತ್ತೀಚೆಗೆ ಸುಮಾರು ಎಪ್ಪತ್ತು ವರ್ಷ ಹಳೆಯ, ಬೆಣ್ಣೆ ದೋಸೆಗೆ ಪ್ರಸಿದ್ಧವಾದ ಒಂದು ಹೋಟೆಲ್‌ಗೆ ಹೋಗಿದ್ದೆ. ದೋಸೆಯೇನೋ ಬಹಳ ಚೆನ್ನಾಗಿತ್ತು. ಆದರೆ ಒಂದು ಪದರ ಬೆಣ್ಣೆ ಅಂಟಿದ ಪ್ಲೇಟನ್ನು ನೋಡಿದರೆ ದೋಸೆ ತಿನ್ನಲು ಮನಸ್ಸು ಒಪ್ಪುತ್ತಿರಲಿಲ್ಲ. ಯಾವ ಪ್ಲೇಟೂ ಕ್ಲೀನಾಗಿರಲಿಲ್ಲ. ನನಗೆ ತಡೆದುಕೊಳ್ಳಲು ಆಗಲಿಲ್ಲ. ಹೊಟೇಲ್ ಮಾಲೀಕರ ಬಳಿ ‘ಸ್ವಚ್ಛವಾಗಿರುವ ಪ್ಲೇಟನ್ನು ಏಕೆ ಕೊಡುವುದಿಲ್ಲ. ಬಳಸಿ ಎಸೆಯುವ ಪೇಪರ್ ಪ್ಲೇಟ್‌ಗಳನ್ನು ಕೊಡಬಹುದಲ್ಲ ?’ ಎಂದು ಹೇಳಿದರೆ, ಅವರೇನು ಹೇಳಿದರು ಗೊತ್ತಾ? ‘ಎಪ್ಪತ್ತು ವರ್ಷಗಳಿಂದ ಇದೇ ಪ್ಲೇಟ್‌ನ್ನು ಕೊಡುತ್ತಿದ್ದೇವೆ.

ಈಗ ಏಕಾಏಕಿ ಬದಲಾಯಿಸಿದರೆ ಗಿರಾಕಿ ಒಪ್ಪುವುದಿಲ್ಲ. ಅದಕ್ಕಾಗಿ ಇದನ್ನೇ ಬಳಸುತ್ತಾ ಇದ್ದೇವೆ’ ಇಂಥ ಮನುಷ್ಯರ ಜತೆ ಏನಂತಾ ವಾದ ಮಾಡೋದು ? ಇನ್ನು ಮುಂದೆ ಆ ಹೊಟೇಲ್‌ಗೆ ಹೋಗಬಾರದೆಂದು ತೀರ್ಮಾನಿಸಿದೆ. ನಮ್ಮ ಪತ್ರಿಕೋದ್ಯಮದಲ್ಲೂ ಅಷ್ಟೇ, ಯಾರೂ ಅಷ್ಟಾಗಿ ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಅಂದರೆ ಓದುಗರು ಇಷ್ಟಪಡೊಲ್ಲ ಅಂತ ಅಲ್ಲ. ಸುದ್ದಿಮನೆಯಲ್ಲಿರುವವರೇ ಇಷ್ಟಪಡುವುದಿಲ್ಲ. ಓದುಗರು ಏನು ಭಾವಿಸುತ್ತಾರೋ? ಓದುಗರು ಇನ್ನೇನು ತಿಳಿದು ಕೊಳ್ಳುತ್ತಾರೋ? ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಟ್ಟರೆ ಏನು ಗತಿ ಎಂದು ಭಾವಿಸಿ ಸುಮ್ಮನಾಗಿಡುತ್ತಾರೆ.

