Monday, 13th July 2020

ಸೆಮಿಫೈನಲ್‌ಗಾಗಿ ಇಂಗ್ಲೆಂಡ್‌-ನ್ಯೂಜಿಲೆಂಡ್‌ ಫೈಟ್‌

ಚೆಸ್ಟರ್‌-ಲೀ-ಸ್ಟ್ರೀಟ್‌: ಭಾರತದ ವಿರುದ್ಧ ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳಿರುವ ಆತಿಥೇಯ ಇಂಗ್ಲೆಂಡ್‌ ಸೆಮಿಫೈನಲ್‌ ತಲುಪಲು ಮತ್ತೊಂದು ಅಗ್ನಿ ಪರೀಕ್ಷೆಗೆ ಸಿದ್ಧವಾಗಿದ್ದು ನಾಳೆ ಐಸಿಸಿ ವಿಶ್ವಕಪ್‌ 41ನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ಸೆಮಿಫೈನಲ್‌ ತುಡಿತದಲ್ಲಿರು ಉಭಯ ತಂಡಗಳ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ.

ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್‌ ಮೂರನೇ ಸ್ಥಾನದಲ್ಲಿದ್ದು, ಕಳೆದ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸೋಲು ಅನುಭವಿಸಿದೆ. ಈ ಎರಡೂ ಸೋಲುಗಳು ಕಿವೀಸ್‌ ಸೆಮಿಫೈನಲ್‌ ಹಾದಿಗೆ ಅಡ್ಡಿಯಾಗಿಲ್ಲ. ಒಂದು ವೇಳೆ ಇಂಗ್ಲೆಂಡ್‌ ಸೋತರೆ ಅಂತಿಮ ನಾಲ್ಕರ ಘಟ್ಟದ ಹಾದಿಗೆ ಕುತ್ತು ಬರಲಿದೆ. ಈ ಪಂದ್ಯದಲ್ಲಿ ಆಂಗ್ಲರು ಸೋತು, ಜು.5 ರಂದು ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಗೆದ್ದರೆ ಇಂಗ್ಲೆಂಡ್‌ ಸೆಮಿಫೈನಲ್‌ ಕನಸು ಭಗ್ನವಾಗಲಿದೆ. ಹಾಗಾಗಿ, ಇಯಾನ್‌ ಮಾರ್ಗನ್‌ ಪಡೆಗೆ ಈ ಪಂದ್ಯ ಮಾಡು ಇಲ್ಲವೇ ಮಡಿಯಂತಾಗಿದೆ.

ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳಿಗೆ ಗುಂಪು ಹಂತದ ಕೊನೆಯ ಪಂದ್ಯ ಇದಾಗಿದೆ. ನ್ಯೂಜಿಲೆಂಡ್ ಖಾತೆಯಲ್ಲಿ ಈಗಾಗಲೇ 11 ಅಂಕಗಳನ್ನು ಹೊಂದಿದೆ. ಆದ್ದರಿಂದ, ನ್ಯೂಜಿಲೆಂಡ್‌ ಈ ಪಂದ್ಯದಲ್ಲಿ ಸೋಲು ಅನುಭವಿಸಿದರೂ ಅಂತಿಮ ನಾಲ್ಕರ ಘಟ್ಟಕ್ಕೆ ಅವಕಾಶವಿದೆ. ಆದರೆ, ಭಾರಿ ಅಂತರದಲ್ಲಿ ಸೋಲಬಾರದಷ್ಟೆ.

ಸದ್ಯ ಸೆಮಿಫೈನಲ್ಸ್‌ ತಲುಪುವ ಹಾದಿಯಲ್ಲಿ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ಇದೆ. ಕಳೆದ ಎರಡು ಪಂದ್ಯಗಳಲ್ಲಿ ಕಿವೀಸ್‌ ಸೋಲು ಅನುಭವಿಸಿದೆ. ಆದರೆ, ಇಂಗ್ಲೆಂಡ್‌ ತಂಡ ಭಾರತದ ವಿರುದ್ಧ 31 ರನ್‌ಗಳಿಂದ ಗೆದ್ದು ವಿಶ್ವಾಸದಲ್ಲಿದೆ.
ಭಾರತದ ವಿರುದ್ಧ ಜಾನಿ ಬೈರ್‌ಸ್ಟೋ (111) ಹಾಗೂ ಜೇಸನ್‌ ರಾಯ್‌ (66) ಅವರು ಉತ್ತಮ ಬ್ಯಾಟಿಂಗ್‌ ಮಾಡಿದ್ದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 160 ರನ್‌ ದಾಖಲಿಸಿತ್ತು. ನಂತರ, ಮಧ್ಯಮ ಕ್ರಮಾಂಕದಲ್ಲಿ ಬೆನ್‌ ಸ್ಟೋಕ್ಸ್‌ 79 ರನ್ ಸ್ಫೋಟಿಸಿದ್ದರು. ಇವರ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್ 7 ವಿಕೆಟ್‌ ಕಳೆದುಕೊಂಡು 337 ರನ್‌ ದಾಖಲಿಸಿತ್ತು.

