Tuesday, 26th October 2021

ಮಾಜಿ ರಾಷ್ಟ್ರಪತಿಯವರ ಪ್ರಥಮ ಪುಣ್ಯತಿಥಿಯೂ, ಸಿಂಗಲ್ ಕಾಲಂ ಜಾಹೀರಾತೂ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಮೊನ್ನೆ ಆಗಸ್ಟ್ 31ಕ್ಕೆ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ನಿಧನರಾಗಿ ಒಂದು ವರ್ಷವಾಯಿತಷ್ಟೆ. ನಾನು ಆ ದಿನ ಕನ್ನಡ ಮತ್ತು ಇಂಗ್ಲಿಷ್ ಎಲ್ಲ ಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದೆ. ದಿಲ್ಲಿಯ ಎಲ್ಲಾ ಪತ್ರಿಕೆಗಳನ್ನು ನೋಡಿದೆ. ಪ್ರಣಬ್ ಮುಖರ್ಜಿ ಕುರಿತಾಗಿ ಯಾವುದಾದರೂ ಪತ್ರಿಕೆ ಲೇಖನ ಬರೆದಿರಬಹುದಾ ಎಂದು ನೋಡಿದೆ. ಎಲ್ಲೂ ಕಾಣಲಿಲ್ಲ.

ಕನಿಷ್ಠ ಅವರಿಂದ ಉಪಕೃತರಾದವರು, ಅವರ ಅಭಿಮಾನಿಗಳು, ಸಹೋದ್ಯೋಗಿಗಳು ಯಾರಾದರೂ ಜಾಹೀರಾತನ್ನಾದರೂ ಬಿಡುಗಡೆ ಮಾಡಿದ್ದಾರಾ ಎಂದು ಎಲ್ಲ ಪತ್ರಿಕೆಗಳನ್ನು ನೋಡಿದೆ. ಉಹುಂ.. ಎಲ್ಲೂ ಕಾಣಲಿಲ್ಲ. ಈ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷವಂತೂ ಜಾಹೀರಾತನ್ನು ನೀಡುವುದಿಲ್ಲ ಎಂದು ಗೊತ್ತಿತ್ತು. ಅವರು ಪಕ್ಷವನ್ನು ಅನೇಕ ನಿರ್ಣಾಯಕ ಸಂದರ್ಭಗಳಲ್ಲಿ ಬಚಾವ್ ಮಾಡಿದ್ದರೂ, ಅವರನ್ನು ಕಾಂಗ್ರೆಸ್ ಎಂದೋ ಇತಿಹಾಸದ ಕಸದಬುಟ್ಟಿಗೆ ಹಾಕಿತ್ತು. ಅದರಲ್ಲೂ ಮುಖರ್ಜಿ ಅವರು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಹೋದ ಬಳಿಕ ಮತ್ತು ಮೋದಿ ಸಾರಥ್ಯದ ಬಿಜೆಪಿ ಸರಕಾರ ನೀಡಿದ ‘ಭಾರತ ರತ್ನ’ ಪ್ರಶಸ್ತಿ ಸ್ವೀಕರಿಸಿದ ನಂತರ ಅವರನ್ನು ಕಾಂಗ್ರೆಸ್ ನಾಯಕತ್ವ ಎಲ್ಲಿಡಬೇಕೋ ಅಲ್ಲಿಯೇ ಇಟ್ಟಿತ್ತು.

ದಿಲ್ಲಿಯ ’ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ಮಾತ್ರ ಒಂದು ಕಾಲಂ ಅಗಲ ಮತ್ತು ಹದಿನೈದು ಸೆಂಟಿಮೀಟರ್ ಎತ್ತರದ ಒಂದು ಚಿಕ್ಕ ಜಾಹೀರಾತು ಕಂಡಿತು. ಅದು ಗಮನ ಸೆಳೆಯುವಂತೆಯೂ ಇರಲಿಲ್ಲ. ತಕ್ಷಣ ಆ ಜಾಹೀ ರಾತನ್ನು ಕೊಟ್ಟವರು ಯಾರು ಎಂದು ನೋಡಿದರೆ, ಪ್ರಣಬ್ ಮುಖರ್ಜಿ ಅವರ ಮಗ ಅಭಿಜಿತ್ ಮುಖರ್ಜಿ ಮತ್ತು ಮಗಳಾದ ಶರ್ಮಿಷ್ಠಾ. ಪ್ರಣಬ್ ಮುಖರ್ಜಿ ಅವರ ಸ್ಟ್ಯಾಂಪ್ ಆಕಾರದ ಭಾವಚಿತ್ರದೊಂದಿಗೆ, Your life was a blessing, your memory a treasure. You are loved beyond words and missed beyond measure. Deeply missed by Abhijit Mukherjee and Sharmistha ಎಂದು ಆ ಜಾಹೀರಾತಿ ನಲ್ಲಿ ಬರೆದಿತ್ತು. ಈ ದೇಶದ ಮಹತ್ವದ ಖಾತೆಗಳ ಮಂತ್ರಿಯಾಗಿದ್ದ, ಸಂವಿಧಾನದ ಪರಮೋಚ್ಚ ಪದವಿಗೇರಿದ, ಭಾರತ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದ ಮುಖರ್ಜಿ ಒಳಪುಟದಲ್ಲಿ ಸಿಂಗಲ್ ಕಾಲಮ್ಮಿಗೆ ಸೀಮಿತರಾಗಿದ್ದರು.