ಹೀಗಾಗಿ ಪತ್ರಿಕೆ ಮೊದಲಿನಂತೆಯೇ ಇದೆ. ಒಂದು ಬಾಲ್‌ಪಾಯಿಂಟ್ ಪೆನ್, ಹೇರ್‌ಪಿನ್, ರಬ್ಬರ್‌ಬ್ಯಾಂಡ್, ಅಂಗಿಯ ಗುಂಡಿ(ಬಟನ್) ಬದಲಾದಷ್ಟು ಪತ್ರಿಕೆ ಬದಲಾಗಿಲ್ಲ. ಪತ್ರಿಕಾ ಬರವಣಿಗೆ, ವರದಿ, ರಚನಾ ಕ್ರಮ, ನಿರೂಪಣೆ… ಹೀಗೆ ಎಲ್ಲವೂ ಕಳೆದ ಐವತ್ತು ವರ್ಷಗಳಿಂದ ಹೇಗಿದ್ದವೋ ಈಗಲೂ ಹಾಗೇ ಇದೆ.
ಸುಮಾರು ಎರಡು ದಶಕಗಳ ಹಿಂದೆ ನಾವು ಸುದ್ದಿಮನೆಗೆ ಬಂದಾಗ ಅದೆಂಥಾ ಜಿಗುಟು ವಾತಾವರಣವಿತ್ತೆಂದರೆ, ಸುದ್ದಿಯನ್ನು ಹೀಗೆ ಅಂದರೆ ಹೀಗೇನೇ ಬರಿ ಬೇಕು, ಪುಟವನ್ನು ಹಾಗೆ ಅಂದ್ರೆ ಹಾಗೇನೇ ವಿನ್ಯಾಸ ಮಾಡಬೇಕು.

ಹೆಡ್‌ಲೈನ್‌ಗಳನ್ನು ಹೇಗೇಗೋ ಕೊಡುವಂತಿಲ್ಲ. ಹಾಕಿದ ಚೌಕಟ್ಟನ್ನು ಮೀರುವಂತಿಲ್ಲ ಎಂಬ ನೂರಾನಲವತ್ನಾಲ್ಕನೆಯ ಕಲಂ ಸದಾ ಜಾರಿ. ಲೀಡ್ ಐಟೆಮ್ (ಮುಖ ಪುಟದ ಪ್ರಧಾನ ಸುದ್ದಿ) ಅಂತ್ಯಪ್ರಾಸದ ಶೀರ್ಷಿಕೆಯನ್ನೇನಾದರೂ ಕೊಟ್ಟಾಗ, ಅಲ್ಲಿಗೆ ‘ಟಿ.ಎಸ್.ರಾಮಚಂದ್ರರಾಯರಿದ್ದರೆ ನಿಮ್ಮನ್ನು ಸುಮ್ಮನೆ ಬಿಡುತ್ತಿ ರಲಿಲ್ಲ. ಖಾದ್ರಿಯವರು ಇದನ್ನು ನೋಡಿದರೆ ಕೆಂಡಾ ಮಂಡಲವಾಗುತ್ತಿದ್ದರು. ಶ್ಯಾಮರಾಯರ ಕೈಗೆ ಈ ಕಾಪಿ ಏನಾದರೂ ಸಿಕ್ಕಿದ್ದರೆ ನಿನ್ನನ್ನು ಡಿಸ್ಮಿಸ್ ಮಾಡದೇ ಬಿಡುತ್ತಿರಲಿಲ್ಲ’ ಎಂದು ನಮ್ಮ ಹಿರಿಯರು ಹೆದರಿಸುತ್ತಿದ್ದರು. ಲೀಡ್ ಹೆಡ್ಡಿಂಗ್‌ನಲ್ಲಿ ಗಾಂಭೀರ‍್ಯವಿರಬೇಕು.

