Friday, 27th May 2022

ಈಶ ಹುಟ್ಟಿಸಿದ ಬೆರಗು

ಡಾ.ಕೆ.ಎಸ್‌.ಪವಿತ್ರ

ಊಟಿಯ ಚಳಿಯನ್ನು ಅನುಭವಿಸಿ, ತಪ್ಪಲಿನಲ್ಲಿರುವ ಈಶನನ್ನು ನೋಡಲು ಹೋದಾಗ ಬೀಸಿದ್ದು ಅಧ್ಯಾತ್ಮ ಅನು ಭವದ ತಂಗಾಳಿ.

ಕೋವಿಡ್ ಸ್ವಲ್ಪ ಬಿಡುವು ನೀಡಿದ್ದ ಸಮಯ. ಜನವರಿಯ ಛಳಿಯಲ್ಲಿ ಊಟಿಗೆ ಹೊರಟಿದ್ದೆವು. ‘ನಾಲ್ಕು ದಿನ ಊಟಿಯಲ್ಲಿ ಮಾಡುವಂತದ್ದು ಏನಿದೆ?’ ಎಂಬ ಪ್ರಶ್ನೆ ಎಲ್ಲರದ್ದೂ! ಆದರೆ ನಾಲ್ಕು ದಿನವಾದರೂ ಹೋಗದಿದ್ದರೆ ಅದೆಂತಾ ಪ್ರವಾಸ ಎನ್ನುವುದು ಅತ್ತ ಶಾಲೆಯೂ ಇಲ್ಲದೆ, ಇತ್ತ ಮನೆಯಲ್ಲೂ ಕಾಲ ಕಳೆಯಲಾಗದೆ ಒದ್ದಾಡುತ್ತಿದ್ದ ಮಕ್ಕಳ ಹಠ.

ಹೋಗಲಿ, ಹಿಂದಿನ ಬಾರಿ ಊಟಿಗೆ ಹೋದಾಗ ‘ಬ್ಲಾಕ್ ಥಂಡರ್’ ವಾಟರ್ ಪಾರ್ಕ್‌ಗೆ ಹೋದ ಹಾಗೆ ಈ ಬಾರಿಯೂ ಹೋಗೋಣ ವೆಂದರೆ ಕೋವಿಡ್ ಕೃಪೆಯಿಂದ ವಾಟರ್‌ಪಾಕ್ ಗಳೆಲ್ಲಾ ಮುಚ್ಚಿದ್ದವು. ಆಗಲೇ ನಾವು ‘ಈಶ’ ಫೌಂಡೇಶನ್‌ಗೆ ಹೋಗೋಣ ಎಂಬ ‘ಪ್ಲ್ಯಾನ್’ ಹಾಕಿದ್ದು. ಊಟಿಯಲ್ಲಿ ಹಿಂದಿನ ದಿನವೇ ಬೆಳಿಗ್ಗೆ ಕುನೂರ್‌ಗೆ ರೈಲಿನಲ್ಲಿ ಸೀಟು ಕಾದಿರಿಸಲು ಹೋದರೆ ಎಲ್ಲವೂ ಬಂದ್!

ಸರಿ ಇಂಟರ್ ನೆಟ್‌ನಲ್ಲಿ ನೋಡಿ ‘ಬುಕ್’ ಮಾಡಿದೆವು. ಬೆಳಿಗ್ಗೆ 8 ಗಂಟೆಗೆ ರೈಲು ನಿಲ್ದಾಣಕ್ಕೆ ಬಂದೆವು. ಊಟಿಯ ರೈಲು ನಿಲ್ದಾಣ ಬ್ರಿಟಿಷರ ಕಾಲದ ಹೆರಿಟೇಜ್ ರೈಲು ನಿಲ್ದಾಣ. ಭಾರತದ ಪ್ರಸಿದ್ಧ, ಪರ್ವತ ರೈಲುಗಳಲ್ಲಿ ಇದೂ ಒಂದು. ಆದ್ದರಿಂದಲೇ ಬಣ್ಣ ಬಣ್ಣದ ರೈಲಿನ ಒಂದು ಚಂದದ ಪ್ರತಿಕೃತಿ, ರೈಲಿನ ಇತಿ ಹಾಸದ ಬಗೆಗಿನ ಒಂದು ಪುಟ್ಟ ಸಂಗ್ರಹಾಲಯವೂ ಇಲ್ಲಿದೆ.

