Monday, 5th December 2022

ಸಕಲ ಆರೋಗ್ಯ ಪ್ರದಾಯಿನಿ ದುರ್ಗಾದೇವಿ

ಹಬ್ಬ – ಹರಿದಿನ

ಡಾ.ಶಾಲಿನಿ ರಜನೀಶ್

ಭಾರತದಾದ್ಯಂತ ೯ ದಿನ ಆಚರಿಸುವ ನವರಾತ್ರಿಯು ದುರ್ಗಾದೇವಿಗೆ ಸಮರ್ಪಿತವಾದ ಒಂದು ಹಬ್ಬ. ಬಹಳಷ್ಟು ವಿಶೇಷ ಗಳಿಂದ ಕೂಡಿದ ಈ ಹಬ್ಬದ ಸಂದರ್ಭದಲ್ಲಿ ದುರ್ಗಾದೇವಿಯನ್ನು ೯ ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ.

10ನೇ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಇದು ಕೆಡುಕಿನ ಮೇಲೆ ಒಳಿತಿನ ವಿಜಯವಾಗುವುದರ ದ್ಯೋತಕವೂ ಹೌದು. ಯಾವುದೇ ಧಾರ್ಮಿಕ ಪೂಜೆಯು ಸ್ತ್ರೀ ಇಲ್ಲದಿದ್ದರೆ ಪೂರ್ಣವಾಗುವುದಿಲ್ಲ. ಅಂಥ ಮಹತ್ವ ಹಾಗೂ ಶಕ್ತಿಯನ್ನು ಹೆಣ್ಣಿಗೆ ನೀಡಲಾಗಿದೆ. ಈ ಶರನ್ನವರಾತ್ರಿಯು ದುರ್ಗಾ ಮಾತೆಯ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ. ಪೂರ್ವರಾಜ್ಯಗಳಲ್ಲೂ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಕೆಲವು ಕಡೆ ಉಪವಾಸದ ವ್ರತವಾಗಿ ಆಚರಿಸಿದರೆ, ಮತ್ತೆ ಕೆಲವು ಕಡೆ ತರಹೇವಾರಿ ಭಕ್ಷ್ಯ-ಭೋಜ್ಯಗಳು, ಸಿಹಿತಿನಿಸುಗಳನ್ನು ಮಾಡಿ ದೇವರಿಗೆ ಅರ್ಪಿಸಿ ನಂತರ ಪ್ರಸಾದ ರೂಪದಲ್ಲಿ ಅವನ್ನು ಸವಿಯಲಾಗುತ್ತದೆ. ಪೌಷ್ಟಿಕಾಂಶಯುಕ್ತ ಆಹಾರಕ್ಕೆ ಇಲ್ಲಿ ಹೆಚ್ಚಿನ ಆದ್ಯತೆ, ಮನ್ನಣೆ ನೀಡಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.

ಅಕ್ಕಿ-ಕಡಲೇಬೇಳೆ ಪಾಯಸ, ಅನ್ನದ ಪಾಯಸ, ಗೋಧಿ ಪಾಯಸ, ರವೆ ಉಂಡೆ, ಹಿಟ್ಟಿನ ಉಂಡೆ, ಹಯಗ್ರೀವ, ಹೋಳಿಗೆ, ಕೇಸರಿಬಾತ್, ಕಾಯಿಸಿಹಿ, ಕಜ್ಜಾಯ ಹೀಗೆ ಸಿಹಿಖಾದ್ಯಗಳ ಪಟ್ಟಿಯೇ ಬೆಳೆಯುತ್ತದೆ. ಜತೆಗೆ, ಅನ್ನ, ವಿವಿಧ ತರಕಾರಿಗಳ ಸಾಂಬಾರು, ಹೆಸರುಬೇಳೆ ಕೋಸಂಬರಿ, ಸೌತೆಕಾಯಿ ಕೋಸಂಬರಿ, ವಿವಿಧ ತರಕಾರಿಗಳ ಪಲ್ಯಗಳು, ಹಾಲು-ಮೊಸರು-ತುಪ್ಪಗಳನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ನವರಾತ್ರಿಯನ್ನು ಒಂದು ಹಬ್ಬವಾಗಷ್ಟೇ ನೋಡದೆ ಆಯಾ ಋತುಮಾನಕ್ಕೆ ತಕ್ಕಂತೆ, ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲ ಬಗೆಯ ಪುಷ್ಟಿದಾಯಕ ಆಹಾರವನ್ನು ಸೇವಿಸಬೇಕೆಂಬ ದೃಷ್ಟಿಯಿಟ್ಟು ಕೊಂಡು ಪೂರ್ವಜರು ಇಂಥ ಆಹಾರಪದ್ಧತಿಯನ್ನು ರೂಪಿಸಿಕೊಟ್ಟಿದ್ದಾರೆ.