ಪನ್ ಮಾಡಬಾರದು, ಡಬಲ್ ಮೀನಿಂಗ್ ಇರಕೂಡದು, ಚೋದ್ಯ ಬೇಡವೇ ಬೇಡ, ಪ್ರಾಸ ಬಿಲ್‌ಕುಲ್ ಉಹುಂ. ಸಿನಿಮಾ ಹೆಸರು ಡೈಲಾಗ್ ಬಳಸಿದ ಶೀರ್ಷಿಕೆಗೆ
ಗರಂ.. ಕಣ್ಣಕಾಪು ಕಟ್ಟಿಕೊಂಡೇ ಕೆಲಸ ಮಾಡಬೇಕು. ಒಂದು ವೇಳೆ ವೈಯೆನ್ಕೆಯವರಂಥ ಸಂಪಾದಕರು ಇಂಥ ಪ್ರಯೋಗ ಗಳನ್ನು ಇಷ್ಟಪಟ್ಟರೂ ಡೆಸ್ಕ್‌ನಲ್ಲಿ ರುವ ಹಿರಿಯರು, ‘ಸಂಪಾದಕರು ನಾಳೆ ನನ್ನನ್ನು ಕೇಳ್ತಾರೆ ಗೊತ್ತಾ. ಇಂಥಾ ಪ್ರಯೋಗವೆಲ್ಲ ಬೇಡ’ ಎಂದು ಸುಮ್ಮನಾಗಿಸಿಬಿಡುತ್ತಿದ್ದರು. ಕನ್ನಡ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಗಮನಿಸಿದರೆ ನಿಮಗೆ ಗೊತ್ತಾಗುತ್ತದೆ.

ಸಂಪಾದಕೀಯ ಪುಟದ ಬಗ್ಗೆ ಇದಕ್ಕಿಂತ ಬಿರುಸಾದ, ಗಡುಸಾದ, ನಿಲುವು. ‘ಸಂಪಾದಕೀಯ ಪುಟ’ ಅಂದ್ರೆ ಏನಂತಾ ತಿಳಿದುಕೊಂಡಿದ್ದೀರಿ. ಅದು ಪತ್ರಿಕೆಯ ಆತ್ಮವಿದ್ದ ಹಾಗೆ, ಪತ್ರಿಕೆಯ ಗರ್ಭಗುಡಿ ಇದ್ದ ಹಾಗೆ ಅದು ಹೇಗಿರಬೇಕೋ ಹಾಗೆ ಇರಬೇಕು. ಏನೂ ಬದಲಾವಣೆ ಮಾಡುವಂತಿಲ್ಲ’ ಎಂದು ಹಿರಿಯ ತಲೆಗಳು ಕಿರಿಯರಿಗೆ ಎಚ್ಚರಿಕೆ ನೀಡುತ್ತಿದ್ದರು. ಬಹುತೇಕ ಪತ್ರಿಕೆಗಳಲ್ಲಿ ಈ ಕಾರಣದಿಂದ ಆ ಪುಟಗಳನ್ನು ನಿವೃತ್ತಿ ಅಂಚಿನಲ್ಲಿರುವವರು ನಿರ್ವಹಿಸುತ್ತಿದ್ದರು. ಅವರು ಯಾವ ಬದಲಾವಣೆಗೂ ಒಪ್ಪುವವರಲ್ಲ. ‘ಇನ್ನು ಎರಡು ವರ್ಷಗಳಲ್ಲಿ ನಾನು ರಿಟೈರ್ ಆಗ್ತೀನಿ. ಅಲ್ಲಿತನಕ ಹೀಗೆ ನಿಭಾಯಿಸಿಕೊಂಡರೆ ಸಾಕು. ಇಲ್ಲದ ಉಸಾಬರಿಯನ್ನು ನಾನೇಕೆ ಮೈಮೇಲೆ ಎಳೆದುಕೊಳ್ಳಲಿ ?’ ಎಂಬುವುದು ಅವರ ಧೋರಣೆ.