ಮುಖರ್ಜಿ ಅಧಿಕಾರದಲ್ಲಿದ್ದಾಗ, ಬೆಂಗಳೂರಿಗೆ ಬಂದರೆ ಸಾಕಿತ್ತು, ಕಾಂಗ್ರೆಸ್ಸಿನ ಎಲ್ಲಾ ನಾಯಕರೂ ಅವರಿಗೆ ಸ್ವಾಗತ ಕೋರಿ, ನಗರದ ಪ್ರಮುಖ ಬೀದಿಗಳಲ್ಲಿ ಅವರ ಕಟೌಟ್, ಫ್ಲೆಕ್ಸ್ ಕಟ್ಟುತ್ತಿದ್ದರು. ಅವರಿಗೆ ಸ್ವಾಗತ ಕೋರುವ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಒಮ್ಮೆ ನಾಯಕ ಎಂದು ಅನಿಸಿ ಕೊಂಡವನು, ಅಧಿಕಾರದಿಂದ ಇಳಿಯುತ್ತಿದ್ದಂತೆ ಅವನ ಬಳಿ ನಾಯಿಯೂ ಸುಳಿಯುವುದಿಲ್ಲ. ಇದನ್ನು ಅವೆಷ್ಟೋ ಸಲ ನೋಡಿದ್ದೇವೆ. ನಾಯಕನಾದವನನ್ನು ಅವನ ಸುತ್ತಲಿನ ಜಗತ್ತು ತಲೆ ಮೇಲೆ ಇಟ್ಟು ಮೆರೆಸುತ್ತದೆ. ಆ ನಾಯಕ ಅದೇ ನಿಜ, ಅದೇ ಶಾಶ್ವತ ಎಂದು ಭಾವಿಸುತ್ತಾನೆ. ಆದರೆ ಕೊನೆಗೆ ಅವನಿಗೆ ಒದಗಿ ಬರುವವರು ಅವನ ಕುಟುಂಬ ಸದಸ್ಯರು ಮಾತ್ರ. ಎಷ್ಟೋ ಸಲ ಅವರೂ ಬರುವುದಿಲ್ಲ. ಮಾಜಿ ರಾಷ್ಟ್ರಪತಿ ದಿವಂಗತ ಮುಖರ್ಜಿ ಅವರ ಪ್ರಥಮ ಪುಣ್ಯತಿಥಿ ಯಂದು, ನಮ್ಮ ಬಡವಾಣೆಯ ಪ್ರಮುಖ ರಸ್ತೆಗಳಲ್ಲೆಲ್ಲ ಫ್ಲೆಕ್ಸ್ ಫಲಕಗಳು ರಾರಾಜಿಸುತ್ತಿದ್ದವು. ಕೆಲವು ಪತ್ರಿಕೆಗಳಲ್ಲೂ ಅವರ ಜಾಹೀರಾತುಗಳು ಅಚ್ಚಾಗಿದ್ದವು. ಅಂದು ಮಾಜಿ ಕಾರ್ಪೊರೇಟರ್ ಅವರ ಜನ್ಮದಿನವಾಗಿತ್ತು!

ವರ್ಗವಾದವರ ಕಥೆ-ವ್ಯಥೆ

ಪತ್ರಕರ್ತೆಯರಾದ ಭವದೀಪ್ ಕಂಗ್ ಮತ್ತು ನಮಿತಾ ಕಾಲ ಅವರು ಇತ್ತೀಚೆಗೆ ಬರೆದ Just Transferred : The Untold Story Of Ashok Khemka ಕೃತಿಯನ್ನು ಓದಿ ಮುಗಿಸಿದೆ. ಇದೇನು ಹೊಸ ಪುಸ್ತಕವಲ್ಲ. ಒಂದು ವರ್ಷದ ಹಿಂದೆಯೇ ಬಿಡುಗಡೆಯಾಗಿತ್ತು. ಆಗ ಓದಲಾ ಗಿರಲಿಲ್ಲ. ಇದು ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕ ಅವರ ವೃತ್ತಿ ಜೀವನದ ಹಲವಾರು ಘಟನೆಗಳನ್ನು ಆಧರಿಸಿ ಬರೆದ ಕೃತಿ. ಒಂದು ರೀತಿಯಲ್ಲಿ ಅವರ ಜೀವನ (ಬಯಾ ಗ್ರಫಿ) ಕತೆ. ಈ ಪುಸ್ತಕದ ಮುಖಪುಟಕ್ಕೆ ಖೇಮ್ಕ ಅವರು ತಮ್ಮ ಕಬ್ಬಿಣದ ಟ್ರಂಕ್ ಮೇಲೆ, ರಸ್ತೆಯಲ್ಲಿ ಕುಳಿತ ಮಾರ್ಮಿಕ ಚಿತ್ರವೇ ಇಡೀ ಕಥೆಯನ್ನು ಹೇಳುತ್ತದೆ.

