Friday, 27th May 2022

ಕಾಡುವ ಕನಸಿಗೊಂದು ಹೆಸರು

ಲಕ್ಷ್ಮೀಕಾಂತ್ ಎಲ್. ವಿ.

ನಿನ್ನದೇ ನೆನಪಿನಲಿ ಮನ ಕಾದಿದೆ; ನೋವಿನ ಸೆಳಕಿನ ನಡುವೆಯೂ ಹೃದಯದಲಿ ಅದೇನೋ ಮಧುರ ಅನುಭವ. ನೀನೊಮ್ಮೆ ಬರುತ್ತೀ ತಾನೆ!

ಮಾತು ಮತ್ತು ಮೌನಗಳ ನಡುವೆ ಮಿಡಿದ ಒಲವು ಎಲ್ಲವನ್ನೂ ಮರೆಸುತ್ತದೆ. ನೋವಿಗೂ ನಲಿವಿಗೂ ನಡುವಿನ ಅಂತರವನ್ನು ದೂರ ಮಾಡುವ ಶಕ್ತಿ ಪ್ರೀತಿಗಿದೆ.

ಅಂಬರವನ್ನು ಚುಂಬಿಸುವ ಆಸೆಯ ನಡುವೆ ಒಲಿದ ಹೃದಯಕ್ಕೆ ಶರಣಾದ ಮನಸ್ಸಿನ ಜೊತೆ ಮಾತನಾಡದ ಮೌನಕ್ಕೆ ಕವಿತೆಯೊಂದು ಬಾಯ್ತೆರೆದು ಗುನುಗುವ ರಾಗವೇ ಈ ಒಲವ ಮಂದಾರ. ಶೃಂಗಾರದ ಕಾವ್ಯವೊಂದು ನನ್ನ ನಿನ್ನ ನಡುವೆ ಚಿಗುರಿಸಿದ ಒಲವಿನ ಔತಣ ಅರಿಯುವ ಮುನ್ನವೇ ಕೊನೆಯಾದ ಪ್ರೇಮರಾಗದ ಕಥೆಯಿದು.

ಎಂದೂ ಕೊನೆಯಾಗದಂತಹ ಭಾವಗಳ ನಾದಗ್ರಂಥಕ್ಕೆ ನನ್ನೀ ಹೃದಯವೇ ಹಾಳೆಯಾ ಗಿದೆ; ಒಲವೇ ಶಾಯಿಯಾಗಿ ಶೃಂಗಾರ ವಾಗಿದೆ ಕಣೆ. ಬಾಳಿನ ಬಾನಿನಲ್ಲಿ ಪ್ರೀತಿಯ ಹಕ್ಕಿಗಳ ಹಾರಾಟ ಸಾಗುವಾಗ ಶಶಿಯೊಂದು ನಾಚಿ ಮೋಡದ ಮರೆಯಲ್ಲಿ ಅಡಗಿ ಕುಳಿತ ಪ್ರೇಮಗಾನವಿದು ಗೆಳತಿ.

ನೀನಿತ್ತ ಆ ಪ್ರೀತಿಯ ಆನಂದ ಬದುಕಿನುದ್ದಕ್ಕೂ ನೆನಪುಗಳ ನೆಪದಲ್ಲಿ ಇಂದಿಗೂ ಕಾಡು ತ್ತಲೇ ಇದೆ. ಮೌನ ಮನದಲ್ಲಿನ ಮಾತುಗಳು ಇಂದಿಗೂ ಸದ್ದಿಲ್ಲದೆ ನನ್ನೆದೆಯ ಗೂಡೊಳಗೆ ನಗುತ್ತಲೇ ನೆನಪನ್ನು ಕದಡುತ್ತಿವೆ. ನಿನ್ನ ಮಾತುಗಳನ್ನು ಆಲಿಸುವ ಹೃದಯದಲ್ಲಿ ಅದೆಷ್ಟೇ ಕೋಲಾಹಲ ಎದ್ದರೂ ಕೂಡ ನೆನಪಿನ ಅಲೆಯೊಂದು ಅಪ್ಪಳಿಸಿದ ಕೂಡಲೇ ಮನಸ್ಸು ಶಾಂತವಾಗು ತ್ತದೆ. ಅದೇ ನಿನ್ನ ಒಲವಿಗೆ ಇರುವ ಶಕ್ತಿ ಕಣೆ. ಹೀಗೆ ನಿನ್ನೊಲವನ್ನು ಹುಡುಕುತ್ತಿರುವ ಈ ನನ್ನ ಹುಚ್ಚಿಗೆ ನಿನ್ನ ಮನಸ್ಸಿನ ಮದ್ದು
ಸಿಗಬಹುದೇನೋ ಎಂಬ ಆಸೆಯಲ್ಲಿ ಕಾದಿರುವೆ. ಮನಸ್ಸಿನ ಕಡಿದಾದ ಹಾದಿಯಲ್ಲಿ ಮೌನಕ್ಕೆ ಉತ್ತರ ಹುಡುಕುವ ಖಯಾಲಿ ಇನ್ನೂ ಮುಗಿದಿಲ್ಲ. ಈಗಲೂ ನಾನೊಬ್ಬ ಮೌನಿ. ಸಿಗದ ಪ್ರೀತಿಯ ತಿರುವಲ್ಲಿ ಸವೆದ ಹೆಜ್ಜೆಗಳನ್ನು ಹುಡುಕುತ್ತಾ  ಬ್ಬೊಂಟಿಗ ನಾಗಿಯೇ ಸಾಗಿರುವೆ.

