Thursday, 23rd March 2023

ಪರಿಷತ್ ಚುನಾವಣೆ: ಹಾಸನದಿಂದ ಡಾ. ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ ಇಂದು

ಹಾಸನ: ಕೊನೆಗೂ ಜಾತ್ಯತೀತ ಜನತಾದಳ ಪಕ್ಷ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಡಾ. ಸೂರಜ್ ರೇವಣ್ಣಗೆ ಟಿಕೆಟ್ ನೀಡಲು ಮುಂದಾಗಿದೆ. ಹಾಸನದಲ್ಲಿ ಶುಕ್ರವಾರ ಮಧ್ಯಾಹ್ನ 12.15ಕ್ಕೆ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದಾರೆ.

ಹಾಸನ ಜಿಲ್ಲೆಯ ಶಾಸಕರ ಸಭೆಯಲ್ಲಿ ಎಚ್. ಡಿ. ರೇವಣ್ಣ ಪುತ್ರ ಸೂರಜ್‌ಗೆ ಟಿಕೆಟ್ ನೀಡಲು ಒಮ್ಮತದ ನಿರ್ಣಯ ಅಂಗೀಕರಿಸ ಲಾಗಿತ್ತು. ವೃತ್ತಿಯಲ್ಲಿ ವೈದ್ಯರಾಗಿರುವ ಸೂರಜ್ ರೇವಣ್ಣ ಎಂಎಲ್ಸಿ ಚುನಾವಣೆ ಅಭ್ಯರ್ಥಿಯಾಗಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಲಿದ್ದಾರೆ.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಕುಟುಂಬದ ಬಹುತೇಕರು ಈಗಾಗಲೇ ರಾಜಕೀಯದಲ್ಲಿ ಪ್ರಭಾವಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇದೀಗ ಇದೇ ಕುಟುಂಬದ ಮತ್ತೊಂದು ಕುಡಿಗೆ ಅವಕಾಶ ನೀಡುವ ಬದಲು, ಕಾರ್ಯಕರ್ತರನ್ನು ಮೇಲೆತ್ತಲು ಪ್ರಯತ್ನಿಸಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ದೇವೇಗೌಡರ ಮಗ ಎಚ್. ಡಿ. ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವರು, ಮತ್ತೊಬ್ಬ ಮಗ ರೇವಣ್ಣ ಪ್ರಭಾವಿ ಇಲಾಖೆಗಳನ್ನು ನಿರ್ವಹಿಸಿದ ಸಚಿವರಾಗಿದ್ದ ವರು. ಪ್ರಸ್ತುತ ಇವರಿಬ್ಬರೂ ಶಾಸಕರಾಗಿ ವಿಧಾನಸಭೆಯಲ್ಲಿದ್ದಾರೆ. ದೇವೇಗೌಡರ ಒಬ್ಬ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಸಂಸದ, ಸೊಸೆ ಅನಿತಾ ಕುಮಾರಸ್ವಾಮಿ ವಿಧಾನಸಭೆ ಸದಸ್ಯೆ, ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು.

error: Content is protected !!