ಇದು ಆಯಾ ರಾಜ್ಯಕ್ಕೆ ಅನುಗುಣವಾಗಿರುವ, ಸ್ಥಳೀಯತೆಗೆ ಸಂಬಂಧಪಟ್ಟಿರುವ ಸಿಹಿತಿನಿಸುಗಳು ಆಗಿರಬಹುದು, ಇಲ್ಲವೇ
ಬಗೆಬಗೆಯ ಧಾನ್ಯ-ತರಕಾರಿಗಳಿಂದ ಮಾಡಿದ ಖಾದ್ಯಗಳಾಗಿರಬಹುದು. ಅವುಗಳ ಮೆನು ಬದಲಾಗಿರುತ್ತದೆಯಷ್ಟೇ, ಆದರೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಸಿದ್ಧಪಡಿಸುವುದಂತೂ ದಿಟ.

ದೇವಿಯ ನವರೂಪದ ವೈಶಿಷ್ಟ್ಯಗಳು ಸ್ತ್ರೀ ಪ್ರಧಾನವಾದ ನವರಾತ್ರಿಯಲ್ಲಿ ದೇವಿಯನ್ನು ಹಲವು ರೂಪಗಳಲ್ಲಿ ಪೂಜಿಸಲಾಗು ತ್ತದೆ. ದೇವಿಯ ಹಲವು ಗುಣಗಳನ್ನು ಎತ್ತಿ ಹಿಡಿಯುವ ಮೂಲಕ ಹೆಣ್ಣಿನ ಉನ್ನತ ಗುಣ- ವಿಶೇಷಗಳನ್ನು ರೂಪಿಸಿರುವುದು ಈ ಹಬ್ಬದ ವಿಶೇಷ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ೯ ರೂಪಗಳಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ.

ಈ ವೇಳೆ ಬಾಲಕಿಯರನ್ನು ದೇವಿಯ ಸ್ವರೂಪದಲ್ಲಿ ಕಂಡು ಮನೆಗೆ ಕರೆಸಿ ಪಾದಪೂಜೆ ಮಾಡಿ, ಮಾತೆಗೆ ಮಹಾಮಂಗಳಾರತಿ ಮಾಡಿ ಭೋಜನ ಸವಿಯುವ ರೂಢಿ ಇಂದಿಗೂ ಇದೆ. ಶೈಲಪುತ್ರಿಯು ಕಷ್ಟಗಳ ನಿವಾರಕಿ ಮಾತ್ರವಲ್ಲದೆ ಕಾಡು ಪ್ರಾಣಿಗಳ ರಕ್ಷಕಿಯೂ ಹೌದು. ಅಂದರೆ, ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಸ್ವತಃ ರೂಢಿಸಿಕೊಳ್ಳಬೇಕು, ಅದಕ್ಕೆ ಬೇಕಾದ ಮಾರ್ಗ ವನ್ನು ನಾವೇ ಕಂಡುಕೊಳ್ಳಬೇಕು ಮತ್ತು ಭೂಮಿ ಮೇಲಿನ ಸಕಲಜೀವಿಗಳನ್ನೂ ರಕ್ಷಿಸಬೇಕು. ಅವುಗಳ ಪೋಷಣೆಯಲ್ಲಿ ನಮ್ಮದೂ ಪಾತ್ರವಿರಬೇಕು ಎಂಬ ಸಂದೇಶ ಈ ದಿನದ ಆಚರಣೆಯಲ್ಲಿದೆ. ದಿನದ ಮುಖ್ಯಾಹಾರವಾಗಿ ತುಪ್ಪವನ್ನು ಬಳಸ ಲಾಗುತ್ತದೆ.