ಪ್ರತಿ ನಡಿಗೆಯಲ್ಲೂ ಹೊಸ ಕೊನೆಯ ಅವಕಾಶವೆಂದು ಭಾವಿಸಿ ತೀರದ ಆಸೆಗೆ ನೀರೆರೆಯುತ್ತಿರುವೆ. ಸಾಗದ ಹಾದಿಗೆ ತಳ್ಳುವ ಮನಸಿದು ಕಣೆ. ಮೂಡದ ಹೆಜ್ಜೆಯಲ್ಲಿ ನಿನ್ನದೇ ಹೆಜ್ಜೆಯನ್ನು ಅರಸಿರುವೆ. ಕಾಡುವ ಕನಸಿಗೊಂದು ಹೆಸರನ್ನಿಟ್ಟು ಅಂದಿಗೂ ಇಂದಿಗೂ ಮುಗಿಯದ ನಂಟಿನ ಕಾಣದ ಕಡಲಿಗೆ ಕಾದಿದೆ ಈ ಸಂಜೆ…! ಮರೆತುಬಿಡುವಂತೆ ಕಾಣುವ ಭಾಸ, ಮರೆಯಾಗದ ಮೌನ, ಕೈ ಜಾರುವ ಮುಂಚೆ ಸರಿದೂಗಬಹುದೇನು ಈ ಮನದ ಅಂಚೆ…? ಉತ್ತರದ ಹುಡುಕಾಟ ಮಾತ್ರ ಮುಗಿದಿಲ್ಲ.

ಮುಸ್ಸಂಜೆಯಲ್ಲಿ ಮರೆತ ಕನಸೊಂದು ಇಬ್ಬನಿಯ ಜೊತೆಗೂಡಿ ಬಾಜಿ ಕಟ್ಟಿದೆ. ಹೇಳದ ಮನಸ್ಸು ಕೇಳದ ಹೃದಯ ನಿನ್ನ ಸನಿಹವಿಲ್ಲದೆ ಮೂಕವಾಗಿದೆ. ಈ ಮನಸ್ಸಿನ ಕತ್ತಲೆಯ ನಭದಲ್ಲಿ ಚಂದ್ರನಂತೆ ಬಂದು ನಿಂತು ಮೋಡ ಕವಿದ ಪ್ರೀತಿಯನ್ನು
ಕರಗಿಸಿ ಮಳೆಹನಿಯಾಗಿ ಸುರಿಸಿದೆ. ಬಾಳಲ್ಲಿ ಸೋಲೆಂಬ ಬಳ್ಳಿಗೆ ಆಸರೆಯ ಮರವಾದೆ ನೀನು.

