Monday, 30th January 2023

ಏಷ್ಯಾದಲ್ಲೇ ಎರಡನೇ ಬಾರಿಗೆ ವಿಶಿಷ್ಟ,ಅನೂಹ್ಯ ಕಾಲ್ಚೆಂಡಿನ ಜಾತ್ರೆ

ವಿಶ್ವಕಪ್‌ ನಲ್ಲಿ ವಿಶ್ವವಾಣಿ (ಭಾಗ-೧)

ಇವನ್ನೆಲ್ಲ ವಿಶ್ವವಾಣಿ ಓದುಗರಿಗೆ ಹೇಳದಿದ್ದರೆ ಹೇಗೆ? ಸಾಕ್ಷಾತ್ ವರದಿ ಮಾಡದಿದ್ದರೆ ಹೇಗೆ?

ವಿಶ್ವೇಶ್ವರ ಭಟ್ ದೋಹಾ(ಕತಾರ್)

ಫುಟ್ಬಾಲ್ ಪಂದ್ಯವನ್ನು ನೋಡಲು ಕತಾರ್‌ಗೇ ಹೋಗಬೇಕಾ? ಅದನ್ನು ಟಿವಿಯಲ್ಲಿ ನೋಡಬಹುದಲ್ಲ? ಈ ಪ್ರಶ್ನೆಯನ್ನು ನನಗೆ
ಕನಿಷ್ಠ ಹತ್ತಾರು ಮಂದಿ ಕೇಳಿರಬಹುದು. ಅದು ನಿರೀಕ್ಷಿತ ಮತ್ತು ಸಹಜ. ಹಾಗಾದರೆ ಫುಟ್ಬಾಲ್ ಪಂದ್ಯವನ್ನು ಖುದ್ದಾಗಿ ಯಾಕೆ
ನೋಡಬೇಕು? ಒಂದು ಕಾಲವಿತ್ತು, ಈ ಭೂಮಿ ಮೇಲೆ ‘ಅತಿ ದೊಡ್ಡ ಇವೆಂಟ್’ ಅಂದ್ರೆ ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ.

ಅನಂತರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಜಗತ್ತಿನ ಗಮನ ಸೆಳೆಯಿತು. ಕೆಲ ವರ್ಷಗಳ ಬಳಿಕ ಅದನ್ನು ಮಬ್ಬಾಗಿಸಿದ್ದು ಮಿಸ್ ಯೂನಿವರ್ಸ್ ಮತ್ತು ಮಿಸ್ ವಲ್ಡ ಆಯ್ಕೆ ಮತ್ತು ಘೋಷಣಾ ಸಮಾರಂಭಗಳು. ಇವನ್ನು ನೋಡಲು ಇಡೀ ಜಗತ್ತೇ ಕಾದು ಕುಳಿತಿರುತ್ತಿತ್ತು. ಸ್ಮಾಟ್ ಫೋನ್‌ಗಳು ಬಂದ ಬಳಿಕ, ಅದ ರಲ್ಲೂ ಆಪಲ್ ಫೋನ್ ಪ್ರತಿ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ಹೊಸ ವರ್ಶನ್ ಫೋನ್ ಬಿಡುಗಡೆ ಸಾದರ ಕಾರ್ಯ ಕ್ರಮವೇ ‘ಅತಿ ದೊಡ್ಡ ಇವೆಂಟ್’ ಎಂದು ಕರೆಯಿಸಿಕೊಂಡಿತ್ತು. ಆದರೆ ಈ ಎಲ್ಲ ಇವೆಂಟ್ ಗಳಿಗೆ ಹೋಲಿಸಿದರೆ, ಒಂದು ತಿಂಗಳ ಕಾಲ ನಡೆಯುವ ‘ಫಿಫಾ ವಿಶ್ವಕಪ್’ ಫುಟ್ಬಾಲ್ ಪಂದ್ಯಾವಳಿ ಜಗತ್ತಿನ ‘ಅತಿ ದೊಡ್ಡ ಘಟನೆ’ ಎಂದು ಕರೆಯಿಸಿ ಕೊಂಡಿದೆ.