ಇದು ಪರಿಣಾಮಕಾರಿ ಪೌಷ್ಟಿಕ ಆಹಾರವಾಗಿದ್ದು ಹಲವು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಬ್ರಹ್ಮಚಾರಿಣಿಯನ್ನು ಸರಳತೆ ಮತ್ತು ಭವ್ಯತೆಗೆ ಹೋಲಿಸಲಾಗಿದೆ. ಇವಳು ಸೌಮ್ಯ ಸ್ವಭಾವದವಳು, ಶಾಂತತೆಯಿಂದ ಇರುವವಳು. ನಾವು ಎಷ್ಟು ಸಾಧ್ಯವೋ ಅಷ್ಟು ಸರಳರೂ, ಶಾಂತಸ್ವಭಾವದವರೂ ಆಗಿರಬೇಕು ಎಂಬ ತತ್ತ್ವ ಇಲ್ಲಿ ಅಂತರ್ಗತ. ಖೀರಿನ ನೈವೇದ್ಯವನ್ನು ಈ ದಿನ ಅರ್ಪಿಸಲಾಗುತ್ತದೆ. ಇದರಲ್ಲಿ ಏಲಕ್ಕಿ, ಲವಂಗ, ಬೆಲ್ಲ ಅಥವಾ ಸಕ್ಕರೆ, ದ್ರಾಕ್ಷಿ, ಗೋಡಂಬಿ ಮತ್ತು ಹಾಲನ್ನು ಬಳಸು ವುದರಿಂದ ಅತ್ಯುತ್ತಮ ಪೌಷ್ಟಿಕಾಂಶ ದೊರೆಯುತ್ತದೆ.

ಚಂದ್ರಘಂಟಾದೇವಿ ಅವತಾರವು ಶಾಂತಿ ಮತ್ತು ಪರೋಪಕಾರದ ತತ್ತ್ವವನ್ನು ಸಾರುವಂಥದ್ದು. ಅಂದರೆ, ಅವಶ್ಯಕತೆ
ಇರುವವರಿಗೆ ನಾವು ನೆರವಾಗಬೇಕು ಎಂಬ ತತ್ತ್ವವನ್ನಿಲ್ಲಿ ಕಾಣಬಹುದು. ಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ
ಯಾವುದೇ ಕ್ಷೇತ್ರವಾಗಿರಬಹುದು. ಈ ದಿನ ದೇವಿಗೆ ಕಜ್ಜಾಯವನ್ನು ಸಮರ್ಪಿಸಲಾಗುತ್ತದೆ. ಇದನ್ನು ಗೋಧಿ ಹಿಟ್ಟು, ಬೆಲ್ಲ ಅಥವಾ ಸಕ್ಕರೆ, ಏಲಕ್ಕಿಪುಡಿ, ಕಾಯಿ, ಹಾಲು, ಕೋವಾ, ಹಣ್ಣುಗಳು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಇದು ಕೂಡ ಪುಷ್ಟಿದಾಯಕ ಆಹಾರವೇ.

ಕೂಷ್ಮಾಂಡಾ ದೇವಿಯ ಅವತಾರದಲ್ಲಿ ದೇವಿಯು ಹುಲಿಯ ಮೇಲೆ ಸವಾರಿ ಮಾಡುತ್ತಾಳೆ. ಇದು ದುಷ್ಟ ಸಂಹಾರದ ದ್ಯೋತಕ. ನಮ್ಮೊಳಗಿನ ದುಷ್ಟತನವನ್ನು ಮೊದಲು ತೊಡೆದು ಹಾಕಬೇಕು, ಅನ್ಯಾಯದ ವಿರುದ್ಧ ಹೋರಾಡಬೇಕು ಎಂಬುದು ಇದರರ್ಥ. ಈ ದಿನ ಬಾಳೇಹಣ್ಣಿನ ಆಹಾರಕ್ಕೆ ಆದ್ಯತೆ ನೀಡಲಾಗಿದ್ದು, ಇದರಿಂದ ಸಾಕಷ್ಟು ವಿಟಮಿನ್‌ಗಳು ಲಭ್ಯವಾಗುತ್ತವೆ. ಬಾಳೇಹಣ್ಣಿನ ಸಿಪ್ಪೆಯಲ್ಲೂ ಪೂರಕ ಪೌಷ್ಟಿಕಾಂಶ ಇರುವುದನ್ನು ಗಮನಿಸಬೇಕು.