ಕಷ್ಟಗಳೆ ತುಂಬಿದ ಬಾಳಿಗೆ ಸಿಹಿಯಾದ ಮಧು ಕೊಡುವ ಹೂವಾಗಿ ಬಂದೆ. ಯಾರೋ ಮಾಡಿದ ಈ ಮನಸ್ಸಿನ ಹುಣ್ಣಿಗೆ ಔಷಧಿ
ಕೊಡುವ ವೈದ್ಯೆಯಾದೆ. ಇದನ್ನೇ ಪ್ರೀತಿ ಅನ್ನೋದು ಅಲ್ವಾ ಗೆಳತಿ. ಚೈತನ್ಯವೇ ಕುಸಿದ ಈ ದೇಹಕ್ಕೆ ಸ್ಫೂರ್ತಿ ನೀಡುವ ಚಿಲುಮೆ ಯಾಗಿ ಗೆಲುವು ಮರೆತ ಮನಸ್ಸಿಗೆ ಗೆಲ್ಲುವ ಸ್ಪೂರ್ತಿಯ ಚಿಲುಮೆ ನೀನಾದೆ. ಹೀಗೆ ದೇಹದ ಜೀವ ಸೆಲೆಯಾದೆ ನೀನು ಮನಸ್ಸಿನ ಕೋಟೆಯನ್ನು ಗೆದ್ದು ಏನೂ ಅರಿಯದಂತೆ ನನ್ನಿಂದ ದೂರವಾದದ್ದರೂ ಏಕೆ? ಪ್ರಶ್ನೆಗೆ ಉತ್ತರ ಸಿಗದೆ ಕಂಗಾಲಾಗಿದ್ದೇನೆ. ಕಾರಣ
ತಿಳಿಸದೆ ಒಪ್ಪಿದ ಈ ಹೃದಯ ಕಣ್ಮುಚ್ಚದೇ ಕಾಯುತ್ತಲೇ ಇದೆ.

ಚಂದಿರನ ಮೇಲೆ ಬರೆದ ಒಲವ ಕವನವಿಂದು ಮಲ್ಲಿಗೆಯ ಹೂಬನವಾಗಿದೆ. ಒಲವ ಬರದಿ ಮೌನವಾದ ಹೃದಯ ನಿನ್ನ ಒಂದು
ಸವಿ ನುಡಿಗಾಗಿ ಕಾಯುತ್ತಾ, ಮಲೆನಾಡ ಮೌನವಾಗಿದೆ. ತೀರದ ಬಂಡೆಗಳಿಗೆ ಹೋಗಿ ಬಂದು ಮುತ್ತಿಡುವ ಅಲೆಗಳಂತೆ ನಿನ್ನ ನೆನಪುಗಳು ಕೂಡ ಈ ಹೃದಯವನ್ನು ಮುತ್ತುತ್ತಲೇ ಇವೆ. ನಿನ್ನ ನೆನಪಿನ ತನ್ಮಯತೆಯಲ್ಲಿ ಬರೆದ ಸಾಲೊಂದು ನೆನಪಿನ ಹನಿ ಯಲ್ಲಿ ಬೆರೆತು ಕೆನ್ನೆ ಮೇಲೆ ಜಾರುತ್ತಿದೆ ಕಣೆ. ಮರೆತೋದ ಮಾತೊಂದು ಎದೆಯ ಗೂಡಲ್ಲಿ ಉಳಿದುಬಿಟ್ಟಿದೆ.

ಕಳೆದೋದ ನೆನಪೊಂದು ಹುಡುಕುತ್ತಾ ಬೆಳಕಿರದ ಸಂಜೇಲಿ ಕುರುಡನಾಗಿರುವೆ. ಮೌನದ ಮಾತೊಂದನ್ನು ಉಳಿಸಿ ಹೋದವಳು ನೀನು; ನೆನಪನ್ನು ಪ್ರೀತಿಸುತ್ತಾ ನೀ ಬರುವ ಹಾದಿಯಲ್ಲಿ ಅದೇ ಸಂಜೆಗೆ ತೀರದಲ್ಲಿ ಕುಳಿತು ಎದೆಯಲ್ಲಿ ಉಳಿದ ನಿನ್ನ ಮೊಗದ
ಕನಸು ಕಾಣುತ್ತಿರುವೆ. ಗೆಳತಿ, ಕಣ್ಣೊಳಗೆ ಅವಿತು ಇಣುಕುತಿದೆ ಕಂಬನಿಯ ಸಾಲೊಂದು, ನೀನೊಮ್ಮೆ ಬರಬಾರದೆ? ನೋವಿನ
ಹೊಳೆಯೊಂದು ಮನದೊಳಗೆ ಅವಿತು ಮನೆ ಮಾಡಿದೆ ನೀನೊಮ್ಮೆ ಬರುವೆಯಾ? ನಿನಗಾಗಿ ಕಾಯುತ್ತಿರುವೆ.