ಇದಕ್ಕಿಂತ ಮಿಗಿಲಾದ ಮತ್ತೊಂದು ಇವೆಂಟ್ ಈ ಬ್ರಹ್ಮಾಂಡದ ಇಲ್ಲ. ೪ ವರ್ಷಗಳಿ ಗೊಮ್ಮೆ ನಡೆಯುವ ಈ ಪಂದ್ಯಾವಳಿಯನ್ನು ನೋಡಲು ಇಡೀ ವಿಶ್ವ ತುದಿಗಾಲ ಮೇಲೆ ನಿಂತಿರುತ್ತದೆ. ಪಂದ್ಯಾವಳಿ ನಾಲ್ಕು ವರ್ಷಗಳಿಗೊಮ್ಮೆ ನಡೆದರೂ, ಅದಕ್ಕೆ ಬೇಕಾದ ತಯಾರಿಯನ್ನು ಆತಿಥೇಯ ದೇಶ ಕನಿಷ್ಠ ಆರೇಳು ವರ್ಷಗಳಿಂದ ಮಾಡಲಾ ರಂಭಿಸುತ್ತದೆ. ಜಗತ್ತಿನ ಎಲ್ಲ ದೇಶಗಳ, ಎಲ್ಲ ಭಾಗಗಳಿಂದ ಆಗಮಿಸುವ ಜನರಿಗೆ ಬೇಕಾದ ಸಕಲ ಸೌಲಭ್ಯಗಳನ್ನು ನೀಡಿ, ಇಡೀ ಪಂದ್ಯಾವಳಿಯನ್ನು ಸಂಘಟಿಸುವುದು ಸಹ ಬಹು ದೊಡ್ಡ ಜವಾಬ್ದಾರಿ.

ಜಗತ್ತಿನ ಇನ್ನೂರಕ್ಕೂ ಹೆಚ್ಚು ದೇಶಗಳಲ್ಲಿ ಫುಟ್ಬಾಲ್‌ಅನ್ನು ಆಡುತ್ತಾರೆ. ಅದರಲ್ಲೂ 170 ದೇಶಗಳು ತಮ್ಮದೇ ಟೀಮ್ ಮತ್ತು
ನಾನಾ ಕ್ಲಬ್‌ಗಳನ್ನೂ ಹೊಂದಿವೆ. ಭಾರತದಲ್ಲಿ ಕ್ರಿಕೆಟ್ ಹೇಗೋ ಆ ದೇಶಗಳಲ್ಲಿ ಫುಟ್ಬಾಲ್. ಬ್ರೆಜಿಲ್, ಅರ್ಜೆಂಟಿನಾ, ಜರ್ಮನಿ,
ಮೆಕ್ಸಿಕೋ, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ, ನೆದರ್ಲಾಂಡ್ಸ್, ಸ್ಪೇನ್, ಟರ್ಕಿ, ರಷ್ಯಾ, ಜಪಾನ್, ಇಟಲಿ, ಸೌತ್ ಆಫ್ರಿಕಾ ಸೇರಿದಂತೆ
ನೂರಾರು ದೇಶಗಳಲ್ಲಿ ಫುಟ್ಬಾಲ್ ಆಟವೇ ಧರ್ಮ.

ಸ್ವೀಡನ್, ಸೆರ್ಬಿಯಾ, ಬೋಸ್ನಿಯಾ, ಡೆನ್ಮಾರ್ಕ್, ಆಸ್ಟ್ರಿಯಾ, ಕ್ರೊಯೇಷಿಯಾ, ಕೋಸ್ಟಾರಿಕಾ, ಪೋರ್ಚುಗಲ, ಐಸ್‌ಲ್ಯಾಂಡ್,
ಸ್ವಿಜರಲ್ಯಾಂಡ್, ಉರುಗ್ವೆ ಮುಂತಾದ ಸಣ್ಣ ದೇಶಗಳು ಸಹ ಬಲಿಷ್ಠ ಅಥವಾ ಉತ್ತಮ ತಂಡಗಳನ್ನು ಹೊಂದಿವೆ. ಮೂರೂ ಕಾಲು ಲಕ್ಷ ಜನಸಂಖ್ಯೆಯನ್ನು ಹೊಂದಿದ ಐಸ್‌ಲ್ಯಾಂಡ್ ನಂಥ ಸಣ್ಣ ದೇಶವೂ ಫಿಫಾ ವರ್ಲ್ಡ್ ಕಪ್‌ನಲ್ಲಿ ಆಡಲು ಅರ್ಹತೆ ಪಡೆಯುವಂಥ ಫುಟ್ಬಾಲ್ ಗೀಳನ್ನು ಅಂಟಿಸಿಕೊಂಡಿದೆ.