ಸ್ಕಂದಮಾತಾ ದೇವಿಯ ಅವತಾರವು ಯಶಸ್ಸಿಗೆ ದ್ಯೋತಕ. ಜ್ಞಾನ-ವಿಜ್ಞಾನಗಳಿಗೂ ಇಲ್ಲಿ ಪ್ರಾಧಾನ್ಯವಿದ್ದು, ಈ ನಿಟ್ಟಿನಲ್ಲಿ ನಮ್ಮ ಅನ್ವೇಷಣೆಗಳು ನಡೆಯಬೇಕಿದೆ ಎಂಬುದರ ಸೂಚಕ ಇದಾಗಿದೆ. ಅಂದರೆ ನಮ್ಮಿಂದ ಜ್ಞಾನದ ಹಂಚಿಕೆಯಾಗಬೇಕಿದೆ, ವಿಜ್ಞಾನದ ಅರಿವು, ಸತ್ಯದರ್ಶನದ ಕೆಲಸವೂ ಆಗಬೇಕಿದೆ. ಆ ಮೂಲಕ ಎಲ್ಲರಲ್ಲೂ ತಿಳಿವಳಿಕೆ ಮೂಡಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದರ್ಥ. ಈ ದಿನ ಸಿಹಿಪದಾರ್ಥಗಳ ಜತೆಗೆ ಜೇನುತುಪ್ಪವನ್ನೂ ಸಮರ್ಪಿಸಲಾಗುತ್ತದೆ. ಜೇನುತುಪ್ಪದಲ್ಲಿರುವ ಔಷಧಿಯ ಗುಣಗಳು ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ.

ಕಾತ್ಯಾಯಿನಿ ರೂಪವು ಶಕ್ತಿಯ ದ್ಯೋತಕ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಶಕ್ತಿಯಿರುತ್ತದೆ; ಆದರೆ ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಮಹಿಳೆ ಶಕ್ತಿವಂತಳಾಗಿದ್ದರೂ ಆಯಾ ಕಾಲಮಾನಕ್ಕೆ ತಕ್ಕಂತೆ ಶಕ್ತಿಯ ಅನಾವರಣಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದರೀಗ ಹಾಗಲ್ಲ, ಹಲವು ರಂಗಗಳಲ್ಲಿ ಶಕ್ತಿ ಪ್ರದರ್ಶಿಸುವ ಮೂಲಕ ತಾನು ಯಾರಿಗೂ ಕಡಿಮೆಯಿಲ್ಲ ಎಂದು ಜಗತ್ತಿಗೇ ತೋರಿಸಿಕೊಟ್ಟಿದ್ದಾಳೆ. ಈ ಅವಕಾಶಗಳು ಎಲ್ಲ ಹೆಣ್ಣು ಮಕ್ಕಳಿಗೂ ಸಿಗಬೇಕಾಗಿದೆ.

ಅವಕಾಶಗಳು ಒದಗಿದಾಗ, ಇಲ್ಲವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಉತ್ತಮ ಕೆಲಸಗಳಿಗೆ ಶಕ್ತಿ-ಸಾಮರ್ಥ್ಯಗಳನ್ನು ವಿನಿಯೋಗಿಸುವ ಕೆಲಸ ಎಲ್ಲರಿಂದಲೂ ಆಗಬೇಕು. ಬೆಲ್ಲದಿಂದ ಮಾಡಲಾಗುವ ಆಹಾರ ಪದಾರ್ಥಗಳಿಗೆ ಈ ದಿನ ಆದ್ಯತೆ ನೀಡಲಾಗಿದೆ. ಬೆಲ್ಲ ದೇಹಕ್ಕೆ ಕಬ್ಬಿಣಾಂಶವನ್ನೂ ಚೈತನ್ಯವನ್ನೂ ನೀಡುತ್ತದೆ. ಕಾಳರಾತ್ರಿ ರೂಪವೂ ದುಷ್ಟಸಂಹಾರದ ದ್ಯೋತಕ. ಇಲ್ಲಿ ದೇವಿ ಅರ್ಧನಾರೀಶ್ವರನ ರೂಪವನ್ನು ತಳೆದಿರುತ್ತಾಳೆ. ಅಂದರೆ ಸ್ತ್ರೀಯು ಪುರುಷನಿಗೆ ಸಮಾನ ಎಂಬ ಅಂಶವನ್ನು ಇಲ್ಲಿ ಒತ್ತಿಹೇಳಲಾಗಿದೆ. ಅರ್ಧಾಂಗಿಯ ಪರಿಕಲ್ಪನೆ ಹುಟ್ಟಿದ್ದು ಇಲ್ಲಿಂದಲೇ. ಹೀಗಾಗಿ ಪ್ರತಿ ಹೆಜ್ಜೆಯಲ್ಲೂ ಸ್ತ್ರೀ ಶಕ್ತಿಯನ್ನು ಒತ್ತಿಹೇಳಲಾಗುತ್ತದೆ. ಈ ದಿನ ದೇವಿಗೆ ತೆಂಗಿನಕಾಯಿಯನ್ನು ಪ್ರಧಾನವಾಗಿ ಅರ್ಪಿಸಲಾಗುತ್ತದೆ.