ಚೊಚ್ಚಲ ವಿಶ್ವಕಪ್‌ ಗೆಲ್ಲುವ ತುಡಿತದಲ್ಲಿರುವ ಇಂಗ್ಲೆಂಡ್‌ ತಂಡ ಕ್ಷೇತ್ರ ರಕ್ಷಣೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಕ್ರಿಸ್‌ ವೋಕ್ಸ್‌ ಹಿಡಿದ ಅದ್ಭುತ ಕ್ಯಾಚ್‌ ಹಾಗೂ ಮಧ್ಯಮ ಓವರ್‌ಗಳಲ್ಲಿ ಲಿಯಾಮ್‌ ಪ್ಲಂಕೆಟ್‌ (55ಕ್ಕೆ3) ಉತ್ತಮ ನಿರ್ವಹಣೆ ತೋರಿದ್ದರು.

ಮತ್ತೊಂದೆಡೆ ಸತತ ಎರಡು ಸೋಲುಗಳಿಂದ ತೀವ್ರ ನಿರಾಸೆಗೆ ಒಳಗಾಗಿರುವ ನ್ಯೂಜಿಲೆಂಡ್‌ ಮತ್ತೆ ಗೆಲುವಿನ ಲಯಕ್ಕೆ ಮರಳುವ ತುಡಿತದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್‌ ಪಡೆದಿದ್ದ ಟ್ರೆಂಟ್‌ ಬೌಲ್ಟ್‌ ಕಿವೀಸ್‌ನ ಬೌಲಿಂಗ್‌ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ಲೂಕಿ ಫರ್ಗುಸನ್‌ ಕೂಡ ತಂಡದ ಅಗತ್ಯ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಇಶ್‌ ಸೋಧಿ ಸ್ಥಾನಕ್ಕೆ ಮತ್ತೊಬ್ಬ ವೇಗಿ ಮ್ಯಾಟ್‌ ಹೆನ್ರಿ ಅಂತಿಮ 11 ರಲ್ಲಿ ಕಾಣಿಸಿಕೊಳ್ಳುವ ಸಂಭವವಿದೆ. ಇಂಗ್ಲೆಂಡ್‌ ತಂಡದಲ್ಲಿ ಹೆಚ್ಚು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದಾರೆ. ಆದರೆ, ಕಿವೀಸ್‌ ಪರ ನಾಯಕ ಕೇನ್‌ ವಿಲಿಯಮ್ಸ್ ಹಾಗೂ ರಾಸ್‌ ಟೇಲರ್‌ ಬಿಟ್ಟರೆ ಇನ್ನುಳಿದವರು ಹೇಳಿಕೊಳ್ಳುವಂಥ ಬ್ಯಾಟಿಂಗ್‌ ಮಾಡುವಲ್ಲಿ ವಿಫಲರಾಗಿದ್ದಾರೆ.

ಸಂಭಾವ್ಯ ಆಟಗಾರರು

ಇಂಗ್ಲೆಂಡ್‌: ಇಯಾನ್‌ ಮಾರ್ಗನ್‌(ನಾಯಕ), ಜೊಫ್ರಾ ಆರ್ಚರ್‌, ಜಾನಿ ಬೈರ್‌ಸ್ಟೋ, ಜೋಸ್‌ ಬಟ್ಲರ್‌(ವಿ.ಕೀ), ಲಿಯಾಮ್‌ ಪ್ಲಂಕೆಟ್‌, ಆದಿಲ್‌ ರಶೀದ್‌, ಜೋ ರೂಟ್‌, ಜೇಸನ್‌ ರಾಯ್‌, ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಮಾರ್ಕ್‌ವುಡ್‌.

ನ್ಯೂಜಿಲೆಂಡ್‌: ಮಾರ್ಟಿನ್‌ ಗುಪ್ಟಿಲ್‌, ಹೇನ್ರಿ ನಿಕೋಲ್ಸ್‌, ಕೇನ್ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲಥಾಮ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್, ಜೇಮ್ಸ್‌ ನಿಶ್ಯಾಮ್‌, ಮಿಚೆಲ್ ಸ್ಯಾಂಟ್ನರ್‌, ಇಶ್‌ ಸೋಧಿ, ಲೂಕಿ ಫರ್ಗುಸನ್‌, ಟ್ರೆಂಟ್‌ ಬೌಲ್ಟ್‌

ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ರಿವರ್‌ಸೈಡ್‌, ಚೆಸ್ಟರ್‌-ಲೀ-ಸ್ಟ್ರೀಟ್‌

Leave a Reply

Your email address will not be published. Required fields are marked *