ವಿಶ್ವದಲ್ಲಿ ಇಂಗ್ಲಿಷ್ ಭಾಷೆಗೆ ತಲುಪಲು ಸಾಧ್ಯವಾಗದ ದೇಶಗಳಿಗೆ ಫುಟ್ಬಾಲ್ ತಲುಪಿದೆ ಮತ್ತು ಅಲ್ಲ ಬಲಿಷ್ಠವಾಗಿ ತಳವೂರಿದೆ. ಜಗತ್ತಿನಲ್ಲಿ ಸುಮಾರು ಇನ್ನೂರೈವತ್ತು ದಶಲಕ್ಷ ಫುಟ್ಬಾಲ್ ಆಟಗಾರರಿzರಂತೆ. ವಿಶ್ವದ ಎಲ್ಲ ಕ್ರೀಡೆಗಳ ಪೈಕಿ ಫುಟ್ಬಾಲ್ ಅನ್ನು ಮೀರಿಸುವ ಮತ್ತೊಂದು ಆಟ ಇಲ್ಲ. ಏಳು ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಳನ್ನು ಖುದ್ದಾಗಿ ವೀಕ್ಷಿಸಿದ ಖ್ಯಾತ ಫುಟ್ಬಾಲ್
ವರದಿಗಾರ ಗ್ಯಾಬ್ರಿಯೆಲ್ ಮಾರ್ಕೋಟ್ಟಿ ಹೇಳುವಂತೆ, ಇದೊಂದು ವಿಶಿಷ್ಟ ಮತ್ತು ಅನೂಹ್ಯ ‘ಹುಚ್ಚರ ಸಂತೆ’ ಹಾಗೂ ಕ್ರೀಡಾಭಿಮಾನಿಗಳ ಅಪೂರ್ವ ಭಾವಾತಿರೇಕಗಳ ಸಮಾಗಮ. ಈ ಪಂದ್ಯಾವಳಿಯನ್ನು ನೋಡಲು ಮನೆ-ಮಠ ಮಾರಿ ಬರುವವರ ಸಂಖ್ಯೆಯೇನೂ ಕಮ್ಮಿಯಲ್ಲ.

ಈ ಸಾಲದ ಪಂದ್ಯಾವಳಿ ಕತಾರ್‌ನಲ್ಲಿ ನಡೆಯುತ್ತಿರುವುದು ವಿಶೇಷ. ಮಧ್ಯಪ್ರಾಚ್ಯ ದೇಶಗಳಲ್ಲಿ ಇಂಥ ಬೃಹತ್ ಪ್ರಮಾಣದ ಕ್ರೀಡಾಕೂಟ ನಡೆಯುತ್ತಿರುವುದು ಇದೇ ಮೊದಲು. ಅದರಲ್ಲೂ ಸಂಪ್ರದಾಯವಾದಿ ಮುಸ್ಲಿಂ ದೇಶವೊಂದು, ಆಚರಣೆಗಳಲ್ಲಿ ಎಲ್ಲ ಹುಚ್ಚುತನ ಗಳ ಪರಾಕಾಷ್ಠೆ ಮೆರೆಯುವ ಕ್ರೀಡೆಯನ್ನು ಸಂಘಟಿಸುತ್ತಿರುವುದು ಗಮನಾರ್ಹ.