ಬಸವನ ಹುಳುವೇ ಈ ರೈಲು!
ಪರ್ವತದ ಕಡಿದಾದ ದಾರಿಗಳಲ್ಲಿ ಬಸವನ ಹುಳುವಿನಂತೆ ನಿಧಾನವಾಗಿ ಸಾಗುವ ರೈಲು. ಹೋಗುವ ಅಂತಿಮ ತಾಣ ಮೆಟ್ಟು ಪಾಳ್ಯವಾದರೂ, ಬೇಸರ ಬರದೆ, ಆನಂದದ ಅನುಭವವಷ್ಟೇ ಆಗಬೇಕೆಂದರೆ ಕುನೂರಿನಲ್ಲಿಯೇ ಇಳಿಯುವುದು ಲೇಸು. ಸುಮಾರು ಒಂದೂಕಾಲು ಗಂಟೆಗಳ ಪ್ರಯಾಣ. ಒಂದಿಷ್ಟು ಪ್ರಕೃತಿ ವೀಕ್ಷಣೆ, ಫೋಟೋ ಗಳು, ಪರ್ವತ ರೈಲಿನ ಅನುಭವ, ಸುರಂಗಗಳ ಮಜಾ ಅನುಭವ ಪಡೆಯಲು ಸಾಕೇ ಸಾಕು.

ಕುನೂರ್‌ನಲ್ಲಿ ಇಳಿದು, ವಾಹನದಲ್ಲಿ ಕುಳಿತು ಮೆಟ್ಟು ಪಾಳ್ಯಂ ದಾರಿ ಹಿಡಿದು ಘಟ್ಟ ಇಳಿಯಲಾರಂಭಿಸಿದೆವು. ದಾರಿಯ ಇಕ್ಕೆಲ ಗಳಲ್ಲಿ ಪ್ರಕೃತಿ ಸೌಂದರ್ಯದ ಜೊತೆಗೆ ಅಲ್ಲಲ್ಲಿ ಊಟಿ ಸೇಬು, ರಂಬುಟಾನ್, ಲಿಚಿ, ಕಿವಿ ಮೊದಲಾದ ಹಣ್ಣುಗಳು. ಸೀತಾ-ಲದ ಬದಲು ರಾಮಫಲ-ಹನುಮಾನ್ ಫಲಗಳು. ಮಕ್ಕಳಿಗಂತೂ ಇದೂ ಒಂದು ವಿದ್ಯಾಭ್ಯಾಸವೇ ಎಂದುಕೊಂಡೆವು.

ಘಟ್ಟ ಇಳಿದಂತೆ ಊಟಿಯ ಚಳಿ ಮಾಯವಾಗಿ, ತಮಿಳುನಾಡಿನ ಬಿಸಿಲು-ಸೆಕೆ ಜನವರಿಯಲ್ಲೂ ಏರತೊಡಗಿತ್ತು. ಮೆಟ್ಟುಪಾಳ್ಯಂ ನಿಂದ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿ ದ್ದದ್ದು, ಅಲ್ಲಿಲ್ಲಿ ಸುತ್ತಿ-ಸುತ್ತಿ ಅಂತೂ ‘ಆದಿಯೋಗಿ’ಯ ಮುಂದೆ ಬಂದು ಇಳಿದಾಗ ಮಧ್ಯಾಹ್ನ ಸುಮಾರು ಒಂದು ಗಂಟೆ. ಈಶ ಘೆಂಡೇಷನ್ ಬಗ್ಗೆ, ಸದ್ಗುರು ಜಗ್ಗಿ ವಾಸುದೇವರ ಬಗ್ಗೆ ತಿಳಿಯಲು ಕಷ್ಟವೇನೂ
ಪಡಬೇಕಿಲ್ಲವಷ್ಟೆ! ನೀವು ಮೊದಲೇ ‘ಸಮಯ’ದ ‘ಸ್ಲಾಟ್’ ನೋಂದಣಿ ಮಾಡಿಸಿದ್ದರೆ, ಒಳಗೆ ಹೋಗುವುದು ಮತ್ತಷ್ಟು ಸುಲಭ.