ಕನ್ನಡದ ಪ್ರಮುಖ ಪತ್ರಿಕೆಗಳ ಹಳೆಯ ಸಂಚಿಕೆಗಳನ್ನು ತಿರುವಿ ಹಾಕುವಾಗ ಕಾಲನ ಒತ್ತಡದ ಮಧ್ಯೆಯೂ ಬದಲಾಗದ ಪುಟ ಸಿಕ್ಕರೆ ಅದು ಸಂಪಾದಕೀಯ ಪುಟ ! ಕೆಲವು ಪತ್ರಿಕೆಗಳು ೧೫-೨೦ ವರ್ಷಗಳ ತನಕ ಒಂದೇ ವಿನ್ಯಾಸ, ಒಂದೇ ಚೌಕಟ್ಟನ್ನು ಧರಿಸಿದ್ದೂ ಇದೆ. ಹಾಗೆಂದು ಇದು ಓದುಗರನ್ನು ಖುಷಿಪಡಿಸುವ ಕ್ರಮವಂತೂ ಅಲ್ಲವೇ ಅಲ್ಲ. ಸಂಪಾದಕೀಯ ಪುಟದ ವಿನ್ಯಾಸ, ಸ್ವರೂಪ, ಬದಲಿಸಿದರೆ ಓದುಗ ಬೇಸರಿಸಿ ಕೊಳ್ಳಬಹುದೆಂಬ ಅಂಜಿಕೆಯಿಂದ ತೆಗೆದುಕೊಂಡ ಕ್ರಮವೂ ಅಲ್ಲ. ಬದಲಾವಣೆಗೆ ಮೈಯೊಡ್ಡುವ, ಬದಲಾವಣೆಯ ಜತೆ ಸದಾ ಡಿಕ್ಕಿ ಹೊಡೆಯುವ ಧಾಡಸಿತನದ ಅಭಾವ.

ಓದುಗರೇನು ಅಂದುಕೊಳ್ಳುತ್ತಾರೋ ಎಂಬ ಆಗೋಚರ ಭಯ. ಇನ್ನು ಪತ್ರಿಕೆಯ ಹೆಸರಿನ ವಿಷಯಕ್ಕೆ (Masthead) ಬಂದರೆ ಮುಗಿದೇ ಹೋಯ್ತು. ಸಂಪೂರ್ಣ ಕಟ್ಟೆಚ್ಚರ. ಅದು ಯಾರೂ ಸುಳಿಯದ ಪುಟ. No man’s land. ಪತ್ರಿಕೆಯ ಮಾಸ್ಟ್‌ಹೆಡ್‌ನ್ನು ಬದಲಿಸುವುದೆಂದರೆ, ಅದರ ಆಕಾರ, ಸ್ವರೂಪ, ಅಂದವನ್ನು ಬದಲಿಸುವುದೆಂದರೆ, ವ್ಯಕ್ತಿಯ ಹೆಸರು, ರೂಪವನ್ನು ಬದಲಿಸಿದಂತೆ ಎಂಬ ಅಭಿಪ್ರಾಯವಿದೆ. ಹೀಗಾಗಿ ಯಾರೂ ಅದನ್ನು ಮುಟ್ಟುವುದಿಲ್ಲ. ಎರಡು ವರ್ಷಗಳ ಹಿಂದೆ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ತನ್ನ ಹೆಸರನ್ನು ಎರಡು ಸಾಲಿನಲ್ಲಿ ಬರೆದು ಮಾಸ್ಟ್‌ಹೆಡ್‌ನ್ನು ಬದಲಿಸಿದಾಗ ಓದುಗರಿಂದ ವ್ಯತಿರಿಕ್ತ ಪ್ರತಿಕ್ರಿಯೆ ಬಂದಿರ ಬೇಕು.

