Saturday, 10th April 2021

ವಿದ್ಯುತ್ ಕಾರು ತಯಾರಿಕೆಯಲ್ಲಿ ಚೀನಾ ದಾಪುಗಾಲು

ಟೆಕ್‌ ಫ್ಯೂಚರ್‌

ವಸಂತ ಗ ಭಟ್‌

ವಾತಾವರಣದ ಮಾಲಿನ್ಯ ಕಡಿಮೆ ಮಾಡುವಲ್ಲಿ ಜಗತ್ತಿನ ಎಲ್ಲಾ ದೇಶಗಳೂ ಕೈಗೊಂಡ ಒಂದು ಕ್ರಮವೆಂದರೆ, ತೈಲ ಚಾಲಿತ ವಾಹನಗಳ ಸಂಖ್ಯೆ ಕಡಿಮೆ ಮಾಡಿ, ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚಿಸುವುದು. ಆದ್ದರಿಂದಲೇ ವಿದ್ಯುತ್ ಚಾಲಿತ ಕಾರುಗಳಿಗೆ ಮುಂದಿನ ದಿನಗಳಲ್ಲಿ ಬಹು ದೊಡ್ಡ ಮಾರುಕಟ್ಟೆ ಇದೆ. ಇದನ್ನು ಗುರುತಿಸಿರುವ ಚೀನಾವು, ಈಗಾಗಲೇ ಈ ಕ್ಷೇತ್ರದಲ್ಲಿ ಮುಂದಿದೆ. ಬ್ಯಾಟರಿ ತಯಾರಿಕೆಯಲ್ಲೂ ಚೀನಾದ್ದೇ ಮೇಲುಗೈ. ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ಕಾರುಗಳ ವಿಶ್ವದ ಅತಿದೊಡ್ಡ ಮಾರುಕಟ್ಟೆ ಎನಿಸಲಿದೆ ಚೀನಾ!

ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಮಸ್ಯೆಗೆ ಒಂದು ಕಾರಣವೆಂದರೆ ವಾಹನಗಳು ಹೊರಸೂಸುವ ಇಂಗಾಲ. ಇದನ್ನು ಕಡಿಮೆಗೊಳಿಸುವ ಉದ್ದೇಶದಿಂದ ಆರಂಭವಾದ ಹಲವು ವಿದ್ಯುತ್ ಚಾಲಿತ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಅಮೇರಿಕದ ಟೆಸ್ಲ ಅತ್ಯಂತ ಪ್ರಮುಖವಾದುದು.

ಅಮೇರಿಕದಲ್ಲಿ ಟೆಸ್ಲ ತನ್ನ ಮೊದಲ ವಿದ್ಯುತ್ ಚಾಲಿತ ಕಾರನ್ನು ಬಿಡುಗಡೆ ಮಾಡುವವರೆಗೂ ಜಗತ್ತಿನ ಯಾವುದೇ ದೇಶವೂ ವಿದ್ಯುತ್ ಚಾಲಿತ ಕಾರುಗಳಿಗೆ ಇಷ್ಟು ದೊಡ್ಡ ಮಾರುಕಟ್ಟೆಯಿದೆ ಎನ್ನುವುದನ್ನು ಊಹಿಸಿರಲಿಲ್ಲ. ಟೆಸ್ಲದ ಯಶಸ್ಸು ಜಗತ್ತಿನ ಹಲವು ದೇಶಗಳಿಗೆ ವಿದ್ಯುತ್ ಚಾಲಿತ ಕಾರನ್ನು ಉತ್ಪಾದಿಸಲು ಸ್ಫೂರ್ತಿ ನೀಡಿದ್ದು ಸುಳ್ಳಲ್ಲ. ಆದರೆ ಆ ನಿಟ್ಟಿನಲ್ಲಿ ವೇಗವಾಗಿ ಕಾರ್ಯಪ್ರವೃತ್ತವಾಗಿ ಅಮೆರಿಕಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸುತ್ತಿರುವುದು ಚೀನಾ.