ನಾವು ಹೋದ ಸಮಯ ಪ್ರವಾಸ- ಅಂತರರಾಷ್ಟ್ರೀಯ ಪ್ರಯಾಣಗಳೆರಡೂ ಕಡಿಮೆ ಯಾದ್ದರಿಂದ, ಕೋವಿಡ್ ಭಯದ ಕಾರಣ ಜನಸಂದಣಿ ಬಲು ಕಡಿಮೆ. ವಾಹನ ನಿಲುಗಡೆಯ ತಾಣದಿಂದ ಬಿಸಿಲಿನಲ್ಲಿ ಸುಮಾರು ಮುಕ್ಕಾಲು ಕಿಲೋಮೀಟರ್ ನಡೆಯ ಬೇಕು. ಕಾಲು ನೋವಿರುವ-ಅನಾರೋಗ್ಯದ ಸಮಸ್ಯೆಗಳಿರುವ ಹಿರಿಯರಿಗೆ ಇದು ಸ್ವಲ್ಪ ಕಷ್ಟವೇ ಆಗಬಹುದು. ಜತೆಗೆ ‘ಕಮೋಡ್’ ರೀತಿಯ ಶೌಚಾಯಲದ ಕೊರತೆ ಕಂಡಿತು.

ಹಾದಿಯ ಆರಂಭದಲ್ಲಿ ಹತ್ತು ರೂಪಾಯಿಗೊಂದರಂತೆ ಸಣ್ಣ ದೊನ್ನೆಗಳಲ್ಲಿ ವಿವಿಧ ಭಾತ್‌ಗಳು, ಪೊಂಗಲ್ ಮೊದಲಾದ ರುಚಿಕರ ಖಾದ್ಯಗಳು. ಹೊಟ್ಟೆ ತುಂಬಿಸಿಕೊಂಡು ನಡೆದರೆ ‘ಆದಿಯೋಗಿ’ಯ ಭವ್ಯ ಸಾಕಾರಮೂರ್ತಿ ಹತ್ತಿರವಾಗತೊಡಗುತ್ತದೆ.

ಚಿದಂಬರ ಸಾಕಾರ
ಶಿವನ ಪ್ರತಿಮೆಯಿರುವ ಎಲ್ಲೆಡೆ ಇರುವ ದೀಪ ಹಚ್ಚುವುದು, ಕಪ್ಪು ಬಟ್ಟೆಯಲ್ಲಿ ನಮ್ಮ ಮನಸ್ಸಿನ ಇಷ್ಟ ಬರೆದು ಶಿವನ ಮುಂದಿರುವ ಢಮರು/ತ್ರಿಶೂಲಕ್ಕೆ ಕಟ್ಟುವುದು, ಪವಿತ್ರ ಜಲ-ಬಿಲ್ವ/ಬೇವು ಪತ್ರೆಗಳನ್ನು ದೇವರಿಗೆ ಅರ್ಪಿಸುವುದು ಇವು ಇಲ್ಲಿಯೂ ಇವೆ. ಹತ್ತು ರೂಪಾಯಿ ಕಾಣಿಕೆ ಹಾಕುವ ಬದಲು ಹೀಗೆ ಮಾಡುವುದು ಒಂದರ್ಥದಲ್ಲಿ “ಅದು ದೇವರ ತಾಣ” ಎನಿಸಲು ಸಹಾಯಕವೇ!