ಮಾಸ್ಟ್ ಹೆಡ್ ಟಚ್ ಮಾಡುವುದೆಂದರೆ ಜೇನುಗೂಡಿಗೆ ಕೈಹಾಕಿದಂತೆ ಎಂಬ ಅನಿಸಿಕೆ ಈಗಲೂ ಸುದ್ದಿಮನೆಯಲ್ಲಿ ನೆಲೆಸಿದೆ. ಜಗತ್ತು ಹತ್ತು ಸಲ ಬದಲಾದರೆ, ಪತ್ರಿಕೆಯ ಮಾಸ್ಟ್ ಹೆಡ್ ಒಂದು ಸಲ ಮಾತ್ರ ಬದಲಾಗುತ್ತದೆ ಎಂಬ ಮಾತು ಚಾಲ್ತಿಯಲ್ಲಿರುವುದು ಆ ಕಾರಣಕ್ಕೆ. ಅಂಥ ಸಂದರ್ಭ ಬಂದಾಗ ಸಂಪಾದಕರು ಹೃದಯವನ್ನು ಎಡಗೈಯಲ್ಲಿಟ್ಟುಕೊಂಡೇ ಆ ನಿರ್ಧಾರಕ್ಕೆ ಬಂದಿರುತ್ತಾರೆ. ಓದುಗರು ಹೊಸ ರೂಪ, ಅಂದವನ್ನು ಇಷ್ಟಪಡುತ್ತಿದ್ದರೆ, ಪತ್ರಿಕೆಯನ್ನು ತಿರಸ್ಕರಿಸಿದರೆ ಎಂಬ ಡುಕಿಡುಕಿಯೇ ಅವರನ್ನು ಪ್ರಪಾತದ ಅಂಚಿಗೆ ತಂದು ನಿಲ್ಲಿಸುತ್ತದೆ.

ಪ್ರಧಾನಿ, ರಾಷ್ಟ್ರಾಧ್ಯಕ್ಷರು ಅಕಾಲಿಕವಾಗಿ ನಿಧನರಾದರೆ, ಕಗ್ಗೊಲೆಯಾದರೆ, ಗಣ್ಯಾತಿಗಣ್ಯ ವ್ಯಕ್ತಿಗಳು ಅಗಲಿದರೆ, ಸಂಪಾದಕರು ಮಾಸ್ಟ್‌ಹೆಡ್‌ನ ಸ್ಥಾನಪಲ್ಲಟ ಮಾಡುವ ನಿರ್ಧಾರ ತೆಗೆದುಕೊಳ್ಳುವುದುಂಟು. ಇಂದಿರಾ ಹಾಗೂ ರಾಜೀವ್‌ಗಾಂಧಿ ಹತ್ಯೆ, ಡಾ.ರಾಜ್‌ಕುಮಾರ್ ನಿಧನರಾದ ಸಂದರ್ಭಗಳಲ್ಲಿ ಮಾಸ್ಟ್‌ಹೆಡ್ ಕೆಳಗೆ ಇಳಿದಿತ್ತು. ಪತ್ರಿಕೆ ಹೆಸರಿನ ಮೇಲೆ ಈ ಸುದ್ದಿ ಪ್ರಕಟಿಸಲಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಸುದ್ದಿಮನೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಮಾಡ ಬಹುದಾದ ಪ್ರಯೋಗಗಳನ್ನೆಲ್ಲಾ ಕನ್ನಡ ಪತ್ರಿಕೆಗಳು ಮಾಡಿ ಕೈಒರೆಸಿಕೊಂಡಿವೆ. ಪ್ರಾಯಶಃ ಪತ್ರಿಕೆಯ ಮಾಸ್ಟ್‌ಹೆಡ್‌ನ್ನು ಅಡ್ಡಡ್ಡ ಪ್ರಕಟಿಸಿ ಮುಖಪುಟವನ್ನು Horizontal ಆಗಿ ಯಾರೂ ಪ್ರಕಟಿಸಲಿಲ್ಲ.