ಈಗ ಜಗತ್ತಿನಲ್ಲಿ, ಅತಿ ಹೆಚ್ಚು ವಿದ್ಯುತ್ ಚಾಲಿತ ಕಾರುಗಳು ಮಾರಾಟ ಮತ್ತು ಉತ್ಪಾದನೆಯಾಗುತ್ತಿರುವುದು ಚೀನಾದಲ್ಲಿ. 2020ರಲ್ಲಿ ಚೀನಾ ಮಾರುಕಟ್ಟೆಯಲ್ಲಿ ಸುಮಾರು 13,90,000 ವಿದ್ಯುತ್ ಕಾರುಗಳ ಮಾರಾಟವಾದರೆ, ಅಮೆರಿಕದಲ್ಲಿ ಮಾರಾಟ ವಾದದ್ದು ಕೇವಲ 3,28,000 ಕಾರುಗಳು. 2060 ರ ಒಳಗೆ ಚೀನಾವನ್ನು ಸಂಪೂರ್ಣ ಕಾರ್ಬನ್ ನ್ಯೂಟ್ರಲ್ ದೇಶವಾಗಿಸುವ ಪಣ ತೊಟ್ಟಿರುವ ಚೀನಾಕ್ಕೆ, ಏಕೆ ವಿದ್ಯುತ್ ಚಾಲಿತ ಕಾರುಗಳು ಅನಿವಾರ್ಯ? ಅಮೇರಿಕ ಚೀನಾವನ್ನು ಈ ಸ್ಪರ್ಧೆಯಲ್ಲಿ ಸೋಲಿಸಬಹುದೇ?

ಹೆಚ್ಚಿನವರಿಗೆ ಗೊತ್ತಿರುವಂತೆ ಜಗತ್ತಿನ ಅತೀ ಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳಲ್ಲಿ ಚೀನಾದ ರಾಜಧಾನಿ ಬೀಜಿಂಗ್ ಮೊದಲ ಸ್ಥಾನದಲ್ಲಿದೆ. ವಿಶ್ವದ ಅತೀ ದೊಡ್ಡ ಕಾರು ಮಾರುಕಟ್ಟೆಯಾಗಿರುವ ಚೀನಾದಲ್ಲಿ ಈ ಪರಿಯ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣ ವಾಹನಗಳು ಹೊರಸೂಸುವ ಇಂಗಾಲ. ಈ ಕುಖ್ಯಾತಿಯಿಂದ ಚೀನಾ ಹೊರಬರಬೇಕೆಂದರೆ ಪೆಟ್ರೋಲ್ ಮತ್ತು ಡೀಸಲ್ ಚಾಲಿತ ಕಾರುಗಳಿಗೆ ಪರ್ಯಾಯ ಹುಡುಕುವುದು ಅನಿವಾರ್ಯ.