ಅಶೋಕ ಖೇಮ್ಕ ಭಾರತೀಯ ಆಡಳಿತ ಸೇವೆ (ಐಎಎಸ್) ಯ ದಕ್ಷ, ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಗಳಲ್ಲೊಬ್ಬರು. ಅವರು ತಮ್ಮ ಸೇವಾವಽಯಲ್ಲಿ ಯಾವ ರಾಜಕಾರಣಿ ಅಥವಾ ಮಂತ್ರಿಗಳಿಗೂ ಸೊಪ್ಪು ಹಾಕಿದವರಲ್ಲ. ಹಾಗಂತ ಬಂಡಾಯಗಾರರಲ್ಲ. ಅವರನ್ನು ಯಾವ ಪ್ರಲೋಭನೆಯಿಂದಲೂ ಮಣಿಸಲು ಅಥವಾ ಸೆಳೆಯಲು ಸಾಧ್ಯವಿಲ್ಲ ಎಂಬುದನ್ನು ಅವರು ಹತ್ತಾರು ನಿದರ್ಶನಗಳಲ್ಲಿ ಸಾಬೀತು ಮಾಡಿದ್ದಾರೆ. ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ, 2012 ರಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಪಾಲುಳ್ಳ ಸಂಸ್ಥೆ ಮತ್ತು ಡಿಎಲ್‌ಎಫ್ ರಿಯಲ್ ಎಸ್ಟೇಟ್ ಕಂಪನಿ ನಡುವಿನ ಭೂವ್ಯವಹಾರದ ಮ್ಯುಟೇಷನ್‌ನ್ನು ರದ್ದುಪಡಿಸಿದ ಖೇಮ್ಕ, ಅಕ್ಷರಶಃ ಜೇನುಗೂಡಿಗೆ ಕೈಹಾಕಿದರು. ಆಗಲೇ ಅವರ
ಹೆಸರು ರಾಷ್ಟ್ರ ಮಟ್ಟದಲ್ಲಿ ಚರ್ಚಿತವಾಯಿತು.

ಖೇಮ್ಕ ಅವರ ನಡೆ suicidal ಎಂದು ಅನೇಕರು ಭಾವಿಸಿದರು. ಅವರ ಮೇಲೆ ಇನ್ನಿಲ್ಲದ ರಾಜಕೀಯ ಒತ್ತಡಗಳು ಬಂದವು. ಆದರೆ ಅವರು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ತಾವು ಅದೆಂಥ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಪ್ರವಾಹದ ವಿರುದ್ಧ ಈಜುತ್ತಿದ್ದೇನೆ ಎಂಬುದು ಅವರಿಗೆ ಗೊತ್ತಿತ್ತು. ಕೊನೆಗೂ ಅವರು ತಮ್ಮ ಆತ್ಮಸಾಕ್ಷಿಗೆ ಶರಣಾದರೇ ಹೊರತು, ರಾಜಕೀಯ ಪ್ರಭಾವಗಳಿಗೆ ಮಾರಿಕೊಳ್ಳಲಿಲ್ಲ. ಅದೊಂದೇ ಪ್ರಸಂಗವಲ್ಲ, ಖೇಮ್ಕ ತಮ್ಮ ವೃತ್ತಿ ಜೀವನದ ಉದ್ದಕ್ಕೂ ಅಂಥದೇ ವೃತ್ತಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಪ್ರದರ್ಶಿಸಿದವರು. ಮುಖ್ಯಮಂತ್ರಿಯೊಬ್ಬರ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಅವರಿಗೆ ನೀಡಿದ ಕಾರನ್ನು ಹಿಂಪಡೆಯಲಾಯಿತು. ಅದಕ್ಕೂ ಖೇಮ್ಕ ಜಗ್ಗಲಿಲ್ಲ.

ಕಾರು ಅದ್ಯಾವ ಮಹಾ ಎಂದು ಬಸ್ಸಿನಲ್ಲಿ ಓಡಾಡಲಾರಂಭಿಸಿದರು. ಇವರನ್ನು ಯಾವ ಹುದ್ದೆಗೆ ವರ್ಗ ಮಾಡಿದರೂ, ಅವರು ತಲೆಕೆಡಿಸಿಕೊಳ್ಳಲಿಲ್ಲ. ಕಾನೂನು-ನಿಯಮವನ್ನು ಮುರಿಯುವ ಯಾವ ಆದೇಶವನ್ನು ಅದೆಷ್ಟೇ ಪ್ರಭಾವಶಾಲಿ ಗಳು ಹೇಳಿದರೂ, ಮಾಡಲಿಲ್ಲ. ಕಿರುಬೆರಳಿನಲ್ಲೂ ಲಂಚ ಮುಟ್ಟಲಿಲ್ಲ. ತಾನು ಮಾರಾಟಕ್ಕೆ ಬಿಕರಿ ಅಲ್ಲ ಎಂಬುದನ್ನು ಹೋದೆಡೆಯಲ್ಲೆಲ್ಲಾ ಸಾಬೀತು ಮಾಡಿದರು. ಅದಕ್ಕಾಗಿ ಅತಿ ಹೆಚ್ಚು ಸಲ ವರ್ಗವಾದರು.