ತೆಂಗಿನಕಾಯಿಯು ದೈಹಿಕ ಸದೃಢತೆಯ ಪ್ರತೀಕವಾಗಿದೆ ಎಂಬುದು ಗಮನಾರ್ಹ ಸಂಗತಿ. ಮಹಾಗೌರಿ ಅವತಾರವು ಸಂತೋಷ, ಸಂಪತ್ತು, ಸಮೃದ್ಧಿಯ ಜತೆಗೆ ಶಾಂತಿಪ್ರಧಾನ ಸಂದೇಶವನ್ನು ಸಾರುತ್ತದೆ. ಸಂತೋಷವೆಂದರೆ ನಾವೊಬ್ಬರೇ ಅನುಭವಿಸುವಂಥದ್ದಲ್ಲ, ಎಲ್ಲರಿಗೂ ಹಂಚುವಂಥದ್ದು. ಸಂಪತ್ತು ಎಂದರೆ ಹಣವಷ್ಟೇ ಅಲ್ಲ. ಪ್ರಕೃತಿಯ ಎಲ್ಲ ಅಂಶಗಳೂ ಸೇರಿದಂತೆ ಮಾನವ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡಾಗಲಷ್ಟೇ ಸಮೃದ್ಧಿ ಸಾಧ್ಯ.

ಜಗತ್ತಿನಲ್ಲಿ ಶಾಂತಿ ನೆಲೆಸಲು ನಮ್ಮಿಂದಾಗುವ ಕೊಡುಗೆ ನೀಡಬೇಕು. ಈ ದಿನವೂ ಶ್ರೀ-ಲವಾದ ಕಾಯಿಯನ್ನು ಬಳಸ ಲಾಗುತ್ತದೆ, ಜತೆಗೆ ಒಣದ್ರಾಕ್ಷಿಯನ್ನೂ ಅರ್ಪಿಸಲಾಗುತ್ತದೆ. ಇದರಿಂದಾಗಿ ಅಗತ್ಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಸಿದ್ಧಿದಾತ್ರಿ ಅವತಾರವು ಸರಸ್ವತಿಯ ಸ್ವರೂಪ. ಎಲ್ಲರಿಗೂ ಶೈಕ್ಷಣಿಕ ಹಕ್ಕು ಸಿಗಬೇಕು ಎಂಬುದನ್ನು ನಾವಿಲ್ಲಿ
ಮನಗಾಣಬೇಕು. ಶಿಕ್ಷಣ, ಕಲೆಗೆ ಸಂಬಂಧಿಸಿ ನಮ್ಮಿಂದಾಗುವ ಎಲ್ಲ ಸಹಾಯ-ಸಹಕಾರಗಳನ್ನು ನಾವು ನೀಡುತ್ತಿರಬೇಕು.
ಉದಾಹರಣೆಗೆ, ಶಿಕ್ಷಣದಿಂದ ವಂಚಿತರಾದವರು ಕಂಡರೆ ಸರಕಾರದ ಕಡೆಯಿಂದ ಅವರಿಗೆ ಶಿಕ್ಷಣದ ವ್ಯವಸ್ಥೆ ಮಾಡು ವುದು, ಪುಸ್ತಕಗಳು, ಪಾಟಿಚೀಲ ಹಾಗೂ ಇತರ ಪೂರಕ ಸಾಮಗ್ರಿಗಳನ್ನು ಅವಶ್ಯಕತೆ ಇರುವವರಿಗೆ ಕೊಡುಗೆಯಾಗಿ ನೀಡುವುದು ಇತ್ಯಾದಿ. ಈ ದಿನ ಎಳ್ಳಿನ ಆಹಾರವನ್ನು ತಯಾರಿಸಲಾಗುತ್ತದೆ.