ಆದರೆ ಇವೆಲ್ಲಕ್ಕಿಂತ ಮನಸ್ಸು-ಕಣ್ಣುಗಳನ್ನು ತುಂಬುವಂತೆ, ಬಿರುಬಿಸಿಲಿನಲ್ಲಿಯೂ ತಂಪಾಗುವಂತೆ ಮಾಡಿದ್ದು ಮಾತ್ರ ಶಿವನ ‘ಅಗಾಧ’ ಎನ್ನುವಂತ ಮೂರ್ತಿ, ಹಿನ್ನೆಲೆಯಲ್ಲಿದ್ದ ಇನ್ನೂ ‘ಅಪಾರ’ ಎನ್ನು ವಂತಹ ಆಕಾಶ. ‘ಚಿದಂಬರ’ನ ನಿರಾಕಾರ ಸ್ವರೂಪ ಯೋಗಿಗಳಿಗೆ ಮಾತ್ರವೇನೋ, ನಮ್ಮಂತಹ ಸಾಮಾನ್ಯರಿಗೆ ‘ಸಾಕಾರ’ ಮೂರ್ತಿ ಬೇಕೇ ಬೇಕು! ‘ಚಿತ್ ಅಂಬರ’ ವನ್ನು ಕಲ್ಪಿಸಿ ಕೊಳ್ಳಲು ಶಿವನ ಅರೆ ನಿಮೀಲಿತ ಕಣ್ಣು, ಧ್ಯಾನ ಮುದ್ರೆಯ ಮುಖ, ಸುತ್ತ ನೀಲಾಕಾಶ ಸೂಕ್ತ ಅನ್ನಿಸಿಬಿಟ್ಟಿತು.

ಮನಸ್ಸು ಇಡೀ ಆಕಾಶವನ್ನು ಆವರಿಸಿದ ಶಕ್ತ ಅನುಭವ! ನಮಗೆ ನೃತ್ಯ ಕಲಾವಿದರಿಗಂತೂ ‘ಶಿವ’ನೆಂದರೆ ಆರಾಧ್ಯ ದೈವ, ನಿರಾಕಾರವನ್ನೂ ನೃತ್ಯದ ಮೂಲಕ ಸಾಕಾರವಾಗಿಸುವವರು ನಾವು! ಸರಿ ಶಿವನ ಮುಂದೆ ನೃತ್ಯದ ವಿವಿಧ ಭಂಗಿಗಳಲ್ಲಿ ನಿಂತು ಫೋಟೋ ತೆಗೆಸಿಕೊಂಡೇಬಿಟ್ಟೆವು.

ಬಸವನ ಗಾಡಿ ಪಯಣ
ಸಂತೋಷ ಇನ್ನಷ್ಟು ಕಾದಿತ್ತು! ಅಲ್ಲಿಂದ ಸುಮಾರು ಒಂದು ಕಿಲೋಮೀಟರ್ ನಡೆದರೆ ಲಿಂಗಭೈರವಿ-ಧ್ಯಾನಲಿಂಗ ಮೊದಲಾದ ಮತ್ತಷ್ಟು ನೋಡುವ ಸ್ಥಳಗಳಿವೆ. ಮಹಿಳೆಯರೇ ಚಲಾಯಿಸುವ ಆಧುನಿಕ ಗಾಡಿಗಳಿವೆ. ಇವುಗಳಲ್ಲಿ ಕೆಲವು ಎತ್ತಿಲ್ಲದ
ಇಲೆಕ್ಟ್ರಾನಿಕ್ ಗಾಡಿಗಳಾದರೆ, ಇನ್ನು ಕೆಲವು ಚಂದದ ದೊಡ್ಡ ಕೊಂಬುಗಳ, ಅಲಂಕರಿಸಿದ ‘ಬಸವ’ ಎಳೆಯುವ ಗಾಡಿಗಳು.
ಕಪ್ಪು ಕೊಂಬು ದೊಡ್ಡ ಕಣ್ಣುಗಳು, ವಿಭೂತಿ-ಅರಿಶಿನ-ಕುಂಕುಮಗಳ ಚಂದದ ಹಾಸುಬಟ್ಟೆಗಳ ಅಲಂಕಾರಗಳಿಂದ ಶಿವನ
ನಂದಿಯೇ ನಮ್ಮ ಗಾಡಿ ಎಳೆಯುತ್ತಿದೆಯೇನೋ ಎನಿಸಿಬಿಟ್ಟಿತು!