ಕಳೆದ 28 ವರ್ಷಗಳ ಅವಧಿಯಲ್ಲಿ ಅವರು 55 ಸಲ ವರ್ಗವಾದರು ! ಆಡಳಿತದಲ್ಲಿದ್ದ ಸರಕಾರ, ಪ್ರತಿ ಸಲ ಅವರನ್ನು ವರ್ಗ ಮಾಡಿದಾಗ, ಪ್ರತಿಪಕ್ಷ ನಾಯಕರು ಆ ನಿರ್ಧಾರವನ್ನು ಖಂಡಿಸಿದರು. ಅದೇ ಅವರು (ಪ್ರತಿಪಕ್ಷದಲ್ಲಿದ್ದವರು) ಅಧಿಕಾರಕ್ಕೆ ಬಂದಾಗ, ಹಿಂದಿನವರು ಮಾಡಿದ್ದನ್ನೇ ಮಾಡಿದರು. ಚುನಾವಣೆಯ ಸಂದರ್ಭದಲ್ಲಿ ಖೇಮ್ಕ ವರ್ಗಾವಣೆ ಯನ್ನೇ ದೊಡ್ಡ ವಿಷಯ ಮಾಡುತ್ತಿದ್ದವರು, ತಾವು ಅಧಿಕಾರಕ್ಕೆ ಬಂದಾಗ ಅವರನ್ನು ಮನಸೋಇಚ್ಛೆ ವರ್ಗ ಮಾಡಿದರು. ಅಧಿಕಾರದಲ್ಲಿ ಯಾವುದೇ ಪಕ್ಷದವರಿರಲಿ, ಖೇಮ್ಕ ವಿಷಯದಲ್ಲಿ, ಅವರೆಲ್ಲರೂ ಒಂದೇ ರೀತಿ ನಡೆದುಕೊಂಡರು.

ಆದರೆ ಖೇಮ್ಕ ಧೋರಣೆ ಮಾತ್ರ ಬದಲಾಗಲಿಲ್ಲ. ಕಾಂಗ್ರೆಸ್ ಪಕ್ಷವೊಂದೇ ಅಲ್ಲ, ಬಿಜೆಪಿಯೂ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿತು. ಅವರು ಮಾತ್ರ ಸ್ವಲ್ಪವೂ ಬದಲಾಗಲಿಲ್ಲ. ಆದರೆ ನಮ್ಮ ವ್ಯವಸ್ಥೆಯ ವಿಷವರ್ತುಲದಲ್ಲಿ ಖೆಮ್ಕ ಥರದ ಅಧಿಕಾರಿಗಳು ಯಾವತ್ತೂ ಹೊರಗಿನವರಾಗಿಯೇ (Outsiders) ಇರುತ್ತಾರೆ. ಈ ವ್ಯವಸ್ಥೆ ಅಂಥವರನ್ನು ಒಳಗೆ ಸೇರಿಸಿಕೊಳ್ಳುವುದೇ ಇಲ್ಲ.

ಪತ್ರಿಕೆಯಲ್ಲಾಗುವ ಪ್ರಮಾದ
ಪತ್ರಿಕೆಗಳಲ್ಲಿ ತಪ್ಪಾಗುವುದು ಸಹಜ. ಅದು ಸೂರ್ಯ-ಚಂದ್ರರಷ್ಟೇ ಸತ್ಯವೂ ಹೌದು. ‘ಪ್ರಮಾದಗಳಿಲ್ಲದಂತೆ ಪತ್ರಿಕೆಗಳನ್ನು ಪ್ರಕಟಿಸುತ್ತೇವೆ’ ಎಂದು ಧೈರ್ಯ ದಿಂದ ಹೇಳಿಕೊಂಡ ಸಂಪಾದಕ ನನ್ನ ಗಮನಕ್ಕಂತೂ ಬಂದಿಲ್ಲ. ಪತ್ರಿಕೆಯ ಶೀರ್ಷಿಕೆ ಮತ್ತು ಘೋಷವಾಕ್ಯಗಳಲ್ಲೇ ಪ್ರಮಾದವಾಗಿದ್ದನ್ನು ನೋಡಿದ್ದೇವೆ. ಪತ್ರಿಕೆಯ ಸಂಪಾದಕರ ಹೆಸರೇ (ಖಾದ್ರಿ ಶಾಮಣ್ಣ) ತಪ್ಪಾಗಿ ಪ್ರಕಟವಾಗಿದ್ದೂ ಇದೆ.