ಹಾಗಾಗಿ ಚೀನಾ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಅಷ್ಟೇ ಅಲ್ಲದೆ ಚೀನಾ ಜಗತ್ತಿನಲ್ಲೇ ಅತೀ ಹೆಚ್ಚು ಪೆಟ್ರೋಲಿಯಂಅನ್ನು ಆಮದು ಮಾಡಿಕೊಳ್ಳುವ ದೇಶ. ಭಾರತ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ದಲ್ಲಿದೆ. ಸಾಮಾನ್ಯ ಜನರು ನಿತ್ಯ ಜೀವನದಲ್ಲಿ ಅತೀ ಹೆಚ್ಚು ಬಳಕೆ ಮಾಡುವ ಯಾವುದೇ ವಸ್ತುವನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳು ವುದು ಯಾವುದೇ ದೇಶಕ್ಕೂ ಉತ್ತಮ ನಡೆಯಲ್ಲ. ಇದನ್ನು ಅರಿತ ಚೀನಾ ಪೆಟ್ರೋಲ್ ಮತ್ತು ಡೀಸಲ್ ಬಳಕೆಯನ್ನು ಕಡಿಮೆ ಮಾಡುವ ಪಣತೊಟ್ಟಿದೆ ಮತ್ತು ಇದು ಕೂಡ ವಿದ್ಯುತ್ ಚಾಲಿತ ವಾಹನದಿಂದ ಸಾಧ್ಯವಾಗಲಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಚೀನಾ ಇತಿಹಾಸದಲ್ಲಿ, ವಾಹನ ಉತ್ಪಾದನೆಯಲ್ಲಿ ಯಾವಾಗಲೂ ಅಮೇರಿಕ ಅಥವಾ ಯೂರೋಪ್ ‌ಅನ್ನು ಅನುಕರಣೆ ಮಾಡಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ತಯಾರಾಗುವ ವಿದ್ಯುತ್ ಚಾಲಿತ ವಾಹನ ಮಾರುಕಟ್ಟೆ ಯಲ್ಲಿಯೂ ಚೀನಾ ಇದನ್ನೇ ಮುಂದುವರೆಸಲು ಸಿದ್ಧವಿಲ್ಲ. ಬದಲಾಗಿ ವಿದ್ಯುತ್ ಚಾಲಿತ ಕಾರು ಉತ್ಪಾದನೆಯಲ್ಲಿ ಉತ್ತಮ ಹಿಡಿತ ಸಾಧಿಸಿ, ಹೇಗೆ ಇಂದು ಹೆಚ್ಚಿನ ದೇಶಗಳಲ್ಲಿ ಚೀನಾ ಮೊಬೈಲ್‌ಗಳು ಮಾರಾಟವಾಗುತ್ತಿದೆಯೋ ಹಾಗೆ ವಿದ್ಯುತ್ ಚಾಲಿತ ಕಾರು ಮಾರಾಟವನ್ನು ಸಹ ಮಾಡಬೇಕು ಎನ್ನುವ ಗುರಿ ಹೊಂದಿದೆ.

ಹೇಗಿದೆ ಚೀನಾದ ತಯಾರಿ
ಎಲ್ಲರಿಗೂ ತಿಳಿದಿರುವಂತೆ ವಿದ್ಯುತ್ ಚಾಲಿತ ಕಾರುಗಳು ಪೆಟ್ರೋಲ್ ಅಥವಾ ಡೀಸೆಲ್ ಚಾಲಿತ ಕಾರುಗಳಿಗಿಂತ ದುಬಾರಿ. ಸದ್ಯ ಭಾರತದಲ್ಲಿ ಆರಂಭವಾಗಲಿರುವ ಟೆಸ್ಲ ಸಂಸ್ಥೆಯ ಆರಂಭಿಕ ಕಾರಿನ ಮೌಲ್ಯ ಸುಮಾರು ರು.40,00,000. ಭಾರತಕ್ಕಿಂತ ಆರ್ಥಿಕವಾಗಿ ಚೀನಾ ಶ್ರೀಮಂತವಾಗಿದ್ದರೂ ಇಂದಿಗೂ ಅಲ್ಲಿಯ ಸಾಮಾನ್ಯ ಜನ ಭಾರತದಂತೆಯೇ ಮಧ್ಯಮ ವರ್ಗದವರು, ಹೆಚ್ಚಿನ ಬೆಲೆಯ ಉತ್ಪನ್ನಗಳು ಅಲ್ಲಿಯೂ ಮಾರಾಟವಾಗುವುದು ಕಷ್ಟ.

ಇದರ ಅರಿವಿರುವ ಚೀನಾ, ಸರಕಾರ ಜನರು ವಿದ್ಯುತ್ ಚಾಲಿತ ಕಾರನ್ನು ಖರೀದಿಲು ಅವಶ್ಯವಿರುವ ಯೋಜನೆಗಳನ್ನು ರೂಪಿಸಿದೆ. ನೋಂದಣಿ ಸಂಖ್ಯೆಗೆ 12,000 ಡಾಲರ್ ಅವುಗಳಲ್ಲಿ ಮೊದಲನೆಯದು ವಿದ್ಯುತ್ ಚಾಲಿತ ಕಾರು ತಯಾರಕರು ಮತ್ತು ಖರೀದಿದಾರರಿಗೆ ನೀಡುತ್ತಿರುವ ಸಬ್ಸಿಡಿ. ಶಾಂಘೈ ನಗರದಲ್ಲಿ ಪೆಟ್ರೋಲ್ ಅಥವಾ ಡೀಸಲ್ ಚಾಲಿತ ಕಾರನ್ನು ಖರೀದಿಸ ಬೇಕೆಂದರೆ ಸುಮಾರು 12,000 ಡಾಲರ್‌ಗಳನ್ನು ಕೇವಲ ಕಾರಿನ ಸಂಖ್ಯೆ ಪಡೆಯಲು ಸರಕಾರಕ್ಕೆ ನೀಡಬೇಕು.