ಸುಮಾರು ಹತ್ತು ವರ್ಷಗಳ ಹಿಂದೆ ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ ಆ ಪ್ರಯೋಗವನ್ನು ಮಾಡಿದ್ದೆವು. ಅದಕ್ಕೆ ಸೂಕ್ತ ಕಾರಣವನ್ನು ನೀಡಿದ್ದೆವು. ನಾವು ಈ ಜಗತ್ತನ್ನು ಮೊದಲ ಬಾರಿಗೆ ನೋಡುವುದರಿಂದ ‘for a change’ ಅಂತ ಈ ಪ್ರಯೋಗ ಮಾಡಿದ್ದೇವೆ ಅಂತ ಕಾರಣ ನೀಡಿದ್ದೆವು. ಓದುಗರಿಗೆ ತುಸು ಗಲಿಬಿಲಿ ಎನಿಸಿದರೂ ಪ್ರಯೋಗಾರ್ಥವಾಗಿ ಅವರು ಅದನ್ನು ಸ್ವೀಕರಿಸಿದ್ದರು. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ, ಮಾಸ್ಟ್‌ಹೆಡ್ ಜೊತೆ ಆಟ ಆಡುವುದರಲ್ಲಿ ಎತ್ತಿದ ಕೈ. ಪ್ರತಿ ಹಬ್ಬ-ಹರಿದಿನ ಬರಲಿ, ಸಣ್ಣ ಉತ್ಸವಗಳು ಬರಲಿ, ಅದರ ಲಕ್ಷಣವನ್ನು ಮಾಸ್ಟ್‌ಹೆಡ್ ನಲ್ಲಿ ಬಿಂಬಿಸದೇ ಹೋಗುವುದಿಲ್ಲ.

ಅದರಲ್ಲೂ ಹಣ ಬರುತ್ತದೆ ಎಂದಾದರೆ ಅತ್ಯುತ್ಸಾಹದಿಂದ ಮಾಸ್ಟ್‌ಹೆಡ್‌ನ್ನು ಸಿಂಗರಿಸುತ್ತದೆ. ಅದರ ಬಣ್ಣ ಬದಲಿಸುತ್ತದೆ ಎಂದಾದರೆ ಯೂನಿನಾರ್ ಜಾಹೀರಾತಿ ಗಾಗಿ ತನ್ನ ಹೆಸರಿನಲ್ಲೇ ಬರುವ ‘ಐ’ ಬದಲು ಯೂನಿನಾರ್ ‘ಲೋಗೊ’ವನ್ನು ಬಳಸುವಷ್ಟರ ಮಟ್ಟಿಗೆ ಅದು ರಾಜಿ ಮಾಡಿಕೊಳ್ಳುತ್ತದೆ.Of course it is a bold
decision. ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದಲ್ಲಿ ಮೂವತ್ನಾಲ್ಕು ವರ್ಷಗಳ ಕಮ್ಯೂನಿಸ್ಟ್ ಆಳ್ವಿಕೆಗೆ ತಿಲಾಂಜಲಿ ನೀಡಿದಾಗ ಕೋಲ್ಕತಾದಿಂದ ಪ್ರಕಟವಾಗುವ ‘ದಿ ಟೆಲಿಗ್ರಾಫ್’ ಪತ್ರಿಕೆಯ ಮುಖಪುಟ ಹೇಗಿರಬಹುದು ಎಂಬ ಬಗ್ಗೆ ಅತೀವ ಕುತೂಹಲವಿತ್ತು. ಆ ಪತ್ರಿಕೆ ನೋಡುತ್ತಿದ್ದಂತೆ ಪುಟ್ಟ ರೋಮಾಂಚನ. ಆ ಘಟನೆಯನ್ನು ಅದಕ್ಕಿಂತ ಪರಿಣಾಮಕಾರಿಯಾಗಿ ಹೇಳಲು ಸಾಧ್ಯವೇ ಇರಲಿಲ್ಲ.