ಹೀಗಿರುವಾಗ ಪ್ರಮಾದರಹಿತ ಪತ್ರಿಕೆಯನ್ನು ಪ್ರಕಟಿಸುತ್ತೇವೆ ಎಂದು ಯಾರೂ ಹೇಳಲಾರರು. ಹೀಗಾಗಿ ಅನೇಕ ಪತ್ರಿಕೆಗಳಲ್ಲಿ ‘ತಪ್ಪು-ಒಪ್ಪು’, ‘ತಪ್ಪಾಯ್ತು, ತಿದ್ಕೋತೀವಿ’ ಮಾದರಿಯ (Corrections and Clarifications) ಅಂಕಣಗಳು ನಿತ್ಯವೂ ಪ್ರಕಟವಾಗುತ್ತವೆ. ಬ್ರಿಟಿಷ್ ದೈನಿಕವೊಂದು ಸೈನಿಕರೊಬ್ಬರ ಬಗ್ಗೆ ಶ್ರದ್ಧಾಂಜಲಿ (Obit) ಲೇಖನವೊಂದನ್ನು ಪ್ರಕಟಿಸಿತ್ತು. ಅದರಲ್ಲಿ battle-scarred war veteren (ಯುದ್ಧದಲ್ಲಿ ಗಾಯಗೊಂಡ ಸೈನಿಕ) ಎಂದು ಬರೆ ಯುವ ಬದಲು, battle-scared (ಯುದ್ಧಕ್ಕೆ ಅಂಜಿದ) ಎಂದು ಬರೆದಿತ್ತು. ಈ ಸಂಗತಿಯನ್ನು ಓದುಗರೊಬ್ಬರು ಗಮನಕ್ಕೆ ತಂದಾಗ, ತಪ್ಪನ್ನು ಸರಿ ಮಾಡುವ ಬದಲು, bottle-scarre (ಬಾಟಲಿಯಿಂದ ಗಾಯಗೊಂಡವ) ಎಂದು ಬರೆದು ಮತ್ತೊಂದು ತಪ್ಪು ಮಾಡಿತ್ತು.

ಇದೆ ರೀತಿ ಅಮೆರಿಕದ ಪತ್ರಿಕೆಯೊಂದು (Bromsgrove Advertiser) Mrs.Lush ಅವರ ಹೆಸರನ್ನು ಮೊದಲು Mrs.Lash ಎಂದು ಪ್ರಕಟಿಸಿತ್ತು. ಇದನ್ನು ಪತ್ರಿಕೆಯ ಗಮನಕ್ಕೆ ತಂದಾಗ, ತಪ್ಪನ್ನು ಸರಿಪಡಿಸುವಾಗ, Mrs.Hash ಎಂದು ಪ್ರಕಟವಾಗಿ ಮತ್ತೊಂದು ಪ್ರಮಾದ ಮಾಡಿತ್ತು. ಪಿಲ್ಜರ್ ಸಂದರ್ಶನದಲ್ಲಿ ಹೇಳಿದ್ದು ಇತ್ತೀಚೆಗೆ ‘ದಿ ಹಿಂದು’ ಪತ್ರಿಕೆ, ಜಗತ್ತಿನಲ್ಲಿಯೇ ಅಗ್ರಮಾನ್ಯ ತನಿಖಾ ವರದಿಗಾರರಲ್ಲೊಬ್ಬರಾಗಿರುವ ಜಾನ್ ಪಿಲ್ಜರ್ ಸಂದರ್ಶನವನ್ನು ಪ್ರಕಟಿಸಿತ್ತು. ಸಂದರ್ಶನದ ಎಲ್ಲಾ ಪ್ರಶ್ನೆಗಳು ಅಫ್ಘಾನಿಸ್ತಾನ ವಿದ್ಯಮಾನಗಳ ಕುರಿತಾಗಿದ್ದವು. ಸಂದರ್ಶಕರು ಪಿಲ್ಜರ್ ಅವರಿಗೆ, ’ಇಪ್ಪತ್ತು ವರ್ಷಗಳ ಹಿಂದೆ, ತಾಲಿಬಾನಿ ಗಳನ್ನು ಓಡಿಸಿ, ಪ್ರಜಾಪ್ರಭುತ್ವವನ್ನು ಸ್ಥಾಪಿಸುತ್ತೇವೆ ಎಂಬ ಭರವಸೆ ನೀಡಿ, ಅಮೆರಿಕ ಅಫ್ಘಾನಿಸ್ತಾನದೊಳಗೆ ಪ್ರವೇಶಿಸಿತು. ಆದರೆ ಇಂದು ತಾಲಿಬಾನಿಗಳು ಮರಳಿ ಬಂದು, ತಮ್ಮ ಪ್ರಭುತ್ವ ಸಾಧಿಸಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ?’ ಎಂದು ಕೇಳಿದ್ದರು. ಅದಕ್ಕೆ ಪಿಲ್ಜರ್ ಖಡಕ್ ಉತ್ತರ ನೀಡಿದ್ದರು. ತಮ್ಮ ಮಾರ್ಮಿಕ ಉತ್ತರದ ಮೂಲಕ ಅವರು ಅಮೆರಿಕದ ಬಣ್ಣ ಬಯಲು ಮಾಡಿದ್ದರು.