ಅದೇ ವಿದ್ಯುತ್ ಚಾಲಿತ ಕಾರನ್ನು ಖರೀದಿಸಿದರೆ ಈ ಹಣವನ್ನು ಪಾವತಿಸಬೇಕಾಗಿಲ್ಲ. ಇನ್ನು ಎರಡನೆಯದು ಸ್ವಲ್ಪ ಕಠಿಣ ಎನಿಸುವ ಕ್ರಮವೆಂದರೆ, ಬೀಜಿಂಗ್ ಸೇರಿದಂತೆ, ಚೀನಾದ ಹಲವು ಮಹಾ ನಗರಗಳ ಒಳಗೆ ಓಡಾಟ ಮಾಡಬೇಕೆಂದರೆ ವಿದ್ಯುತ್
ಚಾಲಿತ ವಾಹನಗಳನ್ನು ಬಳಕೆಮಾಡುವುದು ಕಡ್ಡಾಯವಾಗಿದೆ. ಇನ್ನು ಕೆಲವು ನಗರಗಳಲ್ಲಿ ವಾರದ ಕೆಲವೇ ದಿನ ಮಾತ್ರ ಪೆಟ್ರೋಲ್ ಅಥವಾ ಡೀಸಲ್ ಚಾಲಿತ ವಾಹನಗಳು ರಸ್ತೆಯಲ್ಲಿ ಓಡಾಡಬಹುದು. ಇತರ ದಿನಗಳಲ್ಲಿ ಕೇವಲ ವಿದ್ಯುತ್ ಚಾಲಿತ ವಾಹನಗಳು ರಸ್ತೆಯಲ್ಲಿ ಚಲಿಸಬಹುದು.

ಇತ್ತೀಚಿನವರೆಗೂ ಚೀನಾ ದೇಶದಲ್ಲಿ ಯಾವುದೇ ಸಂಸ್ಥೆ ಕಾರಿನ ಉತ್ಪಾದನೆಯನ್ನು ಆರಂಭಿಸಬೇಕೆಂದರೆ ಅದು
ಯಾವುದಾದರೂ ಸ್ಥಳಿಯ ಕಾರು ಉತ್ಪಾದಕ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.
ಅಮೇರಿಕದ ಕಾರು ಸಂಸ್ಥೆಗಳಾದ ಜಿಎಂ, ಫೋರ್ಡ್ ಇತ್ಯಾದಿ ಸಂಸ್ಥೆಗಳು ಚೀನಾದಲ್ಲಿ ಕಾರು ಉತ್ಪಾದಿಸುತ್ತಿರುವುದು ಹೀಗೆಯೇ. ಇದರಿಂದ ಒಂದು ವಿದೇಶಿ ಸಂಸ್ಥೆ ಅನಿವಾರ್ಯವಾಗಿ ಸ್ಥಳೀಯ ಸಂಸ್ಥೆಯೊಂದಿದೆ ತನ್ನ ಲಾಭವನ್ನು ಹಂಚಿಕೊಳ್ಳಬೇಕಾಗುತ್ತದೆ. ಆದರೆ ಈ ನಿಯಮ ವಿದ್ಯುತ್ ಚಾಲಿತ ಕಾರುಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಟೆಸ್ಲ ಸಂಸ್ಥೆಯು ಯಾವುದೇ ಪಾಲುದಾರಿಕೆ ಯಿಲ್ಲದೆ ಮತ್ತು ಸ್ಥಳೀಯ ಸಂಸ್ಥೆಯೊಂದಿಗೆ ಒಡಂಬಡಿಕೆ ಇಲ್ಲದೇ, ಚೀನಾದಲ್ಲಿ ಕಾರು ಮಾರಾಟ ಮಾಡುತ್ತಿದೆ.