ಹಸುರು ಗಿಡಗಳ ನಡುವೆ, ಸುಮಾರು ದೂರ ನಡೆದರೆ ಲಿಂಗಭೈರವಿ-ಧ್ಯಾನ ಲಿಂಗಗಳಿರುವ ತಾಣಕ್ಕೆ ಬರುತ್ತೇವೆ. ಯಾರೂ ಮಾತನಾಡಲಾಗದಂತಹ ಶಿಸ್ತಿನ ವಾತಾವರಣ. ದ್ವಾರ ಪಾಲಕರು ನಿಮ್ಮ ಫೋನನ್ನೂ ‘ಆಫ್’ ಮಾಡಲಾಗಿದೆಯೇ, ಇಲ್ಲವೇ ಎಂದು ಪರೀಕ್ಷಿಸಿಯೇ ಒಳಗೆ ಬಿಡುವ ಪರಿಪಾಠ. ಒಳ ಹೊಕ್ಕರೆ ಕಲ್ಲಿನಲ್ಲಿ ಕೆತ್ತಿರುವ ಶಿವಭಕ್ತರ ಚಿತ್ರಕಥೆಗಳು. ಬೇಡರ
ಕಣ್ಣಪ್ಪ-ಅಕ್ಕಮಹಾದೇವಿ- ನಾಯನ್ಮಾರರು-ಸದಾಶಿವ ಬ್ರಹ್ಮೇಂದ್ರ ಮೊದಲಾದವರ ಚಿತ್ರ. ಪಕ್ಕದಲ್ಲಿನ ವಿವರಣೆ ಅರ್ಥಪೂರ್ಣ. ಪ್ರಾಂಗಣದಲ್ಲಿರುವ ಸರ್ವಧರ್ಮಸ್ತಂಭ ಜಗತ್ತಿನ ಎಲ್ಲ ಧರ್ಮಗಳನ್ನು ಗೌರವಿಸುವ ಸಂದೇಶ ನೀಡುತ್ತದೆ.

ಪ್ರಾಂಗಣ ಹಾದು ಒಳ ಹೋದರೆ ಮಧ್ಯೆ ಇರುವ ದೊಡ್ಡ ಲಿಂಗ, ‘ಸದ್ಗುರು ಜಗ್ಗಿ’ ಸಾವಿರಾರು ವರ್ಷಗಳು ಉಳಿಯುವಂತೆ ರೂಪಿಸಿರುವ ವಾಸ್ತುವಿನ ಒಳಗೆ ಇದೆ. ಕೆಳಗೆ ಕುಳಿತುಕೊಳ್ಳಲಾಗದ ಭಕ್ತರಿಗೆ ಮರದ ಚಿಕ್ಕ ಪೀಠವನ್ನು ಸ್ವಯಂಸೇವಕರು
ನೀಡುತ್ತಾರೆ. ಅಲ್ಲಲ್ಲಿ ಧ್ಯಾನದ ಗುಹೆಗಳಿವೆ. ನಿಶ್ಯಬ್ದದ ನಡುವೆ ಬೆಳಿಗ್ಗೆ ೧11.45ರಿಂದ 12.100ರವರೆಗೆ ಸಂಜೆ 5.45ರಿಂದ
6.10ರವರೆಗೆ ನಾದ ಆರಾಧನೆ ನಡೆಯುತ್ತದೆ. ನಿಶ್ಯಬ್ದದ ಬಲ, ನಾದದ ಶಕ್ತಿಯಿಂದ ಪುಟಿದೇಳುತ್ತದೆ. ಮೌನ-ಮಾತು-ಶಬ್ದಗಳ ನಡುವಿನ ಸಂಬಂಧಗಳ ಬಗ್ಗೆ ನಮ್ಮನ್ನು ಚಿಂತನೆಗೆ ಗುರಿ ಮಾಡುತ್ತದೆ.