ಆ ಪ್ರಶ್ನೆಗೆ ಪಿಲ್ಜರ್ ಹೇಳಿದ್ದು – ’ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುತ್ತೇವೆ ಎಂದು ಅಧ್ಯಕ್ಷ ಜಾರ್ಜ್ ಬುಷ್ ಹೇಳಿದ್ದು ಒಂದು ಶುದ್ಧ ಬೊಗಳೆ. ಅದನ್ನು ಅಮೆರಿಕದ ಜನತೆಯನ್ನು ನಂಬಿಸುವುದಕ್ಕಾಗಿ ಹೇಳಿದ್ದು. ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದ್ದು ಒಂದು ಮೋಸ. 9/11 ಘಟನೆಗೆ ದುರಾಸೆಯ ಫಲವಾಗಿ ಪ್ರತೀಕಾರ ತೀರಿಸಿಕೊಳ್ಳಲು ತಾಲಿಬಾನಿಗಳ ಮೇಲೆ ಯುದ್ಧ ಸಾರಿದ್ದು. 9/11 ಘಟನೆಗೆ, ನಿಜವಾಗಿ ಅಮೆರಿಕ, ಬಾಂಬಿನ ಮಳೆಗರೆಯಬೇಕಾಗಿದ್ದು ಅಫ್ಘಾನಿ ಸ್ತಾನದ ಮೇಲಲ್ಲ, ಬದಲು ಸೌದಿ ಅರೇಬಿಯಾದ ಅರಮನೆಗಳ ಮೇಲೆ. 9/11 ಘಟನೆಯ ಬಹುತೇಕ ಆಕ್ರಮಣಕಾರರು ಸೌದಿ ಅರೇಬಿಯಾದವರು. ಒಸಾಮಾ ಬಿನ್ ಲಾಡೆನ್ ಕೂಡ ಮೂಲತಃ ಸೌದಿ ಅರೇಬಿಯಾದವ. ಆ ಘಟನೆಯಲ್ಲಿ ಅಫ್ಘಾನಿಸ್ತಾನದವರು ಯಾರೂ ಇರಲಿಲ್ಲ.

9/11 ಘಟನೆಗೆ ಸಂಬಂಽಸಿದಂತೆ ಅಮೆರಿಕದ ನೈತಿಕ ಭಂಗಿಗೂ, ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದ್ದಕ್ಕೂ ಸಂಬಂಧವೇ ಇರಲಿಲ್ಲ. ಅಷ್ಟರೊಳಗೆ ಲಾಡೆನ್ ಅಫ್ಘಾನಿಸ್ತಾನ ಬಿಟ್ಟು ಹೋಗಿದ್ದ ಮತ್ತು ತಾಲಿಬಾನಿಗಳು ಅವನಿಂದ ಸಂಬಂಧ ಕಡಿದುಕೊಂಡಿದ್ದರು. ರಷ್ಯಾವನ್ನು ನಿಯಂತ್ರಿಸುವುದಕ್ಕಾಗಿ, ಅಮೆರಿಕ ಅಫ್ಘಾನಿ ಸ್ತಾನವನ್ನು ಯುದ್ಧಭೂಮಿಯನ್ನಾಗಿ ಮಾಡಿಕೊಂಡಿತು. ಅಫ್ಘಾನಿಸ್ತಾನದಲ್ಲಿನ ಸಂಕೋಲೆಗಳನ್ನು ಲಾಭದಾಯಕವಾಗಿ ಅಮೆರಿಕ ಬಳಸಿಕೊಂಡಿತು. ಅಮೆರಿಕದ ಸಮರ ಕೈಗಾರಿಕಾ ರಂಗ ತನ್ನ ಹೊಸ ಹೊಸ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ಮತ್ತು ಪ್ರಯೋಗ ಮಾಡಲು ಅಫ್ಘನ್ ಭೂಮಿಯನ್ನು ಕಾರ್ಯಕ್ಷೇತ್ರವಾಗಿ ಬಳಸಿ ಕೊಂಡಿತು. ಅಮೆರಿಕದ ಟಾಪ್ ಐದು ರಕ್ಷಣಾ ಗುತ್ತಿಗೆದಾರರ ಕಂಪೆನಿಗಳಲ್ಲಿ ಅಂದು ಹತ್ತು ಸಾವಿರ ಡಾಲರ್ ತೊಡಗಿಸಿದವರು, ಇಂದು ನೂರಾರು ಕೋಟಿ ಶ್ರೀಮಂತರಾಗಿ ದ್ದಾರೆ ಎಂಬುದು ಇತ್ತೀಚಿನ ಅಧ್ಯಯನದಿಂದ ಸಾಬೀತಾಗಿದೆ.