‘ದಿ ಟೆಲಿಗ್ರಾಫ್’ ಎಂಬ ತನ್ನ ಹೆಸರನ್ನು ತನ್ನ ಮುಖಪುಟದ ಕೆಳ ಭಾಗದಲ್ಲಿ ಪ್ರಕಟಿಸಿತ್ತು. ಈ ಪ್ರಯೋಗ ಮಾಡಲು ಬಹಳ ಧೈರ್ಯ ಬೇಕು! ಯಾವ ಸಂಪಾದ ಕನೂ ಮನಸ್ಸು ಮಾಡಲಾರ. ಒಂದು ವೇಳೆ ಸಂಪಾದಕ ಮನಸ್ಸು ಮಾಡಿದರೂ ಮಾಲೀಕರಾದವರು ಒಪ್ಪುವುದಿಲ್ಲ. ಆ ಪತ್ರಿಕೆಗೆ ಅವೆರಡೂ ಒಬ್ಬರೇ ಆಗಿರುವು ದರಿಂದ ಈ ಪ್ರಯೋಗ ಮಾಡಿರಬಹುದೆಂದು ಒಪ್ಪಿಕೊಳ್ಳಬಹುದಾದರೂ ಮಾಲೀಕ-ಸಂಪಾದಕರು ಒಬ್ಬರೇ ಇರುವ ಅನೇಕ ಪತ್ರಿಕೆಗಳು ಇಂತಹ ಪ್ರಯೋಗ ಮಾಡುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡದಿರುವುದು ಅಷ್ಟೇ ಸತ್ಯ.

‘ದಿ ಟೆಲಿಗ್ರಾಫ್’ ಪ್ರಯೋಗ ನೋಡಿ ಮೆಚ್ಚುಗೆಯಿಂದ, ಕನ್ನಡ ಪ್ರಭದಲ್ಲಿ ನಾನು ಸಂಪಾದಕನಾಗಿದ್ದಾಗ ನಮ್ಮ ಪತ್ರಿಕೆಯಲ್ಲಿ ‘ನೋಡ್ತಾ ಇರಿ, ಏನೇನ್ ಮಾಡ್ತೀವಿ’ ಎಂದು ಬಳಸುತ್ತಿದ್ದ ಹೆಮ್ಮೆಯ ವಾಕ್ಯವನ್ನು ಆ ದಿನದ ಮಟ್ಟಿಗೆ ಅವರಿಗೆ ಕಡ ನೀಡಬಹುದಿತ್ತೇನೊ ಎಂದು ಅನಿಸಿತ್ತು. ಅಂದಹಾಗೆ ‘ನೋಡ್ತಾ ಇರಿ, ಏನೇನ್ ಮಾಡ್ತೀವಿ’ ಎಂಬ ವಾಕ್ಯವನ್ನು ಮೊದಲು ಯಾರೂ ಒಪ್ಪಿಕೊಂಡಿರಲಿಲ್ಲ. ಕೆಲವು ಕುಹಕಿಗಳು ಗೇಲಿ ಮಾಡುತ್ತಿದ್ದರು. ನಂತರ ಆಡುಮಾತಿನಲ್ಲಿ ಅದನ್ನು ಬಳಸು ವಷ್ಟು ಪರಿಣಾಮಕಾರಿಯಾಯಿತು. ನಿಮ್ಮ ಐಡಿಯಾವನ್ನು ಕಾರ್ಯರೂಪಕ್ಕೆ ತರದಿದ್ದರೆ ಅದಕ್ಕೆ ಯಾವುದೇ ಅರ್ಥವಿಲ್ಲ. ರಿಸ್ಕ್ ತೆಗೆದುಕೊಂಡಾದರೂ
ಅದನ್ನು ಜಾರಿಗೊಳಿಸಬೇಕು. ಯಾರು ನಿಮ್ಮನ್ನು ಮೊದಲು ಟೀಕಿಸಿರುತ್ತಾರೋ, ನಂತರ ಅವರೇ ಪ್ರಶಂಸಿಸುತ್ತಾರೆ!

Leave a Reply

Your email address will not be published. Required fields are marked *