ಇವೆಲ್ಲವನ್ನೂ ನೋಡಿ ಹಿಂದಿರುಗುವಾಗ ದಾರಿಯಲ್ಲಿ ಸ್ವಯಂಸೇವಕರು ತಡೆದರು. ಮುಂದೆ ಒಂದು ಸ್ಕೂಟರ್, ಮಧ್ಯೆ ಒಂದು ಬಲವಾದ ಕಾರಿನಂತಹದೇ ಬೈಕು, ಹಿಂದೆ ಇನ್ನೊಂದು ಸ್ಕೂಟರ್ ಹಾದು ಹೋದವು. ಬೈಕಿನ ಮೇಲೆ ಪ್ರಸಿದ್ಧ ಸದ್ಗುರು ಜಗ್ಗಿ ವಾಸುದೇವ್! ‘ಶಿವ ದರ್ಶನ ಏನೂ ಕಷ್ಟವಲ್ಲ, ಸದ್ಗುರು ಜಗ್ಗಿ ದರ್ಶನವೇ ಅಪರೂಪ’ ಎಂದು ಸ್ನೇಹಿತರೊಬ್ಬರು ಹೇಳಿದ ನೆನಪಿತ್ತು. ‘ಅರೆರೆ ಅದೃಷ್ಟ!’ ಎಂದು ನಕ್ಕೆವು!

ದೇವರು -ಧರ್ಮಗಳ ಚರ್ಚೆಗೆ ಇಳಿಯದೆ ಪ್ರಕೃತಿಯ ಮಡಿಲಲ್ಲಿ, ದೇವರನ್ನೂ ಪ್ರಕೃತಿಯ ಭಾಗವಾಗಿ ಕಲ್ಪಿಸಿಕೊಳ್ಳುವವರಿಗೆ
ಈ ತಾಣ ಒಂದು ಸುಂದರ ಅನುಭವ ಕೊಡಬಲ್ಲದು. ಹಿರಿಯ ನಾಗರಿಕರಿಗೆ, ಅಧ್ಯಾತ್ಮದ ಒಲವು ಹೆಚ್ಚಾಗಿರುವವರಿಗೆ ಇದು
ಸೂಕ್ತ ಸಂದರ್ಶನಾ ತಾಣವಾದೀತು.

ಅತಿ ದೊಡ್ಡ ಮೂರ್ತಿ 112 ಅಡಿ (34 ಮೀಟರ್) ಎತ್ತರದ, ಜಗತ್ತಿನ ಅತಿ ದೊಡ್ಡ ಎದೆ ಮಟ್ಟದ ಶಿವನ ಮೂರ್ತಿ ಇದು. 500 ಟನ್ ತೂಕದ ಉಕ್ಕಿನ ಹಾಳೆಗಳಿಂದ ಮಾಡಲ್ಪಟ್ಟದ್ದು. ವೆಳ್ಳಂಗಿರಿ ಪರ್ವತದ ಬುಡದಲ್ಲಿರುವಂತದ್ದು. ಇದರ ಉದ್ದೇಶ ಜನರನ್ನು ತಮ್ಮ ಒಳಗಿನ ಶಾಂತಿಗಾಗಿ ಯೋಗದೆಡೆಗೆ ಪ್ರೇರೇಪಿಸುವುದು.

112 ಅಡಿಗಳು ಒಳಗಿನ ‘ಶಿವ’ನನ್ನು ತಲುಪಲು ಇರುವ 112 ವಿಧಗಳನ್ನು ಹುಡುಕಲು ಸೂರ್ತಿ ನೀಡಬೇಕು ಎನ್ನುವುದರ ಪ್ರತೀಕ. ಆದಿ ಯೋಗಿಯ ಮೂಲಭೂತ ತತ್ತ್ವವೇ ‘ಇನ್ ಈಸ್ ದ ಓನ್ಲಿ ವೇ ಔಟ್’ ಒಳಗೆ ಹೋಗುವುದೇ ಹೊರಗಿನ ದಾರಿ! ಹಾಗಾಗಿಯೇ ‘ಇದು ದೇವಾಲಯ- ಪೂಜಾಸ್ಥಳ-ಸ್ಮಾರಕ ಎನ್ನುವುದಕ್ಕಿಂತ, ಅಂತಃ ಪ್ರೇರಣೆಗಾಗಿರುವ ಪ್ರತಿಮೆ’ ಎನ್ನುವುದು ಸದ್ಗುರುವಿನ ಮಾತು.