ಕೆಂಗಲ್ ಹೇಳಿದ ಹಸಿ ಸುಳ್ಳು
ಇಪ್ಪತ್ತೈದು, ಐವತ್ತು ಅಥವಾ ನೂರು ವರ್ಷಗಳ ಹಿಂದಿನ ಪತ್ರಿಕೆಗಳು, ಇಪ್ಪತ್ತೈದು, ಐವತ್ತು ವರ್ಷಗಳ ಹಿಂದಿನ ಸುದ್ದಿಯನ್ನು ಸಂಕ್ಷಿಪ್ತವಾಗಿ ಪ್ರತಿದಿನವೂ ಪ್ರಕಟಿ ಸುವುದನ್ನು ನೀವು ನೋಡಿಯೇ ಇರುತ್ತೀರಿ. ‘ದಿ ಹಿಂದೂ’ ದೈನಿಕ ’50 Years Ago’ ಎಂಬ ಶೀರ್ಷಿಕೆಯಡಿ ಎರಡು ವರದಿಗಳನ್ನು ನಿತ್ಯವೂ ಪ್ರಕಟಿಸುತ್ತದೆ. ನಾನು ಈ ಅಂಕಣವನ್ನು ಎಂದೂ ತಪ್ಪಿಸಿಕೊಳ್ಳುವುದಿಲ್ಲ. ಕಾರಣ ಅರ್ಧ ಶತಮಾನದ ಹಿಂದೆ, ಈ ದಿನ, ಯಾವ ಸುದ್ದಿ ಪ್ರಕಟವಾಗಿತ್ತು ಎಂಬುದು ಗೊತ್ತಾಗುತ್ತದೆ. ಅಂದಿಗೂ-ಇಂದಿಗೂ ತಾಳೆ ಹಾಕಲು ಇದು ಅನುವಾಗುತ್ತದೆ.

ಮೊನ್ನೆ ಸೆಪ್ಟೆಂಬರ್ ೭ ರಂದು, ’ಐವತ್ತು ವರ್ಷಗಳ ಹಿಂದೆ’ ಅಂಕಣದಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಅದರ ಶೀರ್ಷಿಕೆ Trains will fly soon. ಅಂದಿನ ರೈಲ್ವೆ ಸಚಿವರಾಗಿದ್ದ ಕೆಂಗಲ್ ಹನುಮಂತಯ್ಯ ಅವರು, ಭಾರತದಲ್ಲಿ ಸದ್ಯದಲ್ಲಿಯೇ ಗಂಟೆಗೆ ಮುನ್ನೂರು ಕಿಮಿ ವೇಗದಲ್ಲಿ ಸಂಚರಿಸುವ ಟರ್ಬೊ-ಜೆಟ್ ಟ್ರೇನನ್ನು ಓಡಿಸಲಾಗುವುದು’ ಎಂದು ಹೇಳಿದ್ದರು.

ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಸಚಿವರು, ‘ಆರಂಭದಲ್ಲಿ ಗಂಟೆಗೆ ಇನ್ನೂರು ಕಿಮೀ ವೇಗದಲ್ಲಿ ಸಂಚರಿಸುವ ಟ್ರೇನನ್ನು ಓಡಿಸಲಾಗುವುದು. ನಂತರ ಇದರ ವೇಗವನ್ನು ಗಂಟೆಗೆ ಮುನ್ನೂರು ಕಿಮೀ ಗೆ ಹೆಚ್ಚಿಸಲಾಗುವುದು. ಈ ಕುರಿತು ರೈಲ್ವೆ ಮಂಡಳಿ ಅಧ್ಯಕ್ಷರ ಜತೆ ಚರ್ಚಿಸಿದ್ದೇನೆ. ಇದರಿಂದ ಭಾರತದ ರೈಲು ರಂಗದಲ್ಲಿ ಹೊಸ ಶಕೆ ಆರಂಭವಾಗಲಿದೆ’ ಎಂದು ತಿಳಿಸಿದರು. ಇಂದಿರಾ ಗಾಂಧಿ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಕೆಂಗಲ್ ಹನುಮಂತಯ್ಯನವರು ಅಂದು ಅಕ್ಷರಶಃ ‘ರೈಲು’ ಬಿಟ್ಟಿದ್ದರು. ಅವರು ಆ ಹೇಳಿಕೆ ನೀಡಿ ಐವತ್ತು ವರ್ಷಗಳಾದರೂ, ಇಂದಿಗೂ ಭಾರತದ ಹಳಿಗಳ ಮೇಲೆ ರೈಲು ಅಷ್ಟು ವೇಗದಲ್ಲಿ ಓಡುತ್ತಿಲ್ಲ! ಅರ್ಧ ಶತಮಾನದ ಹಿಂದೆಯೇ ಹನುಮಂತಯ್ಯ ಹಸಿಹಸಿ
ಸುಳ್ಳು ಹೇಳಿದ್ದರು!

