Saturday, 10th April 2021

ಪರಿಶ್ರಮವೇ ಯಶಸ್ಸಿನ ಕೀಲಿಕೈ

ಮೌಲಾಲಿ ಕೆ ಆಲಗೂರ

ಕರ್ನಾಟಕದ ಮೊದಲ ಮಹಿಳಾ ಬಾಡಿ ಬಿಲ್ಡರ್ ಎಂದು ಹೆಸರು ಮಾಡಿರುವ ಮಮತಾ ಸನತ್ ಕುಮಾರ್ ಅವರದು ಪರಿಶ್ರಮದ ಹಾದಿ. ಶ್ರದ್ಧೆಯಿಂದ ಸಾಧನೆ ಮಾಡಿದರೆ, ಯಶಸ್ಸು ದೊರೆಯುತ್ತದೆ ಎಂಬುದಕ್ಕೆ ಇವರು ಒಂದು ಉದಾ ಹರಣೆ.

ಇತ್ತೀಚೆಗೆ ಮಹಿಳೆಯರಲ್ಲಿ ಸಾಧಿಸುವ ಛಲ, ಏಕಾಗ್ರತೆಯ ಬಲ, ನಿರಂತರ ಪರಿಶ್ರಮ, ಜಯಸುವ ಆತ್ಮವಿಶ್ವಾಸ, ಸತತ ಪ್ರಯತ್ನ, ಧೃಡ ಸಂಕಲ್ಪದ ಜೊತೆಗೆ ಮುನ್ನುಗುವ ಮನೋಭಾವ ಹೆಚ್ಚುತ್ತಿದೆ.

ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಸಾಧನೆಗೈದಿರು ಮಹಿಳೆ ಈಗ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲೂ ಸಾಧನೆಯನ್ನು ತೋರುತ್ತಿದ್ದಾಳೆ. ಬಾಡಿ ಬಿಲ್ಡಿಂಗ್‌ನಲ್ಲಿ ಹೆಸರು ಮಾಡಿ ಕರ್ನಾಟಕದ ಪ್ರಪ್ರಥಮ ಮಹಿಳಾ ಬಾಡಿ ಬಿಲ್ಡರ್ ಎನಿಸಿಕೊಂಡ ಮಮತಾ ಸನತ್ ಕುಮಾರ್ ಈ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಾರೆ.

ಮಮತಾ ಅವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರಿನ ಬಸವಾಪುರ ಎಂಬ ಪುಟ್ಟ ಹಳ್ಳಿಯಲ್ಲಿ. ತಂದೆ ಸಣ್ಣ ಮಟ್ಟದ ಕೃಷಿಕ. ವ್ಯವಸಾಯವನ್ನೇ ನಂಬಿದ್ದ ಕುಟುಂಬ. ಇದರ ಮಧ್ಯ ಏನಾದರೂ ಸಾಧಿಸ ಬೇಕು ಎಂಬ ಹಠ ಮಮತಾ ಅವರದ್ದು. ಮಮತಾಳರಿಗೆ ಬೇಗ ಮದುವೆ ಆಯಿತು. ಮದುವೆ ಆದ ನಂತರವೂ ಏನಾದರೂ ಸಾಧಿಸಲೇ ಬೇಕು ಎಂದು ನಿರ್ಧಿಸಿದ ಮಮತಾ ತನ್ನ 23 ವರ್ಷ ವಯಸ್ಸಿನಲ್ಲಿ ಸಾಧನೆಯ ಹಾದಿಯನ್ನು ಆರಂಭಿಸಿದರು.

ಪ್ರಕೃತಿ ಸಹಜವಾಗಿ ಸುಮಾರು 98 ಕೆ.ಜಿ ದೇಹದ ತೂಕ ಹೊಂದಿದ್ದ ಇವರು, ಯಾವ ಕ್ಷೇತ್ರ ಆರಿಸಿಕೊಳ್ಳುವುದು ಎಂದು ಯೋಚಿಸಿ, ಬಾಡಿ ಬಿಲ್ಡಿಂಗ್ ಮತ್ತು ಜಿಮ್‌ನತ್ತ ಒಲವು ತೋರಿದರು. ತನ್ನ ಐದು ವರ್ಷದ ಪೂರ್ತಿಕಾ ಎಂಬ ಹೆಣ್ಣು ಮಗಳನ್ನು ಮನೆಯಲ್ಲಿಯೇ ಬಿಟ್ಟು ದೇಹದ ತೂಕ ಇಳಿಸಲು ಜೀಮ್ ಸೇರಿದರು.

ಆರಂಭದಲ್ಲಿ ಜಿಮ್ ಕಠಿಣ ಎನಿಸಿತು. ಆದರೆ ಮಮತಾ ಧೃತಿಗೆಡಲಿಲ್ಲ. ತನ್ನ ಗುರಿ ಬದಲಿಸದೇ ನಸುಕಿನ 5 ಗಂಟೆಯಿಂದ ಬೆಳಿಗ್ಗಿನ 10 ಗಂಟೆವರೆಗೂ ನಿರಂತರವಾಗಿ ಜಿಮ್‌ನಲ್ಲಿ ಶ್ರದ್ಧೆಯಿಂದ ಅಭ್ಯಾಸ ಮಾಡಿದರು. ಇದೇ ವೇಳೆ ಯಲ್ಲಿ ಜೀಮ್ ತರಬೇತಿದಾರರಾಗುವ ಅವಕಾಶ ಒದಗಿ ಬಂದಿತು. ತರಬೇತಿ ನೀಡುತ್ತಲೇ, ಬಾಡಿ ಬಿಲ್ಡಿಂಗ್ ಅಭ್ಯಾಸ ಮಾಡಿದರು.