ಮೂವತ್ತು ಲಕ್ಷ ಟಿಕೆಟ್: ಕ್ರೀಡಾಂಗಣದ ಒಳಗಡೆ ಬಿಯರ್ ಮಾರಾಟಕ್ಕೆ ಅವಕಾಶ ಕೊಡದಿರುವುದೇ ದೊಡ್ಡ ವಿವಾದವಾಗಿ ಪರಿಣಮಿಸಿದೆ. ಹಿಂದಿನ ತಿಂಗಳ ಮಧ್ಯಭಾಗದ ಎ ಟೂರ್ನಮೆಂಟಿನ ಟಿಕೆಟುಗಳು ಮಾರಾಟವಾಗಿವೆ. ಇಲ್ಲಿ ತನಕ ಮೂವತ್ತು ಲಕ್ಷಕ್ಕೂ ಅಽಕ ಟಿಕೆಟ್‌ಗಳು ಬಿಕರಿಯಾಗಿವೆ. ಕತಾರ್ ದೇಶಕ್ಕೆ ವಿಶ್ವಕಪ್ ಸಂಘಟಿಸುವ ಅವಕಾಶವನ್ನು ಫಿಫಾ ನೀಡಿದಾಗಲೇ ದೊಡ್ಡ ಸುದ್ದಿ ಆಗಿತ್ತು. ಫಿಫಾ ಮುಖ್ಯಸ್ಥರಿಗೆ ಬಹುದೊಡ್ಡ ಪ್ರಮಾಣದ ಕಪ್ಪ ಕಾಣಿಕೆ ನೀಡಿ, ಪಂದ್ಯಾವಳಿಯನ್ನು ಸಂಘಟಿಸುವ ಅವಕಾಶವನ್ನು ಬಾಚಿಕೊಂಡಿತು ಎಂದು ವಿವಾದವಾಗಿತ್ತು.

೨೦೦೨ರಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿ ನಡೆದಿದ್ದನ್ನು ಬಿಟ್ಟರೆ, ಇಡೀ ಏಷ್ಯಾದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ
ನಡೆಯುತ್ತಿರುವುದು ಇದು ಎರಡನೇ ಬಾರಿ. ಅರಬ್ ದೇಶಗಳ ಪೈಕಿ ಚಿಕ್ಕ ದೇಶವಾದ ಕತಾರ್ ಇಂಥ ದೊಡ್ಡ ಸಾಹಸಕ್ಕೆ ಮುಂದಾಗಿರುವುದು ದೊಡ್ಡ ದೇಶಗಳಿಗೂ ಅಚ್ಚರಿಯಾಗಿದೆ.

ಕತಾರ್ ಈ ಕ್ರೀಡಾಕೂಟಕ್ಕಾಗಿ ೨೨೦ ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡಿದೆ. ಕಳೆದ ಎಂಟು ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಳನ್ನು ಸಂಘಟಿಸುವುದಕ್ಕೆ ಎಷ್ಟು ಹಣ ಖರ್ಚಾಗಿದೆಯೋ, ಅವೆಲ್ಲವನ್ನೂ ಒಟ್ಟಿಗೆ ಸೇರಿಸಿದರೆ ಎಷ್ಟಾಗುವುದೋ, ಅದಕ್ಕಿಂತ ಎರಡು ಪಟ್ಟು ಹೆಚ್ಚು ಹಣ ಇದೊಂದೇ ಪಂದ್ಯಾವಳಿಗೆ ಖರ್ಚಾಗುತ್ತಿದೆ. ಕತಾರ್ ಈ ಪಂದ್ಯಾವಳಿಗೆಂದೇ, ನೂತನ, ಆಧುನಿಕ ಸ್ಟೇಡಿಯಂ, ವಿಮಾನ ನಿಲ್ದಾಣ, ಹೋಟೆಲ್, ರೈಲು ಮಾರ್ಗ, ಸಂಪರ್ಕ ವ್ಯವಸ್ಥೆ ಮತ್ತು ಮೂಲ ಸೌಕರ್ಯಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಿದೆ. ಈ ನಿಟ್ಟಿನಲ್ಲಿ ಇದೊಂದು ಅತಿ ದೊಡ್ಡ ಇವೆಂಟ್ ಎಂದು ಕರೆಯಿಸಿಕೊಂಡಿದೆ. ಇವನ್ನೆಲ್ಲ ’ವಿಶ್ವವಾಣಿ’ ಓದುಗರಿಗೆ ಹೇಳದಿದ್ದರೆ ಹೇಗೆ? ಸಾಕ್ಷಾತ್ ವರದಿ ಮಾಡದಿದ್ದರೆ ಹೇಗೆ?

error: Content is protected !!