ಕಾರು ಉತ್ಪಾದನೆ ಮತ್ತು ಮಾರಾಟಕ್ಕೆ ಹಲವು ಆಯಾಮಗಳ ಒತ್ತು ನೀಡುತ್ತಿರುವ ಚೀನಾ ಸರಕಾರ, ವಿದ್ಯುತ್ ಚಾಲಿತ ಕಾರುಗಳ ಅತೀ ಮುಖ್ಯ ಭಾಗವಾದ ಬ್ಯಾಟರಿ ಉತ್ಪಾದನೆಗೂ ಬಹಳಷ್ಟು ಸಬ್ಸಿಡಿ ನೀಡಿದೆ. ಜಗತ್ತಿನ 60 ಪ್ರತಿಶತಕ್ಕಿಂತಲೂ ಹೆಚ್ಚಿನ ಬ್ಯಾಟರಿ
ಉತ್ಪಾದಿಸುವ ಚೀನಾ, ಅದರ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಿ ಜಗತ್ತಿನ ವಿದ್ಯುತ್ ಚಾಲಿತ ಕಾರುಗಳ ಮಾರಾಟವನ್ನು
ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿದೆ.

ಅಮೆರಿಕಕ್ಕಿಂತ ಮುಂದೆ
ಸದ್ಯದ ಮಟ್ಟಿಗೆ ಹೇಳುವುದಾದರೆ ಚೀನಾ ವಿದ್ಯುತ್ ಚಾಲಿತ ವಾಹನಗಳ ಉದ್ಯಮದಲ್ಲಿ ಅಮೆರಿಕಕ್ಕಿಂತಲೂ ಬಹಳ
ಮುಂದಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವ ಅಮೆರಿಕ ಮತ್ತು ಚೀನಾದ ವಾಣಿಜ್ಯ ಕಲಹದಿಂದಾಗಿ, ಮುಂದಿನ
ದಿನಗಳಲ್ಲಿ ಚೀನಾ ದೇಶವು ಒಂದು ವೇಳೆ ಅಮೆರಿಕಕ್ಕೆ ಬ್ಯಾಟರಿ ಸರಬರಾಜು ಮಾಡುವುದನ್ನು ನಿಲ್ಲಿಸಿದರೆ ಅಮೆರಿಕದ ವಿದ್ಯುತ್ ಚಾಲಿತ ಕಾರು ಉತ್ಪಾದನೆಗೆ ದೊಡ್ಡ ಆಘಾತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಎಲ್ಲಾ ನಿಟ್ಟಿನಲ್ಲೂ ಚೀನಾ ದೇಶವು, ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯಲ್ಲಿ, ಅವುಗಳಿಗೆ ಅವಶ್ಯಕವಿರುವ ಬ್ಯಾಟರಿಗಳ ಉತ್ಪಾದನೆಯಲ್ಲಿ ಸಾಕಷ್ಟು ಮುಂದಿದೆ.

ಜಗತ್ತಿನ ಇತರ ದೇಶಗಳಿಗೂ ಅದು ಬ್ಯಾಟರಿಗಳನ್ನು ಸರಬರಾಜು ಮಾಡುತ್ತಿದೆ. ಅಮೆರಿಕ ಈಗಲಾದರೂ ಎಚ್ಚೆತ್ತುಕೊಂಡು
ವಿದ್ಯುತ್ ಚಾಲಿತ ಮಾರುಕಟ್ಟೆಯಲ್ಲಿ ಸ್ವಾವಲಂಬಿಗುವುದು ಅತ್ಯವಶ್ಯಕ. ಇಲ್ಲವಾದಲ್ಲಿ, ಕೆಲವೇ ವರ್ಷಗಳಲ್ಲಿ ಈ ಕ್ಷೇತ್ರವು
ಸಂಪೂರ್ಣ ಚೀನಾದ ಹಿಡಿತಕ್ಕೆ ಸಿಕ್ಕಿಬಿಡುತ್ತದೆ.

Leave a Reply

Your email address will not be published. Required fields are marked *