ದೇಹದಲ್ಲಿ ಎಣ್ಣೆಯಂಶವನ್ನು ಹೆಚ್ಚಿಸುವ ಗುಣ ಎಳ್ಳಿನಲ್ಲಿ ಅಡಕವಾಗಿದೆ ಎಂಬುದು ಉಲ್ಲೇಖನೀಯ. ಹೀಗೆ ಸ್ತ್ರೀ ಪ್ರಧಾನ ವಾಗಿರುವ ನವರಾತ್ರಿಯು ಪೌಷ್ಟಿಕತೆಯಿಂದ ಕೂಡಿದ ಹಬ್ಬವೂ ಹೌದು. ನಮ್ಮ ರಾಜ್ಯದಲ್ಲಿ ಶೇ. ೪೭.೮ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮತ್ತು ಮಹಿಳೆಯರು ಪೌಷ್ಟಿಕ ಆಹಾರವನ್ನು ಸೇವಿಸದಿರುವುದಕ್ಕೆ ಅನೇಕ ಕಾರಣ
ಗಳಿವೆ. ಎಷ್ಟೋ ಕುಟುಂಬಗಳಲ್ಲಿ ಮಹಿಳೆ ಸಂಸ್ಕೃತಿಯ ಬಲಿಪಶುವಾಗದ್ದಾಳೆ ಎಂದರೆ ತಪ್ಪಲ್ಲ. ಗಂಡ, ಮಾವ, ಮೈದುನ,
ಮಗ ಹೀಗೆ ಮನೆಯ ಪುರುಷರು ಊಟ ಮಾಡಿದ ನಂತರವಷ್ಟೇ ಹೆಣ್ಣು ಊಟಮಾಡಬೇಕು ಎಂಬ ನಂಬಿಕೆಯಲ್ಲೇ ಬೆಳೆದ ಹೆಣ್ಣಿಗೆ, ಇದು ತನ್ನ ಪೌಷ್ಟಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಅರಿವಿಲ್ಲದಿರುವುದು ದುರಂತ.

ಮುಂದೆ ಅವಳಿಗೆ ಹುಟ್ಟುವ ಮಕ್ಕಳ ಮೇಲೂ ಇದು ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ರಾಜ್ಯದಲ್ಲಿರುವ ಶೇ.೬೫ರಷ್ಟು ರಕ್ತಹೀನ ಮಕ್ಕಳೇ ಸಾಕ್ಷಿ. ಕಾರಣಗಳೇನೇ ಇರಲಿ, ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಇಡೀ ಸಮಾಜದ ಆರೋಗ್ಯವು ಹೆಣ್ಣಿನ ಆರೋಗ್ಯದ ಮೇಲೆ ನಿಂತಿದೆ ಎಂಬುದನ್ನು ನಾವ್ಯಾರೂ ಮರೆಯಬಾರದು. ನವರಾತ್ರಿಯ ಈ ಶುಭಸಂದರ್ಭದಲ್ಲಿ ದೇವಿಯನ್ನು ಪೂಜಿಸುವಾಗ, ನಮ್ಮ ಮನೆ-ಸಮಾಜದಲ್ಲಿರುವ ಎಲ್ಲ ಮಹಿಳೆಯರನ್ನು ಗೌರವಿಸುವ ಪಣತೊಡೋಣ. ಆಕೆಯ
ಪೌಷ್ಟಿಕತೆಯನ್ನು ಖಾತ್ರಿಪಡಿಸೋಣ. ಅಪೌಷ್ಟಿಕತೆಯೆಂಬ ಕೆಡುಕಿನಿಂದ ಪೌಷ್ಟಿಕತೆಯೆಡೆಗೆ ಸಾಗುವ ಮೂಲಕ ಸಮಾಜದ
ಒಳಿತನ್ನು ಸಾಽಸೋಣ. ಎಲ್ಲರಿಗೂ ನವರಾತ್ರಿ ಹಬ್ಬ ಒಳಿತನ್ನು ಮಾಡಲಿ. ಸದೃಢ ಸಮಾಜ ನಿರ್ಮಾಣವಾಗಲಿ.