ಕರೀನಾ ಪ್ರೆಗ್ನೆನ್ಸಿ ಬಗ್ಗೆ ಬರೆದಾಗ..
ಖ್ಯಾತ ಹಿಂದಿ ಚಿತ್ರ ತಾರೆ ಕರೀನಾ ಕಪೂರ್ ಖಾನ್ ಸುಮಾರು 364 ಪುಟಗಳ ಪುಸ್ತಕವನ್ನು ಹೆತ್ತಿದ್ದಾರೆ! ಆ ಪುಸ್ತಕದ ಹೆಸರು Kareena Kapoor Khan’s Pregnancy Bible : The Ultimate Manual For Moms-To-Be.. ಸಿನಿಮಾ ತಾರೆಯರು ಪ್ರೆಗ್ನೆನ್ಸಿ ಬಗ್ಗೆ ಬರೆದರೆ ಆಸಕ್ತಿ ಮೂಡುವುದು ಸ್ವಾಭಾ ವಿಕ. ಅದರಲ್ಲೂ ಎರಡು ಮಕ್ಕಳ ತಾಯಿಯಾಗಿರುವ ಕರೀನಾ ಕಪೂರ್, ಬರೆದಿದ್ದಾರೆ ಎಂದ ಮೇಲೆ ಮತ್ತಷ್ಟು ಕುತೂಹಲದಿಂದ ಈ ಪುಸ್ತಕವನ್ನು ಓದಿದೆ.
ಇತ್ತೀಚೆಗೆ ‘ವಿಶ್ವವಾಣಿ ಕ್ಲಬ್’ ನಲ್ಲಿ ‘ಓ ಗಂಡಸರೇ, ಪ್ರೆಗ್ನೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?’ ಎಂಬ ವಿಷಯದ ಕುರಿತು ಕ್ಲಬ್ ಹೌಸ್ ಸಂವಾದ ನಡೆದಿತ್ತು.

ಪ್ರಸಿದ್ಧ ಪ್ರಸೂತಿ ವೈದ್ಯರಾದ ಡಾ.ಕಾಮಿನಿ ರಾವ್ ಮತ್ತು ಡಾ.ಜಿ.ಜಿ.ಹೆಗಡೆ ಈ ಕಾರ್ಯಕ್ರಮವನ್ನು ಮೂರುವರೆ ಗಂಟೆಗಳ ಕಾಲ ನಡೆಸಿಕೊಟ್ಟಿದ್ದರು. ಆ ನೆನಪು ಹಸಿರಿರುವಾಗಲೇ, ನಾನು ಕರೀನಾ ಕಪೂರ್ ಬರೆದ ಈ ಕೃತಿಯನ್ನು ಓದಲಾರಂಭಿಸಿದೆ. ಈ ಕೃತಿಯನ್ನು ಕರೀನಾ, ಫ್ರೀಲಾನ್ಸ್ ಪತ್ರಕರ್ತೆ ಅದಿತಿ ಶಾ ಭಿಮ್‌ ಜ್ಯಾನಿ ಜತೆಗೂಡಿ ಬರೆದಿದ್ದಾರೆ. ಅಂದರೆ ಈ ಕೃತಿಯನ್ನು ಬರೆದಿರುವುದು ಅದಿತಿ ಶಾ ಮತ್ತು ಅನುಭವಗಳು ಕರೀನಾ ಅವರದ್ದು. ಇದಕ್ಕೂ ಮೊದಲು ಕರೀನಾ’ ’Childbirth And After’ ಎಂಬ ಕೃತಿಯನ್ನು ಬರೆದಿದ್ದು ಗೊತ್ತಿರಬಹುದು.

ಕರೀನಾ ಅವರು ಮುಂಬೈನ ಹತ್ತಕ್ಕೂ ಪ್ರಸಿದ್ಧ ಪ್ರಸೂತಿ ತಜ್ಞರ ಜತೆ ಸಂವಾದ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದು ಈ ಕೃತಿಯಲ್ಲಿ ಸೇರಿಸಿರುವುದು, ಅದರ ಮಹತ್ವವನ್ನು ಹೆಚ್ಚಿಸಿದೆ. ಪ್ರೆಗ್ನೆನ್ಸಿ ಬಗ್ಗೆ ನಾನು ಇಷ್ಟು ಸಮಗ್ರ ಮಾಹಿತಿ ಇರುವ ಪುಸ್ತಕವನ್ನು ಓದಿಲ್ಲ. ಬಸಿರಾದವರು ಮತ್ತು ಬಸಿರಿನ ಬಗ್ಗೆ ತಿಳಿಯಬೇಕು ಎನ್ನುವವರಿಗೆ ಇದು ಉಪಯುಕ್ತ ಕೃತಿ.

Leave a Reply

Your email address will not be published. Required fields are marked *