ಸಾಮಾನ್ಯವಾಗಿ ನಮ್ಮ ರಾಜ್ಯದಲ್ಲಿ ಮಹಿಳೆಯರು ಬಾಡಿ ಬಿಲ್ಡಿಂಗ್ ಅಥವಾ ದೇಹದಾರ್ಢ್ಯ ಅಭ್ಯಾಸ ಮಾಡುವುದು ಕಡಿಮೆ. ಈ ವಿಚಾರವು ಮಮತಾ ಅವರಿಗೆ ತೊಡಕಾಗಲಿಲ್ಲ. ನಿರಂತರ ಪರಿಶ್ರಮ ಮತ್ತು ಶ್ರದ್ಧೆ ಇವರಿಗೆ ಫಲ ನೀಡತೊಡಗಿತು.

ಗೋವಾದಲ್ಲಿ ಮೊದಲ ಜಯ
ಎರಡು ವರ್ಷಗಳ ಕಾಲ ತನ್ನ ಅಭ್ಯಾಸ ಮುಂದುವರಿಸಿದ ಮಮತಾ 2018 ಮಾರ್ಚ್ ತಿಂಗಳ ಗೋವಾ ಬಾಸ್ ಶಿಪ್ ಚಾಂಪಿಯನ್ ನಲ್ಲಿ ಭಾಗವಹಿಸಿ ಬಾಡಿ ಬಿಲ್ಡಿಂಗ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ವಿಜಯ ಕಿರೀಟವನ್ನು ಧರಿಸಿದ ಹೆಮ್ಮೆಯ ಕನ್ನಡತಿಯಾಗಿ ಹೊರ ಹೊಮ್ಮಿದರು.

ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಮಿಸ್ಟರ್ ಬೆಂಗಳೂರು ಸ್ಪರ್ಧೆಯಲ್ಲಿ ರನ್ನರ್ ಅಪ್ ಮತ್ತು ಸೌತ್ ಇಂಡಿಯನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಪದಕ ಗೆದ್ದು ಕರ್ನಾಟಕ ಕೀರ್ತಿ ಹೆಚ್ಚಿಸಿದರು. 2019 ಫೆಬ್ರವರಿಯಲ್ಲಿ ಗೋವಾದಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತೊಮ್ಮೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಈ ಮೂಲಕ ಕರ್ನಾಟಕ ಮೊದಲ ಮಹಿಳಾ ಬಾಡಿ ಬಿಲ್ಡರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿ ಕೊಂಡು, ರಾಜ್ಯದಲ್ಲೂ ಸಾಕಷ್ಟು ಚಾಂಪಿಯನ್ ಶಿಪ್ ಗೆದ್ದು, ತಮ್ಮ ಪರಿಶ್ರಮಕ್ಕೆ ಗೌರವ ದೊರಕಿಸಿಕೊಂಡರು. ಇನ್ನೂ ಹೆಚ್ಚಿನ ಸಾಧನೆ ಮಾಡಲು ತರಬೇತುದಾರ ಕೃಷ್ಣ ವೆಂಕಟೇಶ ರವರ ಬಳಿ ಈಗ ಅಭ್ಯಾಸ ಮಾಡುತ್ತಿದ್ದಾರೆ. ತನ್ನ ಈ ಎಲ್ಲಾ ಸಾಧನೆಗೂ ಮೂಲ ಮತ್ತು ಬಲ ತನ್ನ ತಾಯಿ ಎನ್ನುವ ಮಮತಾ ತನ್ನ ಗಂಡ ನೀಡಿದ ಪ್ರೋತ್ಸಾಹವನ್ನು ಗುರುತಿಸಿ, ತನ್ನ ಗಂಡನಿಗೂ ಆಭಾರಿ ಎನ್ನುತ್ತಾರೆ.

ಇವರ ಬಾಡಿ ಬಿಲ್ಡಿಂಗ್ ಪ್ರತಿಭೆಯನ್ನು ಕಂಡು ಚಲನಚಿತ್ರ ರಂಗವೂ ಇವರನ್ನು ಕರೆದಿದೆ. ಕನ್ನಡದ ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವ ರತ್ನ’ ಚಲನಚಿತ್ರ ದಲ್ಲಿ ಅಭಿನಹಿಸಿದ್ದಾರೆ. ಅಲ್ಲದೆ ಇತರ ಕೆಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಕೂಡಿ ಬಂದಿದೆ. ಮಹಿಳೆಯರೂ ದೇಹ ದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತೋರಿಸಿಕೊಟ್ಟ ಮಮತಾ ಅವರ ಪರಿಶ್ರಮ ಮತ್ತು ಸಾಧನೆಯು ಎಲ್ಲರಿಗೂ ಸ್ಫೂರ್ತಿ ತುಂಬುವಂತಿದೆ.

Leave a Reply

Your email address will not be published. Required fields are marked *